ಚಿರಂತ್ ಹೇಳಿದಂತೆಯೇ ಪ್ರಕಾಶ್ಗೆ ಕಾಲ್ ಮಾಡಿದ ತುಳಸಿ”ಸರ್ ನಮಸ್ಕಾರ ನಾನು ಮಡಿಕೇರಿಯ ತುಳಸಿನಿಧಿ ಹಾಸ್ಪಿಟಲ್ನಿಂದ ಡಾಕ್ಟರ್ ತುಳಸಿ ಮಾತಾಡ್ತಿರೋದು”.

ಮಡಿಕೇರಿಯ ಹಾಸ್ಪಿಟಲ್ ಎಂದ ತಕ್ಷಣ ಒಂದು ಕ್ಷಣ ಗಾಬರಿಯಾದ ಪ್ರಕಾಶ್”ಏನು ಮಡಿಕೇರಿಯ ಹಾಸ್ಪಿಟಲ್ನಿಂದ ಮಾತಾಡ್ತಿದೀರಾ”ಎಂದು ಗಾಬರಿಯಿಂದ ಕೇಳಿದನು.
“ಹಾ ಸರ್ ಗಾಬರಿಯಾಗಬೇಡಿ. ನಾನು ಮೀರಾ ಫ್ರೆಂಡ್ ನಿಧಿ ಅವರ ತಾಯಿ. ನಿಮ್ಮತ್ರ ಒಂದು ವಿಷಯದ ಬಗ್ಗೆ ಮಾತಾಡಬೇಕಿತ್ತು ಅದ್ಕೆ ಫೋನ್ ಮಾಡಿದೆ”
“ಏನ್ ವಿಷ್ಯ ಹೇಳಿ ಮೇಡಂ”ಸ್ವಲ್ಪ ದುಗುಡದಿಂದಲೇ ಕೇಳಿದ.
“ಸರ್ ನಮ್ ಹಾಸ್ಪಿಟಲ್ನಲ್ಲಿ ಮೆಡಿಕಲ್ ಅಸಿಸ್ಟೆಂಟ್ ಕೆಲಸಕ್ಕೆ ಒಬ್ಬ ಹುಡುಗ ಬೇಕಾಗಿದ್ದ. ನಿಮ್ ಮಗ ಮನೇಲೆ ಇರ್ತಾನಂತೆ ಅಂತ ಗೊತ್ತಾಯ್ತು ಅದ್ಕೆ ಫೋನ್ ಮಾಡಿದೆ”
“ಅಯ್ಯೋ ಮೇಡಂ ಅವ್ನು ನಂಗೇನ್ ಹೊರೆಯಾಗಿಲ್ಲ.ಅವನು ಕಷ್ಟಪಟ್ಟು ದುಡಿದ ಹಣದಿಂದ ನಾನೇನು ಸಾಹುಕಾರನಾಗಬೇಕಿಲ್ಲ.ನನ್ನ ಕೊನೆಯುಸಿರು ಇರೋವರೆಗೂ ನಾನ್ ಚೆನ್ನಾಗಿ ನೋಡ್ಕೋತೀನಿ. ಮಗ ಅಲ್ವಾ ಅದ್ಕೆ”ಎಂದು ಭಾವುಕನಾದ.

“ಸರ್ ನೀವೇ ಹೇಳಿದ್ರಿ ಕೊನೆಯುಸಿರು ಇರುವವರೆಗೂ ಚೆನ್ನಾಗಿ ನೋಡ್ಕೋತೀನಿ ಅಂತ. ನೀವ್ ತೀರಿಕೊಂಡರು ಮೇಲೆ ಅವನನ್ನು ನೋಡಿಕೊಳ್ಳೋರು ಯಾರು. ಅವಾಗ ಆತ ಯಾರ ದುಡಿಮೆಗೆ ಅವಲಂಬನೆಯಾಗುತ್ತಾನೆ ನೀವೇ ಹೇಳಿ. ಇಲ್ಲ ಅನ್ಬೇಡಿ ಸರ್ ಅವ್ನ್ ಕಾಲಿನ ಮೇಲೆ ಅವನು ನಿಂತುಕೊಳ್ಳಲು ಒಂದು ಅವಕಾಶ ಕೊಡಿ”
ಒಂದೆರಡು ನಿಮಿಷ ಯೋಚಿಸಿದ ಪ್ರಕಾಶ್.
“ನಾನು ಸತ್ತ ಮೇಲೆ ಚಿರಂತನನ್ನು ಯಾರು ನೋಡಿಕೊಳ್ಳುತ್ತಾರೆ.ಹೌದು ಅವರು ಹೇಳುತ್ತಿರುವುದು ಸರಿ ಇದೆ. ಅವನ ಕಾಲಿನ ಮೇಲೆ ಅವನೇ ನಿಂತುಕೊಳ್ಳಲಿ”ಎಂದು ಮನದಲ್ಲೆ ಅಂದುಕೊಂಡು ಕಳುಹಿಸುತ್ತೇನೆ ಎಂದು ತುಳಸಿಗೆ ಸಮ್ಮತಿ ಸೂಚಿಸಿದನು.
“ಈ ವಿಷಯದ ಬಗ್ಗೆ ಚಿರಂತ್ ಮತ್ತೆ ಮೀರಾ ಹತ್ತಿರ ಮಾತಾಡಿದ್ರೆ ಚೆನ್ನಾಗಿರ್ತಿತ್ತು. ಮೊದಲು ಅವರನ್ನು ಕೇಳಿ ಆಮೇಲೆ ತೀರ್ಮಾನ ಮಾಡಿ”ಎಂದ ಪ್ರಕಾಶ್.
“ಸರಿ ಸರ್ ನಾನು ಅವರನ್ನು ಕೇಳುತ್ತೇನೆ”ಎಂದು ಕಾಲ್ ಕಟ್ ಮಾಡಿದಳು ತುಳಸಿ.
“ಚಿರು ಎಲ್ಲಾ ಓಕೆ. ಈಗ ಉಳಿದಿರುವುದು ಮೀರಾಳನ್ನು ಒಪ್ಪಿಸುವುದು ಅಷ್ಟೇ”ಎಂದು ಚಿರು ಮುಖ ನೋಡುತ್ತಾ ಹೇಳಿದಳು ತುಳಸಿ.
“ಮೀರಾಳನ್ನು ಒಪ್ಪಿಸುವ ಹೊಣೆ ನನ್ನದು”ಎಂದು ಜವಾಬ್ದಾರಿ ತೆಗೆದುಕೊಂಡ ನಿಧಿ ಮೀರಾಳಿಗೆ ಫೋನ್ ಮಾಡಲು ತೀರ್ಮಾನಿಸಿದಳು. ಅಷ್ಟರಲ್ಲೇ ನಿಧಿ ಫೋನ್ ರಿಂಗಾಯಿತು. ಯಾರದು ಎಂದು ತೆಗೆದು ನೋಡಿದರೆ ಅದು ಮೀರಾ. ಫೋನ್ ಎತ್ತಿದ ನಿಧಿ”ನೂರು ವರ್ಷ ಕಣೆ ಆಯಸ್ಸು ನಿನ್ಗೆ. ಈಗ ತಾನೇ ಫೋನ್ ಮಾಡ್ಬೇಕು ಅಂತ ಫೋನ್ ಕೈಯಲ್ಲಿಡಿದೆ ಅಷ್ಟರಲ್ಲಿ ನೀನೇ ಫೋನ್ ಮಾಡಿದೆ”
ಇದ್ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದ ಮೀರಾ”ಚಿರಂತ್ ಹೇಗಿದ್ದಾನೆ, ಅವನನ್ನು ಯಾವಾಗ ಡಿಸ್ಚಾರ್ಜ್ ಮಾಡ್ತಾರಂತೆ “ಎಂದು ಕೇಳಿದಳು.
“ಚಿರಂತ್ ಏನೋ ಚೆನ್ನಾಗಿದಾನೆ ಆದ್ರೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲ್ವಂತೆ”
“ಅಂದ್ರೆ ಏನ್ ಹೇಳ್ತಿದೀಯಾ ನಿಧಿ. ಸರಿಯಾಗಿ ಅರ್ಥ ಆಗೋ ತರ ಹೇಳು”.
“ಅಮ್ಮ ಚಿರಂತ್ಗೆ ನಮ್ ಆಸ್ಪತ್ರೆಯಲ್ಲೇ ಮೆಡಿಕಲ್ ಅಸಿಸ್ಟೆಂಟ್ ಜಾಬ್ ಕೊಟ್ಟಿದಾರೆ. ಅವ್ನು ಇನ್ಮೇಲೆ ಎಲ್ಲೂ ಹೋಗಲ್ಲ ನಮ್ ಆಸ್ಪತ್ರೆಯಲ್ಲೇ ಇರ್ತಾನೆ.ಅದ್ನ ಹೇಳ್ಬೇಕು ಅಂತಾನೆ ಕಾಲ್ ಮಾಡೋಣ ಅನ್ಕೊಂಡೆ ಅಷ್ಟ್ರಲ್ಲಿ ನೀನೇ ಕಾಲ್ ಮಾಡಿದೆ”
“ಓಹೋ ಹೌದಾ…!ಅದು ಅವನಿಗೆ ಇಷ್ಟ ಇದ್ಯಾ.? ಅಂಕಲ್ನ ಒಂದ್ ಮಾತು ಕೇಳ್ಬೇಕಿತ್ತು”
“ಆಗ್ಲೇ ಅಂಕಲ್ ಹತ್ರ ಮಾತಾಡಿದ್ದಾಯ್ತು. ಅವ್ರು ಮೀರಾ,ಚಿರಂತ್ ಹತ್ರ ಮಾತಾಡಿ ಅಂತ ಹೇಳಿದ್ರು ಈಗ ನೀನೊಬ್ಬಳು ಒಪ್ಪಬೇಕು ಅಷ್ಟೇ. ಚಿರಂತ್ ಆಗ್ಲೇ ಒಪ್ಪಿದ್ದಾನೆ”.
“ಅವ್ನಿಗೆ ಒಪ್ಪಿಗೆ ಆದ್ಮೇಲೆ ನಂದೇನಿದೆ. ಅವನಿಗೆ ಏನ್ ಇಷ್ಟಾನೋ ಅದ್ನೇ ಮಾಡ್ಲಿ ಬಿಡು. ಹಾ…s ಇನ್ನೊಂದು ಅವ್ನ್ ಹೇಗೋ ಇನ್ಮುಂದೆ ಇಲ್ಲೇ ಇರ್ತಾನೆ ಅಂತ ಪದೇ ಪದೇ ನನ್ನ ಮಾತಾಡಿಸೋಕೆ ಪ್ರಯತ್ನ ಮಾಡಿದ್ರೆ ಸರಿ ಇರಲ್ಲ ಅಂತ ಹೇಳು”
“ಸರಿ ಮೀರಾ ಹೇಳ್ತಿನಿ.ನಾನ್ ಕಾಲೇಜಲ್ಲಿ ಸಿಗ್ತೀನಿ.ಬಾಯ್ ಎನ್ನುತ್ತಾ ಕಾಲ್ ಕಟ್ ಮಾಡಿದಳು ನಿಧಿ

ಇತ್ತ ಕಾಲ್ ಕಟ್ ಮಾಡುತ್ತಿದ್ದಂತೆ ನಿಧಿ “ಮಮ್ಮಿ ಮೀರಾನು ಒಪ್ಪಿದ್ಲು. ಮುಂದೆ ಏನ್ ಮಾಡೋದು ಹೇಳಿ”
“ಚಿರಂತ್ಗೆ ಡಯಾಗ್ನಸಿಸ್ ಮಾಡಿದ್ಮೇಲೆ ಒಂದು ವಾರವಾದರೂ ಬೆಡ್ ರೆಸ್ಟ್ ಬೇಕು ಆ ಸಮಯದಲ್ಲಿ ಮೀರಾಳಿಗೆ ಗೊತ್ತಾಗೋ ಸಾಧ್ಯತೆ ಇದೆ. ಆದ್ದರಿಂದ ಆ ಒಂದು ವಾರ ನೀನು ನೀನ್ ಫ್ರೆಂಡ್ಸ್ ಜೊತೆ ಸೇರಿ ಎಲ್ಲಾದ್ರೂ ಟ್ರಿಪ್ ಹೋಗ್ಬನ್ನಿ ಸರಿಹೋಗುತ್ತೆ”
“ಏನು ಟ್ರಿಪ್ಪಾ, ಎಷ್ಟೋ ದಿನದಿಂದ ಟ್ರಿಪ್ ಹೋಗ್ಬೇಕು ಅನ್ಕೊಂಡಿದ್ವಿ.ಆದ್ರೆ ಆಗಿರಲಿಲ್ಲ.ಈಗ ನೀನೇ ಹೋಗು ಅಂತಿದಿಯಾ. ಸೂಪರ್ ಮಮ್ಮಿ ನೀನು”ಎಂದು ತುಳಸಿಯನ್ನು ಅಪ್ಪಿ ಮುತ್ತಿಕ್ಕಿದಳು.
ಕಾಲೇಜಿಗೆ ತಯಾರಾಗುತ್ತಿದ್ದ ಮೀರಾಳಿಗೆ ನಕುಲ್ ಕಾಲ್ ಮಾಡಿದ. ಫೋನ್ ಎತ್ತಿದ ಮೀರಾ”ಏನ್ ಸಾಹೇಬ್ರು ಕಾಲೇಜ್ಗೆ ಬರೋ ಟೈಮಲ್ಲಿ ಕಾಲ್ ಮಾಡಿದಿರಾ.ಏನ್ ಸಮಾಚಾರ”ಎಂದು ಕೇಳಿದಳು.
“ಅದೇ ನಿನ್ನೆ ನೈಟ್ ಚಿರಂತನ ವಿಷ್ಯಕ್ಕೆ ತುಂಬಾ ಬೇಜಾರಾಗಿದ್ದಲ್ವಾ. ಈಗ ಸರಿ ಹೋಗಿದಿಯೋ ಇಲ್ವೋ ಅಂತ ಕಾಲ್ ಮಾಡಿದೆ.ಈಗ ಹೇಗಿದ್ದಾನಂತೆ”
“ಈಗ್ ಚೆನ್ನಾಗಿದ್ದಾನಂತೆ.ಇವತ್ತು ಡಿಸ್ಚಾರ್ಜ್ ಮಾಡ್ತಾರಂತೆ. ಇನ್ನೊಂದ್ ಗುಡ್ ನ್ಯೂಸ್ ಅಂದ್ರೆ ಅದೇ ಆಸ್ಪತ್ರೆಯಲ್ಲಿ ಮೆಡಿಕಲ್ ಅಸಿಸ್ಟೆಂಟ್ ಆಗಿ ಜಾಬ್ ಬೇರೆ ಕೊಟ್ಟಿದ್ದಾರಂತೆ ಆಂಟಿ.ಅವ್ನ್ ಕಾಲ್ ಮೇಲೆ ಅವ್ನು ನಿಂತ್ಕೊಳ್ಳೋಕೆ ಒಂದ್ ಅವಕಾಶ ಸಿಕ್ತು. ಸದ್ಯಕ್ಕೆ ತುಂಬಾ ಖುಷಿಯಾಗ್ತಿದೆ”
“ಓಹೋ… ಗುಡ್ ಮೀರಾ. ಮತ್ತೇನು ಸಮಾಚಾರ.”
“ಹೇಳ್ಬೇಕು ತಾವೇ”
“ಏನು ಇಲ್ಲ ಮೀರಾ.ಸ್ವಲ್ಪ ಫೋನ್ ಮಾನ್ಯಳಿಗೆ ಕೊಡ್ತೀಯಾ”
“ಅವಳಿಗ್ಯಾಕೆ ಕೊಡ್ಬೇಕು ಮಾತಾಡು ಸುಮ್ನೆ ನನ್ ಜೊತೇನೆ ಆಮೇಲೆ ಅವ್ಳ್ ಜೊತೆ ಮಾತಾಡುವಂತೆ”
“ಇಲ್ಲ ಮೀರಾ ಏನೋ ಹೇಳ್ಬೇಕಿತ್ತು ಅವಳಿಗೆ ಅದ್ಕೆ ಕೇಳ್ದೆ”
“ಹಾಗಿದ್ರೆ ಅವಳಿಗೆ ಕಾಲ್ ಮಾಡ್ಬೇಕಿತ್ತು ನಂಗ್ಯಾಕೆ ಮಾಡ್ದೆ. ಇನ್ನೊಂದ್ ಸರಿ ನಂಗ್ ಫೋನ್ ಮಾಡಿದ್ರೆ ಸರಿ ಇರಲ್ಲ”ಎಂದು ಹುಸಿಮುನಿಸು ತೋರುತ್ತಾ ಕಾಲ್ ಕಟ್ ಮಾಡಿದಳು.
ಇವರಿಬ್ಬರ ಸಂಭಾಷಣೆಯನ್ನು ಅಲ್ಲೇ ಕೂತು ಕೇಳುತ್ತಿದ್ದ ಮಾನ್ಯ ನಗುತ್ತಿದ್ದಳು.
ಕಾಲ್ ಕಟ್ ಮಾಡಿದ ತಕ್ಷಣ “ಇವ್ಳ್ ಯಾಕೆ ಹೀಗ್ ಆಡ್ತಾಳೆ”ಎಂದು ಮನದಲ್ಲೇ ಅಂದುಕೊಂಡು ಮತ್ತೆ ಮತ್ತೆ ಕಾಲ್ ಮಾಡಿದ. ಆದರೆ ಮೀರಾಳಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆದ್ದರಿಂದ ಮಾನ್ಯಳಿಗೆ ಕಾಲ್ ಮಾಡಿದ.
ಕಾಲ್ ಪಿಕ್ ಮಾಡಿದ ಮಾನ್ಯ”ಹಾ ಹೇಳಿ ನಕುಲ್”ಎಂದಳು.
“ಆ ಮೀರಾ ಇದಾಳ ಅಲ್ಲೇ. ಏನ್ ಸಿಟ್ಟು ಮಾರಾಯ್ತಿ ಅವ್ಳಿಗೆ ನಿಂಗ್ ಫೋನ್ ಕೊಡು ಒಂದು ನಿಮಿಷ ಮಾತಾಡ್ಬೇಕು ಅಂದ್ರೆ ಅವ್ಳಿಗೆ ಮಾಡ್ಬೇಕಿತ್ತು ನಂಗ್ ಯಾಕ್ ಮಾಡಿದೆ ಅಂತ ಸಿಟ್ಟಿಂದ ಕಾಲ್ ಕಟ್ ಮಾಡಿದ್ಲು”
“ಗೊತ್ತಾಯ್ತು.ನಾನು ಇಲ್ಲೇ ಪಕ್ಕದಲ್ಲೇ ಇದಿನಿ. ಅವ್ಳ್ ಸ್ವಲ್ಪ ಹಾಗೇನೇ. ಏನ್ ವಿಷ್ಯ ಹೇಳು”ಎಂದಳು ಮಾನ್ಯ.
“ಸ್ವಲ್ಪ ಅವಳಿಂದ ದೂರ ಬಾ. ಪರ್ಸನಲ್ ಆಗಿ ಮಾತಾಡ್ಬೇಕು”
ಮಾತಾಡಲೆಂದು ಮಾನ್ಯ.ಅಲ್ಲಿಂದ ಹೊರನಡೆದಳು.ಇವರಿಬ್ಬರ ಸಂಭಾಷಣೆಯನ್ನು ಕೇಳುತ್ತಿದ್ದ ಮೀರಾ ಸಿಟ್ಟಿನಿಂದ ಮುಖ ಊದಿಸಿಕೊಂಡು ಕೂತಿದ್ದಳು.
“ಏನ್ ಹೇಳೋ”
“ಅದೇ ಚಿರಂತ್ ಮತ್ತೆ ಮೀರಾಳ ಬಗ್ಗೆ ಕೇಳೋಣ ಅಂತ ಫೋನ್ ಮಾಡಿದೆ. ಅವರಿಬ್ಬರೂ ಏನಕ್ಕೆ ಜಗಳ ಮಾಡ್ಕೊಂಡಿದಾರೆ ಅಂತ ಗೊತ್ತಾಯ್ತ”
“ಗೊತ್ತಾಯ್ತು. ಆದ್ರೆ ಈಗ ಹೇಳೋಕಾಗಲ್ಲ.ನಾಳೆ ಸಂಜೆ ನಿಧಿ ಬರ್ತ್ಡೇ ಪಾರ್ಟಿಯಲ್ಲಿ ಭೇಟಿಯಾಗ್ತೀವಲ್ವಾ ಅವಾಗ ಹೇಳ್ತಿನಿ.ಸರಿನಾ”
“ಸರಿ”ಎಂದು ಕಾಲ್ ಕಟ್ ಮಾಡಿದ ನಕುಲ್.
ರೂಮಿಗೆ ಬಂದ ಮಾನ್ಯಳನ್ನು ಕುರಿತು”ಏನು ಅಂತ ಪರ್ಸನಲ್ ನಂಗ್ ಗೊತ್ತಾಗ್ದೇ ಇರುವಂತದ್ದು”ಎಂದು ಕೇಳಿದಳು.
“ಏನೋ ಬಿಡು.ಅದು ನನ್ನ ಮತ್ತೆ ಅವನ ಪರ್ಸನಲ್.ನಿಂಗ್ಯಾಕೆ ಅದು”ಎಂದು ಛೇಡಿಸಿದಳು.
“ಈಗ ಹೇಳಿದ್ರೆ ಸರಿ ಇಲ್ಲ ಅಂದ್ರೆ……”
“ಹಲೋ ಮೇಡಂ ಕೂಲ್ಡೌನ್.ಹೇಳಿಲ್ಲ ಅಂದ್ರೆ ಏನೇ ಮಾಡ್ತಿಯಾ”

“ಏನು ಮಾಡಲ್ಲ ನನ್ ಪಾಡಿಗೆ ನಾನೇ ಬೇಜಾರಾಗ್ತೀನಿ. ಆಮೇಲೆ ಸುಮ್ಮನಾಗ್ತೀನಿ”ಎಂದು ಮುಖತಿರುವಿಕೊಂಡಳು.
“ಮೀರಾ ಯಾವಾಗ್ಲೇ ನೀನ್ ಇಷ್ಟೊಂದು ಸ್ವಾರ್ಥಿಯಾಗಿಬಿಟ್ಟೆ.ಏನು ನಿಮ್ ಹುಡುಗನ ಜೊತೆ ನಾನ್ ಮಾತಾಡಬಾರದ…?”
“ಮಾತಾಡು ಹಾಗೇನಿಲ್ಲ. ಆದ್ರೆ ನನ್ ಜೊತೆ ಮಾತಾಡ್ತಿರ್ಬೇಕಾದ್ರೆ ನಿಂಗ್ ಫೋನ್ ಕೊಡು ಮಾತಾಡ್ಬೇಕು ಅಂದ್ರೆ ನಂಗ್ ಕೋಪ ಬರುತ್ತೆ”
“ಮಿಸ್ ಮೀರಾ ಅವ್ರೆ.. ನಕುಲ್ ನಿಮ್ಗೆ ಲವರ್ ಆಗೋಕ್ಕಿಂತ ಮುಂಚೆನೇ ನಂಗ್ ಫ್ರೆಂಡ್ ಆಗಿದ್ದ ನೆನಪಿರಲಿ”
“ಫ್ರೆಂಡ್ ಆಗಿದ್ರೆ.ನೀನ್ ಫ್ರೆಂಡಾಗಿ ಅವನನ್ನು ಎಸ್ಟ್ ಇಷ್ಟ ಪಡ್ತಿದಿಯೋ ಅದಕ್ಕಿಂತ ಜಾಸ್ತಿ ಲವರ್ ಆಗಿ ಅವನನ್ನು ಇಷ್ಟ ಪಡ್ತಿದಿನಿ”
“ಸರಿ ಸರಿ..ನೀನ್ ಪ್ರೀತಿನೇ ದೊಡ್ಡದಾಗಲಿ. ಈಗ ಕಾಲೇಜಿಗೆ ಟೈಂ ಆಯ್ತು ಹೋಗೋಣ್ವಾ”ಎಂದು ಕೇಳಿದಳು ಮಾನ್ಯ.
“ಹ್ಮ್ ಸರಿ ಬಾ ಹೋಗೋಣ.ನಾಳೆ ನಿಧಿ ಬರ್ತ್ಡೇ ಇದೆ ಅಲ್ವಾ ಏನು ಗಿಫ್ಟೆ ತಗೊಂಡಿಲ್ಲ ನಾವು.ಹಾಗೇ ಸಂಜೆ ಬರಬೇಕಾದ್ರೆ ತಗೊಂಡು ಬರೋಣ ಓಕೆ ನಾ”.
“ಹ್ಮ್ ಸರಿ”ಎಂದ ಮಾನ್ಯ ಮೀರಾಳೊಡನೆ ಕಾಲೇಜಿಗೆ ಹೋದಳು.
ಮುಂದುವರೆಯುವುದು…….
ಈ ಸ್ನೇಹ ಚಿರಾಯು-8 ನೀವು ಇಂಗ್ಲಿಷ್ ಭಾಷೆಯಲ್ಲಿಯೂ ಓದಬಹುದು.
ನಮ್ಮ ವೆಬ್ಬೆಟ್ ನ ಇತರ ಪೋಸ್ಟ್ ಗಳನ್ನು ಇಲ್ಲಿ ಓದಬಹುದು.

