ಸ್ನೇಹ ಚಿರಾಯು-5

ಸ್ನೇಹ ಚಿರಾಯು-5

ಚಿರಂತ್ ಕೈ ಹಿಡಿದ ತಕ್ಷಣ ಒಂದು ಕ್ಷಣ ಹಾಗೇ ನಿಂತ ಮೀರಾ”ಕೈ ಬಿಡೋ”ಎಂದು ಕೊಸರಿ ಕೈ ಬಿಡಿಸಿಕೊಂಡಳು.

“ಏನೋ ನಿಮ್ ಪ್ರಾಬ್ಲಮ್.ಹೇಳಿಲ್ವ ಮತ್ತೆ ಮತ್ತೆ ನನ್ನ ಮಾತಾಡಿಸೋಕೆ ಪ್ರಯತ್ನ ಮಾಡಬೇಡ ಅಂತ”ಎಂದು ಸಿಟ್ಟಾದಳು ಮೀರಾ.

“ಎಲ್ಲಾ ಮರೆತು ಮೊದಲಿನ ತರ ನನ್ನ ಮಾತಾಡಿಸುತ್ತೀಯಾ ಅಂತ ತುಂಬಾ ಆಸೆಯಿಂದ ಬಂದೆ ಮೀರಾ”ಎಂದ ಚಿರಂತ್ ವಿನಯತೆಯಿಂದ.

“ಪ್ಲೀಸ್ ಚಿರು,ಅಂತ ಕನಸೆಲ್ಲಾ ಕಾಣೋಕೆ ಹೋಗ್ಬೇಡ.ಬೇರೆ ಯಾವುದಕ್ಕಾದರೂ ಪೆಟ್ಟಾಗಿದ್ದರೆ ಮಾತಾಡಿಸುತ್ತಿದ್ದೆ, ನಂಬಿಕೆಗೆ ಪೆಟ್ಟಾದರೆ ಹೇಗೆ ಮಾತನಾಡಿಸಲಿ.ಅದು ನನ್ನಿಂದ ಸಾಧ್ಯ ಇಲ್ಲ.ಪ್ಲೀಸ್ ನೀನು ಇಲ್ಲಿಂದ ಹೊರಟುಹೋಗು”ಎಂದಳು ಮೀರಾ.

“ನಾನು ಅಷ್ಟೇ ಮೀರಾ ಮೊದಲಿನ ತರ ಮಾತಾಡಿಸ್ತೀಯಾ ಅಂತ ನಂಬಿಕೆ ಇಟ್ಕೊಂಡೇ ಬಂದಿದ್ದು.ನನ್ ನನ್ನ ನಂಬಿಕೆಗೂ ಪೆಟ್ಟಾಗಿದೆ. ಹೋಗ್ತೀನಿ ಮೀರಾ,ಹೋಗದೆ ಇನ್ನೇನ್ ಮಾಡ್ಲಿ”ಎಂದು ಪ್ರಕಾಶ್ ಮೀರಾಳ ಖರ್ಚಿಗಾಗಿ ಕೊಟ್ಟ ಹಣವನ್ನು ಅವಳ ಕೈಗಿಟ್ಟು “ಅಪ್ಪ ಕೊಟ್ಟಿದ್ದು ನಿನ್ ಖರ್ಚಿಗೆ”ಎಂದು ಹೇಳಿ ಅಲ್ಲಿಂದ ಹೊರಟನು.

ಮಾನ್ಯಳಿಗೆ ಇವರಿಬ್ಬರು ಏಕೆ ಹೀಗೆ ಜಗಳವಾಡುತಿದ್ದಾರೆ ಎಂದು ತಿಳಿಯದೆ ಗೊಂದಲ ಶುರುವಾಗಿತ್ತು. ಅದನ್ನು ಮೀರಾಳಿಗೆ ಕೇಳಿ ಪರಿಹರಿಸಿಕೊಳ್ಳೋಣ ಎಂದು ಮನದಲ್ಲೇ ಅಂದುಕೊಂಡು ಸುಮ್ಮನಾದಳು.

ಇತ್ತ ನಕುಲ್ ಗೆ  ಈ ಚಿರು ಯಾರೆಂಬುದೇ ಒಂದು ಕುತೂಹಲ.ಪ್ರಣವ್, ನಿಧಿಗೆ  ತಿಳಿದುಕೊಳ್ಳುವ ಆಸಕ್ತಿ ಇದ್ದರೂ ಅಷ್ಟಾಗಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.ಆದರೆ ನಕುಲ್ ಗೆ ಯಾರವನು…?, ಮೀರಾಳನ್ನು ಕೈ ಹಿಡಿದು ಮಾತಾಡುವಷ್ಟು ಸಾಲಿಗೇನಾ…?ಮೀರಾಳಿಗೆ ಅವನನ್ನು ಮಾತನಾಡಿಸಲು ಇಷ್ಟವಿರದಿದ್ದರು ಅವನೇಕೆ ಮೀರಾಳನ್ನು ಮಾತನಾಡಿಸಲು ಇಲ್ಲಿಯವರೆಗೂ ಬಂದಿದ್ದಾನೆ…? ಹೀಗೆ ನೂರಾರು ಪ್ರಶ್ನೆಗಳು ಅವನ ತಲೆಯನ್ನು ತಿನ್ನುತಿದ್ದವು.

ಚಿರಂತ್ ಮೀರಾಳ  ಕೈಯನ್ನು ಹಿಡಿದುಕೊಂಡಿದ್ದು  ನೋಡಿ ನಕುಲ್ ಗೆ ಹೊಟ್ಟೆಕಿಚ್ಚು ಶುರುವಾಗಿತ್ತು.ಮಾನ್ಯ,ನಿಧಿಯಂತೆ ಮೀರಾ ಕೂಡ ಸ್ನೇಹಿತೆಯಾಗಿದ್ದರೂ ಅದೇಕೋ ಅವಳನ್ನು ಸ್ವಲ್ಪ ಜಾಸ್ತಿನೇ ಕೇರ್ ಮಾಡುತ್ತಿದ್ದ.ಇದು ಏಕೆ ಎಂದು ನಕುಲ್ ಮನದಲ್ಲಿ ಅಂದುಕೊಂಡಾಗ ಅವಳನ್ನು ಪ್ರೀತಿಸುತ್ತಿದ್ದೇನೆ ಎಂದು ತಿಳಿಯಲು  ತುಂಬಾ ಸಮಯ ಬೇಕಾಗಲಿಲ್ಲ.ಅವಳನ್ನು ಪ್ರೀತಿಸುವುದರ ಬಗ್ಗೆ ಪ್ರಣವ್ ಹತ್ತಿರ ಮಾತ್ರ ಹೇಳಿದ್ದ ಮತ್ಯಾರಿಗೂ ಹೇಳಿರಲಿಲ್ಲ.

ನಕುಲ್ ನಂತೆ ಮೀರಾ ಸಹ ನಕುಲನನ್ನು ಪ್ರೀತಿಸುತ್ತಿದ್ದರು.ಆ ವಿಷಯವನ್ನು ಮಾನ್ಯಳಿಗೆ ಮಾತ್ರ ಹೇಳಿದ್ದಳು. ಇನ್ನು ನಿಧಿ. ಇವಳಿಗೆ ಇಬ್ಬರು ಪ್ರೀತಿಸುವುದರ ಬಗ್ಗೆ ಗೊತ್ತಿದ್ದರೂ ಗೊತ್ತಿಲ್ಲದವಳಂತೆ ನಟಿಸುತಿದ್ದಳು.

ಮೀರಾ ಚಿರು ಹೋದ ತಕ್ಷಣ ಸ್ವಲ್ಪ ಸಮಾಧಾನಗೊಂಡು ಮಾನ್ಯಳ ಬಳಿಬಂದು “ಮಾನ್ಯ, ನಾನ್ ಪಿಜಿಗೆ ಹೋಗ್ತೀನಿ.ನಂಗ್ಯಾಕೋ ಮನಸ್ಸು ಸರಿಯಿಲ್ಲ”ಎಂದಳು.

“ಸರಿ ಹಾಗಾದ್ರೆ ನಾನು ಬರ್ತೀನಿ ನಡಿ.ಇಬ್ರು ಜೊತೆಯಲ್ಲೇ ಹೋಗೋಣ”ಎಂದಳು ಮಾನ್ಯ.

ಪ್ಲೀಸ್ ಮಾನ್ಯ. ನಿನ್ ಕ್ಲಾಸಿಗೆ ಹೋಗು ನಾನ್ ಚೆನ್ನಾಗೆ ಇದಿನಿ ಸಂಜೆ ಕ್ಲಾಸ್ ಮುಗಿಸಿಕೊಂಡು ಬಾ ಕಾಯ್ತಾ ಇರ್ತೀನಿ”ಎಂದು ಮಾನ್ಯಳ ಬಳಿ ರೂಮ್ ಕೀ ತೆಗೆದುಕೊಂಡು ಹೋದಳು ಮೀರಾ.

ಇತ್ತ ನಕುಲ್ ತನ್ನ ಗೊಂದಲಗಳನ್ನು ಪರಿಹಸಿರಿಕೊಳ್ಳಲು ಈಗ ಮಾನ್ಯಳಿಂದ ಮಾತ್ರ ಸಾಧ್ಯ ಎಂದು ತಿಳಿದು “ಮಾನ್ಯ ಯಾರ್ ಅದು ಚಿರು..? ಮೀರಾಳಿಗೂ ಅವನಿಗೂ ಏನು ಸಂಬಂಧ…? ಎಂದು ಮಾನ್ಯಳನ್ನು ಕೇಳಿದನು.

“ಅವನು ಚಿರಂತ್ ಅಂತ ಅವ್ಳ್ ಫ್ರೆಂಡ್. ಮೀರಾಳ ತಂದೆ ತಾಯಿ ಚಿಕ್ಕಂದಿನಲ್ಲೇ ತೀರಿಕೊಂಡಾಗ ಪ್ರಕಾಶ್ ಅಂಕಲ್ ಅಂದ್ರೆ ಚಿರುನ ಅಪ್ಪ,ಮೀರಾ ತಂದೆಯ ಸ್ನೇಹಿತ. ಅವರೇ ಇವಳನ್ನು ಬೆಳೆಸಿದ್ದು.ಮೀರಾಳ ತಂದೆಯ ಕೊನೆಯ ಆಸೆಯಂತೆ ಅವರಿಬ್ಬರನ್ನು ಸ್ನೇಹಿತಾರಾಗಿಯೇ ಬೆಳೆಸಿದ್ದರು.ಇಬ್ಬರು ಬೆಸ್ಟ್ ಫ್ರೆಂಡ್ಸ್.ಇಬ್ಬರಿಗೂ ಒಬ್ಬರೊನೊಬ್ಬರು ಅಂದ್ರೆ ತುಂಬಾ ಇಷ್ಟ.ಯಾವತ್ತೂ ಬಿಟ್ಟು ಕೊಡುತ್ತಿರಲಿಲ್ಲ. ನಮ್ಮ ಪಿಯು ಕಾಲೇಜಿನಲ್ಲಿ ಇವರ ಗೆಳೆತನ ತುಂಬಾ ಫೇಮಸ್”ಎಂದು ನಕುಲ್ ಗೆ ಬಂದ ಸಂದೇಹಗಳನ್ನು ಪರಿಹರಿಸಿದಳು.

“ಆದ್ರೆ ಮೀರಾ ಏಕೆ ಚಿರಂತನನ್ನು ಮಾತಾಡಿಸೋಕೆ ಇಷ್ಟ ಆಗ್ತಿರ್ಲಿಲ್ಲ.ಅವನ್ಯಾರೋ ಎಂಬಂತೆ ಮಾತಾಡಿಸುತ್ತಿದ್ದಳು”ಎಂದು ಸಂದೇಹದಿಂದ ಮತ್ತೆ ಪ್ರಶ್ನೆ ಮಾಡಿದ ನಕುಲ್.

“ಅದೇ ನಕುಲ್ ನಂಗೂ ಅರ್ಥ ಆಗ್ತಿಲ್ಲ. ನಾನು ಅವಾಗವಾಗ ಅನ್ಕೋತಿದ್ದೆ ಪಿಯು ಕಾಲೇಜಿನಲ್ಲಿ  ಅವಳು ನಮ್ಮತ್ರ ಮಾತಾಡೋದೆ ಕಡಿಮೆ. ಮಾತಾಡಿದ್ರು ಅವನ ಬಗ್ಗೆನೇ ಮಾತಾಡ್ತಿದ್ಲು  ಆದರೆ ಇಲ್ಲಿಗೆ ಬಂದು ಸುಮಾರು 4 ತಿಂಗಳಾದ್ರು ಅವನ ಬಗ್ಗೆ ಒಂದು ಸರಿನು ಏಕೆ ಮಾತಾಡಿಲ್ಲ ಅಂತ. ಮೋಸ್ಟ್ಲಿ ಅವರಿಬ್ಬರೂ ಜಗಳ ಆಡಿರೋದಕ್ಕೆ ಹೇಳಿಲ್ಲ ಅನ್ಸುತ್ತೆ.ಇವತ್ತು ಸಂಜೆ ಎಲ್ಲ ಸಂದೇಹಗಳನ್ನು ಬಗೆಹರಿಸ್ಕೊಂಡು ನಾಳೆ ನಿಂಗ್ ಹೇಳ್ತಿನಿ, ಈಗ ಕ್ಲಾಸಿಗೆ ಹೋಗೋಣ”ಎಂದಳು ಮಾನ್ಯ.

“ಹ್ಮ್ ಸರಿ”ಎಂದು ಕ್ಲಾಸಿಗೆ ನಿಧಿ, ಮಾನ್ಯ, ಪ್ರಣವ್ ಜೊತೆಗೂಡಿ ಕ್ಲಾಸಿಗೆ ಹೊರಟ ನಕುಲ್.

ಕ್ಲಾಸಿನಲ್ಲಿ ಪಾಠ ಕೇಳುತ್ತಾ ಕೂತಿದ್ದ ಮಾನ್ಯಳಿಗೆ ಪಕ್ಕದಲ್ಲಿ ಮೀರಾ ಇಲ್ಲದೆ ಇರುವುದು ಕಂಡು ಮೌನಿಯಾದಳು.ಸಂಜೆ ಯಾವಾಗ ಆಗುತ್ತೋ, ಯಾವಾಗ ಮೀರಾಳನ್ನು ನೋಡುತ್ತೇನೆ ಎಂದು ಹಪಹಪಿಸುತಿದ್ದಳು.

ಕ್ಲಾಸ್ ಬಿಟ್ಟೊಡನೆ ನೇರವಾಗಿ ರೂಮಿಗೆ ಹೋದಳು. ರೂಮಿಗೆ ಬಂದ ಮಾನ್ಯಳನ್ನು ಕಂಡ ಮೀರಾ “ಹಾಯ್ ಮಾನ್ಯ, ಹೇಗಿತ್ತೇ ಕ್ಲಾಸ್”ಎಂದು ಕೇಳಿದಳು.

ಅದಕ್ಕೆ ಪ್ರತ್ಯುತ್ತರವಾಗಿ “ನೀನ್ ಜೊತೆ ಇಲ್ದೆ ಇದ್ರೆ ಒಂಥರಾ ಖಾಲಿ ಖಾಲಿ ಅನ್ಸುತ್ತೆ ಪಾಠ ಕೇಳೋಕೆ ಆಗಲ್ಲ ಕಣೆ”ಎಂದಳು ಮಾನ್ಯ.

“ಅಯ್ಯೋ ಕೋತಿ, ನಾನಿಲ್ದಿದ್ರೆ ಏನೇ ಆಗುತ್ತೆ ನಿಂಗೆ ಪಾಠ ಕೇಳೋಕೆ”ಎಂದು ಮರುಪ್ರಶ್ನಿಸಿದಳು ಮೀರಾ.

“ಈಗ ಅದೆಲ್ಲ ಬಿಡು. ನೀನು ಚಿರು ಯಾಕೆ ಜಗಳ ಆಡಿದ್ದಿರಾ ಹೇಳು”ಎಂದಳು ಮಾನ್ಯ.

“ಅದೆಲ್ಲ ಯಾಕೆ ಈಗ, ಬಿಡು”ಎಂದು ನಿರ್ಲಕ್ಸ್ಯದಿಂದ ಉತ್ತರಿಸಿದಳು ಮೀರಾ.

“ಈಗ ಹೇಳ್ತೀಯೋ ಇಲ್ವೋ, ನಿಂಗ್ ಬೇಡದೆ ಇರ್ಬೋದು ತಿಳ್ಕೊಳ್ಳೋ ಅವಶ್ಯಕತೆ ನಂಗಿದೆ ಹೇಳು”ಎಂದು ಸ್ವಲ್ಪ ಸಿಟ್ಟಾದಳು ಮಾನ್ಯ.

“ಸರಿ ಸರಿ ಸಿಟ್ಟಾಗಬೇಡ ಹೇಳ್ತಿನಿ, ನಾವೇನ್ ಜಗಳ ಆಡಿಲ್ಲ. ನಾನೇ ಅವನನ್ನು ಮಾತಾಡ್ಸೋದು ಬಿಟ್ಟಿದ್ದೀನಿ ಅಷ್ಟೇ” ಎಂದು ನಡೆದಿದ್ದೆಲ್ಲಾ ಹೇಳಿದಳು ಮೀರಾ.

“ನಿಮ್ ಮಧ್ಯೆ ಇಷ್ಟೆಲ್ಲಾ ಆಗಿದ್ರು ಒಂದ್ಸರಿನಾದ್ರೂ ನನ್ ಹತ್ರ ಹೇಳ್ಬೇಕು ಅಂತ ಅನಿಸಿರಲಿಲ್ವ ನಿಂಗೆ”ಎಂದಳು ಮಾನ್ಯ.

“ಹೇಳಬಾರದು ಅಂತ ಏನ್ ಇಲ್ಲ. ನಾನ್ ಕೆಲವೊಂದನ್ನು ಮರಿಬೇಕು ಅಂತಾನೆ ಇಸ್ಟ್ ದೂರ ಬಂದಿದ್ದು. ಇಲ್ಲಿಗೆ ಬಂದ್ಮೇಲೂ ಅವನ ಬಗ್ಗೆ ನೆನೆಸಿಕೊಂಡು ಬೇಜಾರಾಗೋದು ನಂಗಿಷ್ಟ ಇರಲಿಲ್ಲ ಅದ್ಕೆ ಹೇಳಿಲ್ಲ ಅಷ್ಟೇ.ಸರಿ ಈಗ ಅದ್ನೇಲ್ಲಾ ಬಿಟ್ಟು ಇನ್ನೊಂದೆರಡು ದಿನದಲ್ಲಿ ನಿಧಿದು ಬರ್ತ್ಡೆ ಇದ್ಯಲ್ವಾ ಗಿಫ್ಟ್ ತಗೊಂಡ್ ಬರೋಕೆ ಹೊರಗೆ ಹೋಗೋಣ ರೆಡಿಯಾಗು”ಎಂದಳು ಮೀರಾ.

“ಹ್ಮ್ ಸರಿ”ಎಂದು ರೆಡಿಯಾಗಲು ಹೋದಳು ಮಾನ್ಯ.

ಇನ್ನೇನು ಮಾನ್ಯ,ಮೀರಾ ರೆಡಿಯಾಗಿ ರೂಮಿನಿಂದ ಹೊರಗೆ ಹೋಗುವಷ್ಟರಲ್ಲಿ ನಿಧಿ ಫೋನ್ ಮಾಡಿದಳು.ಫೋನ್ ಎತ್ತಿದ ಮೀರಾ “ಏನ್ ನಿಧಿ ಮೇಡಂ ಇಷ್ಟೋತ್ತಲ್ಲಿ ಕಾಲ್ ಮಾಡಿದ್ದಾರೆ ಏನ್ ವಿಷ್ಯ”ಎಂದು ಕೇಳಿದಳು ಮೀರಾ.

ಆ ಕಡೆ ಫೋನ್ ಮಾಡಿದ್ದ ನಿಧಿ ಒಂದೇ ಸಮ ಅಳಲು ಶುರುಮಾಡಿದ್ದಳು. ಅವಳ ಅಳು ಕೇಳಿ ಗಾಬರಿಯಾದ ಮೀರಾ “ನಿಧಿ ಏನಾಯ್ತೆ ಯಾಕೆ ಅಳ್ತಿದಿಯಾ”ಎಂದು ಕೇಳಿದಳು ದುಗುಡದಿಂದ.

“ಅಮ್ಮ ಅಮ್ಮ”ಎಂದ ನಿಧಿ ಮತ್ತೆ ಅಳಲು ಶುರುಮಾಡಿದಳು..

ಇನ್ನು ಗಾಬರಿಯಾದ ಮೀರಾ “ಅಮ್ಮನಿಗೆ ಏನಾಯ್ತು ಹೇಳು”ಎಂದು ಹೇಳಿದಳು ಮೀರಾ.

“ಅರ್ಜೆಂಟಾಗಿ ನೀನು ಮಾನ್ಯ ಹಾಸ್ಪಿಟಲ್ಗೆ ಬನ್ನಿ”ಎಂದು ಅಳುತ್ತಲೇ ಕಾಲ್ ಕಟ್ ಮಾಡಿದಳು ನಿಧಿ.

ಗಾಬರಿಗೊಂಡ ಮೀರಾ, ಮಾನ್ಯಳೊಡನೆ ಹಾಸ್ಪಿಟಲ್ಗೆ ಹೋದರು.ಅಷ್ಟೋತ್ತಿಗಾಗಲೇ ನಕುಲ್, ಪ್ರಣವ್ ಹಾಜರಿದ್ದರು. ನಿಧಿ ಅಳುತ್ತಾ ಕೂತಿದ್ದಳು.ಪಕ್ಕದಲ್ಲಿ ನಿಧಿ ತಾಯಿ ತುಳಸಿಯನ್ನು ನೋಡಿ ಸಮಾಧಾನಗೊಂಡರು ಮಾನ್ಯ,ಮೀರಾ.

“ನಿಮ್ಮಜ್ಜಿ,ಅಂಟಿಗೆ ಏನೋ ಆಗಿದೆ ಅನ್ನೋಥರ ಅಮ್ಮ ಅಮ್ಮ ಹಾಸ್ಪಿಟಲ್ಗೆ ಬನ್ನಿ ಅಂತ ಕಾಲ್ ಕಟ್ ಮಾಡಿ ಗಾಬರಿಮಾಡ್ತಿಯಾ”ಎಂದು ನಿಟ್ಟುಸಿರು ಬಿಟ್ಟಳು ಮೀರಾ.

“ಅಮ್ಮನಿಗೆ ಏನಾದ್ರು ಆಗಿದ್ರೆ ಫೋನ್ ಮಾಡೋಕಾದ್ರು ನಾನ್ ಇರ್ತಿದ್ನ. ಅವ್ಳ್ ಜೊತೆಯಲ್ಲೇ ನಾನು ಹೋಗ್ತಿದ್ದೆ”ಎಂದು ಜೋರಾಗಿ ಅಳಲು ಶುರುಮಾಡಿದಳು.

“ಅಯ್ಯೋ ಹುಚ್ಚಿ ಹಾಗೆಲ್ಲ ಮಾತಾಡಬಾರದು. ಈಗ ಏನು ಆಗಿಲ್ಲ ಅಲ್ವಾ.ಅಳೋದು ನಿಲ್ಸು”ಎಂದಳು ಮಾನ್ಯ ಪ್ರೀತಿಯಿಂದ.

“ನಾನು ಆಗ್ಲಿಂದ ಅದೇ ಹೇಳ್ತಿದಿನಮ್ಮ ಏನು ಆಗಿಲ್ವಲ್ಲ ಅಳೋದು ನಿಲ್ಸು ಅಂತ ಆದ್ರೆ ಅವ್ಳ್ ಕೇಳ್ತಾನೆ ಇಲ್ಲ”ಎಂದಳು ನಿಧಿಯ ತಾಯಿ ತುಳಸಿ.

“ಅದ್ ಸರಿ ಆಂಟಿ ನಿಮಗೆ ಏನಾಯ್ತು.? ಇವ್ಳ್ ಇಸ್ಟ್ ಅಳ್ತಿದಾಳೆ ಅಂದ್ರೆ ಏನೋ ದೊಡ್ಡದೇ ಆಗಿರ್ಬೇಕು ಏನ್ ಹೇಳಿ ಆಂಟಿ”ಎಂದು ಕೇಳಿದ ನಕುಲ್ ವಿನಂತಿಯಿಂದ.

“ಅದಾ..s ಮದ್ಯಾಹ್ನ ಏನೋ ಕೆಲಸ ಇದೆ ಅಂತ ಮನೆಗೆ ಹೋಗ್ತಾ ಇರ್ಬೇಕಾದ್ರೆ 4 ಜನ ರೌಡಿಗಳು ನನ್ನ ಸಾಯಿಸೋಕೆ ಬಂದರು”ಎಂದು ತುಳಸಿ ಇನ್ನು ಮಾತೆ ಮುಗಿಸಿರಲಿಲ್ಲ ಅಷ್ಟರಲ್ಲಿ ಮಾತು ಶುರುಮಾಡಿದ ಪ್ರಣವ್ “ರೌಡಿಗಳಾ…!ಅವ್ರ್ ಯಾಕೆ ನಿಮ್ಮನ್ನು ಸಾಯಿಸೋಕೆ ಬಂದರು”ಎಂದು ಕೇಳಿದ ಕುತೂಹಲದಿಂದ.

“ಓ ಅವ್ರಾ..!ಮೊನ್ನೆ ಹಾಸ್ಪಿಟಲ್ ಗೆ ಒಬ್ಬ ಸುಳ್ಳು ಪೋಸ್ಟ್ ಮಾರ್ಟಮ್ ರಿಪೋರ್ಟ್ ಬರೆದುಕೊಡಿ ಅಂತ ಬಂದಿದ್ದ. ನಾನ್ ನನ್ ವೃತ್ತಿಗೆ ಮೋಸಮಾಡೊಲ್ಲ ಅಂತ ಬೈದು ಕಳಿಸಿದ್ದೆ.ಮೋಸ್ಟ್ಲಿ ಅವನೇ ನನ್ನ ಸಾಯಿಸೋಕೆ ರೌಡಿಗಳನ್ನು ಕಳುಹಿಸರಬೇಕು”ಎಂದಳು ತುಳಸಿ.

“ಮೊನ್ನೆ ಬರೆದು ಕೊಟ್ಟಿದ್ರೆ ಇವತ್ತು ನಿನ್ನ ಸಾಯಿಸೋಕೆ ಬರ್ತಾ ಇರಲಿಲ್ಲಬರೆದುಕೊಟ್ಟಿದ್ರೆ ಆಗುತ್ತಿತ್ತು”ಎಂದಳು ನಿಧಿ ಮತ್ತೂ ಅಳುತ್ತಾ.

“ಅದ್ ಹೇಗೆ ಆಗುತ್ತೆ ಪುಟ್ಟ. ನಾನ್ ಇಷ್ಟ ಪಟ್ಟು  ಬಂದಿರೋ ವೃತ್ತಿಗೆ ಯಾರೋ ಒಬ್ಬ ಹೆದರಿಸ್ತಾನೆ ಅನ್ನೋಮಾತ್ರಕ್ಕೆ ಸುಳ್ಳು ವರದಿ ಬರೆದು ನನ್ನ ವೃತ್ತಿಗೆ ಮೋಸ ಮಾಡೋಕಾಗುತ್ತಾ”ಎಂದು ನಿಧಿಯ ತಲೆಯನ್ನು ನೇವರಿಸಿದಳು ತುಳಸಿ.

ಅಷ್ಟರಲ್ಲೇ ಅಲ್ಲಿಗೆ ಬಂದ ನರ್ಸ್”ಮೇಡಂ ನೀವ್ ಕೇಳಿದ ಎಕ್ಸ್ ರೇ ರಿಪೋರ್ಟ್ ಬಂತು”ಎಂದು ತುಳಸಿಯ ಕೈಗಿಟ್ಟಳು.

“ಹಾ ನಿಮಗೆಲ್ಲಾ ಇನ್ನೊಂದ್ ಹೇಳೋದ್ ಮರೆತೇ ಆ ರೌಡಿಗಳಿಂದ ನನ್ನ ಕಾಪಾಡಿದ್ದು ಒಬ್ಬ ಹುಡುಗ”ಎಂದಳು ತುಳಸಿ.

ಹೌದಾ..! ಎಂದರು ಎಲ್ಲರೂ ಆಶ್ಚರ್ಯಚಕಿತರಾಗಿ.”ಈಗ ಎಲ್ಲಿದ್ದಾರೆ ಅವ್ರು
“ಎಂದಳು ನಿಧಿ ಕುತೂಹಲದಿಂದ.

“ನನ್ನ ಕಾಪಾಡೋವಾಗ ಹೊಡೆದಾಟದಲ್ಲಿ ತಲೆಗೆ ಸ್ವಲ್ಪ ಪೆಟ್ಟು ಬಿದ್ದಿದೆ. ಆವಾಗ್ಲೇ ಟ್ರೀಟ್ಮೆಂಟ್ ಕೊಟ್ಟಿದ್ದೆ. ಇವಾಗ ಬಂದಿರೋ ರಿಪೋರ್ಟ್ ಆ ಹುಡುಗನದ್ದೇ.ಅಲ್ಲೇ ಟ್ರೀಟ್ಮೆಂಟ್ ರೂಮಿನಲ್ಲಿ ರೆಸ್ಟ್ ಮಾಡುತ್ತಿದ್ದಾನೆ ನಡೀರಿ ತೋರಿಸುತ್ತೇನೆ”ಎಂದು ಕರೆದುಕೊಂಡು ಹೋದಳು ತುಳಸಿ.

ಎಲ್ಲರೂ ಒಟ್ಟಿಗೆ ಟ್ರೀಟ್ಮೆಂಟ್ ರೂಮಿನ ಕಡೆ ನಡೆದಾಗ ಅವರೆಲ್ಲರಿಗೂ ಒಂದು ಆಶ್ಚರ್ಯ ಕಾದಿತ್ತು..

ಮುಂದುವರೆಯುವುದು…..

ಈ ಸ್ನೇಹ ಚಿರಾಯು ನೀವು ಇಂಗ್ಲಿಷ್ ಭಾಷೆಯಲ್ಲಿಯೂ ಓದಬಹುದು.

ನಮ್ಮ ವೆಬ್ಬೆಟ್ ನ ಇತರ ಪೋಸ್ಟ್ ಗಳನ್ನು ಇಲ್ಲಿ ಓದಬಹುದು.

ಸ್ನೇಹ ಚಿರಾಯು,ಸ್ನೇಹ ಚಿರಾಯು

ಸ್ನೇಹ ಚಿರಾಯು

Comments

No comments yet. Why don’t you start the discussion?

Leave a Reply

Your email address will not be published. Required fields are marked *