ಸ್ನೇಹ ಚಿರಾಯು-4

ಸ್ನೇಹ ಚಿರಾಯು-4

ಮೀರಾಳ ಪೂಜೆ ಮುಗಿಯುವಷ್ಟರಲ್ಲಿ ಮನೆಗೆ ಬಂದ ಮಗನನ್ನು ಕುರಿತು”ಏನ್ ಸಾರ್ ನಿಮ್ ರಿಸಲ್ಟ್ ನಿಮ್ಗೆ ಗೊತ್ತಾದಮೇಲೂ ಆರಾಮಾಗಿ ಕಾಡು ಸುತ್ತೋಕೆ ಹೋಗಿದ್ದಿರಲ್ಲ, ಮುಂದೆ ಏನ್ ಮಾಡಬೇಕು ಅಂತ ಅನ್ಕೊಂಡಿದೀರಾ”ಎಂದು ಕೇಳಿದ ಪ್ರಕಾಶ್.

ಏನು ಉತ್ತರಿಸಬೇಕು ಎಂಬ ಗೊಂದಲದಲ್ಲಿದ್ದ ಚಿರಂತ್ “ನಂಗೊತ್ತಿಲ್ಲ ಅಪ್ಪ.ನೀವ್ ಏನು ಹೇಳ್ತಿರೋ ಅದ್ನ ಮಾಡ್ತೀನಿ ಅಷ್ಟೇ”ಎಂದು ನಿರ್ಲಕ್ಷ್ಯದ ಉತ್ತರ ಕೊಟ್ಟ.

“ಏನಪ್ಪಾ ನಾನ್ ಹೇಳಿದ್ ಹಾಗೆ ಕೇಳ್ತಿಯಾ,ಏನು ಬೇಡ ಸರ್.ನಿಮ್ಗೆ ಏನು ಅನ್ಸುತ್ತೋ ಅದೇ ಮಾಡಿ ಬೇಕಿದ್ರೆ ಸಪ್ಪೋರ್ಟ್ ಮಾಡ್ತೀನಿ”ಎಂದ ಪ್ರಕಾಶ್.

“ಇಲ್ಲ ಅಪ್ಪ ನಾನ್ ಅನ್ಕೊಂಡಿದ್ದಾಗಲಿ, ನಾನ್ ಹೇಳಿದ್ದು ನಿಮ್ಗೆ ಅರ್ಥ ಮಾಡ್ಸೋದಾಗ್ಲಿ ಯಾವುದು ಆಗಲ್ಲ.ಸುಮ್ನೆ ನೀವ್ ಹೇಳಿದ್ ಕೇಳ್ಕೊಂಡು ಇದ್ದುಬಿಡ್ತೀನಿ”ಎಂದ ಚಿರಂತ್.

“ಇಸ್ಟ್ ದಿನ ಚೆನ್ನಾಗಿ ಓದು ಅಂತ ನಾನೇ ತಾನೇ ಹೇಳಿದ್ದು ಅವಾಗ ನನ್ ಮಾತು ಕೇಳಿದ್ರೆ ಇವತ್ತು ನಾನು ನಿಂಗೆ ಹೀಗೆ ಪ್ರಶ್ನೆ ಕೇಳೋ ಅವಶ್ಯಕತೆ ಇರ್ತಾನೆ ಇರ್ಲಿಲ್ಲ”ಎಂದ ಪ್ರಕಾಶ್.

“ಸಾಕು ಅಪ್ಪ ನನ್ ತಪ್ಪು ಏನು ಅಂತ ನನ್ಗೆ ಅರ್ಥ ಆಗಿದೆ.ಸಾಧ್ಯ ಆದ್ರೆ ನಿಮ್ ತಪ್ಪು ಏನು ಅಂತ ಅರ್ಥ ಮಾಡ್ಕೊಳ್ಳಿ”ಎಂದ ಚಿರಂತ್ ಸ್ವಲ್ಪ ಬೇಜಾರಲ್ಲಿ.

“ನಾನ್ ಏನೋ ತಪ್ಪು ಮಾಡಿದೀನಿ ಅರ್ಥ ಮಾಡ್ಕೊಳ್ಳೋದಕ್ಕೆ.ನಿಂಗೋಸ್ಕರ ಇಷ್ಟೆಲ್ಲಾ ಮಾಡಿದೀನಿ ಇದೇನಾ ನಾನ್ ಮಾಡಿರೋ ತಪ್ಪು “ಎಂದ ನೊಂದ ದನಿಯಲ್ಲಿ ಪ್ರಕಾಶ್.

“ನಂಗೋಸ್ಕರ ಇಷ್ಟೆಲ್ಲಾ ಮಾಡಿದ್ದು ತಪ್ಪಲ್ಲ. ಆದ್ರೆ ನನ್ನಿಂದ ಯಾಕ್ ಆ ತಪ್ಪಾಯ್ತು ಅದಕ್ಕೆ ಕಾರಣ ಏನು ನನಗಾದ ತೊಂದರೆ ಏನು ಅಂತ ತಿಳ್ಕೊಳ್ಳೋ ಪ್ರಯತ್ನನೇ ಮಾಡಿಲ್ಲ ಅದು ನೀವ್ ಮಾಡಿದ ತಪ್ಪು”ಎಂದ ಚಿರಂತ್ ಬೇಜಾರಿಂದ.

“ಯಾವುದು ತಪ್ಪು ಸರಿ ಅಂತ ಅಂಕಲ್ಗೆ ಚೆನ್ನಾಗೊತ್ತು, ಅದ್ನ ನಿನ್ನಿಂದ ಕಲಿಬೇಕಾಗಿಲ್ಲ. ಸ್ವಲ್ಪ ಹಿರಿಯರ ಹತ್ತಿರ ವಾದಿಸೋದು ಕಡಿಮೆ ಮಾಡ್ಕೊಂಡ್ರೆ ಒಳ್ಳೇದು”ಎಂದಳು ಸಿಟ್ಟಿನಿಂದ ಮೀರಾ ಚಿರಂತನ ಮುಖ ನೋಡದೆ.

“ಹೇಳದೆ ಇದ್ರೆ ಅರ್ಥ ಆಗಲ್ಲ.ಹೇಳಿದ್ರೆ ನಾನ್ ಮಾಡೋದು ತಪ್ಪು ಅಂತೀರಾ. ಏನ್ ಮಾಡ್ಲಿ ನಾನು.ಸಾರೀ ಅಪ್ಪ”ಎಂದು ಹೇಳಿ ಅಲ್ಲಿಂದ ಹೊರಟ ಚಿರಂತ್.

“ನೀವ್ ಬೇಜಾರಾಗಬೇಡಿ ಅಂಕಲ್ ಅವ್ನ್ ಹೇಳಿದ್ದೆಲ್ಲಾ ಕೇಳಿ”ಎಂದಳು ಮೀರಾ.

“ಹಾಗೇನು ಇಲ್ಲ ಮರಿ, ನಂಗ್ ಈಗ ದೊಡ್ಡ ಚಿಂತೆ ಇರೋದು ಅವನ ಮುಂದಿನ ಭವಿಷ್ಯ ಏನು ಅಂತ”ಎಂದ ಪ್ರಕಾಶ್ ದ್ವಂದ್ವದಿಂದ.

“ಅವನ ಭವಿಷ್ಯಕ್ಕೆ ನೀವ್ ಮಾಡೋ ಪ್ರಯತ್ನ ನೀವ್ ಮಾಡಿದಿರಾ.ಮುಂದಿನದು ಎಲ್ಲಾ ಆ ದೇವರಿಗೆ ಬಿಟ್ಟುಬಿಡಿ ಅವನ ಹಣೆಬರಹದಲ್ಲಿ ಏನ್ ಆಗ್ಬೇಕು ಅಂತ ಇರುತ್ತೋ ಅದೇ ಆಗ್ಲಿ”ಎಂದು ಸಮಾಧಾನ ಮಾಡಿದಳು ಮೀರಾ.

“ಮೀರಾ ನಂಗ್ ಒಂದ್ ಸಹಾಯ ಮಾಡು. ಕೊನೆ ಸಲ ಒಂದು ಪ್ರಯತ್ನ ಮಾಡೋಣ. ಮುಂದಿನ ತಿಂಗಳು ಬರುವ ಸಪ್ಲಿಮೆಂಟರಿ ಪರೀಕ್ಷೆ ಬರಿಸೋಣ ನೀನು ಅವನಿಗೆ ಚೆನ್ನಾಗಿ ಹೇಳ್ಕೊಡು”ಎಂದ ಪ್ರಕಾಶ್ ವಿನಂತಿಯಿಂದ.

“ಅಯ್ಯೋ ಅಂಕಲ್ ಅದನ್ನು ನೀವ್ ನಂಗ್ ಕೇಳ್ಬೇಕಾ. ನನ್ ಪ್ರಯತ್ನನು ನಾನ್ ಮಾಡೇ ಮಾಡ್ತೀನಿ ತಲೆ ಕೆಡಿಸ್ಕೊಬೇಡಿ. ನೀವ್ ಹೋಗಿ ನಾನ್ ಸ್ವಲ್ಪ ಚಿರು ಹತ್ರ ಮಾತಾಡಿ ಬರ್ತೀನಿ “ಎಂದು ಮೀರಾ ಚಿರು ಹತ್ತಿರ ಹೋದಳು.

ಅವನ ಎದುರಿಗೆ ಬಂದದ್ದೇ ತಡ “ಥ್ಯಾಂಕ್ಸ್ ಚಿರು”ಎಂದು ಮಾತು ಶುರು ಮಾಡಿ ಮುಂದುವರೆದು”ಕೊನೆಗೂ ಅಂಕಲ್ ನನ್ ಮೇಲಿಟ್ಟಿದ್ದ ನಂಬಿಕೆ ಕಳ್ಕೊಳ್ಳೋ ಹಾಗೇ ಮಾಡ್ಬಿಟ್ಟೆ.ಹಾಗೇ ನಿನ್ನ ಮೇಲೆ ನಾನಿಟ್ಟಿದ್ದ ನಂಬಿಕೆ ಕೂಡ ಪೂರ್ತಿಯಾಗಿ ಕಳ್ಕೊಂಡ್ಬಿಟ್ಟೆ.ಈಗ ಸಮಾಧಾನ ಆಯ್ತಾ ನಿಂಗೆ ಎಂದು ಪ್ರಶ್ನೆ ಮಾಡಿದಳು ಮೀರಾ.

ಮೀರಾ ತನ್ನ ಪಾಡಿಗೆ ತಾನು ಮಾತಾಡುತಿದ್ದಳು. ಚಿರುನಿಂದ ಯಾವುದೇ ಉತ್ತರ ಬರಲಿಲ್ಲ.ಇದನ್ನು ಕಂಡ ಮೀರಾ “ನಿಂಗೆ ಮಾತಾಡೋಕಾದ್ರು ಏನಿದೆ ಅಲ್ವಾ. ಎಲ್ಲಾ ಮುಗಿದುಹೋಯ್ತು.ನಮ್ಮ ಒಪ್ಪಂದದ ಪ್ರಕಾರ ನಾನ್ ನಿನ್ನ ಮಾತಾಡಿಸಲೇ ಬಾರದು. ಆದರೆ, ಏನ್ ಮಾಡ್ಲಿ ಅಂಕಲ್ ಮತ್ತೆ  ನಿನ್ನ ಮೇಲೆ ನಂಬಿಕೆ ಇಟ್ಟು ಸಂಪ್ಲಿಮೆಂಟರಿ ಪರೀಕ್ಷೆಯಲ್ಲಾದ್ರೂ ಪಾಸ್ ಆಗ್ತಾನೇನೋ ಹೇಳಿಕೊಡು ಅಂತ ಹೇಳಿದ್ರು.ಅದ್ಕೆ ಹೇಳೋಕ್ ಬಂದೆ.ನಾನ್ ಹೇಳ್ಕೊಡ್ತೀನಿ ಅಷ್ಟೇ ಮತ್ತೆ ನಿನ್ನ ಜೊತೆ ಚೆನ್ನಾಗಿ ಮಾತಾಡಿಸಿಕೊಂಡು ಇರ್ತೀನಿ ಅನ್ನೋದು ಸುಳ್ಳು”ಎಂದು ಹೇಳಿ ಚಿರುನ ಉತ್ತರಕ್ಕೂ ಕಾಯದೆ ಹೊರಟು ಹೋದಳು.

ಸಂಪ್ಲಿಮೆಂಟರಿ ಎಕ್ಸಾಮ್ ಆಗುವವರೆಗೂ ಅಲ್ಪಸ್ವಲ್ಪ ಮಾತಾಡಿಸುತಿದ್ದ ಮೀರಾ. ಆ ಪರೀಕ್ಷೆಯಲ್ಲೂ ಫೇಲ್ ಆದ ಚಿರಂತನನ್ನು ಮಾತಾಡಿಸಬಾರದೆಂದು ತೀರ್ಮಾನಿಸಿ  ಮಾತಾಡಿಸುವುದನ್ನೇ ಬಿಟ್ಟಳು.

ಇತ್ತ ಮೀರಾಗೆ ಮಡಿಕೇರಿಯ ಕಾಲೇಜಿನಲ್ಲಿ ಬಿಎಸ್ಸಿ ಪದವಿ ವಿಭಾಗಕ್ಕೆ ಸೀಟು ಸಿಕ್ಕಿತು. ಅಷ್ಟು ದೂರ, ಬದಲಾಗಿ ಆ ಊರಿನಲ್ಲಿ ಚಿಕ್ಕಂದಿನಲ್ಲಿ ಕೂಡಿಟ್ಟಿದ್ದ ನೆನಪುಗಳು ಅವಳಿಗೆ ಮರುಕಳಿಸುವ ಸಾಧ್ಯತೆ ಇರುವುದರಿಂದ ಅಲ್ಲಿಗೆ ಕಳುಹಿಸಲು ಪ್ರಕಾಶ್ ಒಪ್ಪಲಿಲ್ಲ.

ಆದರೆ ಅವಳ ಪಿಯುಸಿಯ ಗೆಳತಿಯೊಬ್ಬಳಿಗೆ  ಅದೇ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು.ಚಿರುನ ಬಿಟ್ಟು ಅವಳು ಅಷ್ಟು ದೂರ ಓದಲು ಒಪ್ಪಿಕೊಂಡಿದ್ದಾಳೆ ಅಂದರೆ ಆ ಗೆಳತಿಯೇ ಕಾರಣ  ಎಂದು ತಿಳಿದ ಪ್ರಕಾಶ್ ಬೇರೆ ದಾರಿಯಿಲ್ಲದೆ ಒಪ್ಪಿಕೊಳ್ಳಲೇಬೇಕಾಯಿತು.

ಕಾಲೇಜಿಗೆ ಹೋಗುವ ದಿನ ಪ್ರಕಾಶ್ ಭಾರವಾದ ಮನಸ್ಸಿಂದ ಮೀರಾಳನ್ನು ಕಳುಹಿಸಿಕೊಟ್ಟ.ಚಿರಂತ್ ಮೀರಾಳನ್ನು ಮಾತನಾಡಿಸಲು ತುಂಬಾ ಪ್ರಯತ್ನ ಪಟ್ಟ ಆದರೆ ಮೀರಾ ಮಾತ್ರ ಯಾವುದಕ್ಕೂ ಉತ್ತರ ಕೊಡದೆ ಮೌನಿಯಾಗಿ ಮಡಿಕೇರಿಯ ಕಡೆ ಪಯಣ ಬೆಳೆಸಿದಳು.

ಹೀಗೆ ಸುಮಾರು 3 ತಿಂಗಳು ಕಳೆದವು. ಪ್ರಕಾಶ್ ಸಹ ಅವನೊಂದಿಗೆ ಸರಿಯಾಗಿ ಪ್ರೀತಿಯಿಂದ ಮಾತನಾಡಿಸುವುದೇ ಬಿಟ್ಟಿದ್ದ.ಪ್ರಕಾಶ್ ಚಿರು ಜೊತೆ ಮಾತಾಡದೆ ಇದ್ದರೂ ಅವನ ಪಾಡಿಗೆ ಗದ್ದೆಯಲ್ಲಿ ಕೆಲಸ ಮಾಡಿಕೊಂಡು ಇರುತಿದ್ದ. ಅವಾಗವಾಗ ಒಬ್ಬನೇ ಕಾಡಿನೊಳಗೆ ಹೋಗಿ ವಿಹರಿಸಿ ಬರುತ್ತಿದ್ದ.

ಒಂದು ದಿನ ಪ್ರಕಾಶ್ ಚಿರುನ ಬಳಿಬಂದು”ಚಿರು ಇವತ್ತು ಮಡಿಕೇರಿಗೆ ಹೋಗಿ ಮೀರಾಳ ಕಾಲೇಜ್ ಪೀಜು ಕಟ್ಟಿ, ಹಾಗೇ ಮೀರಾಳನ್ನು ಮಾತಾಡಿಸಿಕೊಂಡು ಅವಳಿಗೂ ಸಹ ಖರ್ಚಿಗೆ ಈ ಹಣವನ್ನು ಕೊಟ್ಟು ಬಾ ನನ್ಗೆ ಸ್ವಲ್ಪ ಕೆಲಸವಿದೆ”ಎಂದು ಚಿರುಗೆ ಹಣ ಕೊಟ್ಟ.

ಮೀರಾಳನ್ನು ಮಾತನಾಡಿಸಲು ಬಂದ ಅವಕಾಶವನ್ನು ಖುಷಿಯಿಂದಲೇ ಸ್ವೀಕರಿಸಿದ.ಯಾವಾಗ ಮೀರಾಳನ್ನು ನೋಡುತ್ತೇನೆ ಎಂಬ ಬಯಕೆಯಿಂದ ಆತುರವಾಗಿ ಹೊರಟು ಮಡಿಕೇರಿಯ ಬಸ್ಸು ಹತ್ತಿದ..

ಇತ್ತ ಪ್ರಕಾಶ್ ಚಿರುಗೆ ಹಣ ಕೊಟ್ಟು ಕಳುಹಿಸಿದ ನಂತರ ಮೀರಾಳಿಗೆ ಫೋನ್ ಮಾಡಿದ..ಪ್ರಕಾಶ್ ಫೋನ್ ಮಾಡಿದ ತಕ್ಷಣ ಖುಷಿಯಿಂದ ಫೋನ್ ಎತ್ತಿದ ಮೀರಾ”ಹಾಯ್ ಅಂಕಲ್, ಹೇಗಿದ್ದೀರಾ”ಎಂದು ಕೇಳಿದಳು.

“ನಾನ್ ಚೆನ್ನಾಗಿದ್ದೀನಿ ಮರಿ, ನೀನು ಹೇಗ್ ಇದ್ದಿಯಾ”ಎಂದು ಪ್ರೀತಿಯಿಂದ ಕೇಳಿದ ಪ್ರಕಾಶ್.

“ನಾನಂತೂ ಸೂಪರ್ರಾಗಿದೀನಿ”ಎಂದಳು ಮೀರಾ ಖುಷಿಯಿಂದ.

“ಇವತ್ತು ನಿನ್ನ ಕಾಲೇಜು ಫೀಜು ಕಟ್ಟಲು ಕೊನೆಯ ದಿನ ಅಲ್ವಾ, ನನ್ಗೆ ಸ್ವಲ್ಪ ಕೆಲಸ ಇದೆ ಬರೋಕ್ ಆಗಲ್ಲ. ಅದ್ಕೆ ಚಿರುನ ಕಳ್ಸಿದೀನಿ”ಎಂದ ಪ್ರಕಾಶ್.

ಚಿರು ಎಂಬ ಹೆಸರು ಕೇಳಿದ ತಕ್ಷಣ ಒಂದು ಕ್ಷಣ ಮಂಕಾದಳು ಮೀರಾ. ಯಾರ ಹೆಸರನ್ನು ಮತ್ತೆ ಕೇಳಬಾರದೆಂದು ಅಂದುಕೊಂಡಿದ್ದಳೋ ಇಂದು ಅವನ ಹೆಸರು ಕೇಳುವ ಸಂದರ್ಭ ಬಂದಿತಲ್ಲ ಎಂದು ಮನಸಲ್ಲೇ ಅಂದುಕೊಂಡು “ಅಯ್ಯೋ ಅಂಕಲ್ ನೀವೇ ಬಂದಿದ್ರೆ ಚೆನ್ನಾಗಿರ್ತಿತ್ತು.ನನ್ಗೆ ನಿಮ್ಮನ್ನು ನೋಡ್ಬೇಕು ಅನಿಸ್ತಿದೆ “ಎಂದಳು ಬೇಜಾರಿಂದ.

“ನೀನೇನ್ ಬೇಜಾರಾಗ್ಬೇಡ ಮರಿ. ಮುಂದಿನ ವಾರ ಫ್ರೀ ಮಾಡಿಕೊಂಡು ಬರ್ತೀನಿ ಸರಿನಾ ಎಂದು ಸಮಾಧಾನ ಮಾಡಿದ ಪ್ರಕಾಶ್.

ಒಲ್ಲದ ಮನಸ್ಸಿಂದಲೇ “ಸರಿ ಅಂಕಲ್”ಎಂದು ಫೋನಿಟ್ಟಳು ಮೀರಾ.

ಎಂದಿನಂತೆ ತನ್ನ ಗೆಳತಿಯರೊಂದಿಗೆ ಕಾಲೇಜಿಗೆ ಹೋದಳು ಮೀರಾ. ಕಾಲೇಜಿನಲ್ಲಿ ಮೀರಾ,ಮಾನ್ಯ ನಿಧಿ, ನಕುಲ್, ಪ್ರಣವ್ ಈ ಐದು ಜನರು ಒಳ್ಳೆಯ ಸ್ನೇಹಿತರಾಗಿದ್ದರು.

ಮೀರಾ,ಮಾನ್ಯ ಪಿಯುಸಿ ಒಂದೇ ಕಾಲೇಜಿನಲ್ಲಿ ಓದಿದವರು, ಹಾಗೆಯೇ ಪ್ರಣವ್, ನಕುಲ್ ಒಂದೇ ಕಾಲೇಜಿನಲ್ಲಿ ಓದಿದವರು. ಇನ್ನು ಉಳಿದಿರುವುದು ನಿಧಿ.ಈಕೆ ಅದೇ ಮಡಿಕೇರಿಯ ಪ್ರಸಿದ್ಧ ಹಾಸ್ಪಿಟಲ್ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತಿದ್ದ ತುಳಸಿಯ ಮಗಳು.

ಸಾಮಾನ್ಯವಾಗಿ ಮಧ್ಯಾಹ್ನ ಊಟ ಮುಗಿದ ನಂತರ ಈ ಐವರು ಗುಂಪಾಗಿ ಕೂತು ಮಾತನಾಡುವಾಗ ಮೀರಾ ಮಾತಿನಲ್ಲಿ ಅವಳ  ಕೈ ಸ್ವಲ್ಪ ಮೇಲಿರುತ್ತಿತ್ತು ಆದರೆ ಇವತ್ತು ಯಾಕೆ ಸುಮ್ನೆ ಕೂತಿದಾಳೆ ಅನ್ನೋ ಅನುಮಾನ ಎಲ್ಲರಿಗೂ ಬಂತು.

ಅದರಂತೆ ನಕುಲ್ ಕೇಳಿಯೇ ಬಿಟ್ಟ “ಏನು ಯಾವಾಗ್ಲೂ ಪಟ ಪಟ ಅಂತ ಶಬ್ದ ಮಾಡುತ್ತಿದ್ದ ಪಟಾಕಿ ಇವತ್ತೇನು ಸೌಂಡೇ ಮಾಡುತ್ತಿಲ್ಲವಲ್ಲ”ಎಂದು ರೇಗಿಸಿದನು.

ಅವನ ಮಾತಿಗೆ ಜೋಡಿಯಾದ ಪ್ರಣವ್ “ಹೌದಪ್ಪ. ಇವತ್ತು ಪಟಾಕಿ ಯಾಕೋ ಸೌಂಡ್ ಮಾಡ್ತಿಲ್ವಲ್ಲ. ಮೋಸ್ಟ್ಲಿ ಪಟಾಕಿ ನೀರಲ್ಲಿ ನೆನೆದಿರಬೇಕು. ಅದ್ಕೆ ಸೌಂಡ್ ಬರ್ತಿಲ್ಲ”ಎಂದು ನಕುಲ್ ಗೆ ಸಾಥ್ ಕೊಟ್ಟ.

“ಸಾಕು ಸುಮ್ನಿರ್ರೋ ಅದೇನ್ ಆಡ್ಕೋತಿದೀರಾ ಅವ್ಳ್ನ. ಏನುಕ್ಕೋ ಗೊತ್ತಿಲ್ಲ ಬೆಳಗ್ಗೆ ಅವ್ರ್ ಅಂಕಲ್ ಫೋನ್ ಮಾಡಿದ್ದಾಗಿನಿಂದಲೂ ಹೀಗೆ ಇದಾಳೆ”ಎಂದಳು ಮಾನ್ಯ.

“ಅದೇನ್ ಹೇಳಿದ್ರೆ ನಿಮ್ ಅಂಕಲ್ ನಿಂಗೆ ಬೇಜಾರು ಆಗುವಂತದ್ದು”ಎಂದು ಪ್ರಶ್ನೆ ಮಾಡಿದಳು ನಿಧಿ.

ಹೀಗೆ ಎಲ್ಲರೂ ಒಂದಲ್ಲದ ಒಂದು ಕಾರಣ ಇಟ್ಟುಕೊಂಡು ಅವಳನ್ನು ಮಾತನಾಡಿಸುವ ಪ್ರಯತ್ನ ಮಾಡುತ್ತಿದ್ದರೂ ಅವಳು ಮಾತ್ರ ಯಾವುದಕ್ಕೂ ಪ್ರತಿಕ್ರಿಯೆ ನೀಡದೆ ಸುಮ್ಮನೆ ಕೂತಿದ್ದಳು.

ಅಷ್ಟರಲ್ಲಿ ಅಲ್ಲಿಗೆ ಬಂದ ಒಬ್ಬ”ಮೀರಾ ಆಚೆ ನಿನಗೋಸ್ಕರ ಯಾರೋ ಕಾಯ್ತಾ ಇದಾರೆ ಹೋಗ್ಬೇಕಂತೆ”ಎಂದ.

ಅವಳಿಗೆ ಗೊತ್ತು ಬಂದಿರುವುದು ಚಿರಂತ್ ಎಂದು ಆದರೂ ಅವಳ ಸ್ವಾಭಿಮಾನ ಬಿಡದ ಮೀರಾ “ಅದ್ಯಾರೋ ಇಲ್ಲಿಗೆ ಬರೋಕ್ ಹೇಳಿ”ಎಂದು ಹೇಳಿ ಕಳುಹಿಸಿದಳು.

ಇಷ್ಟು ದಿನವಾದರೂ ಮೀರಾಳಿಗೆ ಚಿರಂತ್ ಮೇಲಿದ್ದ ಕೋಪ ಒಂಚೂರು ಕಡಿಮೆಯಾಗಿರಲಿಲ್ಲ. ಆದರೆ ಚಿರಂತ್ ಮಾತ್ರ ಮೀರಾ ಹಳೆಯದನ್ನು ಎಲ್ಲಾ ಮರೆತು ನನ್ನೊಂದಿಗೆ ಮೊದಲಿನ ತರ ಮಾತನಾಡುತ್ತಾಳೆ ಎಂಬ ಭರವಸೆಯಲ್ಲಿದ್ದ.

“ಸರಿ” ಎಂದು ಹೊರಟ ಆತ ಚಿರಂತನನ್ನು ಒಳ ಬರಲು ಹೇಳಿದ.ಅವನ ಮಾತಿನಂತೆ ಒಳ ಬಂದ ಚಿರಂತ್ ಮೀರಾಳಿಗಾಗಿ ಹುಡುಕಾಡಿದಾಗ ಅವನ ಕಣ್ಣಿಗೆ ಮೊದಲು ಕಂಡದ್ದು ಮಾನ್ಯ.

ಮೀರಾ ಅವನ ಕಡೆ ಬೆನ್ನು ಮಾಡಿ ಕುಳಿತ್ತಿದ್ದರಿಂದ ಅವಳ ಮುಖ ಕಾಣಲಿಲ್ಲ.ಹಾಗೇ ಹತ್ತಿರ ಬಂದಾಗ ಮಾನ್ಯಳಿಗೆ ಚಿರಂತ್ ಕಂಡ.ಮೀರಾ ಚಿರಂತನನ್ನು ಮಾತಾಡಿಸುತ್ತಿಲ್ಲ ಎಂದು ತಿಳಿಯದ ಮಾನ್ಯ ಚಿರಂತನನ್ನು ಕಂಡ ಕೂಡಲೇ ಸಂತಸಗೊಂಡು   “ಅಲ್ಲಿ ನೋಡು ಮೀರಾ ಯಾರ್ ಬಂದಿದ್ದಾರೆ ಅಂತ”ಎಂದು ಹಿಗ್ಗಿದಳು.

“ಯಾರು ಆ ಚಿರಂತ್ ಬಂದ್ನ”ಎಂದು ನಿರ್ಲಕ್ಸ್ಯದಿಂದ ಕೇಳಿದಳು ಮೀರಾ.

ಮಾನ್ಯಳಿಗೆ ಒಮ್ಮೆಲೇ ಅಚ್ಚರಿಯಾಯ್ತು.ಇದೇನು ಮೀರಾ ಹೀಗ್ ಮಾತನಾಡುತ್ತಿದ್ದಾಳೆ ಎಂದು.”ಏನೇ ಹೀಗ್ ಮಾತಾಡ್ತಿದೀಯಾ, ಬಂದಿರೋದು ಚಿರಂತ್ ಕಣೆ ಬೇರೆ ಯಾರು ಅಲ್ಲ”ಎಂದಳು ಮಾನ್ಯ.

“ಚಿರಂತ್ ಆದ್ರೆ ಏನ್ ಮಾಡ್ಬೇಕು.ಅದೆನುಕ್ಕೆ ಬಂದಿದ್ದಾನೋ ಆ ಕೆಲಸ ಮುಗಿಸಿಕೊಂಡು ಹೋಗೋಕ್ ಹೇಳು,ಸುಮ್ನೆ ನನ್ನ ಮಾತಾಡ್ಸೋ ಪ್ರಯತ್ನ ಮಾಡ್ಬೇಡ ಅಂತಾನು ಹೇಳು”ಎಂದು ಸಿಟ್ಟಿನಿಂದ ಎದ್ದು ಹೊರಟಳು.

ಕೋಪಗೊಂಡು ಎದ್ದು ಹೋಗುತ್ತಿದ್ದ ಮೀರಾಳನ್ನು ಕಂಡ ಚಿರಂತ್. ಅವನಿಗೆ ಖಚಿತವಾಯ್ತು ಇನ್ನು ಮೀರಾಳಿಗೆ ನನ್ನ ಮೇಲಿದ್ದ ಕೋಪ ಹೋಗಿಲ್ಲ ಎಂದು.

ಮೀರಾಳನ್ನು ಹಿಂಬಾಲಿಸಿದ ಚಿರಂತ್ ಹತ್ತಿರ ಬಂದು “ಮೀರಾ ಒಂದು ನಿಮಿಷ”ಎಂದು ಕೈ ಹಿಡಿದನು..

ಮುಂದುವರೆಯುವುದು……

ಈ ಸ್ನೇಹ ಚಿರಾಯು ನೀವು ಇಂಗ್ಲಿಷ್ ಭಾಷೆಯಲ್ಲಿಯೂ ಓದಬಹುದು.

ನಮ್ಮ ವೆಬ್ಬೆಟ್ ನ ಇತರ ಪೋಸ್ಟ್ ಗಳನ್ನು ಇಲ್ಲಿ ಓದಬಹುದು.

Comments

No comments yet. Why don’t you start the discussion?

Leave a Reply

Your email address will not be published. Required fields are marked *