ಸ್ನೇಹ ಚಿರಾಯು -15⚡ ಅನಿರೀಕ್ಷಿತ ಭೇಟಿ
ಸ್ನೇಹ ಚಿರಾಯು -15-ನಕುಲನ ಮನೆಗೆ ಬಂದ ಚಿರಂತ್ ಸೋಫಾ ಮೇಲೆ ಕೂತು ಮಾತಾಡುತಿದ್ದ ಮೋಹನ್, ಕುಸುಮರನ್ನು ಕಂಡು “ಹಾಯ್ ಆಂಟಿ, ಹಾಯ್ ಅಂಕಲ್”ಎಂದು ಮಾತನಾಡಿಸಿದನು.
“ಹಾ ಬಾರಪ್ಪ ಚಿರಂತ್ ಹೇಗಿದೀಯಾ”ಎಂದು ಕುಶಲೋಪರಿ ವಿಚಾರಿಸಿ ಕೂರಲು ಹೇಳಿದರು ಮೋಹನ್.
“ನಾನ್ ಚೆನ್ನಾಗಿದ್ದೀನಿ ಅಂಕಲ್ ನೀವ್ ಹೇಗಿದೀರಾ”ಸೋಫಾ ಮೇಲೆ ಕೂರುತ್ತಾ.

“ಏನ್ ಚೆನ್ನಾಗೊ ಏನೋ ಬಿಡಪ್ಪಾ. ನಮ್ ಇಬ್ಬರಿಗೆ ನಕುಲ್ ದೆ ಚಿಂತೆ ಆಗ್ಬಿಟ್ಟಿದೆ”ಎಂದರು ಕುಸುಮ ಬೇಜಾರಿನಲ್ಲಿ.
“ಆಂಟಿ ನಕುಲ್ ಎಲ್ಲಿ, ಏನ್ ಮಾಡ್ತಿದಾನೆ”
“ಆ ರೂಮಲ್ಲಿದಾನೆ ನೋಡು.ಯಾರ್ ಜೊತೆನೂ ಮಾತಾಡ್ತಿಲ್ಲ. ಏನಾಗಿದೆ ಹೇಳು ಅಂದ್ರು ಹೇಳ್ತಿಲ್ಲ.ಸರಿಯಾಗಿ ಊಟ ಮಾಡ್ತಿಲ್ಲ. ಅವನಿಗೆ ಏನಾಗಿದೆ ಅಂತಾನೂ ಗೊತ್ತಾಗದೆ ತಲೆ ಕೆಟ್ಟೋಗಿದೆ ನಮ್ಮಿಬ್ಬರಿಗೆ”ಎಂದರು ಕುಸುಮ.
“ಆಂಟಿ ಅವನಿಗೆ ಏನಾಗಿದೆ ಅಂತ ನಂಗ್ ಚೆನ್ನಾಗೊತ್ತು. ನಾನ್ ಹೇಳಿದ ಹಾಗೇ ನೀವ್ ಮಾಡಿದ್ರೆ ಖಂಡಿತ ಅವ್ನು ಸರಿ ಹೋಗ್ತಾನೆ”
“ಅವ್ನ್ ಸರಿ ಹೋಗ್ತಾನೆ ಅಂದ್ರೆ ನಾವ್ ಏನ್ ಬೇಕಾದ್ರೂ ಮಾಡ್ತೀವಿ ಹೇಳು ಅದೇನ್ ಮಾಡ್ಬೇಕು ಅಂತ”
“ಅಂಕಲ್ ನಾನ್ ಹೇಳೋ ವಿಷ್ಯ ಕೇಳಿ ನಿಮ್ಗೆ ಶಾಕ್ ಆಗ್ಬೋದು.ಆದ್ರೆ ಹೇಳಲೇ ಬೇಕಾದ ಸಂದರ್ಭ ಬಂದಿದೆ ಅದ್ಕೆ ಮುಚ್ಚುಮರೆ ಇಲ್ಲದೆ ಹೇಳ್ತಿನಿ ಕೇಳಿ”
“ಬೇಗ ಹೇಳಪ್ಪಾ ಅದೇನಂತ. ಟೆನ್ಶನ್ ಕೊಡ್ಬೇಡ”ಎಂದರು ಮೋಹನ್ ಗಾಬರಿಯಿಂದ.
“ಅಂಕಲ್ ನಾವು ಕಾರವಾರಕ್ಕೆ ಬಂದಾಗ ನಕುಲ್ ಮೀರಾ ಅನ್ನೋ ಹುಡುಗೀನಾ ಲವ್ ಮಾಡ್ತಿದ್ದೀನಿ ಎಂದಿದ್ದ. ನೆನಪಿದ್ಯಾ”ಎಂದು ಕೇಳಿದ.
“ಹಾ ನೆನಪಿದೆ ಅದ್ನ ಹೇಗೆ ಮರೆಯೋಕಾಗುತ್ತೆ. ಮುಂದೆ ಹೇಳು”
“ಅವ್ಳ್ ಬೇರೆ ಯಾರು ಅಲ್ಲ.ನಿಮ್ಮ ಬಾವ ಸಿದ್ದಾರ್ಥ್ ನ ಮಗಳು.ನಾನು ಸಿದ್ದಾರ್ಥ್ ಫ್ರೆಂಡ್ ಸತ್ಯ ಪ್ರಕಾಶನ ಮಗ ಚಿರಂತ್”
💔 ಸಂತೋಷದೊಳಗಿನ ಪಶ್ಚಾತ್ತಾಪ
ವಿಷಯ ಕೇಳಿದ ಮೋಹನ್, ಕುಸುಮಳಿಗೆ ಎಲ್ಲಿಲ್ಲದ ಸಂತೋಷ.ಕೊನೆಗಾಲದಲ್ಲಿ ಬದುಕುವವರಿಗೆ ಆಶ್ರಯ ದೊರೆತಂತೆ,ಒಂದು ಹನಿ ನೀರು ಸಿಗದ ಮರುಭೂಮಿಯಲ್ಲಿ ಸಮುದ್ರವೇ ಸಿಕ್ಕಿಂದಂತ ಸಂತೋಷ.ಸೋಫಾದಿಂದ ಎದ್ದು ಬಂದು ಚಿರಂತನನ್ನು ಬಾಚಿ ತಬ್ಬಿಕೊಂಡ ಮೋಹನ್”ಏನೂ ನೀನು ಸತ್ಯಣ್ಣನ ಮಗಾನ.
ನಿಮಗೋಸ್ಕರ ನಾವು ಹುಡುಕದಿರೊ ಊರಿಲ್ಲ,ತಿರುಗದಿರೋ ಜಾಗ ಇಲ್ಲ.ಹೇಳು ನಿಮ್ಮ ಅಪ್ಪ ಎಲ್ಲಿದಾರೆ.ನಾನ್ ಅರ್ಜೆಂಟಾಗಿ ಅವರ ಜೊತೆ ಮಾತಾಡಿ ಕ್ಷಮೆ ಕೇಳಬೇಕು”ಎಂದು ಸರಿದು ನಿಂತ.
ಇದೇನು ಸತ್ಯಪ್ರಕಾಶ್ ಮೀರಾ ಬದುಕಿದ್ದಾರೆ ಎಂದು ಗೊತ್ತಾದರೆ ಸಾಯಿಸಬೇಕೆಂದು ತಡಕಾಡುತ್ತಾರೆ ಎಂದುಕೊಂಡರೆ ಕ್ಷಮೆ ಕೇಳಬೇಕು ಎನ್ನುತ್ತಿದ್ದಾರಲ್ಲ,ಇವರೇನಾದರೂ ಮಾಡಿದ ತಪ್ಪಿಗೆ ಪಶ್ಚಾತಾಪ ಅನುಭವಿಸುತ್ತಿದ್ದಾರಾ ಎಂಬ ಅನುಮಾನ ಶುರುವಾಯಿತು.
“ಅಂಕಲ್ ನೀವ್ ನಮ್ಮಪ್ಪನ ಹತ್ತಿರ ಮಾತನಾಡುವುದಕ್ಕಿಂತ ಮೊದಲು ನಾನು ಹೇಳುವ ವಿಷಯ ಕೇಳಿ.ನಕುಲ್ ಹೀಗಾಗಲು ಕಾರಣ ಮೊನ್ನೆ ದಾಂಡೇಲಿಯ ನಮ್ಮ ಮನೆಗೆ ಹೋಗಿದ್ದಾಗ ನಮ್ಮಪ್ಪ ಹಾಗೂ ನಕುಲ್ ನಡುವೆ ನಡೆದ ಸಂಭಾಷಣೆಯೇ ಕಾರಣ”ಎಂದು ಅವರಿಬ್ಬರೂ ಮಾತಾಡಿದ ಸಂಭಾಷಣೆಯನ್ನು ವಿವರವಾಗಿ ಹೇಳಿದ.
“ಅಯ್ಯೋ ಅಂದು ನಾವು ಮಾಡಿದ ಸಣ್ಣ ತಪ್ಪು ಇಂದು ನನ್ನ ಮಗನ ಪ್ರೀತಿಗೆ ಮುಳುವಾಯಿತೆ”ಎಂದ ಪಶ್ಚತ್ತಾಪದಿಂದ.
“ಏನೂ ಮೀರಾಳ ತಂದೆತಾಯಿಯನ್ನು ಕೊಂದಿದ್ದು ನಿಮಗೆ ಸಣ್ಣ ತಪ್ಪಾ”ಎಂದು ಕೇಳಿದ ಕೋಪದಿಂದ.
“ನಿಜ್ವಾಗ್ಲೂ ಆ ಕೊಲೆ ನಾವ್ ಮಾಡಿಲ್ಲಪ್ಪ.ಈ ಸತ್ಯ ತಿಳಿಯದೇ ನಿಮ್ಮಪ್ಪ ಮೀರಾಳನ್ನು ಕರೆದುಕೊಂಡು ದೂರ ಹೋಗಿದ್ದು. ಆ ಸತ್ಯವನ್ನೇ ಹೇಳಲೆಂದೇ ನಾವು ತುಂಬಾ ಹುಡುಕಿದೆವು. ಆದರೆ ಏನೂ ಪ್ರಯೋಜನವಾಗಲಿಲ್ಲ”
ಚಿರಂತ್ ಆಶ್ಚರ್ಯದಿಂದ”ಮತ್ತೆ ಇನ್ಯಾರು ಮಾಡಿದ್ದು”ಕೇಳಿದ.
“ಈ ವಿಷಯವನ್ನು ನಾನು ನಿಮ್ಮಪ್ಪನ ಎದುರಲ್ಲೇ ಹೇಳ್ತಿನಿ.ನಡಿ ನಿಮ್ಮಪ್ಪನ ಹತ್ತಿರ ನನ್ನ ಕರ್ಕೊಂಡು ಹೋಗು”
“ಇಲ್ಲಾ ಅಂಕಲ್ ನಾನ್ ಅಷ್ಟು ದೂರ ಪ್ರಯಾಣ ಮಾಡುವಂತಿಲ್ಲ.ಅದು ಬೇರೆ ಊರಲ್ಲಿ ಮೀರಾ ಇದ್ದಾಳೆ.ಅವಳಿಗೂ ನಂಗೂ ಒಂದು ಚಿಕ್ಕ ಜಗಳವಾಗಿದೆ. ನಾನ್ ಈಗ ಹೋದರೆ ಅವಳು ಸಿಟ್ಟಾಗಬಹುದು.ಅದಕ್ಕೆ ನೀವು ನಿಧಿನ ಕರ್ಕೊಂಡು ಹೋಗಿ. ಅಲ್ಲಿ ಏನಾಗಿದೆ ಎಂದು ಅವಳು ನಂತರ ನನಗೆ ಹೇಳುತ್ತಾಳೆ”ಎಂದು ನಿಧಿಗೆ ಫೋನ್ ಮಾಡಿ ಬರಲು ಹೇಳಿದ.
ಒಂದತ್ತು ನಿಮಿಷದಲ್ಲಿ ನಿಧಿ ಬಂದಳು.ನಿಧಿ ಅಮ್ಮನಿಗೆ ಹೇಳು ನಾನ್ ದಾಂಡೇಲಿಗೆ ಹೋಗ್ತಿರೋದು ಎಂದು ಚಿರಂತ್ಗೆ ಹೇಳಿದಳು. ಕುಸುಮ ಸಿದ್ದಾರ್ಥ್ ಮನೆಯ ಬಾಗಿಲು ತೆಗೆದು ಸತ್ಯ ಒಳಗೊಂಡ ಸಾಕ್ಷಿಯನ್ನು ತೆಗೆದುಕೊಂಡ ನಂತರ ಕುಸುಮ,ಮೋಹನ್ ನಿಧಿಯ ಜೊತೆಯಲ್ಲಿ ದಾಂಡೇಲಿಗೆ ಹೋದರು.
🚗 ಸತ್ಯದತ್ತ ಸಾಗುವ ಹೆಜ್ಜೆಗಳು
ನಕುಲನನ್ನು ನೆನೆದು ಅಳುತ್ತಿದ್ದ ಮೀರಾಳನ್ನು ಮಡಿಲಲ್ಲಿ ಮಲಗಿಸಿಕೊಂಡು ತಲೆಯನ್ನು ನೇವರಿಸುತ್ತಾ ಸಮಾಧಾನ ಮಾಡುತ್ತಿದ್ದ ಸತ್ಯಪ್ರಕಾಶ್.
ಮನೆಗೆ ಬಂದ ಮೋಹನ್ ಕುಸುಮಳನ್ನು ನೋಡಿ ಒಂದು ಕ್ಷಣ ದಂಗಾದನು.ಮೀರಾಳನ್ನು ಕೆಳಗೆ ಮಲಗಿಸುತ್ತ”ನೀವಾ ಇಲ್ಲಿಗ್ಯಾಕ್ ಬಂದ್ರಿ.ಮೊದ್ಲು ಮನೆಯಿಂದ ಆಚೆ ನಡೀರಿ. ನನ್ನ ಕಣ್ಣಿಗೆ ಕಾಣಿಸ್ಕೊಬೇಡಿ”ಎಂದ ಆವೇಶದ ದನಿಯಲ್ಲಿ.

“ಅಣ್ಣಾ ನಾವ್ ಹೇಳೋದು ಸ್ವಲ್ಪ ಕೇಳಿ”ಎಂದಳು ಕುಸುಮ ವಿನಯತೆಯಿಂದ.
“ಏನೂ ನೀವ್ ಹೇಳೋದ್ ಕೇಳ್ಬೇಕಾ. ಒಂದು ಸರಿ ನೀವ್ ಹೇಳಿದ ಮಾತು ಕೇಳ್ಕೊಂಡು ಸಿದ್ದಾರ್ಥ್, ಸುಮತಿಯನ್ನು ಕಳ್ಕೊಂಡಿದ್ದು. ಈಗ್ ಮತ್ತೆ ನಿಮ್ ಮಾತು ಕೇಳಿ ಉಳಿದಿರೋ ಮೀರಾಳನ್ನು ಕಳ್ಕೊಳ್ಳೋಕೆ ನಂಗ್ ಇಷ್ಟ ಇಲ್ಲಾ “ಎಂದು ಕೆಂಡಕಾರಿದ.
“ಅಯ್ಯೋ ಸತ್ಯ ನಿನ್ಗೆ ಹೇಳ್ಬೇಕಾದ್ರೆ ಇರೋ ತಾಳ್ಮೆ ಕೇಳ್ಬೇಕಾದ್ರೆ ಯಾಕಿಲ್ಲ. ಒಂದ್ ಸರಿ ನಾನ್ ಹೇಳಿದ್ದು ಕೇಳು”ಎಂದು ಬೇಡಿಕೊಂಡ ಮೋಹನ್.
“ಸಾಧ್ಯಯಿಲ್ಲ ನಾನ್ ಕೇಳಲ್ಲ.ನನ್ನ ಪ್ರಾಣಸ್ನೇಹಿತ ಸಿದ್ದಾರ್ಥನನ್ನು ಕೊಂದ ನಿಮ್ಮ ಮುಖ ಜನ್ಮ ಪೂರ್ತಿ ನೋಡಬಾರದು ಅಂತ ಅನ್ಕೊಂಡಿರೋ ನನ್ಗೆ ಇನ್ನು ನಿಮ್ಮ ಮಾತ್ ಹೇಗೆ ಕೇಳ್ತೀನಿ ಅಂತ ಅನ್ಕೋತಿದೀರಾ.ಮೊದ್ಲು ಮನೆಯಿಂದ ಆಚೆ ಹೋಗಿ ನನ್ನ ಕಣ್ಣಿಗೆ ಕಾಣಿಸ್ಕೊಬೇಡಿ”ಎಂದ.ಅವನ ಕಣ್ಣುಗಳು ಜ್ವಾಲಾಮುಖಿಯಂತೆ ಕೆಂಡಕಾರುತ್ತಿದ್ದವು.
“ಇದೆ ಕಣೋ ನೀನ್ ಮಾಡ್ತಿರೋ ತಪ್ಪು.ನಿಜ್ವಾಗ್ಲೂ ಕೊಲೆ ಮಾಡ್ಸಿದ್ದು ಯಾರು ಅಂತ ಒಂದು ಸರಿ ತಿಳ್ಕೊಳ್ಳೋ ಪ್ರಯತ್ನ ಮಾಡಿದ್ರೆ ಇಸ್ಟ್ ವರ್ಷ ನಾವು ನೀವು ದೂರ ಇರ್ತಿರ್ಲಿಲ್ಲ”
“ಕೊಲೆ ನೀನ್ ಮಾಡ್ಸಿಲ್ವ.ಮತ್ತೆ ಇನ್ಯಾರು ಕೊಲೆ ಮಾಡ್ಸಿದ್ದು ಅದರ ಅವಶ್ಯಕತೆ ಯಾರಿಗಿತ್ತು”
“ನನ್ನ ಗೆಳೆಯ ರಾಜೀವನಿಗಿತ್ತು.ಹೌದು ಸತ್ಯ ಕೊಲೆ ಮಾಡ್ಸಿದ್ದು ರಾಜೀವನೇ ನಾನಲ್ಲ.ಅವತ್ತು ಸ್ಟೇಷನ್ಗೆ ಹೋಗೋವರೆಗೂ ನಮ್ ಟೀ ಫ್ಯಾಕ್ಟರಿಲಿ ಟೀ ಗೆ ಅಭಿನ್ ಕೆಮಿಕಲ್ ಮಿಕ್ಸ್ ಮಾಡ್ತಿದಾರೆ ಅಂತ ನನ್ಗೆ ಗೊತ್ತೇ ಇರಲಿಲ್ಲ.ಆ ಕೆಮಿಕಲ್ ಯಾರ್ ಮಿಕ್ಸ್ ಮಾಡ್ತಿದಾರೆ ಅನ್ನೋದು ಸಹ ನಂಗ್ ಗೊತ್ತಿರ್ಲಿಲ್ಲ. ಬಾವ ನನ್ನ ಸ್ಟೇಷನಿಂದ ಬೇಲ್ ಕೊಟ್ಟು ಬಿಡ್ಸಿದ್ಮೇಲೆ ನಾನ್ ನೇರವಾಗಿ ನಮ್ ಟೀ ಫ್ಯಾಕ್ಟರಿಗೆ ಹೋಗಿ ನೋಡಿದಾಗಲೇ ಗೊತ್ತಾಗಿದ್ದು ಆ ಕೆಮಿಕಲ್ ಮಿಕ್ಸ್ ಮಾಡ್ತಿದ್ದಿದ್ದು ರಾಜೀವ ಅಂತ.ಹಾಗೇ ಮಾತಾಡ್ತಿರ್ಬೇಕಾದ್ರೆ ಗೊತ್ತಾಯ್ತು ಅವ್ನ್ ಸಿದ್ದಾರ್ಥ್ನ ಸಾಯ್ಸೋಕೆ ಪ್ಲಾನ್ ಮಾಡಿದ್ದಾನೆ ಅಂತ”ಎಂದು ಒಂದು ಪೆನ್ ಡ್ರೈವ್ ತೆಗೆದು “ನನ್ ಮೇಲೆ ಇನ್ನೂ ದೌಟಿದೆ ಅಂತ ಗೊತ್ತು. ಇದನ್ನ ನೋಡು ಇದು ನಾನು ರಾಜೀವ್ ಅವತ್ತು ಟೀ ಫ್ಯಾಕ್ಟರಿಯಲ್ಲಿ ಮಾತಾಡ್ತಿರ್ಬೇಕಾದ್ರೆ ರೆಕಾರ್ಡ್ ಆದ ಸಿಸಿಟಿವಿ ಫೂಟೇಜ್.ಇದನ್ನ ನೋಡಿದ್ಮೇಲೆ ನಿನ್ಗೆ ಗೊತ್ತಾಗುತ್ತೆ ನನ್ನ ತಪ್ಪು ಏನೂ ಇಲ್ಲಾ ಅಂತ”ಎಂದು ಲ್ಯಾಪ್ಟಾಪ್ ಹಾಕಿ ತೋರಿಸಿದ.
************************
🎥 ಬಯಲಾದ ಸತ್ಯ
ಲೋ ರಾಜೀವ ಏನೋ ಮಾಡ್ತಿದೀಯಾ. ಈ ಟೀಗೆ ಯಾಕೋ ಕೆಮಿಕಲ್ ಮಿಕ್ಸ್ ಮಾಡಿ ಮಾರ್ಕೆಟಿಗೆ ಕಳ್ಸ್ತಿದಿಯಾ. ಏನಾಗಿದ್ಯೋ ನಿನ್ಗೆ.ಇದರಿಂದ ನಮ್ ಬಾವನ ಹೆಸರು ಹಾಳಾಗುತ್ತೆ. ಆಶ್ರಯ ಕೊಟ್ಟೋರಿಗೆ ಮೋಸ ಮಾಡಬಾರ್ದು ಕಣೋ ಒಳ್ಳೇದಾಗಲ್ಲ”
“ಅವ್ನ್ ಹತ್ರ ಆಶ್ರಯ ಪಡೆಯೋ ಅಂತ ಕರ್ಮ ನಿನ್ಗೆ ಬಂದೆ ಇರಲಿಲ್ಲ ಕಣೋ.ಆ ಕರ್ಮ ಬರೋ ಹಾಗೇ ಮಾಡಿದ್ದು ನಾನು.ನಿನ್ಗೆ ಗೊತ್ತೇ ಇಲ್ಲದಿರೋ ಜೂಜು ಆಡ್ಸಿ ನಿನ್ನ ಆಸ್ತಿ ಕಳ್ಕೊಳ್ಳೋ ಹಾಗೇ ಮಾಡಿದ್ದು ನಾನು.ಆಸ್ತಿ ಕಳ್ಕೊಂಡ್ಮೇಲೆ ನಿಮ್ಮ ಬಾವನ ಹತ್ರ ಸಾಹಸ ಕೇಳೋಣ ಅಂತ ಸಲಹೆ ಕೊಟ್ಟಿದ್ದು ನಾನು”ಎಂದ ನಗುತ್ತಾ.
“ನನ್ ಮೇಲೆ ಯಾಕೋ ನಿಂಗ್ ಇಸ್ಟ್ ದ್ವೇಷ.ನಾನೇನೋ ನಿನ್ಗೆ ಕಡಿಮೆ ಮಾಡಿದೀನಿ. ಯಾಕ್ ಹೀಗ್ ಮಾಡ್ದೆ”ಎಂದು ಕೇಳಿದ ರಾಜೀವನ ಕೊರಳಪಟ್ಟಿ ಹಿಡಿದು.
“ದ್ವೇಷ ನಿನ್ನ ಮೇಲಲ್ಲ. ನಿಮ್ಮ ಬಾವನ ಮೇಲೆ”ಎಂದ ಕೊರಳ ಪಟ್ಟಿ ಬಿಡಿಸಿಕೊಳ್ಳುತ್ತಾ.
“ಏನೂ ನಮ್ ಬಾವನ ಮೇಲಾ…?ಅವ್ನ್ ಮೇಲೆ ನಿಂಗ್ಯಾಕೋ ದ್ವೇಷ.ಅವ್ನ್ ಏನೋ ಮಾಡಿದಾನೆ ನಿನ್ಗೆ”
“ತುಂಬಾ ಮಾಡಿದ್ದಾನೆ ಮೋನಿ.ಆ ಸಿದ್ದಾರ್ಥ್ ಸುಮತಿನ ಮದ್ವೆ ಆಗೋಕ್ಕಿಂತ ಮುಂಚೆ ಎರಡು ವರ್ಷ ಪ್ರೀತ್ಸಿದ್ದಾನೆ ಅಷ್ಟೇ. ಆದ್ರೆ ನಾನು ಲವ್ ಅಂದ್ರೆ ಏನೂ ಅಂತ ಗೊತ್ತಾದಾಗಿನಿಂದ ಅವಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತ್ಸಿದ್ದಿನಿ.ತಂದೆ ತಾಯಿ ಇಲ್ಲದೆ ಇರೋ ಹುಡ್ಗಿ ಅಣ್ಣನ ಮಾತೆ ವೇದವಾಕ್ಯ ಅನ್ಕೊಂಡು ಕೇಳ್ತಾಳೆ. ಆ ಅಣ್ಣನಿಗೆ ನಾನು ತುಂಬಾ ಹತ್ತಿರದ ಸ್ನೇಹಿತ ಆಗಿದ್ದರಿಂದ ನನ್ನ ಪ್ರೀತಿಗೆ ಯಾರು ಅಡ್ಡ ಬರಲ್ಲ ಅವಳ ಓದೆಲ್ಲಾ ಮುಗಿದಮೇಲೆ ನಾನ್ ಇಷ್ಟಪಡ್ತಿರೋ ವಿಷ್ಯ ನಿನ್ ಹತ್ರ ಹೇಳ್ಬೇಕು ಅನ್ಕೊಂಡಿದ್ದೆ ಅಷ್ಟ್ರಲ್ಲಿ ಆ ಸಿದ್ದಾರ್ಥ್ ಅವಳನ್ನು ಮಾಯೆಗೆ ಬೀಳ್ಸಿ ಮದ್ವೆ ಆಗ್ಬಿಟ್ಟ.ಮದ್ವೆ ಆದ್ಮೇಲೆ ನೀನೇನೋ ಸುಮ್ನಾದೆ ಆದ್ರೆ ನಾನ್ ಸುಮ್ಮನಾಗಲಿಲ್ಲ.ನಿನ್ನ ಹೆಸರು ಬಳಸಿಕೊಂಡು ಅವರನ್ನು ಕೊಲ್ಲೋಕೆ ಅಂತ ತುಂಬಾ ಪ್ರಯತ್ನ ಪಟ್ಟೆ ಆದ್ರೆ ಆಗಿರ್ಲಿಲ್ಲ.ಕೊನೆಗೆ ಮುಳ್ಳನ್ನು ಮುಳ್ಳಿನಿಂದಲೇ ತೆಗೀಬೇಕು ಅಂತ ನಿನ್ನ ಉಪಯೋಗಿಸಿಕೊಂಡೆ ತುಂಬಾ ಚೆನ್ನಾಗಿ ವರ್ಕ್ ಆಯ್ತು”

“ಅಂದ್ರೆ ಈಗ ನನ್ ತಂಗಿನಾ,ಬಾವನ ಸಾಯಿಸ್ಬೇಕು ಅಂತ ಇದಿಯಾ”ಎಂದು ಕೇಳಿದ ಭಯದಿಂದ.
“ನೀನ್ ತುಂಬಾ ಲೇಟ್ ಮೋನಿ.ಅವರನ್ನು ಸಾಯಿಸ್ಬೇಕು ಅಂತ ಅನ್ಕೋಳ್ಳೋದೇನು ಇನ್ನು ಸ್ವಲ್ಪ ಹೊತ್ತಲ್ಲಿ ಅವ್ರ ಪ್ರಾಣ ಪಕ್ಷಿ ಹಾರಿಹೋಗುತ್ತೆ.ಹೋಗಿ ಕಾಪಾಡ್ಕೋ”ಎಂದ ಗಹಗಹಿಸಿ ನಗುತ್ತಾ….
************************
ನಾನ್ ಕಾಪಾಡೋಣ ಅಂತ ಹೋಗೋ ಅಷ್ಟ್ರಲ್ಲಿ ದೊಡ್ಡ ಅನಾಹುತಾನೆ ನಡೆದುಹೋಗಿತ್ತು. ನಿನಗೆ ಸತ್ಯ ತಿಳಿಸೋಣ ಅಂತ ಓಡಿ ಬಂದೆ ಆದ್ರೆ ಸಿದ್ದಾರ್ಥ್ ಮತ್ತು ನನ್ನ ತಂಗಿಯನ್ನು ಕೊಲೆ ಮಾಡಲು ಬಂದವರು ಸತ್ಯ ಹೇಳಲು ಅವಕಾಶ ಮಾಡಿಕೊಡದೆ ನನ್ನ ಅಲ್ಲಿಂದ ಎಳೆದುಕೊಂಡು ಹೋದರು.ಕೊನೆಗೆ ನನ್ನ ಕೈಯಿಂದ ಅವರಿಗೆ ಅಂತ್ಯ ಸಂಸ್ಕಾರ ಮಾಡ್ಸಿದ್ರು.ನಾನ್ ರಾಜೀವನನ್ನು ಸಹಾಯಕ್ಕೆ ಅಂತ ಸಿದ್ದಾರ್ಥ್ ಅಂತ ಕರ್ಕೊಂಡೋಗಿದ್ದೇ ನಾನ್ ಮಾಡಿರೋ ತಪ್ಪು.ಕಷ್ಟ ಅಂತ ಬಂದವರಿಗೆಲ್ಲಾ ಸಹಾಯ ಮಾಡಿದ ನಮ್ ಬಾವ ತಂಗಿಗೆ ಕೊನೆಗೆ ಆ ಸಹಾಯವೇ ಅವರನ್ನು ಕೊಲ್ಲೋ ಹಾಗೇ ಮಾಡ್ಬಿಡ್ತು”ಎಂದು ವ್ಯಥೆಪಟ್ಟ ಮೋಹನ್.
ಸತ್ಯ ತಿಳಿದ ಸತ್ಯಪ್ರಕಾಶ್”ಅಯ್ಯೋ ದೇವ್ರೇ ಎಷ್ಟು ದೊಡ್ಡ ತಪ್ಪು ಮಾಡಿದೆ ನಾನು.ಕೊಲೆ ಮಾಡ್ಸಿದ್ದು ಯಾರು ಅಂತ ಸರಿಯಾಗಿ ತಿಳ್ಕೋಲ್ದೆ ನೀನೇ ಮಾಡಿಸಿರಬೇಕೆಂದು ನಿನ್ನ ಮೇಲೆ ದ್ವೇಷಸಾಧಿಸಿದೆ.ನಾನು ತುಂಬಾ ದೊಡ್ಡ ತಪ್ಪು ಮಾಡಿದ್ದೀನಿ ನನ್ನನ್ನು ಕ್ಷಮಿಸಿಬಿಡು ಮೋಹನ್”ಎಂದು ಕೈ ಮುಗಿದ.ಇಷ್ಟಕ್ಕೆಲ್ಲಾ ಕಾರಣನಾದ ಆ ರಾಜೀವನನ್ನು ಸುಮ್ನೆ ಬಿಡಲ್ಲ”ಎಂದು ಕೆರಳಿದ.
“ನಿನಗೆ ಆ ಕಷ್ಟ ಇಲ್ಲಾ ಸತ್ಯ.ಅವನನ್ನು ಕೊಲ್ಲಬೇಕಂತಲೇ ಅವನ ಜೊತೆ ಚೆನ್ನಾಗಿದ್ದೀನಿ ಅನ್ನೋತರ ನಾಟಕ ಮಾಡಿ ಒಂದು ದಿನ ಊಟಕ್ಕೆ ಕರೆದು ಅದರಲ್ಲಿ ವಿಷ ಬೆರೆಸಿ ಅವನನ್ನು ಸಾಯಿಸಿಬಿಟ್ಟೆ”ಎಂದ. ಅವನ ಮಾತುಗಳಲ್ಲಿ ಸಮಾಧಾನದ ತೃಪ್ತಿ ಇತ್ತು.
“ಸತ್ಯ ಏನೂ ಅಂತ ತಿಳಿದೇ ಇಷ್ಟು ವರ್ಷ ನಿಮ್ಮನ್ನು ದ್ವೇಷ ಮಾಡಿ ಮೀರಾಳನ್ನು ಇವರಿಂದ ದೂರ ಮಾಡಿದೆ.ಆ ಪಾಪ ಸುಮ್ನೆ ಅಂತೂ ನನ್ನ ಬಿಡಲ್ಲ”
🖤 ಪ್ರೀತಿ ತನ್ನ ದಾರಿಯನ್ನೇ ಹುಡುಕಿಕೊಳ್ಳುತ್ತದೆ
“ಅಯ್ಯೋ ಸತ್ಯ ಅವಳನ್ನು ಅವಳ ಜಾಗದಿಂದ ದೂರ ಮಾಡಿದ್ರೆ ಏನಂತೆ ಅವಳ ಜಾಗದ ದಾರಿನ ಆಗ್ಲೇ ಕಂಡುಕೊಂಡಿದ್ದಾಳೆ.ಹುಡುಕಿಕೊಳ್ಳಲು ಸ್ವಲ್ಪ ಟೈಂ ಆದ್ರು ಸರಿಯಾದ ದಾರಿಯನ್ನೇ ಹುಡುಕಿಕೊಂಡಿದ್ದಾಳೆ”
“ಏನ್ ಹೇಳ್ತಿದ್ದೀರಾ ಮೋಹನ್ ನನ್ಗೆ ಅರ್ಥ ಆಗ್ತಿಲ್ಲ”
“ಅರ್ಥ ಆಗದಿರೋಕೆ ಏನಿದೆ ಸತ್ಯ.ತನ್ನ ಮಾವ ನಕುಲನನ್ನು ಪ್ರೀತಿಸಿ ನಮ್ಮ ಮನೆಗೆ ಸೊಸೆಯಾಗಲು ಹೊರಟಿದ್ದಾಳೆ ಅಂದ್ರೆ ಅವಳು ಸೇರಬೇಕಾದ ಜಾಗಕ್ಕೆ ಅವಳೇ ದಾರಿ ಹುಡುಕಿಕೊಂಡಿದ್ದಾಳೆ”
ಮೊದಲಿಗೆ ಮೀರಾಳಿಗೆ ಇವರು ಏನೂ ಮಾತಾನಾಡುತಿದ್ದಾರೆ ಯಾವುದರ ಬಗ್ಗೆ ಮಾತನಾಡುತ್ತಿದ್ದಾರೆ ಅಂತ ತಿಳಿಯದೆ ತಬ್ಬಿಬ್ಬಾದ ಮೀರಾ. ಕೊನೆ ಕೊನೆಗೆ ಎಲ್ಲವೂ ಅರ್ಥ ಮಾಡಿಕೊಂಡರು ತನ್ನ ತಂದೆ ತಾಯಿಯ ಬಗ್ಗೆ ಅಷ್ಟು ಯೋಚನೆ ಮಾಡಲಿಲ್ಲ.ಏಕೆಂದರೆ ಅವರ ನೆನಪು ಎಂದಿಗೂ ಸಹ ಬರದೇ ಇರೋ ತರ ಪ್ರಕಾಶ್ ನೋಡಿಕೊಂಡಿದ್ದ.
“ಓಹೋ ಹಾಗೇ ಈಗ ಅರ್ಥ ಆಯ್ತು.ನಾನ್ ನೋಡು ಮೊದಲ ಸಲ ನಮ್ಮನೆಗೆ ಬಂದಿದ್ದೀರಾ ಕಾಫಿ ಕೂಡ ಕೊಡದೆ ಮಾತನಾಡಿಸುತ್ತಿದ್ದೀನಿ. ಮೀರಾ ನಿಮ್ಮ ಅತ್ತೆ ಮಾವನಿಗೆ ಕಾಫಿ ತಗೊಂಡ್ ಬಾರಮ್ಮ”ಎಂದು ಮೀರಾಳಿಗೆ ಹೇಳಿ”ಕಾಫಿ ಅಷ್ಟೇ ಅಲ್ಲ ಕಾಫಿ ಆದ್ಮೇಲೆ ಊಟಾನೂ ಮಾಡ್ಕೊಂಡ್ ಹೋಗ್ಬೇಕು”ಎಂದು ಆದೇಶ ಕೊಟ್ಟ.

“ಸತ್ಯ ನಮಗೆ ಟೈಂ ಇಲ್ಲಾ ಕಣೋ. ನಕುಲ್ ನಿನ್ನ ಮಾತುಗಳಿಂದ ತುಂಬಾ ಡಿಸ್ಟರ್ಬ್ ಆಗಿದ್ದಾನೆ. ಮೀರಾಳನ್ನು ನೆನೆದು ಯಾರ್ ಜೊತೆನೂ ಮಾತಾಡ್ತಿಲ್ಲ, ಊಟ ಮಾಡ್ತಿಲ್ಲ.ಬೇಗ ಮೀರಾ ಬಂದು ಮೊದಲು ಅವನನ್ನು ಮಾತನಾಡಿಸಿ ಸತ್ಯ ಹೇಳಿದರೆ ಅವನು ಮತ್ತೆ ಮೊದಲಿನ ತರ ಆಗ್ತಾನೆ.ಪ್ಲೀಸ್ ಸತ್ಯ ಬೇಗ ಹೊರಡಿ”ಎಂದು ಮನವಿ ಮಾಡಿಕೊಂಡ.
“ಅಯ್ಯೋ ಹಾಗ ಸರಿ ಸರಿ ನಾವ್ ಈಗಲೇ ಹೊರಟು ಹೋಗೋಣ”ಎಂದು ಮೀರಾಳನ್ನು ಕರೆದುಕೊಂಡು ಎಲ್ಲರು ಮಡಿಕೇರಿಗೆ ಪ್ರಯಾಣ ಬೆಳೆಸಿದರು.
ಮೊದಲೇ ಹೇಳಿದಂತೆ ನಿಧಿ ಚಿರಂತ್ಗೆ ಇಲ್ಲಿ ನಡೆದ ಸಂಭಾಷಣೆಯ ವಿವರ ಫೋನ್ ಮಾಡಿ ಹೇಳಿದಳು. ಇದರಿಂದ ಹರ್ಷಗೊಂಡ ಚಿರಂತ್ ಮೀರಾ, ನಕುಲ್ ಒಂದಾಗಲು ಇನ್ಯಾವ ಅಡೆತಡೆ ಇಲ್ಲ ಎಂದು ಸಂಭ್ರಮಿಸಿದನು…
ಈ ಸ್ನೇಹ ಚಿರಾಯು-15 ಮುಂದುವರೆಯುವುದು….
ಈ ಸ್ನೇಹ ಚಿರಾಯು-15 ನೀವು ಇಂಗ್ಲಿಷ್ ಭಾಷೆಯಲ್ಲಿಯೂ ಓದಬಹುದು.
ನಮ್ಮ ವೆಬ್ಬೆಟ್ ನ ಇತರ ಪೋಸ್ಟ್ ಗಳನ್ನು ಇಲ್ಲಿ ಓದಬಹುದು.
ಸ್ನೇಹ ಚಿರಾಯು -15
