ಸ್ನೇಹ ಚಿರಾಯು -13

ಸ್ನೇಹ ಚಿರಾಯು -13

ಸ್ನೇಹ ಚಿರಾಯು -13🌅 ಟೀ ಎಸ್ಟೇಟ್‌ನ ಬೆಳಗ್ಗೆ

ಸ್ನೇಹ ಚಿರಾಯು-13-ಬೆಳಗ್ಗೆ 6 ಗಂಟೆಗೆ ಎದ್ದ ಚಿರಂತ್. ಸುತ್ತಮುತ್ತಲಿನ ಪ್ರಕೃತಿಗೆ ಮನಸೋತು ಹಾಗೇ ವಿಹರಿಸಿ ಬರೋಣ ಎಂದು ನಿರ್ಧರಿಸಿ ಟೀ ಎಸ್ಟೇಟ್ ತುಂಬೆಲ್ಲಾ ಸುತ್ತಾಡಿದನು.ಮತ್ತೆ ಮನೆಗೆ ಬರುವಷ್ಟರಲ್ಲಿ ಗಂಟೆ 8 ಆಗಿತ್ತು.

ಮನೆಗೆ ಬಂದಾಗಲೂ ನಕುಲ್ ಇನ್ನು ನಿದ್ರಾಲೋಕದಲ್ಲಿ ವಿಹರಿಸುತ್ತಿರುವುದನ್ನು ಕಂಡ ಚಿರಂತ್”ಲೋ ನಕುಲ್ ಟೈಂ 8 ಆಯ್ತು ಕಣೋ.ನೀನ್ ಫ್ರೆಂಡ್ಸ್ ಎಲ್ಲಾ ಕಾಯ್ತಾ ಇರ್ತಾರೆ ಕಣೋ”ಎಂದು ಎಚ್ಚರಿಸಿದನು.

“ಓ ಶಟ್ ಟೈಂ ಆಗ್ಲೇ 8 ಆಯ್ತಾ”ಎಂದು ಗಡಿಬಿಡಿಯಿಂದ ರೆಡಿಯಾಗಿ ತಿಂಡಿ ತಿಂದು ಲಗೇಜ್ ಕಾರಿನಲ್ಲಿಟ್ಟು ಚಿರಂತನನ್ನು ಕರೆದುಕೊಂಡು ನಿಧಿಯ ಮನೆ ಕಡೆ ಹೊರಟನು.

ಅವನಿಗಾಗಿ ಕಾದು ಸಾಕಾಗಿದ್ದ ತನ್ನ ಸ್ನೇಹಿತರನ್ನು ನೋಡಿ ಕ್ಷಮೆಯಾಚಿಸಿದನು. ಎಲ್ಲರೂ ಕಾರಿನೊಳಗೆ ಲಗೇಜ್ ಇಟ್ಟರು.

ಎಲ್ಲರೂ ತುಳಸಿಯ ಆಶೀರ್ವಾದ ಪಡೆದು ಅಲ್ಲಿಂದ ತೆರಳಲು ಸಿದ್ದರಾದರು.ಇನ್ನೇನು ಕಾರಿನಲ್ಲಿ ಕೂರಬೇಕು ಅನ್ನುವಷ್ಟರಲ್ಲಿ ನಿಧಿ ಚಿರುಗಾಗಿ ಹುಡುಕಾಡಿದಳು.

💔 ನಿಶ್ಶಬ್ದ ವಿದಾಯ

“ಎಲ್ಲಿ ಹೋದ ಇವ್ನು”ಎಂದು ಮನದಲ್ಲೇ ಪ್ರಶ್ನೆ ಮಾಡಿಕೊಳ್ಳುತ್ತಾ”ಒಂದು ನಿಮಿಷ ಬರ್ತೀನಿ”ಎಂದು ತನ್ನ ಫ್ರೆಂಡ್ಸ್ಗೆ ಹೇಳಿ ಮನೆಯೊಳಗೇ ಓಡಿದಳು.ಅಲ್ಲೇ ಮನೆಯ ಬಾಗಿಲ ಬಳಿಯಲ್ಲಿ ಇದ್ದ ಚಿರಂತನನ್ನು ಕಂಡ ನಿಧಿ”ಯಾಕೋ ಚಿರು ನನ್ನ ಕಳಿಸಿಕೊಡೋಕೆ ಬರದೇ ಇಲ್ಲೇ ನಿಂತಿದಿಯಾ”ಎಂದು ಪ್ರಶ್ನಿಸಿದಳು.

“ನನ್ನ ನೋಡಿದ್ರೆ ಮೀರಾ ಬೇಜಾರಾಗ್ತಾಳೆ. ಸುಮ್ನೆ ಹೋಗ್ಬೇಕಾದ್ರೆ ಯಾಕ್ ಅವ್ಳಿಗೆ ಬೇಜಾರ್ ಮಾಡ್ಲಿ ಅದಕ್ಕೆ ಬರದೇ ಇಲ್ಲೇ ನಿಂತ್ಕೊಂಡಿದಿನಿ”

“ಹೌದಲ್ವಾ ಅದು ಸರೀನೇ.ಅವ್ಳ್ ಒಬ್ಬಳು ಸತ್ಯ ತಿಳಿದೇ ನಿನ್ಮೇಲೆ ದ್ವೇಷ ಸಾಧಿಸುತ್ತಿದ್ದಾಳೆ.ಅವ್ಳಿಗೆ ಯಾವಾಗ್ ಬುದ್ದಿ ಬರುತ್ತೋ ನಂಗೊತ್ತಿಲ್ಲ.ಸರಿ ಈಗ್ ಅದ್ಯಾಕೆ ಚಿರು ನಾನ್ ಹೊರಡ್ತಿದಿನಿ.ನಿನ್ನ ಟ್ರೀಟ್ಮೆಂಟ್ಗೆ ಅಮ್ಮ ಎಲ್ಲಾ ರೆಡಿಮಾಡಿಕೊಂಡಿದ್ದಾರೆ.

ಅವ್ರು ನಿನ್ನ ಚೆನ್ನಾಗಿ ನೋಡ್ಕೋತಾರೆ. ನಾನು ಅವಾಗವಾಗ ಕಾಲ್ ಮಾಡ್ತಿರ್ತೀನಿ.ಹೆಲ್ತ್ ಹುಷಾರು.

ಸರಿ ಚಿರು ನಾನ್ ಹೋಗ್ಬರ್ತೀನಿ”ಎಂದು ಚಿರಂತ್ ಮುಖವನ್ನೇ ನೋಡುತ್ತಾ ಹೇಳಿದಳು. ಒಂದೆರಡು ಹೆಜ್ಜೆ ಹಾಕಿದ ನಿಧಿಯನ್ನು ಕರೆದ ಚಿರಂತ್”ಏನ್ ಚಿರು”ಎಂದು ಕೇಳಿದಳು.

“ಹ್ಯಾಪಿ ಜರ್ನಿ ನಿಧಿ”ಎಂದ..

ನಿಧಿಗೆ ಅದೇನಾಯ್ತೋ ಗೊತ್ತಿಲ್ಲಾ ಓಡಿ ಬಂದವಳೇ ಚಿರಂತನನ್ನು ತಬ್ಬಿಡಿದು”ಥ್ಯಾಂಕ್ಸ್ ಕಣೋ”ಎಂದು ಕೆನ್ನೆಗೆ ಒಂದು ಮುತ್ತಿಕ್ಕಿದಳು.  ನಿಧಾನವಾಗಿ ಬಂಧನವನ್ನು ಸಡಿಲಿಸಿದ ನಿಧಿ ನಾಚಿಕೆಯಿಂದ ತಲೆ ತಗ್ಗಿಸಿದಳು.ಮತ್ತೆ  ತಿರುಗಿಯೂ ನೋಡದೆ ಓಡಿ ಹೋಗಿ ಕಾರಲ್ಲಿ ಕೂತಳು.ಅವಳ ಕೆಂದುಟಿಯಲ್ಲಿ ನಗುವೊಂದು ನಾಟ್ಯವಾಡುತ್ತಿತ್ತು.ಚಿರಂತ್ಗೆ ಏನೂ ಅರ್ಥವಾಗದೆ ಹಾಗೇ ನಿಂತುಬಿಟ್ಟನು.

🌊 ಪ್ರವಾಸ ಆರಂಭ – ಗೋವಾ,ದಾಂಡೇಲಿಯೆಡೆಗೆ

ಎಲ್ಲರೂ ಖುಷಿಯಿಂದ ಗೋವಾ ಕಡೆ ಟ್ರಿಪ್ಪಿಗೆ ಹೋದ ತಕ್ಷಣ ಇತ್ತ ತುಳಸಿ ಚಿರಂತ್ ಟ್ರೀಟ್ಮೆಂಟ್ಗೆ ಸಿದ್ಧತೆ ಮಾಡಿಕೊಂಡಳು.ಚಿರಂತ್ ಸಹ ಅವರಿಗೆ ಸಹಕರಿಸಿದನು. ಮರುದಿನವೇ ತುಳಸಿಗೆ ಪರಿಚಯವಿದ್ದ  ವೈದ್ಯರನ್ನು ಕರೆಸಿ ಅವನಿಗೆ ಡಯಾಗ್ನಾಸಿಸ್ ಮಾಡಲಾಯಿತು.ಅವನ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡಿತು. ಇದರಿಂದ ನಿಟ್ಟುಸಿರು ಬಿಟ್ಟಳು ತುಳಸಿ.

ಇತ್ತ ಗೋವಾದಲ್ಲಿ ಎಲ್ಲರೂ ಖುಷಿಯಿಂದ ಸಮಯ ಕಳೆಯುತ್ತಿದ್ದರು. ಮೀರಾ ನಕುಲ್ ಇಬ್ಬರೂ ಒಬ್ಬರಿಗೊಬ್ಬರು ಪ್ರೀತಿಸುವ ವಿಷಯ ತಿಳಿದಮೇಲೆ ಹೋಗಿದ್ದ ಮೊದಲ ಪ್ರವಾಸವನ್ನು ಸ್ಮರಣೀಯವಾಗಿ ಉಳಿಸಿಕೊಳ್ಳಬೇಕೆಂದು ನಿರ್ಧರಿಸಿದ್ದರು.ಉಳಿದವರೆಲ್ಲರೂ ಅವರನ್ನು ತಪ್ಪು ತಿಳಿಯದೆ ಸಪೋರ್ಟ್ ಮಾಡುತ್ತಿದ್ದರು.

ಗೋವಾದಲ್ಲಿ ಒಂದೆರಡು ದಿನ ಖುಷಿಯಿಂದ ಸಮಯ ಕಳೆದ ನಂತರ ಇವತ್ತು ರಾತ್ರಿ ಗೋವಾದಿಂದ ನಿರ್ಗಮಿಸಿ ದಾಂಡೇಲಿಗೆ ಹೋಗ ಬೇಕೆಂದು ನಿಶ್ಚಯಿಸಿದ್ದರು.ಇನ್ನೇನು ಗೋವಾದಿಂದ ನಿರ್ಗಮಿಸುವ ಸಮಯದಲ್ಲಿ ಫ್ರೆಂಡ್ಸ್ ಇಂದ ಸ್ವಲ್ಪ ದೂರ ಬಂದು ತುಳಸಿಗೆ ನಿಧಿ ಕಾಲ್ ಮಾಡಿದಳು.

“ಹಾಯ್ ಮಮ್ಮಿ ಹೇಗಿದ್ದೀರಾ”

“ನಾನ್. ಸೂಪರ್ರಾಗಿದೀನಿ ಪುಟ್ಟ. ನೀನ್ ಹೇಗಿದ್ದಿಯಾ”

“ನಾನು ಸೂಪರ್ರಾಗಿದೀನಿ ಮಮ್ಮಿ.ಚಿರಂತ್ ಹೇಗಿದ್ದಾನೆ.ಡಯಾಗ್ನಾಸಿಸ್ ಮಾಡಿದ್ರಾ”

“ಹಾ ಪುಟ್ಟ ನಿನ್ನೇನೆ ಮಾಡಿದ್ವಿ.ಈಗ್ ಚೆನ್ನಾಗಿದ್ದಾನೆ”

“ಮಮ್ಮಿ ಚಿರಂತ್ಗೆ ಫೋನ್ ಕೊಡೋಕ್ ಆಗುತ್ತಾ”

“ಇಲ್ಲಾ ಪುಟ್ಟ ಅವನನ್ನು ಅಬ್ಸರ್ವೇಷನ್ ನಲ್ಲಿಟ್ಟಿದ್ದೀವಿ. ರೆಸ್ಟ್ ಮಾಡ್ತಿದ್ದಾನೆ”

“ಓ ಹೌದಾ… ಸರಿ ಮಮ್ಮಿ, ಮತ್ತೇನ್ ಸಮಾಚಾರ”ಎಂದು ವಿಚಾರಿಸಿದಳು.

“ಏನೂ ಇಲ್ಲ ಪುಟ್ಟ.ನೀವ್ ಎಲ್ಲಿದ್ದೀರಾ ಹೇಗಿದೆ ಟ್ರಿಪ್ ಚೆನ್ನಾಗಿ ಎಂಜಾಯ್ ಮಾಡ್ತಿದ್ದೀರಾ”

“ಎಸ್ ಮಮ್ಮಿ ತುಂಬಾ ಚೆನ್ನಾಗಿ ಎಂಜಾಯ್ ಮಾಡ್ತಿದ್ದೀವಿ.ಗೋವಾ ಸುತ್ತಿ ಸಾಕಾಯ್ತು ಈಗ ದಾಂಡೇಲಿಗೆ ಹೋಗೋಣ ಅಂತ ರೆಡಿ ಆಗ್ತಿದೀವಿ”

“ಸೂಪರ್ ಪುಟ್ಟ.ಎಂಜಾಯ್ ಮಾಡೋ ಗುಂಗಲ್ಲಿ ಸರಿಯಾಗಿ ಊಟ ಮಾಡದೆ ಇರ್ಬೇಡಿ. ಟೈಂ ಟು ಟೈಂ ಊಟ ಮಾಡಿ ಹುಷಾರಾಗಿರಿ”ಎಂದು ಸಲಹೆ ಕೊಟ್ಟಳು ತುಳಸಿ.

“ಹ್ಮ್ ಮಮ್ಮಿ ಸರಿ. ನೀವ್ ನಿಮ್ ಹೆಲ್ತ್ ಚೆನ್ನಾಗಿ ನೋಡ್ಕೊಳ್ಳಿ.ಟೇಕ್ ಕೇರ್”ಎಂದು ಫೋನಿಟ್ಟಳು.

ಮಧ್ಯರಾತ್ರಿ 12 ಸರಿಯಾಗಿ ಗೋವಾದಿಂದ ದಾಂಡೇಲಿಗೆ ಪ್ರಯಾಣ ಬೆಳೆಸಿದರು.ದಾಂಡೇಲಿಯ ಮಾನ್ಯಳ ಮನೆಗೆ  ಬರುವಷ್ಟರಲ್ಲಿ ಮುಂಜಾನೆ 4 ಗಂಟೆಯಾಯ್ತು.

ಬಂದವರೇ ರೆಸ್ಟ್ ಮಾಡಿದರು.ಎಲ್ಲರೂ ಬೆಳಗ್ಗೆ ಎದ್ದು ಸ್ನಾನ ಮಾಡಿ ತಿಂಡಿ ತಿಂದು ಅಲ್ಲಿಂದ ಕಾಳಿನದಿಯ ಕಡೆ ಹೊರಟರು. ಅಲ್ಲಿ ರಾಫ್ಟಿಂಗ್, ಕೇಯಕಿಂಗ್, ಕನೋಯಿಂಗ್ ಇನ್ನು ಮುಂತಾದ ಜಲಕ್ರೀಡೆಗಳನ್ನು ಎಂಜಾಯ್ ಮಾಡಿದರು.

ದಾಂಡೇಲಿಯೆ ಜಲ ಕ್ರೀಡೆಗಳು

ನಂತರ ಗುಡ್ಡಗಾಡು ಪ್ರದೇಶದಲ್ಲಿ ಸೈಕಲ್ ಸವಾರಿ ಮಾಡಿ ಖುಷಿ ಪಟ್ಟರು.ಕೊನೆಯದಾಗಿ ದಾಂಡೇಲಿಗೆ ಹತ್ತಿರದಲ್ಲೇ ಇದ್ದ ಉಳವಿ, ಸೈಕ್ಸ್ ಪಾಯಿಂಟ್, ಸುಪಾ ಡ್ಯಾಮ್, ಸಿಂಥೇರಿ ರಾಕ್ಸ್, ಕವಲ ಗುಹೆ ಭೇಟಿ ಕೊಟ್ಟು ಮೀರಾಳ ಮನೆ ಕಡೆ ಪ್ರಯಾಣ ಬೆಳೆಸಿದರು.ಮನೆಗೆ ಬರುವಷ್ಟರಲ್ಲಿ ರಾತ್ರಿಯಾಗಿತ್ತು.

ಪ್ರವಾಸ ಮಾಡಿ ಸುಸ್ತಾಗಿದ್ದ ಮಕ್ಕಳಿಗೆ ಸತ್ಯಪ್ರಕಾಶ್ ಅಡುಗೆ ಮಾಡಿ ಉಣಬಡಿಸಿದರು.ಊಟ ಮಾಡಿದ ತಕ್ಷಣವೇ ಅವರನ್ನು ನಿದ್ದೆ ಆವರಿಸಿ ಮಲಗಿಬಿಟ್ಟರು.

ನಕುಲನನ್ನು ತನುಳಿಗೆ ಕೊಟ್ಟು ಬಲವಂತವಾಗಿ ಮದುವೆ ಮಾಡಿದಂತೆ ಕನಸು ಕಂಡ ನಕುಲ್ ಗಕ್ಕನೆ ಹೆದರಿ ಕುಂತ.ಕನಸಿನಿಂದ ವಾಸ್ತವಕ್ಕೆ ಬಂದ ನಕುಲ್ ಟೈಂಗಾಗಿ ಮೊಬೈಲ್ ನೋಡಿದನು.ಅದು ಮುಂಜಾನೆ 6 ಗಂಟೆಯ ಸಮಯ.

ನಕುಲನ ಕನಸು

ಮುಂಜಾನೇ ಕಂಡಂತಹ ಕನಸುಗಳು ಖಂಡಿತವಾಗಿಯೂ ನನಸಾಗುತ್ತವೆ ಎಂಬ ಮಾತು ಅವನ ಅಂತರಾತ್ಮಕ್ಕೆ ಚುಚ್ಚಿ ಹೇಳುತ್ತಿತ್ತು. ಇದರಿಂದ ಬೇಸತ್ತ ನಕುಲ್ ತಾನು ಪ್ರೀತಿಸುವ ವಿಷಯವನ್ನು ಸತ್ಯಪ್ರಕಾಶ್ಗೆ ಹೇಳಿ ತನ್ನ ತಂದೆ ತಾಯಿಯರೊಂದಿಗೆ ಮಾತಾಡಿಸಬೇಕೆಂದು ನಿರ್ಧರಿಸಿದನು.

ತನ್ನ ಗೆಳೆಯ ಗೆಳತಿಯರು ಇನ್ನು ನಿದ್ದೆಯ ಮಂಪರಿನಲ್ಲೇ ಇದ್ದರು.ನಿಧಿ ಮಾತ್ರ ಪ್ರಕೃತಿಯ ಸೊಬಗಿಗೆ ಮೈ ಮರೆತು ಒಬ್ಬಳೇ  ಸುಮ್ಮನೆ ಕಾಡು ಸುತ್ತಲೂ ಹೋಗಿದ್ದಳು.

ಇತ್ತ ನಕುಲ್ ಸತ್ಯಪ್ರಕಾಶರನ್ನು ಹುಡುಕುತ್ತಾ ಹೊರಟ. ಗದ್ದೆಯ ಕೆಲಸದಲ್ಲಿ ನಿರತನಾಗಿದ್ದ ಪ್ರಕಾಶನನ್ನು ಕರೆದ ನಕುಲ್”ಅಂಕಲ್ ಕೆಲಸ ಮುಗಿಯಿತಾ. ನಾನ್ ನಿಮ್ ಜೊತೆ ಸ್ವಲ್ಪ ಮಾತಾಡಬೇಕಿತ್ತು”ಎಂದ.

ಸತ್ಯಪ್ರಕಾಶ್ ಕುತೂಹಲದಿಂದ”ಆಯ್ತು ಕಣಪ್ಪ. ಒಂದು ನಿಮಿಷ ಅಲ್ಲೆ ಕಟ್ಟೆ ಕುತ್ಕೋ ಬರ್ತೀನಿ”ಎಂದು ಕೂರಲು ಹೇಳಿದರು.

“ಹ್ಮ್ ಸರಿ ಅಂಕಲ್”ಎಂದು ಅಲ್ಲೇ ಮರದ ಕೆಳಗೆ ಇದ್ದ ಕಟ್ಟೆಯ ಮೇಲೆ ಕುಂತ ನಕುಲ್.

ಕೆಲಸ ಮುಗಿಸಿ ಬಂದ ಪ್ರಕಾಶ್”ಈಗ್ ಹೇಳಪ್ಪ ಏನ್ ಮಾತಾಡಬೇಕಿತ್ತು.”ಎಂದರು ಕೂರುತ್ತಾ.

“ಅಂಕಲ್ ನಾನ್ ಹೇಳೋದನ್ನ ಕೇಳಿ ಕೋಪ ಮಾಡಿಕೊಳ್ಳಬಾರದು”ಎಂದ.

“ನಾನ್ ಯಾಕಪ್ಪ ಕೋಪ ಮಾಡ್ಕೊಳ್ಳಿ.ಅದೇನು ಅಂತ ಹೇಳು”

ತಡಮಾಡದ ನಕುಲ್”ಅಂಕಲ್ ನಾನು ಮೀರಾನ ತುಂಬಾ ಇಷ್ಟ ಪಡ್ತೀದಿನಿ. ಮದ್ವೆ ಅಂತ ಆದ್ರೆ ಅವಳನ್ನೇ ಆಗ್ಬೇಕು ಅಂತ ಡಿಸೈಡ್ ಮಾಡಿದೀನಿ”ಎಂದು ಹೇಳಬೇಕು ಅಂದುಕೊಂಡಿದ್ದ ವಿಷಯ ಪ್ರಸ್ತಾಪಿಸಿದ ಯಾವುದೇ ಭಯವಿಲ್ಲದೆ.

“ಮೊದ್ಲು ಮೀರಾಳಿಗೆ ನೀನ್ ಇಷ್ಟ ಪಡ್ತಿರೋ ವಿಷಯ ಹೇಳು ಅವಳು ಒಪ್ಪಿಕೊಂಡರೆ ನನಗ್ಯಾವ ತೊಂದರೆಯು ಇಲ್ಲಾ. ಯಾಕಂದ್ರೆ ನೀನ್ ಏನೂ ಅಂತ ನನಗಿಂತ ಅವಳಿಗೆ ಅಲ್ವಾ ಚೆನ್ನಾಗಿ ಗೊತ್ತಿರೋದು”ಎಂದ ತಾಳ್ಮೆಯಿಂದ.

ಅವರ ಮಾತಿನಿಂದ ಸಂತಸಗೊಂಡ ನಕುಲ್”ಅಂಕಲ್ ಮೀರಾಳಿಗೂ ನಾನಂದ್ರೆ ತುಂಬಾ ಇಷ್ಟ. ಅವ್ಳು ನನ್ನ ಇಷ್ಟ ಪಡ್ತಿದಾಳೆ”ಎಂದ ಉಕ್ಕಿ ಬರುತ್ತಿದ್ದ ಸಂತೋಷ ತಡೆದು.

“ಹಾಗಿದ್ರೆ ಸರಿ ಕಣಪ್ಪ. ಇನ್ನು ಎರಡು ವರ್ಷ ನಿಮ್ಮ ವಿದ್ಯಾಭ್ಯಾಸ ಇದೆ ನೆನಪಿರಲಿ. ಮೊದ್ಲು ಜೀವನ ರೂಪಿಸಿಕೊಳ್ಳುವ ಹಾಗೇ ಓದಿಕೊಳ್ಳಿ. ಆಮೇಲೆ ಈ ಪ್ರೀತಿ,ಮದ್ವೆ ಬಗ್ಗೆ ನೋಡುವಿರಂತೆ”ಎಂದು ಜವಾಬ್ದಾರಿ ಬಗ್ಗೆ ತಿಳಿಸಿ ಹೇಳಿದರು.

“ಅಂಕಲ್ ನಮ್ಮ ಸ್ನೇಹ,ಪ್ರೀತಿಗಾಗಿ ಯಾವತ್ತೂ ಓದುವುದನ್ನು ಕಡೆಗಣಿಸಿಲ್ಲ.ನೀವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಮೊದಲು ನನ್ನ ಮೀರಾಳ ಮದುವೆ ಬಗ್ಗೆ ನಮ್ ಅಪ್ಪ ಅಮ್ಮನತ್ರ ಮಾತಾಡಿ”ಎಂದ.

“ಈಗ್ಲೇ ಅದಕ್ಕೆ ತೊಂದರೆ ಏನಿದೆ.ಅದಕ್ಕೆ ಇನ್ನು ಸಾಕಷ್ಟು ಟೈಮ್ ಇದೆ.ಅದರ ಬಗ್ಗೆ ನಿಧಾನವಾಗಿ ಮಾತನಾಡಿದರೆ ಆಯ್ತು”

“ಅಯ್ಯೋ ಅಂಕಲ್ ನಮ್ ಮದ್ವೆ ಬಗ್ಗೆ ಈಗ್ಲೇ ಮಾತಾಡಬೇಕು.ಯಾಕಂದ್ರೆ ನಮ್ ಅಪ್ಪನ ಫ್ರೆಂಡ್ ಶಿವರಾಮ್ ಅಂತ ಇದಾರೆ ಅವರ ಮಗಳು ನನ್ನ ತುಂಬಾ ಇಷ್ಟ ಪಡ್ತಿದ್ದಾಳೆ. ಚಿಕ್ಕಂದಿನಿಂದಲೂ ಅವಳು ಕೇಳಿದ್ದೆಲ್ಲಾ ಕೊಟ್ಟು ಅಭ್ಯಾಸ ಇರೋ ಅವರಿಗೆ ಮಗಳ ಮದುವೆ ಅಂತ ಬಂದ್ರೆ ಸುಮ್ಮನೆ ಇರ್ತಾರ. ನನಗೆ ಇಷ್ಟವಿಲ್ಲದಿದ್ದರೂ ಅವಳಿಗೆ ಇಷ್ಟ ಇದೆ ಅನ್ನೋ ಕಾರಣಕ್ಕೆ ಬಲವಂತವಾಗಿಯಾದರು ಅವಳಿಗೆ ಕೊಟ್ಟು ನನ್ನ ಮದ್ವೆ ಮಾಡಿ ಬಿಡ್ತಾರೆ.ಅದೇ ನನ್ನ ಭಯ”

“ಓಹೋ ನಿನ್ನ ಅವಸರಕ್ಕೆ ಇದಾ ಕಾರಣ. ಸರಿ ನಕುಲ್ ನಿಮ್ಮ ಅಪ್ಪ ಅಮ್ಮನ ಹತ್ತಿರ ಆದಷ್ಟು ಬೇಗ ನಾನ್ ಮಾತಾಡ್ತೀನಿ. ನೀನು ದೈರ್ಯದಿಂದ ಇರು. ಅಂದಹಾಗೆ ನಿಮ್ಮದು ಯಾವ ಊರು ಅಂತ ಗೊತ್ತಾಗಲಿಲ್ಲ ನನ್ಗೆ”ಎಂದು ಪ್ರಶ್ನಿಸಿದರು.

ಸ್ನೇಹ ಚಿರಾಯು -13⚡ ಆಘಾತಕಾರಿ ಸತ್ಯ

“ನಮ್ದು ಮಡಿಕೇರಿ ಅಂಕಲ್”ಎಂದ.

ಮಡಿಕೇರಿ ಎಂದಾಕ್ಷಣ ಸ್ವಲ್ಪ ಗೊಂದಲಕ್ಕೆ ಒಳಗಾದ ಪ್ರಕಾಶ್”ನಿಮ್ಮ ತಂದೆಯ ಹೆಸರೇನು”ಎಂದು ವಿಚಾರಿಸಿದ.

“ಹೆಸರು ಮೋಹನ್ ಅಂತ”

ಮೋಹನ್ ಎಂಬ ಹೆಸರಿನ ವ್ಯಕ್ತಿ ಹಿಂದೆ ತನ್ನ ಜೀವನದಲ್ಲಿ ಮಾಡಿದ ಮೋಸ,ವಂಚನೆ,ಅವಾಂತರಗಳೆಲ್ಲವೂ ನೆನಪಿಗೆ ಬಂದವು.

“ಮೋಹನ್ ಅಂದ್ರೆ.ಸಂಪಿಗೆಕಟ್ಟೆಯ ರತ್ನಗಿರಿ ಟೀ ಎಸ್ಟೇಟ್ನವ್ರಾ”

“ಹಾ ಅಂಕಲ್ ಅವ್ರೆ. ನಮ್ ಅಪ್ಪ ನಿಮ್ಗೆ ಗೊತ್ತಾ”

“ಅಯ್ಯೋ ದೇವ್ರೇ. ಯಾರ ನೆರಳು ಮೀರಾಳ ಮೇಲೆ ಬೀಳಬಾರದು ಅಂತ ಇಸ್ಟ್ ದೂರ ಕರ್ಕೊಂಡ್ ಬಂದ್ನೋ ಇವತ್ತು ಆ ನೆರಳಿನ ಜೊತೇನೆ ಜೀವನ ಪೂರ್ತಿ ಜೊತೆ ಇರೋ ಹಾಗೇ ಮಾಡ್ತಿದಿಯಾ”ಎಂದು ತಲೆ ಚಚ್ಚಿಕೊಳ್ಳುತ್ತಾ ಕಟ್ಟೆಯಿಂದ ಕುಸಿದು ಕೆಳಗೆ ಬಿದ್ದ.

ಪ್ರಕಾಶ್ನ ವರ್ತನೆಯಿಂದ ಭಯಗೊಂಡ ನಕುಲ್”ಅಂಕಲ್ ಏನ್ ಆಯ್ತು ಹೇಳಿ”ಎಂದು ಪ್ರಕಾಶನನ್ನು ಕೈ ಹಿಡಿದು ಮೇಲೆತ್ತಲು ಪ್ರಯತ್ನಿಸಿದ.

“ಮುಟ್ಟಬೇಡ ನನ್ನ ಕೈ ತೆಗಿ.ಮೀರಾಳನ್ನು ಮರೆತುಬಿಡು.ಅವ್ಳ್ನ ನಿನ್ ಮನಸ್ಸಿಂದ ಕಿತ್ತಾಕ್ಬಿಡು. ಅವ್ಳ್ ಯಾವತ್ತಿಗೂ ನಿನ್ನವಳಾಗುವುದಿಲ್ಲ”ಎಂದ. ಅವರ ಕಣ್ಣಿನಲ್ಲಿ ಕೋಪವಿತ್ತು.ಮಾತಿನಲ್ಲಿ ದೃಢತೆ ಇತ್ತು.

“ಅಂಕಲ್ ಏನಾಯ್ತು ನಿಮ್ಗೆ, ಯಾಕ್ ನಮ್ ಅಪ್ಪನ ಹೆಸರು ಕೇಳಿದ ತಕ್ಷಣ ಮೀರಾಳನ್ನು ಮರೆತು ಬಿಡಿ ಅಂತಿದೀರಾ. ಮೀರಾಳಿಗೂ ನಮ್ ಅಪ್ಪನಿಗೂ ಏನ್ ಸಂಬಂಧ”

“ಮೀರಾ ಬೇರೆ ಯಾರು ಅಲ್ಲ.ನಿಮ್ಮ ಅಪ್ಪನ ತಂಗಿಯ ಮಗಳು ಅಂದ್ರೆ ನಿನ್ ಸೊಸೆ”

ಸ್ನೇಹ ಚಿರಾಯು-13 ಮುಂದುವರೆಯುವುದು…….

ಈ ಸ್ನೇಹ ಚಿರಾಯು-13 ನೀವು ಇಂಗ್ಲಿಷ್ ಭಾಷೆಯಲ್ಲಿಯೂ ಓದಬಹುದು.

ನಮ್ಮ ವೆಬ್ಬೆಟ್ ನ ಇತರ ಪೋಸ್ಟ್ ಗಳನ್ನು ಇಲ್ಲಿ ಓದಬಹುದು.

ಸ್ನೇಹ ಚಿರಾಯು-13

Comments

No comments yet. Why don’t you start the discussion?

Leave a Reply

Your email address will not be published. Required fields are marked *