ಅಪ್ರತೀಕ್ಷಿತ ಬಾಂಧವ್ಯದ ಪಯಣ
ಚಿರಂತ್ ಕಾರ್ ಡ್ರೈವ್ ಮಾಡುತ್ತಿದ್ದರೆ, ನಕುಲ್ ಮಾತನಾಡುತ್ತ ಅವನಿಗೆ ಸಾಥ್ ಕೊಡುತ್ತಿದ್ದ.ನಕುಲ್ಗೆ ಚಿರಂತ್ ಒಂದು ದಿನದ ಪರಿಚಯವಾದರೂ ತನ್ನ ಸ್ವಂತ ವಿಷಯಗಳನ್ನು ಹಂಚಿಕೊಳ್ಳುವಷ್ಟು ಹತ್ತಿರವಾಗಿದ್ದ.
ಅಷ್ಟರಲ್ಲಿ ಕಾಲ್ ಮಾಡಿದ ಪ್ರಣವ್”ನಕುಲ್ ಎಲ್ಲಿದಿಯಾ”ಎಂದು ವಿಚಾರಿಸಿದನು.
“ನಾವ್ ಆಗ್ಲೇ ಉಡುಪಿ ಹತ್ತಿರ ಬರ್ತಾ ಇದೀವಿ, ಸಂಜೆ 6 ಗಂಟೆಯೊಳಗೆ ಮಡಿಕೇರಿಯಲ್ಲಿ ಇರ್ತೀವಿ.
“ಓ ಹೌದಾ.. ಸರಿ ಬೇಗ ಬನ್ನಿ.ಮೀರಾ ನಿನ್ನ ಕನವರಿಸ್ತಾ ಇದಾಳೆ ಯಾವಾಗ್ ಬರ್ತೀಯೋ ಅಂತ”ಎಂದ ನಗುತ್ತಾ.
“ಜರ್ನಿ ಮಾಡಿ ತುಂಬಾ ಸುಸ್ತಾಗಿದೀವಿ ಕಣೋ. ಇವತ್ತು ಸಂಜೆ ಮನೆಯಲ್ಲೇ ರೆಸ್ಟ್ ಮಾಡಿ ನಾಳೆ ಬೆಳಗ್ಗೆ ಲಗೇಜ್ ಸಮೇತ ಬರ್ತೀನಿ.ನೀವೆಲ್ಲಾ ರೆಡಿಯಾಗಿರಿ.ನಾನ್ ಬರೋವರೆಗೂ ಮೀರಾಳನ್ನು ನೀನೇ ಸಮಾಧಾನ ಮಾಡು”
“ಸರಿ ನಕುಲ್. ಮೀರಾಳನ್ನು ನಾನ್ ನೋಡ್ಕೋತೀನಿ. ನೀವ್ ಹುಷಾರಾಗಿ ಬನ್ನಿ”ಎಂದು ಕಾಲ್ ಕಟ್ ಮಾಡಿದ.
“ಹೌದು ನಕುಲ್ ಟ್ರಿಪ್ ಯಾವ್ ಕಡೆ ಹೋಗ್ತೀರಾ ಅಂತ ಹೇಳಲೇ ಇಲ್ಲಾ”ಎಂದ ಚಿರಂತ್.
“ಇಲ್ಲಿಗೆ ಹೋಗ್ಬೇಕು ಅಲ್ಲಿಗೆ ಹೋಗ್ಬೇಕು ಅಂತ ಬ್ಲೂ ಪ್ರಿಂಟ್ ಮಾಡ್ಕೊಂಡ್ ಹೋದ್ರೆ ಅದ್ ಸರಿಯಾಗಿ ನೋಡಿಲ್ಲ ಇದ್ ಸರಿಯಾಗಿ ನೋಡಿಲ್ಲ ಅಂತಾರೆ ಅದ್ಕೆ ಸುಮ್ನೆ ಹೋಗ್ತಾ ಹೋಗ್ತಾ ಯಾವ್ಯಾವ್ ಪ್ಲೇಸ್ ಬರ್ತಾವೋ ಅವನೆಲ್ಲಾ ನೋಡ್ಕೊಂಡ್ ಬರೋದ್ ಅಷ್ಟೇ”

“ಅದು ಸರೀನೇ.ಆದ್ರೆ ಅದ್ಕೆ ಕೊನೆ ಅಂತ ಇರುತ್ತೆ ಅಲ್ವಾ ಹಾಗೆ ಸುಮ್ನೆ ಎಲ್ಲಿವರೆಗೂ ಹೋಗ್ತೀರಾ”
“ಗೋವಾವರೆಗೂ ಹೋಗಿ ಅಲ್ಲಿ ಒಂದೆರಡು ದಿನ ಎಂಜಾಯ್ ಮಾಡ್ಕೊಂಡು. ಕೊನೆಗೆ ನಿಮ್ಮೂರು ದಾಂಡೇಲಿಗೆ ಹೋಗ್ಬೇಕು ಅಂತ ಮಾನ್ಯ ಮೀರಾ ಹಠ ಮಾಡ್ತಿದಾರೆ. ಅದ್ಕೆ ಅಲ್ಲಿಗೂ ಹೋಗಿ ಬರ್ತಾ ದಾರೀಲಿ ಯಾವ್ ಯಾವ್ ಪ್ಲೇಸ್ ಸಿಗ್ತಾವೋ ನೋಡ್ಕೊಂಡು ಮಡಿಕೇರಿಗೆ ಬರೋದು ಅಷ್ಟೇ”
“ಎಲ್ಲಾದ್ರೂ ಹೋಗಿ ಆದ್ರೆ ತುಂಬಾ ಹುಷಾರಾಗಿರಬೇಕು ಅಷ್ಟೇ”
“ಅದ್ಸರಿ ನೀನು ಬರ್ಬೋದಲ್ವಾ ನಮ್ ಜೊತೆ ಟ್ರಿಪ್ಪಿಗೆ”
“ಬೇಡ ನಕುಲ್. ನಾನ್ ಬಂದ್ರೆ ಮೀರಾ ಖುಷಿಯಾಗಿರಲ್ಲ.ಅವ್ಳಿಗೆ ಒಂಥರಾ ಫ್ರೀಡಂ ಇರಲ್ಲ”
“ನಾನ್ ಮೀರಾಳಿಗೆ ಹೇಳ್ತಿನಿ.ನೀವ್ ಬನ್ನಿ “
“ಬೇಡ ನಕುಲ್ ನನ್ನ ಕರೆದ್ರಿ ಅಷ್ಟ್ ಸಾಕು ನನ್ಗೆ. ನೀವ್ ಈಗ ಹೋಗ್ಬನ್ನಿ ಮತ್ತೆ ಎಲ್ಲಾ ಸರಿಯಾದ್ಮೇಲೆ ಮತ್ತೆ ಒಂದ್ಸರಿ ಹೋಗೋಣ”
“ಹ್ಮ್ ಸರಿ”ಎಂದ ನಕುಲ್ ಮತ್ತೆ ಬಲವಂತ ಮಾಡಲೋಗಲಿಲ್ಲ.
ಹೀಗೆ ಒಬ್ಬರಿಗೊಬ್ಬರು ಮಾತನಾಡುತ್ತಾ ಬಂದಿದ್ದರಿಂದ ಸಮಯ ಕಳೆದದ್ದು, ದಾರಿ ಸಾಗಿದ್ದು ಇಬ್ಬರಿಗೂ ತಿಳಿಯಲೇ ಇಲ್ಲ.2 ಗಂಟೆಗೆ ಸರಿಯಾಗಿ ಕಾರು ಉಡುಪಿ ನಗರಕ್ಕೆ ಬಂದಿತ್ತು.
“ಚಿರು ಹೊಟ್ಟೆ ತುಂಬಾ ಹಸಿತಿದೆ. ಇಲ್ಲೇ ಊಟ ಮಾಡ್ಕೊಂಡು ಹೋಗೋಣ”ಎಂದು ನಕುಲ್ ಅಂದಾಗ ಅಲ್ಲೇ ಇದ್ದ ಹೋಟೆಲೊಂದರಲ್ಲಿ ಊಟ ಮಾಡಿದರು.
ಮತ್ತೆ ಕಾರನ್ನು ಏರಲು ಬಂದಾಗ “ಚಿರು ನೈಟೆಲ್ಲಾ ನಿದ್ದೆ ಮಾಡದೆ ಕಾರ್ ಡ್ರೈವ್ ಮಾಡ್ತಿದ್ದೆ. ಇಷ್ಟೋತ್ತು ನೀನೇ ಮಾಡಿದೀಯ. ಈಗ್ ನೀನ್ ರೆಸ್ಟ್ ಮಾಡು ನಾನ್ ಡ್ರೈವ್ ಮಾಡ್ತೀನಿ”ಎಂದು ಡ್ರೈವರ್ ಸೀಟಿನಲ್ಲಿ ಕುಳಿತ.
ರಾತ್ರಿಯೆಲ್ಲ ನಿದ್ದೆ ಮಾಡದೇ ಇದ್ದ ಕಾರಣ ಸೀಟಿಗೊರಗಿದ ತಕ್ಷಣ ನಿದ್ದೆ ಹತ್ತಿತ್ತು. ನಕುಲ್ ಸಾಂಗ್ ಕೇಳುತ್ತಾ ಕಾರು ಚಲಾಯಿಸುತ್ತಿದ್ದ.
ಟೀ ಎಸ್ಟೇಟ್ನ ಸೌಂದರ್ಯ

5:30 ಸಮಯಕ್ಕೆಲ್ಲಾ ಕಾರು ಟೀ ಎಸ್ಟೇಟ್ ಬಳಿಗೆ ಬಂದಿತು.ಆಗ ತಾನೇ ಕೆಂಪೇರಿ ತಂಪಾಗಿದ್ದ ಸೂರ್ಯ.ಮತ್ತೆ ನಾಳೆ ಬರುವೆ ಎಂಬ ಭರವಸೆ ಕೊಟ್ಟು ಮರೆಯಾಗುತ್ತಿದ್ದ.ಇದಕ್ಕೆ ಸಾಕ್ಷಿಯಾಗಿ ಕೆಲಸ ಮುಗಿಸಿ ಮನೆಯ ಕಡೆ ಹೊರಟಿದ್ದ ಹಕ್ಕಿಗಳ ಕಂಠದಿಂದ ಹೊರಹೊಮ್ಮುತ್ತಿದ್ದ ಮಧುರ ದನಿಯು ಕೇಳುಗರ ಮನ ತಣಿಸುವಂತೆ ಮಾಡುತ್ತಿತ್ತು.
ಆಗ ತಾನೇ ನಿದ್ದೆಯಿಂದ ಎಚ್ಚರಗೊಂಡ ಚಿರಂತ್ ಈ ಸುಂದರ ದೃಶ್ಯಕಾವ್ಯವನ್ನು ಕಣ್ತುಂಬಿಕೊಳ್ಳುತಿದ್ದ.
ಟೀ ಎಸ್ಟೇಟ್ನಲ್ಲಿ ಕೆಲಸ ಮಾಡುತಿದ್ದ ಕೂಲಿ ಕಾರ್ಮಿಕರೆಲ್ಲರೂ ಕಾರಿನಲ್ಲಿ ಸಾಗುತಿದ್ದ ನಕುಲನನ್ನು ನೋಡಿ”ನಮಸ್ಕಾರ ಬುದ್ದಿ”ಎಂದು ಗೌರವ ಸೂಚಿಸುತ್ತಿದ್ದರು. ಇದನ್ನು ಕಂಡ ಚಿರಂತ್”ನಕುಲ್ ಈ ಟೀ ಎಸ್ಟೇಟ್ ನಿಮ್ದೇನಾ”ಎಂದು ವಿಚಾರಿಸಿದನು.
“ನಮ್ದಲ್ಲ ಚಿರು.ಈ ಟೀ ಎಸ್ಟೇಟ್ನೆಲ್ಲಾ ನೋಡ್ಕೊತಿರೋದು ನಾವೇ ಅದ್ಕೆ ನಮಸ್ಕಾರ ಮಾಡ್ತಿದ್ದಾರೆ”
“ಓಹೋ ಹೌದಾ. ಮತ್ತೆ ಈ ಟೀ ಎಸ್ಟೇಟ್ ಯಾರದು”
ಧಣಿಗಳ ಉದಾರತೆ
“ಒಂದಿಪ್ಪತ್ತು ವರ್ಷದ ಕೆಳಗೆ ಇಲ್ಲಿ ಒಬ್ರು ಧಣಿ ಇದ್ರಂತೆ ಅವರದ್ದು. ತುಂಬಾ ಒಳ್ಳೆಯ ಮನುಷ್ಯನಂತೆ.ಕಷ್ಟ ಅಂತ ಬಂದ್ರೆ ತನ್ನ ಕೈಯ್ಯಲ್ಲಾದ ಸಹಾಯ ಮಾಡ್ತಿದ್ರಂತೆ.ಒಂದು ಕಾಲದಲ್ಲಿ ಈ ಕೂಲಿಕಾರ್ಮಿಕರ ಮನೆಗಳೆಲ್ಲಾ ಮಳೆ ಬಂದು ಕೊಚ್ಚಿಕೊಂಡು ಹೋಗಿ ನಿರಾಶ್ರಿತರಾಗಿದ್ದರು.
ಇವರಿಗೆ ಉಳಿದುಕೊಳ್ಳಲು ಜಾಗ ಕೊಟ್ಟು,ತಿನ್ನೋಕೆ ಅನ್ನ ಕೊಟ್ಟು, ದುಡಿಯೋಕೆ ಎಸ್ಟೇಟ್ನಲ್ಲಿ ಕೆಲಸ ಕೊಟ್ಟು ಜೀವ ಉಳಿಸಿದ್ದಾರೆ.
ಅಷ್ಟೇ ಅಲ್ಲ ಟೀ ಎಸ್ಟೇಟ್ನಲ್ಲಿ ಬಂದ ಆದಾಯವನ್ನು ಸಹ ಅವರಿಗೆ ಹಂಚುತ್ತಿದ್ದರಂತೆ.ಜೀವನ ಕೊಟ್ಟ ಧಣಿಗಳನ್ನು ಮರಿಬಾರ್ದು ಎಂಬ ವಿಶ್ವಾಸದಿಂದ ಈಗ್ಲೂ ಇಲ್ಲೇ ಕೆಲಸ ಮಾಡ್ಕೊಂಡು ಜೀವನ ಸಾಗಿಸ್ತಿದ್ದಾರೆ”
“ಅಂದ್ರೆ ಆ ಧಣಿ ಈಗ ಇಲ್ವಾ”
“ಇಲ್ಲಾ ಚಿರು. ಇಪ್ಪತ್ತು ವರ್ಷಗಳ ಹಿಂದೆಯೇ ತೀರಿಕೊಂಡರಂತೆ.ಅವರಿಗೆ ನಮ್ಮ ಅಪ್ಪ ತುಂಬಾ ಆಪ್ತರಾಗಿದ್ದರಂತೆ ಅದಕ್ಕೆ ಎಸ್ಟೇಟ್ನ ಎಲ್ಲಾ ಜವಾಬ್ದಾರಿ ಈಗ್ಲೂ ನಮ್ ಅಪ್ಪಾನೆ ನೋಡ್ಕೊತಿದ್ದಾರೆ.ಅವರ ಒಳ್ಳೆತನ ಎಷ್ಟು ಪ್ರಭಾವ ಬೀರಿದೆಯೆಂದರೆ ಈಗಲೂ ಯಾರು ಒಂದು ರೂಪಾಯಿ ಸಹ ಲೆಕ್ಕ ತಪ್ಪುವುದಿಲ್ಲ”
“ಹೌದು ನಕುಲ್ ಕೆಲವರು ಹಾಗೇ ಮಾಡೋ ಸೇವೆಯಿಂದ ಎಲ್ಲರ ಹೃದಯಗಳನ್ನು ಗೆದ್ದಿರ್ತಾರಂತೆ. ಅವರಲ್ಲಿ ಇವರು ಒಬ್ಬರು. ನಮ್ ಅಪ್ಪನೂ ಹೇಳ್ತಿದ್ರು ಈ ತರ ಸಹಾಯ ಮಾಡಿದವರು ಕೊನೆವರೆಗೂ ಜೀವಂತರಾಗಿರುತ್ತಾರಂತೆ ಅಂತ. ಅವ್ರ್ ಹೇಳಿದ್ದಷ್ಟೇ ಕೇಳಿದ್ದ ನನಗೆ ಇವತ್ತು ನಿಜ್ವಾಗ್ಲೂ ನೋಡ್ತಿದೀನಿ”ಎಂದ.
ಅಷ್ಟರಲ್ಲಿ ಟೀ ಎಸ್ಟೇಟ್ ಮದ್ಯದಲ್ಲಿ ನಿರ್ಮಾಣವಾದ ಶ್ವೇತ ವರ್ಣದ ಬೃಹದಾಕಾರದ ಮನೆಯ ಮುಂದೆ ಕಾರು ಬಂದು ನಿಂತಿತ್ತು.ಆ ಮನೆಯ ಮುಂದೆ ಹತ್ತಾರು ನೌಕರರು ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗಿದ್ದರು.
ಆ ಮನೆ ನಕುಲ್ ಅವರದ್ದೇ ಎಂದು ತಿಳಿದ ಚಿರಂತ್”ವಾವ್ ನಕುಲ್ ನಿಮ್ ಮನೆ ನೋಡೋಕೆ ತುಂಬಾ ಚೆನ್ನಾಗಿದೆ”ಎಂದು ಉದ್ಗಾರಮಾಡಿದನು.
“ಅಯ್ಯೋ ಚಿರು ಅದು ನಮ್ ಮನೆಯಲ್ಲ. ಅದು ಆ ಧಣಿಗಳ ಮನೆ. ಅಲ್ಲಿ ನೋಡು ಅಲ್ಲಿರುವ ಚಿಕ್ಕ ಮನೆ ನಮ್ದು”ಎಂದು ಕೈ ಮಾಡಿ ತೋರಿಸಿದ ನಗುತ್ತಾ.
“ಆ ಧಣಿಗಳು ಮನೆತನದವರು ಯಾರು ಇಲ್ಲಾ ಅಂದ್ರಿ.ಆದರೆ ಅಲ್ಲಿ ನೋಡಿದ್ತೆ ಆ ಮನೆ ತುಂಬಾ ಎಲ್ಲಾ ಓಡಾಡ್ತಿದ್ದಾರೆ”
“ಓ ಅದಾ ನಿನ್ನ ಸಂದೇಹ. ಧಣಿಗಳು ತೀರಿಹೋದ ಮೇಲೆ ಅಪ್ಪ ಅಮ್ಮ ಸೇರಿ ಆ ಮನೆಯ ಮುಕ್ಕಾಲು ಭಾಗವನ್ನು ವೃದ್ಧಾಶ್ರಮಕ್ಕೆ, ಅನಾಥಾಶ್ರಮಕ್ಕೆ ಕೊಟ್ಟಿದ್ದಾರೆ.
ಇನ್ನುಳಿದ ಒಂದು ಭಾಗದಲ್ಲಿ ಆ ಧಣಿಗಳ ನೆನಪುಗಳನ್ನು ಶೇಖರಿಸಿಡಲಾಗಿದೆ.ಅಲ್ಲಿಗೆ ಯಾರಿಗೂ ಪ್ರವೇಶವಿಲ್ಲ ಅಪ್ಪ ಅಮ್ಮನಿಗೆ ಬಿಟ್ಟರೆ”ಎಂದು ಆ ಮನೆಯಲ್ಲಿ ಬಗ್ಗೆ ಸವಿಸ್ತಾರವಾಗಿ ತಿಳಿಸಿದ.
ಆ ಮನೆ ಏಕೋ ಅವನನ್ನು ತನ್ನತ್ತ ಸೆಳೆಯುತ್ತಿತ್ತು.ಆ ಮನೆಯ ಒಳಗೆಲ್ಲಾ ನೋಡಲು ತುಂಬಾ ಉತ್ಸುಕನಾದನು.
“ನಕುಲ್ ಒಂದ್ಸರಿ ಆ ಮನೆ ಒಳಗೆ ಹೋಗ್ಬೇಕು ಅಂತ ಅನಿಸ್ತಿದೆ ಹೋಗೋಣ್ವಾ”ಎಂದ ಆಸೆಯಿಂದ.
ನೆನಪುಗಳಿಂದ ತುಂಬಿದ ಮನೆ

“ಆ ಒಂದು ಭಾಗ ಬಿಟ್ಟು ಎಲ್ಲಾ ನೋಡಬೋದು.ಮೊದ್ಲು ನೀನು ಫ್ರೆಶ್ ಆಗು.ಟೀ ಮಾಡ್ಕೊಡ್ತೀನಿ ಕುಡ್ದು ಆಮೇಲೆ ನಿಧಾನಕ್ಕೆ ಹೋಗೋಣ”ಎಂದು ಅವರ ಮನೆಗೆ ಕರೆದುಕೊಂಡು ಹೋದನು.
ಫ್ರೆಶ್ ಆಗಿ ಬಂದ ಚಿರಂತ್ಗೆ ಟೀ ಕೊಟ್ಟ ನಕುಲ್”ಚಿರು ಅಲ್ಲೇ ಬಾಲ್ಕನಿಯಲ್ಲಿ ಕೂತು ಟೀ ಕುಡಿತಿರು. ನಾನ್ ಮೀರಾಗೆ ಕಾಲ್ ಮಾಡಿ ಬರ್ತೀನಿ”ಎಂದು ಹೋದ ಫೋನ್ ಒತ್ತುತ್ತಾ.
ಬಾಲ್ಕನಿಗೆ ಬಂದ ಚಿರಂತ್ ಆ ಶ್ವೇತ ವರ್ಣದ ಮನೆಯನ್ನು ನೋಡುತ್ತಾ ಟೀ ಕುಡಿಯುತ್ತಿದ್ದನು.ಅಷ್ಟರಲ್ಲಿ ಎಲೆಕ್ಟ್ರಿಕ್ ದೀಪಗಳಿಂದ ಆ ಮನೆ ಬೆಳಗಲು ಶುರುಮಾಡಿತ್ತು.ಆ ಶ್ವೇತ ಬಣ್ಣದ ಮನೆಯ ಮೇಲೆ ಬಣ್ಣ ಬಣ್ಣದ ದೀಪಗಳು ಅದರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು. ನೋಡಲು ಎರಡು ಕಣ್ಣುಗಳೇ ಸಾಲದಾಗಿದ್ದವು.ಅದನ್ನು ನೋಡುತ್ತಾ ಮೈ ಮರೆತವನಿಗೆ ಮೀರಾಳ ಜೊತೆ ಮಾತಾಡಿ ಬಂದ ನಕುಲ್”ಏನ್ ಸರ್ ಕನಸು ಕಾಣ್ತಿದಿರಾ”ಎಂದು ಎಚ್ಚರಿಸಿದ.
“ನಕುಲ್ ಪ್ಲೀಸ್ ಕಣೋ ಆ ಮನೆ ಒಳಗೆ ನೋಡ್ಬೇಕನಿಸ್ತಿದೆ ಹೋಗೋಣ್ವಾ”ಎಂದ ಆಸೆಯಿಂದ.
ಶಾಂತಿಯುತ ರಾತ್ರಿ
“ಸರಿ ನಡಿ”ಎಂದವನೇ ಆ ಶ್ವೇತ ವರ್ಣದ ಮನೆಯೊಳಗೇ ಕರೆದೊಯ್ದನು.ಮನೆಯಲ್ಲಿದ್ದ ಹಿರಿಯರಿಗೆ ಮಕ್ಕಳಿಗೆ ಪರಿಚಯ ಮಾಡಿಕೊಟ್ಟ ನಕುಲ್. ಅಲ್ಲಿ ಆಡುತಿದ್ದ ಮಕ್ಕಳಲ್ಲಿ ಮಕ್ಕಳಾಗಿ ಬೆರೆತು ಹೋದ ಚಿರಂತನನ್ನು ಕಂಡು ನಕುಲ್ ಹರ್ಷಗೊಂಡನು.
“ನಕುಲ್ ನಿಜಕ್ಕೆ ಇದೊಂದು ಅದ್ಭುತ ಅನುಭವ ಈ ಮಕ್ಕಳ ಜೊತೆ ಆಟ ಆಡ್ತಾ, ಆ ಹಿರಿಯರ ಅನುಭವಗಳನ್ನು ಕೇಳ್ತಿದ್ರೆ ಟೈಂ ಹೋಗೋದೇ ಗೊತ್ತಾಗಲ್ಲ ಅಲ್ವಾ”
“ಹೌದು ಚಿರು.ತಂದೆತಾಯಿ ಪ್ರೀತಿ ಕಳೆದುಕೊಂಡವರಿಗೆ ಮಕ್ಕಳಿಗೆ,ಮಕ್ಕಳ ಪ್ರೀತಿಯನ್ನು ಕಳೆದುಕೊಂಡ ತಂದೆತಾಯಿಗಳಿಗೆ ಪ್ರೀತಿ ಹಂಚುವ ಕೆಲಸ ಈ ಆಶ್ರಮಗಳು ಮಾಡ್ತಾ ಇದಾವೆ”
“ಹೀಗೆ ಎಲ್ಲರೂ ಒಟ್ಟಿಗೆ ಇರೋದ್ರಿಂದ ತುಂಬಿದ ಮನೆ ಎಂಬ ಭಾವನೆ ಬರುತ್ತೆ. ಆ ಭಾವನೆ ಎಲ್ಲದಕ್ಕಿಂತ ದೊಡ್ಡ ಸಂತೋಷ ಕೊಡುತ್ತದೆ.ಈ ಅದೃಷ್ಟ ಎಲ್ಲರಿಗೂ ಸಿಗಲ್ಲ.ನನ್ಗೆ ಸತ್ತ ಮೇಲೂ ಇಲ್ಲೇ ಇರಬೇಕು ಅನಿಸ್ತಿದೆ”

“ಛೆ… ಸಾಯೋ ಮಾತು ಯಾಕೀಗ.. ಹೌದು ಚಿರು ನಿನ್ ಹೇಳಿದ ಹಾಗೇ ಎಲ್ಲರೊಂದಿಗೆ ಇದ್ದಾಗ ಆಗುವ ಸಂತೋಷವನ್ನು ಅನುಭವಿಸಬೇಕೆಂದರೆ ಅದೃಷ್ಟ ಬರೆಸಿಕೊಂಡು ಬಂದಿರಬೇಕು.ಸರಿ ಈಗ ನಡಿ ಎಲ್ಲರ ಜೊತೆ ಕೂತು ಊಟ ಮಾಡೋಣ”ಎಂದು ಊಟ ಮಾಡಲು ಕರೆದುಕೊಂಡು ಹೋದ.
ಎಲ್ಲರೊಂದಿಗೆ ಊಟ ಮಾಡಿದ ಇಬ್ಬರೂ ಮಕ್ಕಳು ಮಲಗುವವರೆಗೂ ಅವರ ಜೊತೆ ಇದ್ದು ನಂತರ ಮಲಗಲು ಬಂದರು.
ಮುಂದುವರೆಯುವುದು….
ಈ ಸ್ನೇಹ ಚಿರಾಯು ನೀವು ಇಂಗ್ಲಿಷ್ ಭಾಷೆಯಲ್ಲಿಯೂ ಓದಬಹುದು.
ನಮ್ಮ ವೆಬ್ಬೆಟ್ ನ ಇತರ ಪೋಸ್ಟ್ ಗಳನ್ನು ಇಲ್ಲಿ ಓದಬಹುದು.

