ಸ್ನೇಹ ಚಿರಾಯು -11

ಸ್ನೇಹ ಚಿರಾಯು -11

ಸ್ನೇಹ ಚಿರಾಯು -11-ಮಡಿಕೇರಿಯಿಂದ ಬಿಟ್ಟಾಗ ಗಂಟೆ ರಾತ್ರಿ ಹತ್ತಾಗಿತ್ತು.ಕಾರಿನಲ್ಲಿ ಮೌನ ಆವರಿಸಿತ್ತು.ಚಿರಂತ್ಗೆ ನಕುಲ್ ಏನೋ ಕೇಳಬೇಕು,ಏನೋ ಮಾತಾಡಬೇಕು ಎಂಬ ಬಯಕೆ. ಆದರೂ ಮಾತನಾಡದೆ ಕಾರ್ ವಿಂಡೋ ಕಡೆ ನೋಡುತ್ತಾ ಕುಳಿತಿದ್ದ.ಇತ್ತ ತೀಡಿ ಬರುತ್ತಿದ್ದ ತಂಗಾಳಿಗೆ ಮೈಯೊಡ್ಡಿ ಕಾರ್ ಡ್ರೈವ್ ಮಾಡುತ್ತಿದ್ದ ನಕುಲ್ ನಿಧಾನವಾಗಿ ನಿದ್ದೆ ಹತ್ತಲು ಶುರುಮಾಡಿದ.ಪಕ್ಕದಲ್ಲಿ ಸುಮ್ಮನೆ ಕೂತಿದ್ದ ಚಿರಂತನನ್ನು ನೋಡಿ ಸಿಟ್ಟಾದನು”ಯಾವನ್ ಗುರು ಇವ್ನು ಕಾರಲ್ಲಿ ಕಂಪನಿ ಕೊಡ್ತೀನಿ ಅಂತ ಹೇಳಿ ಇಲ್ಲಿ ಬಂದು ಸುಮ್ನೆ ಕೂತಿದ್ದಾನಲ್ಲ. ನಂಗೆ ಬೇರೆ ನಿದ್ದೆ ಬರ್ತಿದೆ. ಇವ್ನ್ ಏನಾದ್ರು ಮಾತಾಡಿದ್ರೆ ತಾನೇ ನಂಗೆ ನಿದ್ದೆ ಹೋಗೋದು”ಎಂದು ತನ್ನಲ್ಲೇ ಬೈಯ್ಕೊಂಡು ಕಾರ್ ಡ್ರೈವ್ ಮಾಡುತ್ತಿದ್ದ.

ಕೊನೆಗೆ ಮೌನ ಮುರಿದ ನಕುಲ್ “ರೀ ಸಾಹೇಬ್ರೆ ಸ್ವಲ್ಪ ಅವಾಗವಾಗ ಮಾತಾಡಿಸ್ತೀರಾ ಇಲ್ಲ ಅಂದ್ರೆ ನಿದ್ದೆ ಬಂದ್ಬಿಡುತ್ತೇ ಅಷ್ಟೇ ನನ್ಗೆ”ಎಂದ.

“ನಿಮ್ಗೆ ನಿದ್ದೆ ಬಂದ್ರೆ ಮಲ್ಕೊಳ್ಳಿ ನಕುಲ್.ನಾನ್ ಕಾರ್ ಡ್ರೈವ್ ಮಾಡ್ತೀನಿ”ಎಂದ ಸಮಾಧಾನದಿಂದ.

“ಅಯ್ಯೋ ಅಷ್ಟು ದೊಡ್ಡ ತ್ಯಾಗ ಏನ್ ಮಾಡ್ಬೇಡಿ. ಹಾಗೇ ಸ್ವಲ್ಪ ಮಾತಾಡ್ಸಿದ್ರೆ ಸಾಕು”

“ಏನ್ ಮಾತಾಡ್ಲಿ ಯಾವ ವಿಷಯದ ಬಗ್ಗೆ ಮಾತಾಡ್ಲಿ”ಎಂದ ದ್ವಂದ್ವದಿಂದ.

“ಅಲ್ಲ ರೀ, ಕಾರಲ್ಲಿ ಕಂಪನಿ ಕೊಡ್ತೀನಿ ಅಂತ ಹೇಳಿ ಇಲ್ಲಿ ಏನ್ ಮಾತಾಡ್ಲಿ ಅಂತ ನನ್ನೇ ಕೇಳ್ತಿದೀರಾ. ಅಷ್ಟಕ್ಕೂ ಆಗ್ಲಿಂದ ಏನೋ ಯೋಚ್ನೆ ಮಾಡ್ತಿದ್ರಿ.ಅದ್ನೇ ಹೇಳಿ ಕೇಳೋಣ “

“ಅಂತದ್ದೇನು ಇಲ್ಲ ನಕುಲ್ ಹಾಗೇ ಸುಮ್ನೆ ಯೋಚ್ನೆ ಮಾಡ್ತಿದ್ದೆ ಅಷ್ಟೇ”

“ಅದ್ನೇ ಹೇಳ್ರಿ ಕೇಳೋಣ.. ಏನೂ ನಿಮ್ ಗರ್ಲ್ ಫ್ರೆಂಡ್ ಜೊತೆ ನಾಳೆ ಪೂರ್ತಿ ಮಾತಾಡೋಕಾಗಲ್ಲ,ನೋಡೋಕಾಗಲ್ಲ ಅಂತ  ಏನಾದ್ರು ಬೇಜಾರಾಗಿದ್ದೀರಾ “ಎಂದ ವ್ಯಂಗ್ಯವಾಗಿ.

“ಆ ಪ್ರಶ್ನೆ ನಾನು ನಿಂಗ್ ಕೇಳ್ಬೇಕು”ಎಂದ ಚಿರಂತ್.

“ಅಂದ್ರೆ”

“ಅಂದ್ರೆ ಗಿಂದ್ರೆ ಏನೂ ಇಲ್ಲ. ಒಂದ್ ಕೇಳ್ತೀನಿ ಮುಚ್ಚು ಮರೆಯಿಲ್ಲದೆ ಉತ್ತರ ಕೊಡ್ತೀಯಾ”

“ಹಾ ಕೇಳಿ”ಎಂದ ನಕುಲ್.

“ಮೀರಾಳನ್ನು ಚೆನ್ನಾಗಿ ನೋಡ್ಕೋತೀರಾ”ಎಂದ ಚಿರಂತ್.

ಚಿರಂತ್ ಮಾತಿಗೆ ಕಕ್ಕಾಬಿಕ್ಕಿಯಾದ ನಕುಲ್ ಒಮ್ಮೆಲೇ ಕಾರು ನಿಲ್ಲಿಸಿದ.ನಾವಿಬ್ರು ಲವ್ ಮಾಡ್ತಿರೋ ವಿಷ್ಯ ಇವರಿಗೆ ಹೇಗೆ ಗೊತ್ತಾಯ್ತು.ಅದು ಇಷ್ಟು ಬೇಗ.ಚಿರಂತನ ಪ್ರಶ್ನೆಗೆ ಕಂಗಾಲಾದ ನಕುಲ್ ಬೆವರತೊಡಗಿದ.

“ನಿಮ್ಗೆ ಈ ವಿಷ್ಯಾ”ಎಂದು ತೊದಲಿದ.

“ನಿಮ್ ಫ್ರೆಂಡ್ಸ್ ಹೇಗೆ ಮರೆಯಲ್ಲಿ ನಿಂತು ನೀನು ಮೀರಾ ಮಾತನಾಡುತ್ತಿರುವುದು ಕೇಳಿಸಿಕೊಂಡರೋ ಅದೇ ತರ ಈ ಕಡೆಯಿಂದ ನಾನೂ ಕೇಳಿಸಿಕೊಂಡೆ”

“ಅದು…ss ಮೀರಾ ನಾನು ತುಂಬಾ ಇಷ್ಟ ಪಡ್ತಿದಿವಿ”ಎಂದ ಮತ್ತದೇ ತೊದಲು ದನಿಯಲ್ಲಿ.

“ಅಯ್ಯೋ ನಕುಲ್ ನಾನ್ ಕೇಳ್ತಿರೋದೇನು ನೀವ್ ಹೇಳ್ತಿರೋದೇನು.ನೀವಿಬ್ರು ಇಷ್ಟ ಪಡ್ತಿರೋದು ನನ್ಗೆ ಗೊತ್ತಿರೋ ವಿಷಯ.ನಾನ್ ಕೇಳಿದ್ದು ಮೀರಾಳನ್ನು ಕೊನೆವರೆಗೂ ಚೆನ್ನಾಗಿ ನೋಡ್ಕೊತೀಯಾ ಅಂತ”ಎಂದ ಕೊಂಚ ನಗುತ್ತಾ.

ಅವನ ನಗುವಿನಿಂದ ನಕುಲ್ಗೆ  ಸ್ವಲ್ಪ ಧೈರ್ಯ ಬಂದಂತಾಯಿತು. ಕಾರ್ ಮತ್ತೆ ಡ್ರೈವ್ ಮಾಡಲು ಶುರು ಮಾಡಿದ.

“ನಿಜ್ವಾಗ್ಲೂ ತುಂಬಾ ಚೆನ್ನಾಗಿ ನೋಡ್ಕೋತೀನಿ.ಹೂ ತರ ಜೋಪಾನವಾಗಿ ಕಾಪಾಡ್ಕೋತೀನಿ.ಅವಳಿಗೆ ಕಷ್ಟ ಅನ್ನೋದೇ ಗೊತ್ತಾಗಬಾರದು ಆ ರೀತಿ ನೋಡ್ಕೋತೀನಿ. ಅವಳಿದ್ರೆ ನಮ್ ಮನೆ-ಮನಗಳ ತುಂಬಾ ನಗುವಿನ ಬೆಳಕು ಆವರಿಸುತ್ತೆ. ಅಂತ ಬೆಳಕನ್ನು ನಾನ್ ಯಾಕೆ ಬಿಟ್ಕೊಡ್ಲಿ. ಅಷ್ಟಕ್ಕೂ ಅವಳಿಲ್ಲದ ಬದುಕು ನನ್ಗೆ ನಶ್ವರ ಅನ್ಸುತ್ತೆ”ಎಂದಾ ದೃಢವಾಗಿ.

ಅವನ ಒಂದೊಂದು ಮಾತುಗಳು ಮೀರಾಳ ಮೇಲಿದ್ದ ಪ್ರೀತಿಯನ್ನು ಎತ್ತಿ ತೋರಿಸುತ್ತಿತ್ತು.ಇದರಿಂದ ಹರ್ಷಗೊಂಡ ಚಿರಂತ್”ನಿಜ್ವಾಗ್ಲೂ ನಿಮ್ ಮಾತುಗಳಿಂದ ಅವಳ ಮುಂದಿನ ಜೀವನ ಹೇಗಿರುತ್ತೆ ಅಂತ ಸ್ಪಷ್ಟವಾಗಿ ಗೊತ್ತಾಗ್ತಿದೆ. ಜೀವನದಲ್ಲಿ ನಾನ್ ನಿಭಾಯಿಸಬೇಕಾಗಿರೋ ಪ್ರಮುಖ ಜವಾಬ್ದಾರಿಗಳೆಂದರೆ ಒಂದು ಮೀರಾಳಿಗೆ ಒಂದೊಳ್ಳೆ ಗಂಡು ಹುಡುಕೋದು,ಇನ್ನೊಂದು ಅವಳ ಮದುವೆ ವಿಜೃಂಭಣೆಯಿಂದ ಮಾಡೋದು.ನಿನ್ನ ಸೆಲೆಕ್ಟ್ ಮಾಡಿ ಒಳ್ಳೆ ಗಂಡು ಹುಡುಕೋ ಜವಾಬ್ದಾರಿ ಅವಳೇ ನಿಭಾಯಿಸಿದ್ದಾಳೆ ಇನ್ನೇನಿದ್ರು ಅವ್ಳ್ ಮದುವೆ ಮಾಡೋದೊಂದೇ ಗುರಿ”ಎಂದ.

“ನಂಗ್ ಗೊತ್ತಿಲ್ದೆ ಒಂದ್ ಕೇಳ್ತೀನಿ.ಮೀರಾ ನಿಮ್ಮನ್ನು ನೋಡಿದ್ರೆ ಸಾಕು ಸಿಟ್ಟಾಗ್ತಾಳೆ ಅಂತದ್ರಲ್ಲಿ ನೀವ್ ಯಾಕೆ ಅವ್ಳ್ನ ಅಷ್ಟ್ ಇಷ್ಟ ಪಡ್ತಿರಾ”

“ಅವ್ಳ್ ನನ್ನ ದ್ವೇಷಿಸೋಕೆ ಒಂದ್ ಕಾರಣ ಇರ್ಬೋದು. ಆದ್ರೆ ನಾನ್ ಅವ್ಳ್ನ ಇಷ್ಟ ಪಡೋಕೆ ನೂರಾರು ಕಾರಣ ಇದಾವೆ.ಅವ್ಳ್ ಒಂದು ಕಾರಣ ಇಟ್ಕೊಂಡೇ ನನ್ನ ಅಷ್ಟ್ ದ್ವೇಷ ಮಾಡ್ತಿರ್ಬೇಕಾದ್ರೆ. ಇನ್ನು ನೂರಾರು ಕಾರಣಗಳಿಂದ ಇಷ್ಟ ಪಡೋ ನಾನು ಇನ್ನೇಸ್ಟು ಇಷ್ಟ ಪಡ್ಬೇಕು”

“ನಿಜ್ವಾಗ್ಲೂ ನಿಮ್ಮಂತ ಫ್ರೆಂಡ್ ಪಡೆಯೋಕೆ ಅವ್ಳ್ ಅದೃಷ್ಟ ಮಾಡಿರಬೇಕು”

“ಅದ್ ನಿಂಗ್ ಚೆನ್ನಾಗಿ ಅರ್ಥ ಆಯ್ತು.ಅರ್ಥ ಅಗೋರಿಗೆ ಅರ್ಥ ಆಗಿದ್ರೆ ಇನ್ನು ಚೆನ್ನಾಗಿರುತಿತ್ತು”ಎಂದು ಮನದಲ್ಲೇ ಗೊಣಗಿಕೊಂಡ.

ಅವನ ಮಾತು ಸ್ಪಷ್ಟವಾಗಿ ಕೇಳಿಸಿಕೊಳ್ಳದ ನಕುಲ್”ಏನಂದ್ರಿ. ಕೇಳಲಿಲ್ಲ”ಎಂದ ಅನುಮಾನವಾಗಿ.

“ಹಾ….ss ಏನೂ ಇಲ್ಲ ಕಾರ್ ನಿಲ್ಸಿ ಒಂದು ಟೀ ಕುಡ್ಕೊಂಡ್ ಹೋಗೋಣ”ಎಂದ. ಸರಿ ಎಂಬಂತೆ ತಲೆಯಾಡಿಸಿದ ನಕುಲ್ ಕಾರು ನಿಲ್ಲಿಸಿದ.ಇವರ ಪಯಣ ಅದಾಗಲೇ ಉಡುಪಿ ಹತ್ತಿರಕ್ಕೆ ತಲುಪಿತ್ತು. ಟೀ ಕುಡಿದು ಮತ್ತೆ ಕಾರೇರಿದರು.

“ನಕುಲ್ ನೀವ್ ಇಷ್ಟೋತ್ತು ಡ್ರೈವ್ ಮಾಡಿದ್ದು ಸಾಕು. ಈಗ ಆರಾಮಾಗಿ ರೆಸ್ಟ್ ಮಾಡಿ ನಾನ್ ಕಾರ್ ಡ್ರೈವ್ ಮಾಡ್ತೀನಿ”

“ಇಲ್ಲ ಪರವಾಗಿಲ್ಲ, ನೀವೇ ಮಲ್ಕೊಳ್ಳಿ ನಾನ್ ಡ್ರೈವ್ ಮಾಡ್ತೀನಿ. ಅಷ್ಟಕ್ಕೂ ಕಾರವಾರದಲ್ಲಿ ಮನೆ ಎಲ್ಲಿದೆ ಅಂತ ನಿಮ್ಗೆ ಗೊತ್ತಿಲ್ವಲ್ಲಾ”

“ಅಯ್ಯೋ ದೇವ್ರೇ… ಕಾರವಾರ ಬಂದಾಗ ನಿಮ್ಮನ್ನು ಎಬ್ಬಿಸ್ತೀನಿ ಅವಾಗ ನೀವು ಮನೆ ದಾರಿ ತೋರ್ಸಿದ್ರೆ ಆಯ್ತಪ್ಪ”ಎಂದು ಡ್ರೈವ್  ಸೀಟಿನಲ್ಲಿ ಕುಳಿತ.

“ಹ್ಮ್ ಸರಿ ನಿಮ್ಮಿಷ್ಟ”ಎಂದವನೇ ನಕುಲ್ ನಿದ್ದೆ ಮಾಡಲು ರೆಡಿಯಾದ.ಚಿರಂತ್ ಕಾರವಾರದೆಡೆಗೆ ಕಾರು ಚಲಾಯಿಸಿದ.

ಕಾರು ಕಾರವಾರಕ್ಕೆ ಬಂದಾಗ ಗಂಟೆ 7 ಆಗಿತ್ತು. ನಕುಲನನ್ನು ನಿದ್ದೆಯಿಂದ ಎಚ್ಚರಿಸಿದ ಚಿರಂತ್”ನಕುಲ್ ಕಾರವಾರಕ್ಕೆ ಬಂದಾಯ್ತು. ಈಗ ಮನೆ ಕಡೆ ದಾರಿ ತೋರಿಸಿ ಹೋಗೋಣ ಬೇಗ”

ರಾತ್ರಿಯಿಡಿ ಚಿರಂತ್ ಭುಜದ ಮೇಲೆಯೇ ಮಲಗಿದ್ದ ನಕುಲ್ ಚಿರಂತನ ದನಿಗೆ ಎಚ್ಚರವಾಗಿ ಕಣ್ಣುಜ್ಜಿಕೊಳ್ಳುತ್ತಾ”ಆಗ್ಲೇ ಕಾರವಾರ ಬಂದಾಯ್ತ”ಎಂದ.

“ಇಲ್ಲ ನಕುಲ್ ಕಾರವಾರ ಏನ್ ಬಂದಿಲ್ಲ. ನಾವೇ ಕಾರವಾರಕ್ಕೆ ಬಂದಿದೀವಿ”ಎಂದ ನಗುತ್ತಾ.

“ಬೆಳ್ಳಂಬೆಳಗ್ಗೆ ಶುರುಮಾಡಿದ್ರ ನಿಮ್ ತರ್ಲೆ”ಎಂದವನೇ ಮನೆ ಕಡೆ ದಾರಿ ತೋರಿಸಿದ. ಅವನು ಹೇಳಿದಂತೆಯೇ ಕಾರು ಚಲಾಯಿಸಿದ ಚಿರಂತ್ ಕಾರು ಮನೆಯ ಮುಂದೆ ಬಂದು ನಿಂತಿತ್ತು…

ನಕುಲನ ಆಗಮನವನ್ನೇ ಕಾದು ನಿಂತಿದ್ದ ತನು ಓಡಿ ಬಂದು ತಬ್ಬಿಡಿದು”ಹಾಯ್ ನಕುಲ್”ಎಂದಳು.

ಇದರಿಂದ ಮುಜುಗರಕ್ಕೀಡಾದ ನಕುಲ್”ಅದ್ನ ತಬ್ಕೊಂಡೆ ಹೇಳ್ಬೇಕಾ, ಹಾಗೇ ಸುಮ್ನೆ ಹೇಳೋಕ್ ಬರಲ್ವಾ”ಎಂದು ಅವಳ ಬಂಧನದಿಂದ ಮುಕ್ತನಾದನು.

“ಇಲ್ಲ ನಂಗ್ ಹಾಗ್ ಮಾತಾಡ್ಸಿದ್ರೆ ಸಮಾಧಾನ ಆಗಲ್ಲ.ಹೀಗೆ ತಬ್ಕೊಂಡು ಹೇಳಿದ್ರೇನೇ ಸಮಾಧಾನ ಆಗೋದು”ಎಂದು ಚಿಕ್ಕ ಮಗುವಿನಂತೆ ತಬ್ಬಿಕೊಳ್ಳಲು ಬಂದಾಗ”ತನು ಇದ್ಯಾಕೋ ಜಾಸ್ತಿ ಆಗ್ಲಿಲ್ವಾ”ಎಂದು ಕೊಸರಿದನು.

“ಯಾವಾಗ್ ನೋಡಿದ್ರು ಹೀಗೆ ಆಡ್ತಿಯಾ. ನಾನಂದ್ರೆ ಸ್ವಲ್ಪನೂ ಇಷ್ಟ ಇಲ್ಲ ನಿನ್ಗೆ”ಎಂದು ಸಿಟ್ಟಿನಿಂದ ಅಲ್ಲಿಂದ ಕಾಲ್ಕಿತ್ತಳು.

ಚಿರಂತನನ್ನು ಕರೆದುಕೊಂಡು ತಂದೆ ತಾಯಿಯನ್ನು ಹುಡುಕುತ್ತಾ ಹೊರಟನು.

“ಹಾಯ್ ಮಮ್ಮಿ,ಹಾಯ್ ಡ್ಯಾಡಿ”ಎಂದು ಆಲಂಗಿಸಿಕೊಂಡನು.ಇಬ್ಬರಿಗೂ ಚಿರಂತನನ್ನು ಪರಿಚಯ ಮಾಡಿಕೊಟ್ಟ.ಹಾಗೇ ಚಿರಂತನಿಗೂ ತಂದೆ ಮೋಹನ್, ತಾಯಿ ಕುಸುಮ ಎಂದು ಇಬ್ಬರನ್ನೂ ಪರಿಚಯ ಮಾಡಿಕೊಟ್ಟನು.

“ಸರಿ ಬೇಗ ಫ್ರೆಶ್ ಆಗಿ ಬನ್ನಿ.ಇಲ್ಲಿಗೆ ಟಿಫನ್ ತರ್ತೀನಿ ತಿನ್ನುವಿರಂತೆ ರಾತ್ರಿಯೆಲ್ಲ ಪ್ರಯಾಣ ಮಾಡಿ ಸುಸ್ತಾಗಿದ್ದೀರಾ”ಎಂದು ಇಬ್ಬರನ್ನು ಫ್ರೆಶ್ ಆಗಲು ಕಳುಹಿಸಿದಳು ಕುಸುಮ.

ಇಬ್ಬರೂ ಫ್ರೆಶ್ ಆಗುವುದರೋಳಗೆ ತಿಂಡಿ ರೆಡಿಮಾಡಿದ್ದಳು ಕುಸುಮ.ಇಬ್ಬರಿಗೂ ತಟ್ಟೆಗೆ ಹಾಕಿ ಕೊಟ್ಟಳು.

“ಅಮ್ಮ ಏನೋ ಪ್ರೋಗ್ರಾಮ್ ಇದೆ ಅಂದೇ. ಆದ್ರೆ ಮನೆಯಲ್ಲಿ ಸಿದ್ದತೆಗೆ ಯಾವುದೇ ತರಹದ ಗಡಿಬಿಡಿ ಇಲ್ಲಾ”ಎಂದ ತಿಂಡಿ ತಿನ್ನುತ್ತಾ.

“ಏನಾದ್ರು ಪ್ರೋಗ್ರಾಮ್ ಇದ್ರೆ ಅಲ್ವಾ ಗಡಿಬಿಡಿ ಇರೋಕೆ.ಶಿವರಾಮ್ ಅಂಕಲ್ ನಿನ್ ಹತ್ತಿರ ಮಾತಾಡಬೇಕಂದ್ರು ಅದ್ಕೆ ಸುಳ್ಳು ಹೇಳಿ ಕರೆಸಿಕೊಂಡ್ವಿ”ಎಂದಳು ಕುಸುಮ.

“ಏನಮ್ಮ ನೀನು. ಸುಮ್ನೆ ಏನೋ ಮಾತಾಡಬೇಕಿತ್ತು ಅಂತ ಹೇಳಿದ್ರೆ ಬರ್ತಿದ್ದೆ ಅದ್ಕೆ ಸುಳ್ಳು ಹೇಳಿ ಕರೆಸ್ಕೋ ಬೇಕಾ”ಎಂದ ಸ್ವಲ್ಪ ಅಸಮಾಧಾನದಿಂದ.

“ಅದ್ ಹಾಗಲ್ಲ ನಕುಲ್.ಏನೋ ಮಾತಾಡಬೇಕಿತ್ತು ಅಂದ್ರೆ ಫೋನ್ ಮಾಡೋಕ್ ಹೇಳ್ತಿದ್ದೆ ಹೊರತು ಮನೆವರೆಗೂ ಬರ್ತಿರ್ಲಿಲ್ಲ ಅದ್ಕೆ ಹಾಗ್ ಹೇಳಿದ್ವಿ ಅಷ್ಟೇ”ಎಂದು ಸಮಾಧಾನ ಮಾಡಲು ಪ್ರಯತ್ನಿಸಿದರು ಮೋಹನ್.

“ಅದು ಸರೀನೇ ಏನೋ ಮಾತಾಡಬೇಕಿತ್ತು ಅಂದ್ರೆ ಫೋನಲ್ಲಿ ಮಾತಾಡ್ತಿದ್ದೆ ಇಸ್ಟ್ ದೂರ ಏನ್ ಬರ್ತಿರ್ಲಿಲ್ಲ. ಅದ್ ಬಿಡಿ ಏನ್ ವಿಷ್ಯ ಮಾತಾಡಬೇಕಂತೆ”ಎಂದು ಕೇಳಿದ.

“ತನು ನಿನ್ನ ತುಂಬಾ ಇಷ್ಟ ಪಡ್ತಿದ್ದಾಳಂತೆ. ಮದ್ವೆ ಅಂತ ಆದ್ರೆ ನಿನ್ನೆ ಆಗ್ತಾಳಂತೆ.ಅದ್ಕೆ ಶಿವರಾಮ್ ಅಂಕಲ್ ನಿನ್ನೆ ಫೋನ್ ಮಾಡಿ ವಿಷಯ ಹೇಳಿ ತನುನ ನಿನ್ಗೆ ಕೊಟ್ಟು ಮದ್ವೆ ಮಾಡೋಣ್ವಾ ಎಂದು ಕೇಳಿದ್ರು.ಅದರ ಬಗ್ಗೆ ಮಾತಾಡೋಕೆ ಅಂತಾನೆ ನಾವು ಇಲ್ಲಿಗೆ ಬಂದಿದ್ದು. ನಿಂಗ್ ಅವ್ಳು ಇಷ್ಟ ಆದ್ರೆ ಒನ್ನೊಂದೆರಡು ವರ್ಷದಲ್ಲಿ ಇಬ್ಬರ ವಿದ್ಯಾಭ್ಯಾಸ ಮುಗಿದ್ಮೇಲೆ ನಿಶ್ಚಿತಾರ್ಥ ಮಾಡಿ ಆಮೇಲೆ ನಿನಗೆ ಕೆಲಸ ಸಿಕ್ಕಿ ಜೀವನದಲ್ಲಿ ಮುಂದೆ ಬಂದಾಗ ಮದುವೆ ಮಾಡೋಣ ಅಂತ ಅಂದ್ರು”ಎಂದರು ಕುಸುಮ.

ಮದುವೆ ಎಂದಾಕ್ಷಣ ಕೆರಳಿದ ನಕುಲ್”ಏನೂ ಮದ್ವೆನಾ ಅದು ಆ ತನು ಜೊತೆ.ಸಾಧ್ಯ ಇಲ್ಲ ಅಮ್ಮ.ನಾನ್ ಮೀರಾ ಅನ್ನೋ ಹುಡುಗೀನಾ ತುಂಬಾ ಇಷ್ಟ ಪಡ್ತಿದಿನಿ.ಮದ್ವೆ ಅಂತ ಆದ್ರೆ ಅವಳನ್ನೇ ಆಗೋದು”ಎಂದು ತನ್ನ ನಿರ್ಧಾರವನ್ನು ಮುಚ್ಚು ಮರೆಯಿಲ್ಲದೆ ಹೇಳಿದ.

“ನೀನ್ ಯಾವಾಗ್ಲೋ ಲವ್ ಮಾಡೋಕೆ ಶುರುಮಾಡಿದೆ.ನಮ್ಗೆ ಗೊತ್ತಿಲ್ಲದೇ…?”ಎಂದು ಕೇಳಿದರು ಮೋಹನ್ ಸಂದೇಹದಿಂದ.

“ನಾನ್ ಲವ್ ಮಾಡೋಕೆ ಶುರುಮಾಡಿ ತುಂಬಾ ದಿನ ಆಯ್ತು. ಆದ್ರೆ ಹೇಳಿರಲಿಲ್ಲ ಅಷ್ಟೇ.ಮೀರಾ ನನ್ನ ಒಪ್ಪಿದ ಮೇಲೆ ಹೇಳೋಣ ಅಂತ ಇದ್ದೆ .ಅವ್ಳ್ ನಿನ್ನೆ ಇನ್ನು ನನ್ನ ಪ್ರಪೋಸಲ್ ಒಪಿಕೊಂಡ್ಲು. ಇವತ್ತು ಹೇಗಿದ್ರೂ ನಿಮ್ಮನ್ನು ಭೇಟಿ ಮಾಡ್ತಿನಲ್ವ ಹೇಳೋಣ ಅನ್ಕೊಂಡೆ ಅಷ್ಟ್ರಲ್ಲಿ ನೀವ್ ತನುನ ಮದ್ವೆ ಆಗು ಅಂತಿದೀರಾ”

“ಅಯ್ಯೋ ಕೋತಿ ನೀನ್ ಲವ್ ಮಾಡೋ ವಿಷ್ಯ ನಮ್ಗೆ ಮೊದಲೇ ಗೊತ್ತಿದ್ರೆ ನಾವ್ ಯಾಕೆ ಇಲ್ಲಿಗೆ ಮದ್ವೆ ವಿಷ್ಯ ಮಾತಾಡೋಕೆ ಬರ್ತಿದ್ವಿ.ಈಗ ಅಂತದ್ದೇನಾಗಿಲ್ಲ ನಾವ್ ಆಗ್ಲೇ ಶಿವರಾಮ್ಗೆ ಹೇಳಿದ್ವಿ ಅವನಿಗೆ ಇಷ್ಟ ಆದ್ರೆ ಮಾತ್ರ ಮದ್ವೆ ಅಂತ.ಈಗ ಹೋಗಿ ಶಿವರಾಮ್ ಅಂಕಲ್ ಹತ್ರ ನನ್ಗೆ ಈ ಮದ್ವೆ ಇಷ್ಟ ಇಲ್ಲಾ ಅಂತ ಹೇಳಿಬಾ”ಎಂದರು ಕುಸುಮ

“ಸರಿ ಅಮ್ಮ ನಾನ್ ಈಗ್ಲೇ ಅಂಕಲ್ ಹತ್ರ ಮಾತಾಡಿ ಬರ್ತೀನಿ”ಎಂದು ಕೈ ತೊಳೆದು ಶಿವರಾಮ್ ಬಳಿ ಹೋಗಲು ಸಿದ್ದನಾದ.

ಇವರ ಸಂಭಾಷಣೆಯನ್ನು ಮೂಕವಿಸ್ಮಿತನಂತೆ ಕೂತು ತಿಂಡಿ ತಿನ್ನುತ್ತಿದ್ದ ಚಿರಂತನ ಕಡೆ ನೋಡಿದ ನಕುಲ್. ಅವನು ತಿಂಡಿ ತಿಂದು ಕೈ ತೊಳೆದ ಮೇಲೆ ಅವನ ಕೈಹಿಡಿದು ಕರೆದುಕೊಂಡು ಹೊರ ನಡೆದು”ಚಿರು ಈ ವಿಷ್ಯ ಮೀರಾಗೆ ಗೊತ್ತಾಗಬಾರದು. ಈ ಸಮಸ್ಯೆಯನ್ನು ಇವತ್ತೇ ಕೊನೆ ಮಾಡ್ತೀನಿ. ನೀನ್ ಇಲ್ಲೇ ಇರು ನಾನ್ ಹೋಗಿ ಅಂಕಲ್ ಹತ್ರ ಮಾತಾಡಿ ಬರ್ತೀನಿ.ಆಮೇಲೆ ಮಡಿಕೇರಿಗೆ ಹೋಗೋಣ”ಎಂದು ಚಿರಂತನನ್ನು ಅಲ್ಲೇ ಕೂರಿಸಿ ತಾನು ಶಿವರಾಮ್ ಹತ್ರ ಮಾತನಾಡಲು ಹೋದ.

ನಕುಲ್ ಬಂದಿದ್ದು ನೋಡಿದ ಶಿವರಾಮ್”ಹಾ ನಕುಲ್ ಬಾ ಬಾ ಚೆನ್ನಾಗಿದ್ದೀಯಾ”ಎಂದು ಆದರದಿಂದ ಸ್ವಾಗತಿಸಿ”ಏನಪ್ಪಾ ಟಿಫನ್ ಮಾಡಿದ್ಯಾ. ಪ್ರಯಾಣ ಎಲ್ಲಾ ಚೆನ್ನಾಗಾಯ್ತಾ”ಎಂದು ಕುಶಲೋಪರಿ ವಿಚಾರಿಸಿದ.

“ಹ್ಮ್ ಅಂಕಲ್ ಚೆನ್ನಾಗಾಯ್ತು.ಅದೇ ಮದ್ವೆ ವಿಷಯ ಮಾತಾಡೋಣ ಅಂತ ಬಂದೆ”ಎಂದು ಬಂದ ವಿಷಯವನ್ನು ನೇರವಾಗಿ ಹೇಳಿದ.

“ಹ್ಮ್ ಹೇಳು ನಕುಲ್ ನಿಂಗ್ ಈ ಮದ್ವೆ ಇಷ್ಟಾನೇ ತಾನೇ”

“ಇಲ್ಲ ಅಂಕಲ್ ನಂಗ್ ಈ ಮದ್ವೆ ಒಂಚೂರು ಇಷ್ಟ ಇಲ್ಲಾ. ಸುಮ್ನೆ ತನುಳನ್ನು ನನಗೆ ಕೊಟ್ಟು ಮದ್ವೆ ಮಾಡಿ ಅವಳ ಲೈಫ್ ಜೊತೆ ನನ್ನ ಲೈಫನ್ನು ಹಾಳ್ ಮಾಡ್ಬೇಡಿ”ಎಂದ ಮುಖಕ್ಕೊಡೆದಂತೆ.

“ಅಯ್ಯೋ ನಕುಲ್ ನಾವ್ ಈಗ ಕರ್ದಿದ್ದು ಮದುವೆ ವಿಷ್ಯ ಮಾತಾಡೋಕಷ್ಟೆ, ಮದುವೆ ಮಾಡೋಕಲ್ಲ ಅಲ್ವಾ.ಇನ್ನು ನಿನ್ಗೆ ಯೋಚ್ನೆ ಮಾಡಿ ನಿಧಾನಕ್ಕೆ ನಿರ್ಧಾರ ತಗೆದುಕೊಳ್ಳುವಷ್ಟು  ಟೈಂ ಇದೆ ಚೆನ್ನಾಗಿ ಯೋಚ್ನೆ ಮಾಡಿ ನಿರ್ಧಾರ ತಗೋ”ಎಂದ ಶಿವರಾಮ್

“ಅಂಕಲ್ ಎಷ್ಟೇ ವರ್ಷ ಟೈಂ ಕೊಟ್ರು ನಾನ್ ತನುನ ಮದ್ವೆ ಆಗೋಕ್ ರೆಡಿ ಇಲ್ಲಾ ಯಾಕಂದ್ರೆ ನಾನು ಮೀರಾ ಅನ್ನೋ ಹುಡುಗೀನಾ ಲವ್ ಮಾಡ್ತಿದ್ದೀನಿ.ನಾನ್ ಅವಳನ್ನೇ ಮದ್ವೆ ಆಗೋದು.ತನುಗೆ ಹೇಳಿ ನನ್ನ ಮದುವೆಯಾಗೋ ಆಸೆನಾ ಇವತ್ತೇ ತಲೆಯಿಂದ ತೆಗೆದು ಹಾಕೋಕೆ “ಎಂದ ಮುಚ್ಚುಮರೆಯಿಲ್ಲದೆ.

“ಓಹೋ ಹೌದಾ ಸರಿ ನಕುಲ್.ನಿನ್ನಿನ್ನು ಹೋಗು”ಎಂದ ಎದೆಯಲ್ಲಿ ಉಕ್ಕಿ ಬರುತ್ತಿದ್ದ ಕೋಪ ತಡೆದು.

ಸರಿ ಎಂಬಂತೆ ತಲೆಯಾಡಿಸಿದ ನಕುಲ್ ಅಲ್ಲಿಂದ ಹೊರನಡೆದ.

ಚಿರು ಬಳಿ ಬಂದ ನಕುಲ್ “ಚಿರು ಇಲ್ಲೇ ಇರು ಬಂದ ಕೆಲಸ ಎಲ್ಲಾ ಮುಗಿತು. ಮಡಿಕೇರಿಗೆ ಹೋಗುವ ವಿಚಾರವನ್ನು ಅಪ್ಪ ಅಮ್ಮನಿಗೆ ಹೇಳಿ ಬರ್ತೀನಿ”ಎಂದು ತಂದೆ ತಾಯಿಯ ಬಳಿಗೆ ಹೋದ. ಚಿರಂತ್ ಅಲ್ಲೇ ಶಿವರಾಮ್ ಮತ್ತು ಅವನ ತಮ್ಮ ಮಾತನಾಡುತಿದ್ದಿದ್ದನ್ನು ಕೇಳುತ್ತಾ ನಿಂತ.

ಮಗಳು ಚಿಕ್ಕಂದಿನಿಂದ ಕೇಳಿದ್ದನ್ನೆಲ್ಲಾ ಕೊಟ್ಟು ಅಭ್ಯಾಸವಾಗಿದ್ದ ಶಿವರಾಮ್ಗೆ ಅವಳ ಮದುವೆಯೊಂದು ನುಂಗಲಾಗದ ತುತ್ತಾಗಿತ್ತು. ಮೀರಾಳನ್ನು ನೆನೆದು ಕುಪಿತಗೊಂಡ.ಎದೆಯೊಳಗೆ ಜ್ವಾಲಾಮುಖಿಯಂತೆ ಕುದಿಯುತಿದ್ದರೂ ತಾಳ್ಮೆಯಿಂದ ಇದಕ್ಕೆಲ್ಲಾ ಉತ್ತರ ಹುಡುಕಬೇಕೆಂದು ನಿರ್ಧರಿಸಿದ್ದ.

ಶಿವರಾಮ್ ಬದಿಯಲ್ಲೇ ನಿಂತು ನಕುಲನ ಮಾತುಗಳನ್ನು ಕೇಳಿದ್ದ ಅವನ ತಮ್ಮ ಜಯರಾಮ್”ಅಣ್ಣ ನೀನ್ ಹು ಅನ್ನು ಆ ಮೀರಾ ಭೂಮಿ ಮೇಲೆ ಅಷ್ಟೇ ಅಲ್ಲ. ನಕುಲ್ನ ತಲೆಯೊಳಗೂ ಅವ್ಳ್ ನೆನಪು ಇಲ್ಲದ ಹಾಗೇ ಮಾಡಿ ಬಿಡ್ತೀನಿ”ಎಂದ ಆವೇಶದಿಂದ.

“ಬರಿ ಆವೇಶದಿಂದ ಏನೂ ಆಗಲ್ಲ ಜಯರಾಮ.ಯಾವ್ ಕೆಲಸನಾದ್ರೂ ಸಮಾಧಾನದಿಂದ ಮಾಡಿದಾಗ್ಲೇ ಅದಕ್ಕೆ ಸರಿಯಾದ ಪ್ರತಿಫಲ ಸಿಗೋದು.ಇನ್ನು ಟೈಂ ಇದೆ ಆಮೇಲೆ ನೋಡೋಣ ಏನ್ ಮಾಡ್ಬೇಕು ಅಂತ. ಈಗ ಸದ್ಯಕ್ಕೆ ಸುಮ್ಮನಿರು”ಎಂದ ತಮ್ಮನ ಭುಜದ ಮೇಲೆ ಕೈ ಹಾಕುತ್ತಾ…

ಇವರ ಸಂಭಾಷಣೆಯನ್ನು ಹೊರಗೆ ನಿಂತು ಕೇಳುತ್ತಿದ್ದ ಚಿರು ಒಮ್ಮೆಲೇ ಒಳನುಗ್ಗಿ”ಸರ್ ನಮಸ್ಕಾರ”ಎಂದ ವಿನಯತೆಯಿಂದ.

ಮೊದಲೇ ಕೆಂಡವಾಗಿದ್ದ ಜಯರಾಮ್”ಯಾರೋ ನೀನು, ಯಾಕ್ ಬಂದೆ”ಎಂದ ಕೋಪದಿಂದ.

“ಸರ್ ನಾನು ಚಿರಂತ್ ಅಂತ. ನಕುಲ್ ಫ್ರೆಂಡ್.ಅದಕ್ಕಿಂತ ಜಾಸ್ತಿ ಮೀರಾಳ ಫ್ರೆಂಡ್.ನೀವ್ ಇಷ್ಟೋತ್ತು ಮಾತಾಡ್ತಿದ್ದಿದ್ದನ್ನು ಹೊರಗ್ ನಿಂತು ಕೇಳಿಸ್ಕೊತಿದ್ದೆ.ಸರ್ ಆಗ್ಲೇ ನೀವ್ ಹೇಳ್ತಿದ್ರಿ ಮೀರಾಳನ್ನು ಭೂಮಿ ಮೇಲೆ ಇಲ್ಲದೆ ಇರೋ ತರ ಮಾಡ್ತೀನಿ, ನಕುಲನಿಗೆ ಅವ್ಳ್ ನೆನಪು ಬರದೇ ಇರೋ ತರ ಮಾಡ್ತೀನಿ ಅಂತ. ಸರ್ ನಾನು ನಮಪ್ಪ ಚಿಕ್ಕಂದಿನಿಂದಲೂ ಅವಳನ್ನೂ ಕಣ್ಣಿಗೆ ರೆಪ್ಪೆತರ ಕಾಪಾಡಿದಿವಿ.ಈಗ ನಿಮ್ಮಂತೋರು ಯಾವನೋ ಒಬ್ಬ ಬಂದು ಅವಳನ್ನು ಕೊಂದ್ ಬಿಡ್ತೀನಿ ಅಂದ್ರೆ ನಾನ್ ಹೇಗ್ ತಾನೇ ಸುಮ್ಮನಿರ್ತೀನಿ ನೀವೇ ಹೇಳಿ.ಸರ್ ನಾನ್ ಬದುಕಿರೋವರೆಗೂ ನೀವ್ ಅನ್ಕೊಂಡಿರೋದು ಯಾವ್ದು ಆಗಲ್ಲ ಯಾಕಂದ್ರೆ ಅವ್ಳ್ನ ಕಾಯೋಕೆ ಒಬ್ಬ ಫ್ರೆಂಡ್ ನಾನಿದ್ದೀನಿ”ಎಂದು ಶಿವರಾಮ್ ಉತ್ತರಕ್ಕೂ ಕಾಯದೆ ಅಲ್ಲಿಂದ ಹೊರ ಬಂದ.

ಅವನ ಮಾತುಗಳಿಂದ ಕೆಂಡಾಮಂಡಲವಾದ ಜಯರಾಮ ಅವನನ್ನು ಹೊಡೆಯಲು ಮುಂದಾದಾಗ ಶಿವರಾಮ್ ಅವನನ್ನು ತಡೆದ.

ತಾನು ಮರಳಿ ಮಡಿಕೇರಿಗೆ ಹೋಗುವ ವಿಚಾರವನ್ನು ಕುಸುಮ, ಮೋಹನ್ಗೆ ಹೇಳಿದ ನಕುಲ್. ಅದರ ಜೊತೆಗೆ ಟ್ರಿಪ್ಪಿಗೆ ಹೋಗುವುದನ್ನು ಹೇಳಿ ಆಶೀರ್ವಾದ ಪಡೆದು ಬಂದ.

ಶಿವರಾಮ್ ರೂಮಿನಿಂದ ಹೊರ ಬಂದ ಚಿರಂತನನ್ನು ಕಂಡ ನಕುಲ್”ನೀನ್ ಏನುಕ್ಕೋ ಅಲ್ಲಿಗೆ ಹೋಗಿದ್ದೆ”ಎಂದು ಕೇಳಿದ ಕೊಂಚ ಭಯದಿಂದ.

“ಏನೂ ಇಲ್ಲಾ. ಫಸ್ಟ್ ಟೈಂ ಅವರ ಮನೆಗೆ ಬಂದಿದ್ನಲ್ವಾ ಮಾತನಾಡಿಸದೆ ಹೋದರೆ ಚೆನ್ನಾಗಿರಲ್ಲ ಅಂತ ಮಾತಾಡ್ಸೋಕೆ ಹೋಗಿದ್ದೆ ಅಷ್ಟೇ”

ಅವನ ಉತ್ತರದಿಂದ ಸಮಾಧಾನಗೊಂಡ ನಕುಲ್”ಸರಿ ಚಿರು ನಾವ್ ಹೊರಡೋಣ”ಎಂದ.

“ಹ್ಮ್ ಸರಿ ನಕುಲ್”ಎಂದು ಕಾರ್ ಡ್ರೈವ್ ಮಾಡಲು ಕುಳಿತ ಚಿರಂತ್.ಅವನ ಪಕ್ಕದಲ್ಲೇ ಕೂತ ನಕುಲ್”ಸರಿ ನಡಿ”ಎಂದ.ಕಾರು ಮಡಿಕೇರಿ ಕಡೆಗೆ ಸಾಗಿತು.

ಸ್ನೇಹ ಚಿರಾಯು -11 ಮುಂದುವರೆಯುವುದು…..

ಈ ಸ್ನೇಹ ಚಿರಾಯು-11 ನೀವು ಇಂಗ್ಲಿಷ್ ಭಾಷೆಯಲ್ಲಿಯೂ ಓದಬಹುದು.

ನಮ್ಮ ವೆಬ್ಬೆಟ್ ನ ಇತರ ಪೋಸ್ಟ್ ಗಳನ್ನು ಇಲ್ಲಿ ಓದಬಹುದು.

ಸ್ನೇಹ ಚಿರಾಯು -11

Comments

No comments yet. Why don’t you start the discussion?

Leave a Reply

Your email address will not be published. Required fields are marked *