ಸ್ನೇಹ ಚಿರಾಯು -10

ಸ್ನೇಹ ಚಿರಾಯು -10

ಸ್ನೇಹ ಚಿರಾಯು -10-ಮಾನ್ಯ ಮೀರಾಳನ್ನು ಹುಡುಕುತ್ತಾ ನಿಧಿಯ ಬಳಿ ಹೋದಳು. ಅಲ್ಲಿ ಮೀರಾ ಇಲ್ಲದೆ ಇರುವುದು ಕಂಡು ನಿರಾಶಳಾದಳು.

ಮಾನ್ಯ ಬಂದಿದ್ದು ನೋಡಿದ ನಿಧಿ”ಬನ್ನಿ ಮೇಡಂ ಇದೇನು ಇಸ್ಟ್ ಬೇಗ ಬಂದಿದಿರಾ, ಪ್ರಯಾಣ ಎಲ್ಲಾ ಚೆನ್ನಾಗಾಯ್ತಾ”ಎಂದಳು ವ್ಯಂಗ್ಯವಾಗಿ.

ಅವಳ ಪ್ರಶ್ನೆಗೆ ಉತ್ತರಿಸಲು ಇಚ್ಛಿಸದ ಮಾನ್ಯ”ನಿಧಿ ಮೀರಾ ಎಲ್ಲಿ”ಎಂದು ಕೇಳಿದಳು.

“ಇದೇನೇ ನಾನ್ ಕೇಳ್ತಿರೋದೇ ಒಂದು ನಿನ್ ಹೇಳ್ತಿರೋದೇ ಒಂದು. ಅಷ್ಟಕ್ಕೂ ಮೀರಾ ನಿನ್  ಜೊತೇಲಿ ಇರದೇ ನನ್ ಜೊತೆ ಯಾಕಿರುತ್ತಾಳೆ. ನೀವಿಬ್ರು ಜೊತೆಗೆ ಬಂದಿಲ್ವಾ”ಎಂದಳು ಆಶ್ಚರ್ಯದಿಂದ.

“ನಾವ್ ಆಗ್ಲೇ ಒಂದು ಅರ್ಧಗಂಟೆ ಆಯ್ತು. ನಕುಲ್ ನನ್ ಹತ್ರ ಏನೋ ಮಾತಾಡ್ಬೇಕು ಅಂತ ಮೀರಾಳಿಗೆ ನಿನ್ ಹತ್ರ ಹೋಗು ಅಂತ ಹೇಳಿ ನನ್ನ ಕರ್ಕೊಂಡು ಹೋದ”

“ಓಹೋ ಇದಾ ವಿಷ್ಯ.ನಿನ್ನ ನಕುಲ್ ಕರ್ಕೊಂಡು ಹೋದ ಅಂತ ಅಲ್ಲೇ ಎಲ್ಲೋ ಸಿಟ್ಟಾಗಿ ನಿಂತ್ಕೊಂಡಿರ್ತಾಳೆ ಹೋಗಿ ಕರ್ಕೊಂಡ್ ಬಾ ಹೋಗು”ಎಂದಳು.

“ಹ್ಮ್ ಸರಿ ಮಾನ್ಯ”ಎಂದು ಮೀರಾಳನ್ನು ಹುಡುಕುತ್ತಾ ಹೊರಟಳು ಮಾನ್ಯ.

ಸುತ್ತಮುತ್ತ ಎಲ್ಲಾ ಕಡೆ ಮೀರಾಳನ್ನು ಹುಡುಕಿದರೂ ಸಿಗದೇ ಇದ್ದಾಗ ತಾರಸಿಯ ಮೇಲೆ ಹೋದಾಗ ಮೀರಾಳ ದರ್ಶನವಾಯ್ತು.

ಆ ಕಡೆ ಬೆನ್ನು ಮಾಡಿ ಮೌನಿಯಾಗಿ ನಿಂತಿದ್ದ ಮೀರಾಳನ್ನು ಕಂಡ ಮಾನ್ಯ”ಎಲ್ಲೆಲ್ಲಿ ಹುಡುಕಬೇಕೆ ನಿನ್ನ.ಆಗ್ಲಿಂದ ಎಷ್ಟು ಹುಡುಕಿದಿನಿ ಗೊತ್ತಾ.ನಕುಲ್ ನಿಧಿ ಹತ್ರ ಹೋಗು ಅಂತ ತಾನೇ ಹೇಳಿದ್ದು”ಎಂದು ಮಾನ್ಯ ಎಷ್ಟೇ ಮಾತನಾಡಿದರು ಮೌನಿಯಾಗಿದ್ದ ಮೀರಾಳ ಕಂಡು”ಏನಾದ್ರು ಮಾತಾಡೇ”ಎಂದು ಅವಳ ಭುಜದ ಮೇಲೆ ಕೈ ಹಾಕಿದಳು.

“ಏನಿದೆ ಮಾತಾಡೋಕೆ”ಎಂದು ಬೇಜಾರಿಂದ ಭುಜದ ಮೇಲಿದ್ದ ಅವಳ ಕೈ ಸರಿಸಿದಳು.

ಅವಳ ಬೇಜಾರಿಗೆ ಕಾರಣ ಅರಿತ ಮಾನ್ಯ”ಗೊತ್ತಾಯ್ತು ನಿನ್ ಮುಖ ಊದಿಸಿಕೊಂಡು ಇಲ್ಲಿ ಯಾಕೆ ನಿಂತಿದ್ದೀಯಾ ಅಂತ. ನಿನ್ ಕಷ್ಟ ನಂಗೂ ಚೆನ್ನಾಗಿ ಅರ್ಥ ಆಗುತ್ತೆ ಮೀರಾ”

“ನನ್ ಕಷ್ಟ ಅಂತ ಏನು ಅಂತ ಅರ್ಥ ಮಾಡಿಕೊಂಡ್ಮೇಲೂ ನಿನ್ ಹೀಗ್ ಮಾಡಿದ್ರೆ ನಾನ್ ಏನ್ ಮಾಡ್ಲಿ ಹೇಳು.ಅವ್ನು ನಿನ್ ಜೊತೆ ಮಾತಾಡ್ತಾನೆ ಅಂತ ಬೇಜಾರಿಲ್ಲ. ಆದ್ರೆ ನಾನ್ ಮಾನ್ಯ ಜೊತೆ ಮಾತಾಡ್ಬೇಕು ನಿನ್ ನಿಧಿ ಹತ್ರ ಹೋಗು ಅಂದ್ರೆ ಬೇಜಾರಾಗಲ್ವ”

“ಇದೊಂದ್ ಸಲ ಅದ್ನ ಹೊಟ್ಟೆಗೆ ಹಾಕೋ. ಇನ್ಮುಂದೆ ಆ ರೀತಿ ತಪ್ಪಾಗಲ್ಲ”ಎಂದಳು ಮಾನ್ಯ.

“ಇದೊಂದ್ ಸಲ ಅಂದ್ರೆ. ಏನ್ ಮತ್ತೆ ಅವ್ನು ನಿನ್ನ ಮಾತಾನಾಡಿಸೋಲ್ವಾ ಅಥವಾ ನೀನೇ ಅವ್ನ ಮಾತನಾಡಿಸೋಲ್ವಾ”ಎಂದಳು.

“ಏನೇ ಮೀರಾ ನೀನು ಅವ್ನ್ ನಿನ್ ಲವ್ ಪ್ರಪೋಸಲ್ ಒಪ್ಕೋತಾನೋ ಇಲ್ವೋ ಗೊತ್ತಿಲ್ಲಾ. ಆಗ್ಲೇ ನೀನು ಇಷ್ಟೊಂದ್ ಪೊಸೆಸಿವ್ ಆಗ್ತಿದೀಯಾ. ಇನ್ನು ಒಪ್ಪಿಕೊಂಡ ಮೇಲೆ ಅವನ ಮುಖನೂ ನೋಡೋಕ್ ಬಿಡಲ್ಲ ಅನ್ಸುತ್ತೆ”ಎಂದಳು ಮಾನ್ಯ ವ್ಯಂಗ್ಯವಾಗಿ.

“ಹಾಗೇನಿಲ್ಲ.ಈ ಪೊಸೆಸಿವ್ ಅನ್ನೋದು ಅವ್ನು ನನ್ನೋನು ಅಂತ ಪಕ್ಕಾ ಆಗೋವರೆಗೂ ಮಾತ್ರ. ಪಕ್ಕಾ ಆದ್ಮೇಲೆ ನಿಮ್ ಜೊತೆ ಫ್ರೆಂಡ್ಲಿಯಾಗಿದ್ರು ನಾನ್ ಏನು ಅನ್ಕೊಳಲ್ಲ”

“ಅಂದ್ರೆ ಅವ್ನ್ ನಿಂಗ್ ಸಿಗ್ತಾನೋ ಇಲ್ವಾ ಅನ್ನೋ ದೌಟ್ ಮೇಲೆ ಈ ತರ ಫೀಲ್ ಆಗ್ತಿದೀಯಾ”

“ಹ್ಮ್ ಮಾನ್ಯ”

“ಹಾಗಿದ್ರೆ ಈ ಪ್ರಾಬ್ಲಮ್ಗೆ ಇನ್ನೊಂದು ಸ್ವಲ್ಪತ್ತಲ್ಲಿ ಉತ್ತರ ಸಿಗುತ್ತೆ”

“ಅಂದ್ರೆ”

“ಅಂದ್ರೆ….ss ಏನಿಲ್ಲ. ಮೀರಾ ನಿಂಗೊಂದ್ ಗುಡ್ ನ್ಯೂಸ್ ಹೇಳ್ಳಾ”ಎಂದಳು ತುಟಿಯಲ್ಲಿ ಮಂದಹಾಸ ಬೀರುತ್ತಾ.

“ಗುಡ್ ನ್ಯೂಸಾ,ಏನದು”

“ನಕುಲ್ ನಿನ್ನ ಕರೀತಿದಾನೆ. ಏನೋ ಮಾತನಾಡಬೇಕಿತ್ತಂತೆ”

“ಹಾ ನಕುಲ್ ನನ್ನ ಕರೀತಿದಾನ ಅದು ಏನೋ ಮಾತಾಡೋಕೆ”ಎಂದು ಕೇಳಿದಳು ಆಶ್ವರ್ಯದಿಂದ.

“ಹ್ಮ್ ಮೀರಾ ನಿಜ ಕರೀತಿದಾನೆ.ನಿನ್ ನಕುಲ್ ಹತ್ರ ಹೋಗು ನಾನು ನಿಧಿಯನ್ನು ರೆಡಿಮಾಡಿ ಕರ್ಕೊಂಡ್ ಬರ್ತೀನಿ”

“ಹ್ಮ್ ಸರಿ ಮಾನ್ಯ”ಎನ್ನುತ್ತಾ ಮೀರಾ ನಕುಲ್ ಬಳಿ ಓಡಿದಳು.

ನಕುಲ್ ಬಳಿ ಬಂದ ಮೀರಾ”ನಕುಲ್, ನನ್ನತ್ರ ಏನೋ ಮಾತಾಡಬೇಕಿತ್ತಂತೆ ಮಾನ್ಯ ಹೇಳಿದ್ಲು”

ಮೀರಾಳ ಆಗಮನವನ್ನೇ ಕಾದು ಕೂತಿದ್ದ ನಕುಲ್ ಅವಳು ಬಂದೊಡನೆ ಭಯವಾಗಿ ಮಾತೆ ಹೊರಡಲಿಲ್ಲ.ಏನಾದರು ಉತ್ತರ ಕೊಡಲೇ ಬೇಕಲ್ಲ ಎಂದುಕೊಂಡು”ಇಲ್ಲ ಮೀರಾ ನಂಗೊತ್ತಿಲ್ಲ.ನಾನೇನು ನಿನ್ನ ಕರೆದಿಲ್ಲ”ಎಂದ ತಡವರಿಸುತ್ತಾ.

ನಕುಲ್ ನನ್ನತ್ರ ಏನೋ ಮಾತಾಡ್ತಾನೆ ಅಂತ ಖುಷಿಯಿಂದ ಬಂದವಳಿಗೆ ನಿರಾಸೆ ಆಯಿತು. “ಹೌದಾ ನಿಜಾನಾ.ನಿಜ್ವಾಗ್ಲೂ ನನ್ನ ಕರೆದಿಲ್ವಾ”ಎಂದಳು ಮುಖ ಸಣ್ಣ ಮಾಡುತ್ತಾ.

“ನಿಜ ಇಲ್ಲ ಮೀರಾ ನಾನ್ ಕರ್ದಿಲ್ಲ”ಎಂದ ಮತ್ತೂ ತಡವರಿಸುತ್ತಾ.

ಅವನ ತೊದಲುತಿದ್ದ ಮಾತಿನಿಂತ ಅನುಮಾನ ಬಂದ ಮೀರಾಳಿಗೆ “ನಕುಲ್ ಏನಾದ್ರು ಹೇಳೋದಿದ್ರೆ ಹೇಳು. ಅದ್ಯಾಕೆ ಮಾತು ಮಾತಿಗೂ ತಡವರಿಸ್ತಾ ಇದಿಯಾ”

ಇನ್ನು ಮುಚ್ಚಿಟ್ಟು ಯಾವುದೇ ಉಪಯೋಗವಿಲ್ಲ ಎಂದು ಅರಿತ ನಕುಲ್. ಏನಾದರು ಆಗ್ಲಿ ಅವಳನ್ನು ಪ್ರೀತ್ಸೋ ವಿಚಾರ ಮೀರಾಳಗೆ ಹೇಳಬೇಕೆಂದು ನಿರ್ಧರಿಸಿ”ಹ್ಮ್ ಮೀರಾ ಹೇಳ್ಬೇಕು.ಒಂದ್ ನಿಮಿಷ ಮೀರಾ”ಎಂದು ಓಡಿ ಹೋಗಿ ಒಂದು ಹೂಗುಚ್ಛ ತಂದು ಕೈಯಲ್ಲಿಡಿದು ಮಂಡಿಯೂರಿ ಕುಳಿತು..

ದಿನಾ ನಿನ್ನ ಕಣ್ಣಾರೆ ನೋಡ್ತಿನೋ ಇಲ್ವೋ ಗೊತ್ತಿಲ್ಲಾ, ಆದ್ರೆ ನನ್ನ ಕನಸಲ್ಲಿ ಮಾತ್ರ ನಿನ್ನ ಪ್ರತಿದಿನ ನೋಡ್ತೀನಿ. ನನ್ ಕನಸಲ್ಲಿ ಬರೋಕೆ ಅವಳಿಗೆ ಏನ್ ಅಧಿಕಾರ ಇದೆ ಅಂತ ನನ್ನೇ ನಾನು ಕೇಳಿಕೊಂಡಾಗ ಗೊತ್ತಾಯ್ತು. ಆ ನಿದ್ದೇಲಿರೋ ನನ್ಗೆ, ಕನಸಲ್ಲಿರೋ ನೀನಂದ್ರೆ ಇಷ್ಟ ಅಂತ. ಲವ್ ಯು ಮೀರಾ. ನಿನ್ ಇಲ್ಲ ಅಂದ್ರೆ ನಂಗೆ ಇರೋಕಾಗಲ್ಲ ಅಂತ ಗೊತ್ತಾದಮೇಲೆನೆ ನಿನ್ನ ಪ್ರೀತ್ಸೋ ವಿಚಾರ ಹೇಳ್ತಿದೀನಿ. ನಿನ್ನ ನಿರ್ಧಾರ ಈಗ್ಲೇ ಹೇಳಬೇಕು ಅಂತ ಏನು ಇಲ್ಲ. ಟೈಂ ತಗೊಂಡು ನಿಧಾನವಾಗಿ ಹೇಳು”ಎಂದು ತನ್ನ ಪ್ರೇಮನಿವೇದನೆಯನ್ನು ತಿಳಿಸಿದ.

ಅವನ ಪ್ರೇಮನಿವೇದನೆಯನ್ನು ಕೇಳಿದ ಮೀರಾಳಿಗೆ ತನ್ನ ಮನಸ್ಸೆಂಬ ಗೂಡಿನಲ್ಲಿ ಬಂಧಿಯಾಗಿದ್ದ ಪ್ರೀತಿಯ ಹಕ್ಕಿಗೆ ಬಿಡುಗಡೆ ದೊರಕಿ ಸ್ವಚ್ಛಂದವಾಗಿ ಬಾನಿಗೆ ಹಾರಿದಂತೆ, ಅವನ ಪ್ರೀತಿಗಾಗಿ ಶಬರಿಯಂತೆ ಕಾದಿದ್ದವಳಿಗೆ ರಾಮನ ದರ್ಶನವಾದಂತೆ,ಜಗತ್ತಿನಲ್ಲಿರುವ ಎಲ್ಲಾ ಸಂತೋಷ ತನ್ನೆಡೆಗೆ ಬಂದು ಮುತ್ತಿಕೊಂಡಂತೆ ಭಾಸವಾಯಿತು.

ನಕುಲನ ಪ್ರೇಮನಿವೇದನೆಯನ್ನು ಕೇಳಿದ ನಂತರ ಅರೆಕ್ಷಣನೂ ಯೋಚಿಸದೆ ಅವನನ್ನು ಎಬ್ಬಿಸಿ”ನಿನ್ನ ಒಪ್ಕೋಳ್ಳೋಕೆ ನಂಗ್ ಟೈಂ ಯಾಕೋ ಬೇಕು.ಲವ್ ಯು ಲಾಟ್ ಕಣೋ”ಎಂದು ಜೋರಾಗಿ ತಬ್ಬಿಡಿದು “ನಿಂಗ್ ನನ್ಮೇಲೆ ಯಾವಾಗ ಲವ್ವಾಗಿತ್ತೋ ಗೊತ್ತಿಲ್ಲ, ಆದ್ರೆ ನನ್ಗೆ ನಿನ್ನ ಫಸ್ಟ್ ಟೈಂ ನೋಡಿದಾಗಲೇ ಲವ್ವಾಗಿತ್ತು. ಆದ್ರೆ ನಿನ್ನತ್ರ ಹೇಳೋಕೆ ಭಯ ಆಗಿತ್ತು ಅಷ್ಟೇ”ಎಂದಳು. ಅವಳ ಸಂತೋಷಕ್ಕೆ ಒಂದೆರಡು ಕಣ್ಣಾಲಿಗಳಿಗೆ ಕಣ್ಣುಗಳು ಸ್ವಾಗತ ಬಯಸಿದ್ದವು.

ಮೀರಾಳ ಉತ್ತರದಿಂದ ಹರ್ಷಗೊಂಡ ನಕುಲ್”ಥ್ಯಾಂಕ್ಸ್ ಮೀರಾ. ದಿಸ್ ಇಸ್ ಮೈ ಮೋಸ್ಟ್ ಮೆಮೊರೇಬಲ್ ಮೂಮೆಂಟ್ ಇನ್ ಮೈ ಲೈಫ್”ಎಂದು ಇನ್ನು ಗಟ್ಟಿಯಾಗಿ ತಬ್ಬಿಡಿದ.

ಇವರ ಪ್ರೇಮನಿವೇದನೆಯ ದೃಶ್ಯವನ್ನು ಕಣ್ಣಾರೆ ಕಾಣುತ್ತಿದ್ದ ಮಾನ್ಯ,ನಿಧಿ,ಪ್ರಣವ್ ಜೋರಾಗಿ ಚಪ್ಪಾಳೆ ಹೊಡೆದರು.ಮೀರಾ ನಾಚಿ ನೀರಾದಳು.

“ನೀವ್ ಯಾವಾಗ್ರೊ ಬಂದ್ರಿ”ಎಂದ ನಕುಲ್ ಸಂಕೋಚದಿಂದ.

“ನಿಮ್ಮ ಪ್ರೇಮನಿವೇದನೆಯ ದೃಶ್ಯಕಾವ್ಯ ಶುರುವಾದಾಗಲೇ ಬಂದಿದ್ವಿ”ಎಂದು ಪ್ರಣವ್ ರೇಗಿಸಿದನು.

“ಮುಗಿತು ಕಣ್ರೊ ಫ್ರೆಂಡ್ಸ್ ಆಗಿದ್ದೋರು ಈಗ ಲವರ್ಸ್ ಆದ್ರು ಇನ್ಮೇಲೆ ನಮ್ಮ ನೆನಪು ಬರಲ್ಲ ಅನ್ಸುತ್ತೆ”ಎಂದಳು ಮಾನ್ಯ ಮೀರಾಳ ಮುಖ ನೋಡುತ್ತಾ…

“ಇಷ್ಟೇನಾ ಮಾನ್ಯ ನಮ್ಮನ್ನು ನೀನು ಅರ್ಥ ಮಾಡಿಕೊಂಡಿರೋದು, ಮೊದ್ಲು ನಾವ್ ನಿಮ್ ಫ್ರೆಂಡ್ಸ್ ಆಮೇಲೆ ನಾವಿಬ್ರು ಲವರ್ಸ್”ಎಂದು ಸಮರ್ಥನೆ ಮಾಡಿಕೊಂಡಳು ಮೀರಾ.

“ಗೊತ್ತು ಗೊತ್ತು..ನಮ್ ಜೊತೆ ಇದ್ದಾಗ ನಿಮ್ಮನ್ನು ಲವರ್ಸ್ ಆಗಿರೋಕೆ ಬಿಟ್ರೆ ಅಲ್ವಾ”ಎಂದಳು ನಿಧಿ ನಗುತ್ತಾ. ಅವಳ ನಗುವಿಗೆ ಎಲ್ಲರೂ ಜೊತೆಯಾದರು.

ಅಷ್ಟರಲ್ಲಿ ಅಲ್ಲಿಗೆ ಬಂದ ತುಳಸಿ”ಪುಟ್ಟ,ಟೈಂ ಆಯ್ತು ಕೇಕ್ ಕಟ್ ಮಾಡು ಬಾ”ಎಂದರು.

“ಹ್ಮ್ ಸರಿ ಅಮ್ಮ. ನೀವ್ ಹೋಗಿರಿ ನಾವ್ ಬರ್ತೀವಿ”ಎಂದು ತುಳಸಿಯನ್ನು ಕಳುಹಿಸಿದಳು.

ನಿಧಿ ಖುಷಿಯಿಂದ ಎಲ್ಲರ ಸಮ್ಮುಖದಲ್ಲಿ ಕೇಕ್ ಕಟ್ ಮಾಡಿದಳು.ಪಾರ್ಟಿ ಶುರುವಾಯಿತು.ಪಾರ್ಟಿಯಲ್ಲಿ ಪೇರ್ ಡಾನ್ಸ್ ಮಾಡುತ್ತಿದ್ದ ನಕುಲ್,ಮೀರಾಳನ್ನು ಆಡಿಕೊಳ್ಳುತ್ತಿದ್ದರು.ಮೀರಾಳಿಗೆ ತನ್ನ ಪ್ರೀತಿ ತನಗೆ ಸಿಕ್ಕಿದೆ ಎಂದು ತುಂಬಾ ಖುಷಿಯಲ್ಲಿದ್ದಳು.ಚಿರಂತ್ ಅವಳ ಖುಷಿಯನ್ನು ಕಂಡು ತನಗರಿವಿಲ್ಲದೆ ಪಾರ್ಟಿಯಲ್ಲಿ ಎಲ್ಲರೊಡನೆ ಕುಣಿದು ಕುಪ್ಪಳಿಸಿದನು.ಪಾರ್ಟಿ ಮುಗಿದ ನಂತರ ಎಲ್ಲರೂ ಊಟಕ್ಕೆ ತೆರಳಿದರು.ಆದ್ರೆ ನಕುಲ್ ಮಾತ್ರ ತನ್ನ ತಂದೆ ಕಾಲ್ ಮಾಡಿದ್ದಾರೆಂದು ಮಾತನಾಡಲು ಹೋಗಿದ್ದ.

ಎಲ್ಲರಂತೆ ಊಟಕ್ಕೆ ಹೋಗುತಿದ್ದ ಚಿರಂತ್ ಕೈ ಹಿಡಿದ ನಿಧಿ ಅವನನ್ನು ಸ್ವಲ್ಪ ಬದಿಗೆ ಕರೆದುಕೊಂಡು ಬಂದು”ಲೋ ಚಿರು ಎಲ್ಲೋ ನನ್ ಗಿಫ್ಟ್ ಸಂಜೆ ಕೊಡ್ತೀನಿ ಅಂದೇ”ಎಂದಳು ಕೈ ಕಟ್ಟುತ್ತಾ.

“ಅದು ನಿಧಿ… ಗಿಫ್ಟ್”ಎಂದ ತೊದಲುತ್ತಾ ತಲೆ ತಗ್ಗಿಸಿದ.

“ಏನೋ ತಂದಿಲ್ವ ಹೋಗ್ಲಿ ಬಿಡು ಬೇಜಾರಾಗ್ಬೇಡ”ಎಂದಳು ಅವನ ತಲೆ ಮೇಲೆತ್ತುತ್ತಾ.

“ತಂದಿದೀನಿ ಆದ್ರೆ ನಿನ್ ಫ್ರೆಂಡ್ಸ್ ತರ ದೊಡ್ಡ ಗಿಫ್ಟ್ ಏನೂ ತಂದಿಲ್ಲ”

“ನನ್ಗೆ ದೊಡ್ಡ ಗಿಫ್ಟ್ ಚಿಕ್ಕ ಗಿಫ್ಟ್ ಎರಡು ಒಂದೇ.ಈಗ ಈ ಕಥೆಪುರಾಣ ಎಲ್ಲಾ ಬಿಟ್ಟು ಏನ್ ಗಿಫ್ಟ್ ತಂದಿದೀಯಾ ಹೇಳು”ಎಂದಳು ಉತ್ಸುಕತೆಯಿಂದ.

“ಒಂದು ನಿಮಿಷ ನಿಧಿ”ಎಂದವನೇ ಹೋಗಿ ಒಂದು ಗಿಡ ತಂದು”ಇದೆ ನಾನ್ ಕೊಡ್ಬೇಕು ಅಂತ ತಂದಿರೋ ಗಿಫ್ಟ್” ಎಂದು ಅವಳ ಕೈಗಿಟ್ಟನು.

“ವಾವ್ ಸೂಪರ್ ಚಿರು.ಇದುವರೆಗೂ ನನ್ಗೆ ಈ ತರ ಗಿಫ್ಟ್ ಯಾರು ಕೊಟ್ಟಿಲ್ಲ.ಥ್ಯಾಂಕ್ಸ್ ಚಿರು, ಥ್ಯಾಂಕ್ ಯು ಸೊ ಮಚ್”ಎಂದು ಅದನ್ನು ಅಪ್ಪಿ ಕುಣಿದಾಡಿದಳು.

ಅವಳ ಸಂತೋಷ ಕಂಡ ಚಿರು ಸಂದೇಹದಿಂದ”ನಂಗ್ ಗೊತ್ತಿಲ್ದೆ ಕೇಳ್ತೀನಿ ನಿಧಿ. ಎಲ್ಲರೂ ಅಷ್ಟ್ ದೊಡ್ಡ ಗಿಫ್ಟ್ ಕೊಟ್ರು ನಿಂಗ್ ಖುಷಿಯಾಗಿಲ್ಲ. ಈಗ್ ನಾನ್ ಕೊಟ್ಟಿರೋ ಈ ಚಿಕ್ಕ ಗಿಫ್ಟ್ಗೆ ಯಾಕಿಷ್ಟು ಖುಷಿ ಆಗ್ತಿದೀಯಾ”ಎಂದ.

ಅವನ ಕಣ್ಣನ್ನೇ ದಿಟ್ಟಿಸಿ ನೋಡುತ್ತಾ”ಅದ್ ಹಾಗೇ ಚಿರು ಇಷ್ಟ ಆಗೋರು ಅದೇನ್ ಗಿಫ್ಟ್ ಕೊಟ್ರು ತುಂಬಾ ಅಂದ್ರೆ ತುಂಬಾ ಇಷ್ಟ ಆಗುತ್ತೆ. ಅಷ್ಟಕ್ಕೂ ಎಲ್ಲರೂ ಜೀವ ಇಲ್ಲದೆ ಇರೋ ಗಿಫ್ಟ್ ಕೊಟ್ರೆ ನಿನ್ ಜೀವ ಇರೋ ಗಿಫ್ಟ್ ಕೊಟ್ಟಿದೀಯಾ ಖುಷಿ ಆಗದೆ ಇರುತ್ತಾ”.

“ನಿನ್ ಅನ್ಕೊಂಡಿರೋ ಹಾಗೇ ಅದಕ್ಕೆ ಜೀವ ಒಂದೇ ಅಲ್ಲ ನಿಧಿ.ನಮ್ಮ ನೋವುಗಳನ್ನು ಮರೆಸಿ ಖುಷಿ ಕೊಡೊ ಶಕ್ತಿನೂ ಅದಕ್ಕಿದೆ”

“ಅಂದ್ರೆ ನಾನ್ ಏನಾದ್ರು ಇದರ ಹತ್ತಿರ ಹೇಳ್ಕೊಂಡ್ರೆ ಅದ್ಕೆ ಕೇಳುತ್ತಾ”

“ನಿಜ್ವಾಗ್ಲೂ ಕೇಳುತ್ತೆ ನಿಧಿ.ನಾನ್ ನಮ್ ಊರಲ್ಲಿರಬೇಕಾದ್ರೆ ನನ್ನ ನೋವು ಯಾರಾತ್ರಾನೂ ಹೇಳ್ಕೊಳ್ಳೋಕೆ ಆಗದೆ ಇದ್ದಾಗ  ಕಾಡಲ್ಲಿ ಹೋಗಿ ಮರಗಿಡಗಳ ಜೊತೆ ನನ್ ಕಷ್ಟ ಎಲ್ಲಾ ಹೇಳ್ಕೊಂಡಾಗ ಅದೇನೋ ಒಂದು ರೀತಿಯ ಸಮಾಧಾನ ಆಗ್ತಿತ್ತು”

“ಥ್ಯಾಂಕ್ಸ್ ಕಣೋ ಮತ್ತೊಮ್ಮೆ.ಒಂದೊಳ್ಳೆ ಗಿಫ್ಟ್ ಕೊಟ್ಟಿದ್ದಕ್ಕೆ. ಇದನ್ನು ನಾನ್ ತುಂಬಾ ಚೆನ್ನಾಗಿ ನೋಡ್ಕೋತೀನಿ”

“ಹ್ಮ್ ಸರಿ ಈಗ ಊಟಕ್ಕೆ ಹೋಗೋಣ್ವಾ ಆಂಟಿ ಕಾಯ್ತಾ ಇರ್ತಾರೆ”ಎಂದು ಇಬ್ಬರೂ ಜೊತೆಯಲ್ಲಿ ಊಟಕ್ಕೆ ಹೋದರು.

ಮೀರಾ ಕುಳಿತ ಪಕ್ಕದ ಚೇರಿನಲ್ಲಿ ಕುಳಿತುಕೊಂಡ ಚಿರಂತನನ್ನು ಕಂಡು ಅಲ್ಲಿಂದ ಎದ್ದ ಮೀರಾ ಆಗ ತಾನೇ ಫೋನಲ್ಲಿ ಮಾತಾಡಿ ಬಂದ ನಕುಲ್ ಬಳಿ ಕುಳಿತುಕೊಂಡಳು. ಇದನ್ನು ಕಂಡ ನಿಧಿ ಚಿರಂತ್ ಪಕ್ಕದಲ್ಲಿ ಕೂತು”ಏನ್ ಬೇಜಾರ್ ಮಾಡ್ಕೋಬೇಡ ಅವ್ಳ್ ಸ್ವಲ್ಪ ಹಾಗೇನೇ”ಎಂದು ಸಮಾಧಾನ ಮಾಡಿದಳು.

“ಏ…ಇಟ್ಸ್ ಓಕೆ”ಎಂದ ಬರದೇ ಇರುವ ನಗುವನ್ನು ಮುಖದಲ್ಲಿ ತಂದುಕೊಂಡು.

ಊಟ ಮಾಡುತ್ತಿದ್ದ ಎಲ್ಲರನ್ನು ಕುರಿತು”ಎಲ್ಲರೂ ಟ್ರಿಪ್ಗೆ ರೆಡಿಯಾಗಿದ್ದೀರಾ, ಯಾವ್ ಕಡೆ ಹೊರಟಿದ್ದೀರಿ”ಎಂದು ಕೇಳಿದಳು.

“ಇಲ್ಲ ಆಂಟಿ, ನಾಳೆ ಊರಲ್ಲಿ ಸ್ವಲ್ಪ ಕೆಲಸ ಇದೆ ನನ್ಗೆ.ಇವತ್ತು ರಾತ್ರಿ ನಾನ್ ಊರಿಗೆ ಹೋಗಬೇಕು”ಎಂದ ನಕುಲನ ಮಾತು ಕೇಳಿ ಎಲ್ಲರೂ ಒಮ್ಮೆಲೇ  ಆಶ್ಚರ್ಯಗೊಂಡರು.

“ಲೋ ಟ್ರಿಪ್ಪಿಗೆ ಹೋಗಬೇಕು ಅಂತ ನಾವೆಲ್ಲಾ ರೆಡಿಯಾಗಿದ್ದೀವಿ.ನೀನ್ ನೋಡಿದ್ರೆ ಊರಿಗೆ ಹೋಗಬೇಕು ಅಂತಿದಿಯಾ”ಎಂದಳು ಮೀರಾ ಸಿಟ್ಟಿನಿಂದ.

“ಅಯ್ಯೋ ಕೋತಿ ನಾನೇನ್ ಟ್ರಿಪ್ಪಿಗೆ ಬರೋದಿಲ್ಲ ಅಂತ ಹೇಳಿಲ್ವಲ್ಲ. ಇವತ್ತು ರಾತ್ರಿ ಊರಿಗೆ ಹೋಗಿ ನಾಳೆ ನೈಟ್ ಬರ್ತೀನಿ. ಬಂದ ತಕ್ಷಣ ಹೋಗೋಣ”ಎಂದ.

“ನಿಮ್ಮ ಊರು ಮಡಿಕೇರಿನೇ ತಾನೇ ಇನ್ಯಾವ ಊರಿಗೆ ಹೋಗುತ್ತಿದ್ದೀಯಾ”ಎಂದು ಕೇಳಿದಳು ತುಳಸಿ.

“ನಮ್ ಊರೇನೋ ಮಡಿಕೇರಿನೇ. ಆದ್ರೆ ಅಪ್ಪ ಅಮ್ಮ ಎಲ್ಲಾ ಅರ್ಜೆಂಟಾಗಿ ನಮ್ಮ ಅಪ್ಪನ ಬೆಸ್ಟ್ ಫ್ರೆಂಡ್ ಶಿವರಾಮ್ ಅಂಕಲ್ ಊರು ಕಾರವಾರಕ್ಕೆ ಹೋಗಿದ್ದಾರಂತೆ.ಏನೋ ಮನೇಲಿ ಕಾರ್ಯಕ್ರಮ ಇದೆ ಅಂದ್ರು.ಆದ್ರೆ ಅದೇನು ಅಂತ ನಂಗೂ  ಗೊತ್ತಿಲ್ಲ”

“ಹಾಗಿದ್ರೆ ಅಷ್ಟ್ ದೂರ ಒಬ್ಬನೇ ಹೋಗೋದ್ ಬೇಡ.ಪ್ರಣವ್ನ ಜೊತೆ ಕರ್ಕೊಂಡು ಹೋಗು”ಎಂದಳು ತುಳಸಿ ಕಳಕಳಿಯಿಂದ.

“ಆಂಟಿ ನಾಳೆ ನಂಗೂ ಕೆಲಸ ಇತ್ತು.ಟ್ರಿಪ್ಪಿಗೆ ಹೋಗಬೇಕು ಅಂತ ಕಾನ್ಸಲ್ ಮಾಡಿದ್ದೆ. ಈಗ ಹೇಗಿದ್ರೂ ನಾಳೆ ಟ್ರಿಪ್ಪಿಗೆ ಹೋಗೋದಿಲ್ಲ ಎಂದಾದರೆ ನಾನು ನನ್ ಕೆಲಸ ಮುಗಿಸ್ಕೊತಿನಿ.ಅವ್ನ್ ಚಿರಂತ್ ಜೊತೆ ಹೋಗಿ ಬರಲಿ”ಎಂದ ಪ್ರಣವ್ ಚಿರಂತನ ಮುಖ ನೋಡುತ್ತಾ.

ಪ್ರಣವ್ ಚಿರಂತನನ್ನು ಕರೆದುಕೊಂಡು ಹೋಗು ಎಂದೊಡನೆ ಒಂದು ನಿಮಿಷವೂ ಯೋಚನೆ ಮಾಡದೆ ಚಿರಂತ್”ಸರಿ ನಾನ್ ನಕುಲ್ ಜೊತೆ ಹೋಗ್ತೀನಿ”ಎಂದ ಚಿರಂತ್ ನಗುತ್ತಾ.

ಚಿರಂತನ ಮಾತಿಗೆ ಎಲ್ಲರೂ ಆಶ್ಚರ್ಯದಿಂದ ನೋಡಿದರು.ಏಕೆಂದರೆ ಚಿರಂತ್ ಇದುವರೆಗೂ ನಕುಲನನ್ನು ಒಮ್ಮೆಯೂ ಮಾತನಾಡಿಸಿರಲಿಲ್ಲ.ಆದರೂ ನಕುಲ್ ಚಿರಂತ್ ಜೊತೆ ಹೋಗಲು ಒಪ್ಪಿದನು.ಆದರೆ ಮೀರಾಳಿಗೆ ಇದು ಇಷ್ಟವಿರಲಿಲ್ಲ  ಅವಳನ್ನು ಸಮಾಧಾನ ಮಾಡಿದ ನಕುಲ್ ಊಟ ಮುಗಿಸಿ ಚಿರಂತ್ ಜೊತೆ ಕಾರಿನಲ್ಲಿ ಕಾರವಾರಕ್ಕೆ ಪಯಣ ಬೆಳೆಸಿದನು.

ಸ್ನೇಹ ಚಿರಾಯು-10 ಮುಂದುವರೆಯುವುದು……

ಈ ಸ್ನೇಹ ಚಿರಾಯು-10 ನೀವು ಇಂಗ್ಲಿಷ್ ಭಾಷೆಯಲ್ಲಿಯೂ ಓದಬಹುದು.

ನಮ್ಮ ವೆಬ್ಬೆಟ್ ನ ಇತರ ಪೋಸ್ಟ್ ಗಳನ್ನು ಇಲ್ಲಿ ಓದಬಹುದು.

Comments

No comments yet. Why don’t you start the discussion?

Leave a Reply

Your email address will not be published. Required fields are marked *