ಸ್ನೇಹ ಚಿರಾಯು – 1

ಸ್ನೇಹ ಚಿರಾಯು – 1

ಅದೊಂದು ಮೈನವಿರೇಳಿಸುವಂತ ಸೊಬಗನ್ನು ಹೊತ್ತು ನಿಂತಿದ್ದ ಟೀ ಎಸ್ಟೇಟ್.ಅದಕ್ಕೆ “ರತ್ನಗಿರಿ“ಎಂಬ ಹೆಸರು.ಈ ರತ್ನಗಿರಿ ಎಸ್ಟೇಟ್ ಇರುವುದು ಮಡಿಕೇರಿಯ ಸಮೀಪದಲ್ಲಿರುವ ಸಂಪಿಗೆಕಟ್ಟೆ ಎಂಬ ಊರಿನಲ್ಲಿ.ಆಗ ತಾನೇ ಬರುತಿದ್ದ ಜಿನಿ ಜಿನಿ ಮಳೆ ಬಂದು ನಿಂತಿದ್ದರಿಂದ ಪ್ರಕೃತಿ ಮೈ ತೊಳೆದುಕೊಂಡು ರವಿಮಾಮನ ಕಿರಣಗಳನ್ನು ಬಳಸಿಕೊಂಡು ಮಿರ ಮಿರ ಮಿಂಚುತಿತ್ತು.ಎಲೆ ಮೇಲಿದ್ದ ಮಳೆಹನಿಯು “ಥಟ್ ಥಟ್”ಎಂದು ಶಬ್ದ ಮಾಡುತ್ತ ನೆಲಕ್ಕೆ ಬಿದ್ದಾಗ ಭೂಮಾತೆ ಅಪ್ಪಿ ಮುತ್ತಿಕ್ಕುವ ಸೊಬಗು ಸುಂದರ ದೃಶ್ಯಕಾವ್ಯಕ್ಕೆ ಸಾಕ್ಷಿಯಾಗಿತ್ತು.

ಹಕ್ಕಿಯ ಚಿಲಿ ಪಿಲಿ ಸದ್ದಿನಿಂದ ನಿಶಬ್ದವಾಗಿದ್ದ ಪರಿಸರ ಒಮ್ಮೆಲೆ ಮಾರ್ದನಿಸಲು ಶುರು ಮಾಡಿತ್ತು.ಅಲ್ಲಲ್ಲಿ ಬೊಗಸೆ ಗಾತ್ರದ ಪ್ರಾಣಿಗಳು ಚಹಾ ಗಿಡದ ಮರೆಯಲಿ ನಿಂತು ಬರುವವರಿಗೆ ಸ್ವಾಗತ ಕೋರುತ್ತಿದ್ದವು.ರಸ್ತೆಯ ಎರಡು ಬದಿ ಚಹಾ ಗಿಡಗಳು   ಎತ್ತರದಲ್ಲಿದ್ದರೇ,ಕೆಳಗೆ ಚಲಿಸುವ ಪಯಣಿಗರಿಗೆ ಇದೆಲ್ಲವನ್ನೂ ನೋಡುವುದು ಕಣ್ಣಿಗೆ ಹಬ್ಬವೇ ಸರಿ.ಈ ತಾಣ ಇಂದ್ರಲೋಕವನ್ನೇ ಮೀರಿಸುವಷ್ಟು  ವೈವಿದ್ಟ್ಯಮಯವಾಗಿತ್ತು.

ಟೀ ಎಸ್ಟೇಟ್ನ ಕಿರುದಾದ ದಾರಿಯಲ್ಲಿ ಕಾರೊಂದು ನಿಧಾನವಾಗಿ ಚಲಿಸುತ್ತಿತ್ತು.ಎತ್ತರದ ಚಹಾ ಗಿಡಗಳ ಮದ್ಯದಲ್ಲಿ ನಿಂತ ಅಪರಿಚಿತ ವ್ಯಕ್ತಿಯೊಬ್ಬ ಬೈನಾಕ್ಯುಲರ್(ದೂರದರ್ಶಕ)ದ ಸಹಾಯದಿಂದ ದೂರದಲ್ಲಿ ಚಲಿಸುತ್ತಿದ್ದ ಕಾರನ್ನು ನೋಡುತಿದ್ದ.ಅದು ಕಾರಿನಲ್ಲಿ ಕೂತಿದ್ದವರ ಗಮನಕ್ಕೆ ಬರಲಿಲ್ಲ.

ಚಲಿಸುತ್ತಿದ್ದ ಕಾರಿನಲ್ಲಿದ್ದ ಸಿದ್ದಾರ್ಥ್ ದೇಸಾಯ್ ಗಂಭೀರವಾಗಿ ಏನನ್ನೋ ಯೋಚಿಸುತ್ತಿದ್ದ.ಪಕ್ಕದಲ್ಲೇ ಕೂತಿದ್ದ ಮಡದಿ ಸುಮತಿ ತಮ್ಮ ಯಜಮಾನ್ರ ಈ ಗಂಭೀರತೆಗೆ ನಾನೇ ಕಾರಣ ಎಂದು ಬೇಜಾರಲ್ಲಿ ಕೂತಿದ್ದಳು. ಇದ್ಯಾವುದರ ಪರಿವೇ ಇಲ್ಲದ ಒಂದೂವರೆ ವರ್ಷದ ಮೀರಾ, ಚಿರಂತ್ ತಮ್ಮ  ಬಾಲ್ಯಲೋಕದಲ್ಲಿ ವಿಹರಿಸುತಿದ್ದರು. ಮೀರಾ ಸಿದ್ದಾರ್ಥ್ ನ ಒಬ್ಬಳೇ ಮಗಳಾದರೆ, ಚಿರಂತ್ ಸಿದ್ದಾರ್ಥ್ ನ ಪ್ರಾಣಸ್ನೇಹಿತ ಸತ್ಯಪ್ರಕಾಶ್ನ ಮಗ..

ಮುಂದೆ ಕಾರು ಚಲಾಯಿಸುತ್ತಿದ್ದ ಸ ಸತ್ಯ ಪ್ರಕಾಶ್ ರಸ್ತೆಯ ಬದಿಯಲ್ಲಿ ಕಾರು ನಿಲ್ಲಿಸಿ “ಸಿದ್ದು ಈಗ್ ಬಂದಿರೋ ಸಮಸ್ಯೆ ಬಗೆಹರಿಯದೆ ಇರುವಂತದಲ್ಲ, ಅದಕ್ಕೆ ಆದಷ್ಟು ಬೇಗ ಪರಿಹಾರ ಹುಡುಕೋದು ನನ್ನ ಜವಾಬ್ದಾರಿ ಈಗ ನೀನದರ ಚಿಂತೆ ಬಿಟ್ಟು ಕಾರಿಂದ ಇಳಿ, ನಿನ್ನ ದೇವಸ್ಥಾನಕ್ಕೆ ಹೋಗಿ ಆಶೀರ್ವಾದ ಪಡೆದುಕೊಂಡು ಬರೋಣ ಎಲ್ಲಾ ಸರಿಹೋಗುತ್ತೆ” ಎಂದು ಕಳಕಳಿಯಿಂದ ನುಡಿದ.

ಸಿದ್ದಾರ್ಥ್ “ಎಲ್ಲಾ ಇವಳಿಂದಾನೆ ಆಗಿದ್ದು, ನಮಗೆ ಕೆಟ್ಟದನ್ನು ಮಾಡಲು ಬಯಸಿದವರಿಗೆ ಒಳ್ಳೆಯದನ್ನು ಮಾಡುವಷ್ಟು ಒಳ್ಳೆಯವರಾಗಬಾರದು ಎಂದು ಎಷ್ಟು ಸರಿ ಹೇಳಿದರು ಕೇಳಲಿಲ್ಲ”ಎಂದು ಕೊಂಚ ಸಿಟ್ಟಿನಿಂದಲೇ ಹೇಳಿದ. ರೀ..ನಂಗೇನ್ ಗೊತ್ತು,ಅವ್ರೆಲ್ಲಾ  ಸೇರಿ  ಹೀಗೆ  ಮಾಡ್ತಾರೆ ಅಂತ.ಸರಿ ಈಗ್ ತಪ್ಪಾಗಿದೆ ಅದಕ್ಕೆ ಈ ತರ ಸುಮ್ನೆ ಕೂತ್ರೆ ಎಲ್ಲಾ ಸರಿ ಹೋಗುತ್ತಾ ಎಂದು ಧನ್ಯತಾ ಭಾವದಿಂದ ಪ್ರಶ್ನೆ ಮಾಡಿದಳು ಸುಮತಿ.

ಈಗ್ ನಿಮ್ ಜಗಳ ನಿಲ್ಸಿ ದೇವಸ್ಥಾನಕ್ಕೆ ಬರ್ತಿರೋ ಇಲ್ವೋ ಎಂದು ಕೇಳಿದ ಸತ್ಯಪ್ರಕಾಶ್ ನೀವ್ ಹೋಗ್ಬನ್ನಿ ಇವ್ರ್ ಯಾಕೋ ಬರೋ ಹಾಗ್ ಕಾಣ್ತಿಲ್ಲ, ಇವ್ರ್ ಜೊತೇಲೆ ನಾನು ಇರ್ತೀನಿ ಎಂದಳು ಸುಮತಿ ಸತ್ಯಪ್ರಕಾಶನನ್ನು ಕುರಿತು…

ಸರಿ ನೀವ್ ಇಲ್ಲೇ ಇರಿ ನಾನು ಮೀರಾ, ಚಿರು ಹೋಗ್ಬರ್ತೀವಿ, ಬನ್ನಿ ಬನ್ನಿ ಮಕ್ಕಳೇ….. ನಾವ್ ಮೂವರು ಹೋಗಿ  ದೆವ್ರ್ನಾ ಹಾಯ್ ಹೇಳಿ  ಬರೋಣ, ಇವ್ರ್ ಇಲ್ಲೇ ಜಗಳ ಆಡ್ಕೊಂಡ್ ಇರಲಿ ಎಂದು ಮುದ್ದಾಡುದ್ದ ಎತ್ತಿಕೊಂಡು ದೇವಸ್ಥಾನಕ್ಕೆ ಹೆಜ್ಜೆ ಹಾಕಿದ…

ಕಾರಿನಲ್ಲಿ ಇವರಿಬ್ಬರ ಗಂಭೀರತೆ ಮುಂದುವರೆದಿತ್ತು,ಚಹಾ ಗಿಡಗಳ ಮದ್ಯದಲ್ಲಿ ನಿಂತಿದ್ದ ಆ ವ್ಯಕ್ತಿ ಜೋರಾಗಿ ಶಬ್ದ ಮಾಡಲು ಶುರು ಮಾಡಿದ…ಆ ಶಬ್ದವು ಕಾರಿನಲ್ಲಿದ್ದ ಸಿದ್ದಾರ್ಥ್ ಸುಮತಿಗೂ ಕೇಳಿಸಿದರೂ ಅದರ ಬಗ್ಗೆ ಗಮನ ಹರಿಸಲಿಲ್ಲ, ಆದರೆ ದೇವರಿಗೆ ಕೈ ಮುಗಿಯುತಿದ್ದ ಸತ್ಯ ಪ್ರಕಾಶ್ ಗೆ ಇದೇನೋ ಕೆಡಕಾಗುವುದರ ಮುನ್ಸೂಚನೆ ಎಂದು ತಿಳಿದು ಮೀರಾ, ಚಿರಂತನನ್ನು ಎತ್ತಿಕೊಂಡು ದೇವಸ್ಥಾನದಿಂದ ಹೊರ ಬಂದು ಕಾರಿನೆಡೆಗೆ ಗಮನ ಹರಿಸಿದ. ಅದೇ ದಾರಿಯಲ್ಲಿ ಕಾರಿನ ಹಿಂಬದಿಯಿಂದ ಶರವೇಗದಿಂದ ಬರುತಿದ್ದ ಟ್ರಕ್ಕೊಂದನ್ನು ಗಮನಿಸಿದ.

ಜೋರಾಗಿ “ಸಿದ್ದು ಸಿದ್ದು” ಎಂದು ಕೂಗುವಷ್ಟರಲ್ಲಿ ಟ್ರಕ್ಕು ಕಾರಿಗೆ ಡಿಕ್ಕಿ ಹೊಡೆದೆ ಬಿಟ್ಟಿತು. ಗುದ್ದಿದ ರಭಸಕ್ಕೆ ಕಾರು ಸುಮಾರು ದೂರ ಹಾರಿ ಬಿದ್ದಿತು,ಸತ್ಯಪ್ರಕಾಶ್ ಇಬ್ಬರು ಮಕ್ಕಳನ್ನು ಎತ್ತಿಕೊಂಡು  ಕಾರಿನೆಡೆಗೆ ಧಾವಿಸಿ ಬಂದ…ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಿದ್ದಾರ್ಥ್, ಸುಮತಿಯನ್ನು ಕಂಡು ಚೀರಾಡಿದ.ಸುಮತಿಯ ಪ್ರಾಣಪಕ್ಷಿ ಅದಾಗಲೇ ಹಾರಿಹೋಗಿತ್ತು.ಮೀರಾ”ಅಮ್ಮಾ…!ಅಪ್ಪಾ…! ಎಂದು ತನ್ನ ಏರುಧ್ವನಿಯಲ್ಲಿ ಕರೆಯಲಾರಂಭಿಸಿದಳು.

ಸಿದ್ದಾರ್ಥನನ್ನು ನಿಧಾನವಾಗಿ ತನ್ನ ತೊಡೆಯ ಮಲಗಿಸಿಕೊಂಡ ಸತ್ಯಪ್ರಕಾಶ್  ಸಾವಿನ ಅಂಚಿನಲ್ಲಿದ್ದ ಅವನ ಮಾತನ್ನು ಕೇಳಲಾರಂಭಿಸಿದ..”ಸತ್ಯ ಇಷ್ಟ್ ಬೇಗ ನಾನ್ ಸಾಯ್ತಿನಿ ಅಂತ ಅನ್ಕೊಂಡಿರ್ಲಿಲ್ಲ ಕಣೋ, ಇನ್ನು ನಾನ್ ನಿನ್ ಜೊತೆಸೇರಿ  ಸಾಧಿಸೋದು ತುಂಬಾ ಇತ್ತು ಎಂದು ಪಕ್ಕದಲ್ಲೇ ಅಳುತ್ತಾ ಕೂತಿದ್ದ ಮೀರಾಳನ್ನು ಕೈ ಹಿಡಿದು ಬರ ಸೆಳೆದು ಮುತ್ತಿಕ್ಕಿದ.ನಂತರ “ಚಿರು ಬಾ ಇಲ್ಲಿ” ಎಂದು ಕೈ ಸನ್ನೆ ಮಾಡಿ ಕರೆದ.”

ಸತ್ಯ ನಮ್ಮಿಬ್ಬರ ಸ್ನೇಹ ಇವತ್ತಿಗೆ ಕೊನೆಯಾಗಬಾರ್ದು ಈ ಮಕ್ಕಳಿಬ್ಬರ ಮೂಲಕ ಮುಂದುವರಿಯುವ ಹಾಗೇ ಬೆಳೆಸು, ಹಾ…ಇನ್ನೊಂದು ಈಗ ನನ್ನ ಸಾಯಿಸಿದವರ ಮೇಲೆ ಹಗೆ ಸಾಧಿಸಿ ಈ ಮಕ್ಕಳನ್ನು ತಬ್ಬಲಿ ಮಾಡಬೇಡ.ಎಲ್ಲಾದ್ರೂ ದೂರ ಹೋಗು.ಈ ಕ್ರೂರ ಮೃಗಗಳ ಮಧ್ಯೆ ಇರಬೇಡ ಎಂದು ತನ್ನ ಮಡದಿ ಸುಮತಿಯೆಡೆಗೆ ಮುಖ ಮಾಡಿ ಪ್ರಾಣಬಿಟ್ಟ…

ಸತ್ಯಪ್ರಕಾಶ್ ಇಬ್ಬರು ಮಕ್ಕಳನ್ನು ಎದೆಗೆ ಅಪ್ಪಿಕೊಂಡು ಒಮ್ಮೆಲೇ ನೋವಿನಿಂದ ಕೂಗಾಡಿದ..ಅಪರಿಚಿತ ವ್ಯಕ್ತಿ “ಎನ್ರೋ ಕೆಲಸವೆಲ್ಲ ಸಲೀಸಾಗಿ ಮುಗಿತು ಅಂತ ಹೇಳಿದ್ರಿ ಅಲ್ಲಿ ಯಾರೋ ಕೂಗಾಡ್ತಾಯಿದಾರೆ ಎಂದ ಕೊಂಚ ಭಯದಿಂದ” ಕೊಲೆಗಾರ “ಅವರು ಕಾರಿನಲ್ಲಿರಲಿಲ್ಲ ಸರ್ ಇಬ್ಬರು ಮಕ್ಕಳನ್ನು ಕರೆದುಕೊಂಡು ದೇವಸ್ಥಾನಕ್ಕೆ ಹೋಗಿದ್ರು” ಎಂದ.ಲೋ ಅವಿವೇಕಿ ನಾನ್ ಹೇಳಿದ್ದು ಎಲ್ಲರನ್ನು ಸಾಯಿಸೋಕೆ ಒಂದಿಬ್ಬರನ್ನು ಸಾಯಿಸೋಕಲ್ಲ,ಈ ಸಮಸ್ಯೆ ಇಲ್ಲಿಗೆ ಮುಗಿಬೇಕು. ಮುಂದೆ ನಮಗೆ ತೊಂದರೆಯಾಗಬಾರದು. ನಡಿ ಅವರನ್ನು ಸಹ ಮುಗಿಸಿಬಿಡೋಣ,ಅವಿತುಕೊಂಡು ಕುಳಿತ ನಿಮ್ಮ ಹುಡುಗರನ್ನು ಕರಿ ಎಂದು ಆದೇಶ ನೀಡಿದ…

ಇತ್ತ ಸ್ನೇಹಿತನ ತಬ್ಬಿಡಿದು ರೋದಿಸುತಿದ್ದ ಸತ್ಯ ಪ್ರಕಾಶ್ಗೆ ದೂರದಲ್ಲಿ ಯಾರೋ ತಮ್ಮನ್ನು ಕೊಲ್ಲಲು ಬರುತ್ತಿರುವುದು ಗಮನಿಸಿದ.ಗೆಳೆಯನನ್ನು ಬಿಟ್ಟೋಗಲು ಮನಸ್ಸಿಲ್ಲದಿದ್ದರೂ ಒಲ್ಲದ ಮನಸ್ಸಿನಿಂದ ಮಕ್ಕಳನ್ನು ಎದೆಗವಚಿಕೊಂಡು ಓಡಲು ಶುರುಮಾಡಿದ. ಕೊಲೆಗಾರರು ಅವರನ್ನು ಹಿಂಬಾಲಿಸಿದರು.ಹೆದ್ದಾರಿಯಲ್ಲಿ ಸಿಕ್ಕ ಲಾರಿಯೊಂದನ್ನು ಅತ್ಯವಸರವಾಗಿ ಏರಿ ಅವರಿಂದ ಪಾರಾದನು… ಲಾರಿಯಲ್ಲಿ ಕೂತರು ನಿರಾಳವಾದ ಮನಸಿಲ್ಲ, ಪಕ್ಕದಲ್ಲೇ ಕೂತು ರೋದಿಸುತ್ತಿದ್ದ ಮಕ್ಕಳನ್ನು ಕಂಡು”ಮುಂದೆ ಈ ಮಕ್ಕಳ ಗತಿ ಏನು, ಹೇಗೆ ಪೋಷಿಸಲಿ ಎಂಬ ಚಿಂತೆ ಶುರುವಾಯಿತು..

ಅದು ನೇಸರ ತನ್ನ ದಿನಗೆಲಸವನ್ನು ಮುಗಿಸುವ ಸಮಯ ಲಾರಿ ದಾಂಡೇಲಿಗೆ ಸುಮಾರು ಹತ್ತನ್ನೆರಡು ಕಿಮೀ ದೂರದಲ್ಲಿ ಸಾಗುತಿತ್ತು.ಮೀರಾ ಅತ್ತು ಅತ್ತು ಹಾಗೆ ಮಲಗಿದ್ದಳು.”ಅಪ್ಪಾ ಮಮ್ಮು ಬೇಕು”ಎಂದು ಚಿರಂತ್ ಅಳತೊಡಗಿದ.ಇನ್ನೊಂದ್ ಸ್ವಲ್ಪತ್ತು ಮರಿ ತಿನ್ನುವಂತೆ ಎಂದು ಹಣೆಗೆ ಮುತ್ತಿಕ್ಕಿ ಮಗನನ್ನು ಸಮಾಧಾನ ಪಡಿಸಿದ.ಆದರೆ ಊಟಕ್ಕೆ ಹಣವಿಲ್ಲ ಅವನ ಪರ್ಸ್ ಓಡಾಟದಲ್ಲಿ ಎಲ್ಲೋ ಕಳೆದೋಗಿತ್ತು.ಹೇಗೋ ಲಾರಿಯಾತ ಸರಿಯಾದ ಸಮಯಕ್ಕೆ ಬಂದು ಪ್ರಾಣ ಉಳಿಸಿ ಇಲ್ಲಿಯವರೆಗೂ ಕರೆತಂದ.ಈಗ ಊಟಕ್ಕೆ ಏನು ಮಾಡುವುದು ಎಂದು ಯೋಚಿಸತೊಡಗಿದ.

ದಟ್ಟ ಕಾಡಿನ ಮದ್ಯದಲ್ಲಿ ಸಾಗುತಿದ್ದ ಲಾರಿಯನ್ನು ನಿಲ್ಲಿಸುವಂತೆ  ಚಾಲಕನಿಗೆ ಹೇಳಿದ.ಚಾಲಕ ಇದು ತುಂಬಾ ಅಪಾಯವನ್ನುಂಟು ಮಾಡುವ ಪ್ರಾಣಿಗಳು ಇರುವ ಸ್ಥಳ ಎಂದು ಎಷ್ಟು ಹೇಳಿದರು ಕೇಳದೆ ಕೆಳಗಿಳಿದ..

ಸತ್ಯಪ್ರಕಾಶ್ ಗೆ ಈ ಕಾಡಿನಲ್ಲಿ ಮಕ್ಕಳಿಗೆ ತಿನ್ನಲು ಹಣ್ಣೇನಾದರೂ ಸಿಗಬಹುದೆಂಬ ಕಲ್ಪನೆ..ಲಾರಿಯಿಂದಿಳಿದ ಪ್ರಕಾಶ್ ಮಕ್ಕಳೊಡನೆ ಸೇರಿ ದಟ್ಟ ಕಾಡಿನ ಹೊಳ ಹೊಕ್ಕ…ಅಲ್ಲಿ ಬರಿ ಎತ್ತರಕ್ಕೆ ಬೆಳೆದ ದೈತ್ಯಕಾರದ ಮರಗಳು ಕಂಡರೂ, ತಿನ್ನಲು ಹಣ್ಣಿನ ಮರ ಯಾವುದು ಕಾಣಲಿಲ್ಲ.ಹಾಗೇ ಮುಂದೆ ಸಾಗುತ್ತ ಸಾಗುತ್ತ ಕಾಡಿನ ಮಧ್ಯಭಾಗಕ್ಕೆ ತಲುಪುವಸ್ಟರಲ್ಲಿ ದಾರಿ ಕಾಣದ ಹಾಗೇ ಕತ್ತಲು ಆವರಿಸಿತ್ತು.ಹಿಂದೆ ಹೋಗಲು ದಾರಿ ಕಾಣುತ್ತಿಲ್ಲ.ಪ್ರಕಾಶನಿಗೆ ಹೆದರಿಕೆ ಶುರುವಾಯ್ತು, ಪೊದೆಯಲ್ಲಾದ ಚಿಕ್ಕ ಶಬ್ದಕ್ಕೆ ಮಕ್ಕಳು ಹೆದರಿ ಚೀರತೊಡಗಿದರು.. ಪ್ರಕಾಶ್ ಎಷ್ಟೇ ಸಮಾಧಾನ ಪಡಿಸಿದರು ಹೆದರಿಕೆಯಿಂದ ಅಳುವುದು ನಿಲ್ಲಿಸಲಿಲ್ಲ.

ಅವರ ಚೀರಾಟ ಕೇಳಿದೊಡನೆ ಸುತ್ತಲೂ ಕಪ್ಪು ಆವರಿಸಿದ ಕಾಡಿನಲ್ಲಿ ಬೆಂಕಿಯ ಕಿಡಿಯೊಂದು  ಇವರೆಡೆಗೆ ಧಾವಿಸಿ ಬರುವುದು ಕಂಡಿತು. ಪ್ರಕಾಶ್ ಮಕ್ಕಳನ್ನು ಅಲ್ಲೇ ಮರದ ಪೊಟರೆಯಲ್ಲಿ ಅಡಗಿಸಿ ಒಂದು ದೊಣ್ಣೆಯನ್ನು ಹಿಡಿದು ನಿಂತ… ಆ ಬಿಂಕಿ ಕಿಡಿ  ಹತ್ತಿರ ಬರುತ್ತಾ “ಏ… ಯಾರ್ರೋ ಅದು ಇಷ್ಟೋತ್ತಲ್ಲಿ ಎಂತ ಮಾಡ್ತಿದೀರಾ ಅಲ್ಲಿ”ಎಂದು ಕೂಗಿಕೊಂಡಿತು.. ಪ್ರಕಾಶನಿಗೆ ಸ್ವಲ್ಪ ಧೈರ್ಯ ಬಂದಂತಾಯಿತು.ಕೈಯ್ಯಲಿದ್ದ ದೊಣ್ಣೆ ಬಿಸಾಡಿ”ಯಜಮಾನ್ರೆ ನಿಮ್ಮಿಂದ ಸ್ವಲ್ಪ ಸಹಾಯ ಆಗ್ಬೇಕಿತ್ತು”ಎಂದ ಸುಮಾರು ಎಪ್ಪತ್ತು ವರ್ಷದ ಮುದುಕ ತಲೆ ಮೇಲೆ ಕಟ್ಟಿಗೆ ಹೊರೆಯೊಂದನ್ನು ಇಟ್ಟುಕೊಂಡು ಕೈಯ್ಯಲ್ಲಿ ಬೆಂಕಿಯ ಪಂಜನ್ನು ಹಿಡಿದು ಹತ್ತಿರ ಬಂದು”ಎಂತ ಈ ಹೊತ್ತಲ್ಲಿ ನಿಂಗೆ ಸಹಾಯ ಮಾಡೋದ, ಏನದು ಎಂದು ಕೇಳಿದ ಮುದುಕ ನಂಜಪ್ಪ… ಪ್ರಕಾಶ್ ನಡೆದದ್ದನ್ನೆಲ್ಲಾ ಒಂಚೂರು ಬಿಡದೆ ಸವಿಸ್ತಾರವಾಗಿ ಮುದುಕನ ಬಳಿ ಹೇಳಿದ..

“ಬದುಕು ತುಂಬಾ ಕಲಿಸಿಕೊಡುತ್ತೆ ಅದ್ನ ನಾವ್ ಕಲಿಬೇಕಷ್ಟೆ ಬೇರೆ ದಾರಿಯಿಲ್ಲ. ಆದ್ರೂ ಈ ಮಕ್ಕಳನ್ನು ಕರ್ಕೊಂಡು ಈ ಕಾಡೊಳಗೆ ಅದೇನ್ ಧೈರ್ಯ ಮಾಡಿ ಬಂದಿಯಾ” ನಡಿ ನಡಿ ಹೋಗ್ತಾ  ಮಾತಾಡೋಣ ಎಂದು ನಂಜಪ್ಪ ತನ್ನ ಗುಡಿಸಲಿನ ಕಡೆಗೆ ಹೆಜ್ಜೆ ಹಾಕಿದ.. ಪ್ರಕಾಶ್ ಮಕ್ಕಳಿಬ್ಬರನ್ನು ಎತ್ತಿಕೊಂಡು “ಮಕ್ಕಳಿಗೆ ತುಂಬಾ ಹೊಟ್ಟೆ ಹಸಿವು ಅಂದ್ರು ಅದ್ಕೆ ಧೈರ್ಯ ಮಾಡಿ ಬಂದೆ”ಎಂದು ನಂಜಪ್ಪನನ್ನು ಹಿಂಬಾಲಿಸಿದ.”ಸುಮಾರು ಐವತ್ತು ವರ್ಷದಿಂದ ಈ ಕಾಡಿನ ಜೊತೆ ಪರಿಚಯ ಇದೆ ಇಷ್ಟೊತ್ತಲ್ಲಿ ಓಡಾಡೋಕೆ ನಂಗೇ ಭಯ ಆಗುತ್ತೆ ,ಯಾಕಂದ್ರೆ ತುಂಬಾ ಕ್ರೂರ ಪ್ರಾಣಿಗಳು ಇರೋ ಕಾಡು ಅಲ್ವಾ ಅದ್ಕೆ.ಆಗೋ…!ಅಲ್ಲಿ ಕಾಣ್ತಾ ಇದ್ಯಲ ಕಾಳಿ ನದಿ ಅದರ ಒಂಚೂರು ದೂರದಲ್ಲೇ ನನ್ನ ಗುಡಿಸಲು ಇರೋದು”ಬೇಗ ಬೇಗ ಹೆಜ್ಜೆ ಹಾಕು ಎಂದು ಎಚ್ಚರಿಸಿದನು.

ಅಂದಾಗೆ ನಿನ್ನ ಹೆಸರು ಏನು ಎಂದು ಮುದುಕ ನಂಜಪ್ಪ ಕೇಳಿದ್ದ. ಪ್ರಕಾಶ್ ಅದಕ್ಕೆ ಪ್ರತ್ಯುತ್ತರವಾಗಿ”ನನ್ನ ಹೆಸರು ಪ್ರಕಾಶ್ ಅಂತ, ಇವ್ಳ್ ಹೆಸ್ರು ಮೀರಾ ಅಂತ, ಮತ್ತೆ ಇವ್ನ್ ಹೆಸ್ರು ಚಿರಂತ್ ಎಂದು ಪರಿಚಯಮಾಡಿಕೊಂಡು, ನಿಮ್ಮ ಹೆಸರೇನು ಎಂದು ಕೇಳಿದ.

ನಾನ್ ಹೆಸ್ರು ನಂಜಪ್ಪ ಎಂದು ಮರುತ್ತರಿಸಿದನು ಮುದುಕ ನಂಜಪ್ಪ.ಒಂದತ್ತು ಹದಿನೈದು ನಿಮಿಷಗಳ ನಡಿಗೆಯ ನಂತರ ಗುಡಿಸಲು ಬಂದಿದು.ಗುಡಿಸಲಿನಲ್ಲಿ ಬೇರೆ ಯಾರು ಇಲ್ಲ ಎಂದು ತಿಳಿದು ಒಮ್ಮೆಗೆ ಆಶ್ಚರ್ಯವಾಯಿತು ಸತ್ಯಪ್ರಕಾಶ್ಗೆ.

ಕುತೂಹಲ ತಾಳಲಾಗದೆ “ಇಲ್ಲಿ ನೀವೊಬ್ಬರೇನಾ ಇರೋದು,ಬೇರೆ ಯಾರು ಕಾಣ್ತಿಲ್ಲ”ಎಂದು ಕೇಳಿಯೇ ಬಿಟ್ಟ.ನಂಜಪ್ಪ “ನಾಳೆ ಬೆಳಗ್ಗೆ ಎದ್ದಾಗ  ಎಲ್ಲಾ ಹೇಳ್ತಿನಿ.ಮಕ್ಕಳು ತುಂಬಾ ಹಸಿದಿರೋ ತರ ಕಾಣ್ತಾಯಿದೆ,ಮೊದ್ಲು ಈ ರಾಗಿ ಹಂಬಲಿ ಕೊಡು ಕುಡಿಲಿ” ಎಂದು ಕೈಗಿತ್ತನು.ಹಸಿವಿನಿಂದ ಬಳಲಿದ್ದ ಪ್ರಕಾಶ್ ಮತ್ತು ಮಕ್ಕಳಿಗೆ ಆ ಹಂಬಲಿ ಮೃಷ್ಟಾನ್ನದಂತೆ ಭಾಸವಾಗಿತ್ತು.ಅಂಬಲಿ ಸವಿದ ಮಕ್ಕಳು ತುಂಬಾ ದಣಿದಿದ್ದರಿಂದ ಕ್ಷಣಾರ್ದದಲ್ಲೇ ನಿದ್ರೆಗೆ ಜಾರಿದರು.ಆದರೆ ಪ್ರಕಾಶ್ ಮಾತ್ರ ತನ್ನ ಗೆಳೆಯನ ಸಾವನ್ನು ನೆನೆಯುತ್ತ ಕಣ್ಣೀರಿಡುತ್ತಾ ಅದ್ಯಾವಾಗ ನಿದ್ದೆ ಹತ್ತಿತೋ ಅವನಿಗೆ ತಿಳಿಯಲೇ ಇಲ್ಲ.

ಮುಂದುವರೆಯುವುದು—–

ಸ್ನೇಹ ಚಿರಾಯು ನೀವು ಇಂಗ್ಲಿಷ್ ಭಾಷೆಯಲ್ಲಿಯೂ ಓದಬಹುದು.

ನಮ್ಮ ವೆಬ್ಸೈಟ್ ನ ಇತರ ಪೋಸ್ಟ್ ಗಳನ್ನು ಇಲ್ಲಿ ಓದಬಹುದು.

Comments

No comments yet. Why don’t you start the discussion?

Leave a Reply

Your email address will not be published. Required fields are marked *