ಕೆಲವು ಕಥೆಗಳು ಬರಿ ಕಥೆಗಳಷ್ಟೇ ಆಗಿರುವುದಿಲ್ಲ,ಒಬ್ಬರಿಗೆ ಬದುಕುವ ಪಾಠವಾಗಬಹುದು,ಸ್ಪೂರ್ತಿಯಾಗಬಹುದು ಕಥೆಯಲ್ಲಿರುವ ಪಾತ್ರಗಳಂತೆ ನಾನಾಗಬೇಕು ಎಂಬುವ ಛಲ ಹುಟ್ಟಿಸಬಹುದು.ಹೀಗೆ ಈ ಕಥೆ ಶುರುವಾಗಿದ್ದು ಹೋರಾಟದಿಂದ, ಆದರೆ ಅದರ ಪ್ರಯಾಣ ಅದೆಷ್ಟೋ ಜನರಿಗೆ ಸ್ಪೂರ್ತಿಯಾಗಿರುವಷ್ಟು ಪ್ರಭಾವಶಾಲಿಯಾಗಿತ್ತು.
ಹೆಣ್ಣು ಅದೊಂದು ಅದ್ಬುತ ಶಕ್ತಿ,ಅಗಾಧ ಶಕ್ತಿ.ಅದೆಂತಹ ಕಷ್ಟವೇ ಆಗಲಿ ಎಂದು ನಿಂತು ಸಾಧಿಸಿ ನಿಲ್ಲಬಲ್ಲ ಛಲ ಉಳ್ಳವಳು.ಈ ಕಥೆ ಕಿಂಜಲ್ ಸಿಂಗ್ ,ಪ್ರಾಂಜಲ್ ಸಿಂಗ್ ಹಾಗು ವಿಭಾ ಸಿಂಗ್ ಅನ್ನುವಂತಹ ಮೂವರು ಸಾಧಾರಣ ಮಹಿಳೆಯರ ಅಸಾಧಾರಣ ಕಥೆ.

ಪ್ರಾಮಾಣಿಕತೆಗೆ ಬೆಲೆ ಉಂಟೆ ?
ವಿಭಾ ಸಿಂಗ್ ತನ್ನ ಗಂಡನಾದ ಕೆ ಪಿ ಸಿಂಗ್ ಅವರನ್ನು ಕಳೆದುಕೊಂಡಾಗ ತನ್ನ ಮೊದಲನೇ ಮಗಳಾದ ಕಿಂಜಲ್ ಗೆ ಎರಡು ವರ್ಷ,ಪ್ರಾಂಜಲ್ ಇನ್ನು ಆಗ ತಾನೇ ಭ್ರೂಣದ ರೂಪ ಪಡೆದಿದ್ದಳು. ದಕ್ಷ ಹಾಗು ಪ್ರಾಮಾಣಿಕ ಅಧಿಕಾರಿ ಎಂದೇ ಹೆಸರುವಾಸಿಯಾಗಿದ್ದ ಕೆ ಪಿ ಸಿಂಗ್ ಭ್ರಷ್ಟರಿಗೆ,ಅಪರಾಧಿಗಳಿಗೆ,ಲಂಚಕೋರರಿಗೆ ಸಿಂಹಸ್ವಪ್ನವಾಗಿದ್ದರು.
ಅವರಂತಹ ಪ್ರಾಮಾಣಿಕ ಅಧಿಕಾರಿಗಳಿಗೆ ನಮ್ಮ ದೇಶದಲ್ಲಿ ಉಳಿಗಾಲವಿಲ್ಲ ಎಂದು ಅವರಿಗೆ ತಿಳಿದಿರಲಿಲ್ಲ ಎಂದೆನಿಸುತ್ತದೆ. ಅವರ ಈ ಪ್ರಾಮಾಣಿಕತೆಯೇ ಅವರ ಸಾವಿಗೆ ನಾಂದಿ ಹಾಡಿತ್ತು.ಸಹದ್ಯೋಗಿಗಳು ಅವರ ಬಗ್ಗೆ ಕಟ್ಟಿಕೊಂಡಿದ್ದ ದ್ವೇಷವೇ ಅವರ ಸಾವಿಗೆ ಸಂಚು ರೂಪಿಸುವಂತೆ ಮಾಡಿತ್ತು.ಅವರಿಗೆ ಗೊತ್ತಿಲ್ಲದೇ ಅವರನ್ನು ಸಾಯಿಸಲು ಒಂದು ದೊಡ್ಡ ಸಂಚು ನಡೆಯುತ್ತಲೇ ಇತ್ತು. ಅದು ಕೊನೆಯವರೆಗೂ ಅವರ ಅರಿವಿಗೆ ಬರಲೇ ಇಲ್ಲ.
ಆ ಪಿತೂರಿಯ ಭಾಗವೇ 1982 ಮಾರ್ಚ್ 12 ರಂದು ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿಯ ಮಾದೋಪುರಿನಲ್ಲಿ ನಡೆದ ಘಟನೆ.ಅಂದು ಇಬ್ಬರು ಅಪರಾಧಿಗಳಾದ ರಾಮ್ ಭುಲಾವಾನ್ ಮತ್ತು ಅರ್ಜುನ್ ಪಾಸಿಗಲಿದ್ದಾರೆಂಬ ಸುಳ್ಳು ಸುದ್ದಿ ತಿಳಿದ ಕೆ.ಪಿ.ಸಿಂಗ್ ತನ್ನ ನೇತೃತ್ವದ ಪೋಲೀಸರ ಗುಂಪೊಂದನ್ನು ಕರೆದುಕೊಂಡು ಅಲ್ಲಿಗೆ ಹೋದರು. ಅವರು ಕರೆದುಕೊಂಡು ಹೋಗಿದ್ದು ತನ್ನ ಸಹದ್ಯೋಗಿಗಳು ಎಂದು ಅವರು ಭಾವಿಸಿದ್ದರು ಆದರೆ ಅವರು ನಿಜವಾಗಿಯೂ ಕರೆದುಕೊಂಡು ಹೋಗಿದ್ದು ಕೊಲೆಗಡುಕರನ್ನು.
ರಾಮ್ ಬರಣ್ ಶುಕ್ಲಾ ಎಂಬ ಅಪರಾಧಿ ಮನೆಯೊಂದರಲ್ಲಿ ಅಡಗಿದ್ದಾನೆಂಬ ಸುದ್ದಿ ತಿಳಿದು ಅವನ ಮನೆಯ ಒಳಗೆ ನುಗ್ಗಿದರು ಆದರೇ ಅಲ್ಲಿ ಯಾರು ಅವರಿಗೆ ಕಾಣಲಿಲ್ಲ.ಬಾಗಿಲ ಹಿಂದೆಯೇ ನಿಂತಿದ್ದ ಅವರ ಸಹೋದ್ಯೋಗಿಯಾದ ಸಬ್ ಇನ್ಸ್ ಪೆಕ್ಟರ್ ಆರ್.ಬಿ.ಸರೋಜ್ ಹಾಗು ಇಬ್ಬರು ಕಾನ್ಸ್ಟೇಬಲ್ ಕೆ ಪಿ ಸಿಂಗ್ ಅವರ ದೇಹಕ್ಕೆ ಗುಂಡಿನ ಸುರಿಮಳೆಗೈದರು.ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಿಂಗ್ ಅವರಿಗೆ ಇದು ಅವರನ್ನು ಸಾಯಿಸಲು ನಡೆದಿರುವ ಪಿತೂರಿ ಎಂದು ಅರಿವಾಯಿತು.ಇದು ಕೊಲೆ ಎಂದು ಗೊತ್ತಾಗಬಾರದು ಎಂದು ಅವರ ಜೊತೆ ಆ ಊರಿನ ಇನ್ನೂ 12 ಜನರನ್ನು ಶೂಟ್ ಮಾಡಿ ಸಾಯಿಸುತ್ತಾರೆ. ಪೊಲೀಸ್ ಮತ್ತು ಗುಂಡಾಗಳ ನಡುವಿನ ಎನಕೌಂಟರ್ ನಲ್ಲಿ ಡಿಎಸ್ಪಿ ಸಿಂಗ್ ಹಾಗು ಇತರಲು ಮೃತರಾದರು ಎಂದು ಕೇಸ್ ಮುಚ್ಚಿಹಾಕಿದರು.
ಅನ್ಯಾಯದ ವಿರುದ್ಧ ನ್ಯಾಯದ ಹೋರಾಟ:-
ಬದುಕಿಗೆ ಆಧಾರವಾಗಿದ್ದ ಗಂಡನನ್ನ ಏಕಾಏಕಿ ಕಳೆದುಕೊಂಡ ವಿಭಾಸಿಂಗ್ ದುಃಖ ಯಾರಿಗೂ ಹೇಳತೀರದು. ಆದರೂ ಅವರು ಎಲ್ಲವನ್ನು ಸಾವರಿಸಿಕೊಂಡು ಇಬ್ಬರ ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ ಗಮನ ಹರಿಸುತ್ತಾಳೆ.ಘಟನೆ ನಡೆದ ಕೆಲವು ದಿನಗಳ ನಂತರ ನಿಧಾನವಾಗಿ ಅವರ ಗಂಡನ ಸಾವಿನ ಬಗ್ಗೆ ಕೆಲವು ನಿಜಗಳು ಅವರ ಕಿವಿಗೆ ಬೀಳುತ್ತವೆ .ಅದರ ಬಗ್ಗೆ ಹೆಚ್ಚಿನ ಗಮನ ಹರಿಸಿದ ವಿಭಾ ಸಿಂಗ್ ಅವರಿಗೆ ಒಂದು ಬೆಚ್ಚಿಬೀಳಿಸುವ ಸುದ್ದಿ ತಿಳಿಯುತ್ತದೆ. ತನ್ನ ಗಂಡನದ್ದು ಸಹಜ ಸಾವಲ್ಲ ಕೊಲೆ ಎಂಬ ಸತ್ಯ ತಿಳಿದ ವಿಭಾ ಸಿಂಗ್ ಪ್ರತಿಕಾರದ ಸೇಡಿನಿಂದ ಉರಿಯುತ್ತಾಳೆ.ಕಾನೂನಿನ ಮೊರೆ ಹೋಗುತ್ತಾಳೆ.ಸರಿಯಾದ ಸಾಕ್ಷಿಗಳು ಕಲೆ ಹಾಕಲು ಸಾಧ್ಯವಾಗದ ಅವರಿಗೆ ನ್ಯಾಯ ಸಿಗುವುದಿಲ್ಲ.ಆದರೂ ಛಲ ಬಿಡದ ಆ ಹೆಣ್ಣು ತನ್ನಿಬ್ಬರ ಮಕ್ಕಳ ಮೇಲೆ ಪ್ರಮಾಣ ಮಾಡಿ ಹೇಳುತ್ತಾಳೆ, ನನ್ನ ಗಂಡನ ಕೊಲೆಗೆ ಕಾರಣರಾದವರಿಗೆ ತಕ್ಕ ಶಿಕ್ಷೆ ಕೊಡಿಸುತ್ತೇನೆ. ಈ ಮೂಲಕ ನನ್ನ ಗಂಡನ ಆತ್ಮಕ್ಕೆ ಶಾಂತಿ ಕೊಡುತ್ತೇನೆ. ಈ ಹೋರಾಟದಲ್ಲಿ ನಾನು, ನನ್ನ ಇಬ್ಬರು ಮಕ್ಕಳನ್ನೂ ಭಾಗಿಯಾಗಿಸುತ್ತೇನೆ. ಅಲ್ಲಿಯವರೆಗೂ ನನ್ನ ಹೋರಾಟ ನಿರಂತರವಾಗಿರುತ್ತದೆ ಎಂದು ಶಪಥ ಮಾಡಿದಳು.
ವಾರಣಾಸಿಯ ಟ್ರಝರಿಯಲ್ಲಿ ಉದ್ಯೋಗ ಮಾಡುತಿದ್ದ ವಿಭಾ ತಮ್ಮ ಸಂಬಳ ಪೂರ್ತಿ ಕೋರ್ಟ್ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ ಮೀಸಲಿರಿಸುತಿದ್ದರು. ಅವರಿಗೆ ಆಗ ಇದ್ದ ಬೆಂಬಲ ಇಬ್ಬರು ಮಕ್ಕಳಷ್ಟೇ.ಏಕಪೋಷಕತ್ವದಿಂದ ಬೆಳೆಯುತ್ತಿದ್ದ ಇಬ್ಬರ ಮಕ್ಕಳಿಗೆ ತನ್ನ ತಾಯಿಯ ಹೋರಾಟದ ಕಿಚ್ಚು ಬೆಳೆಬೆಳೆಯುತ್ತಾ ನಿಧಾನವಾಗಿ ಅರ್ಥವಾಗತೊಡಗಿತು.
ಬೇರೆ ಮಕ್ಕಳ ತರಹ ಆಟವಾಡಿ ಸಂತೋಷವಾಗಿ ಕಾಲ ಕಳೆಯಬೇಕಿದ್ದ ಇವರು ಸುಪ್ರೀಂ ಕೋರ್ಟ್ ಸುತ್ತ ಅಳೆಯುವ ಬಾಲ್ಯ ಇವರದಾಗಿತ್ತು.ತಂದೆಯ ಆಸರೆಯಿಲ್ಲ ,ಪ್ರೀತಿಯಿಲ್ಲ ,ಧೈರ್ಯವಿಲ್ಲ,ಬೇಕೆನಿಸಿದ್ದು ಕೊಡಿಸಿಕೊಳ್ಳುವ ಆಯ್ಕೆ ಇರಲಿಲ್ಲ.ಅಮ್ಮನ ದುಡಿಮೆಯೇ ಅವರ ಜೀವನೋಪಾಯಕ್ಕೆ ಆಸರೆ.
ವಿಭಾಸಿಂಗ್ ಅವರ ಜೀವನ್ಮರಣದ ಹೋರಾಟ :-
ವರ್ಷಗಳು ಕಳೆದವು ನ್ಯಾಯಕ್ಕಾಗಿ ಹತ್ತಿದ ಕೋರ್ಟ್ ನ ಪ್ರತಿ ಮೆಟ್ಟಿಲು ಆಸೆಯನ್ನು ಕಮರಿಹೋಗುವಂತೆ ಮಾಡಿ ಬದಲಿಗೆ ನಿರಾಸೆಯನ್ನು ಉಡುಗೊರೆಯಾಗಿ ಕೊಟ್ಟಿತ್ತು.ನ್ಯಾಯಾಲಯದ ಮೇಲೆ ನಂಬಿಕೆ ಕಳೆದು ಕೊಳ್ಳುವಂತೆ ಮಾಡಿತ್ತು.ಈ ಹೋರಾಟದಲ್ಲಿ ತನ್ನ ಆರೋಗ್ಯವು ಕೈ ಕೊಟ್ಟಿತ್ತು.ಅವರಿಗೆ ಕ್ಯಾನ್ಸರ್ ಇರುವುದು ತಿಳಿದು ಅವರ ಜಂಘಾಭಲವು ಹುದುಗಿಹೋಗಿತ್ತು.ಈ ಭಯ ಅವರು ಸಾಯುತ್ತಾರೆ ಎಂದಲ್ಲ ಬದಲಿಗೆ ತನ್ನಿಬ್ಬರ ಹೆಣ್ಣು ಮಕ್ಕಳ ಮುಂದಿನ ಉಜ್ವಲ ಭವಿಷ್ಯ ಏನಾಗುವುದೋ ,ಅವರ ಗಂಡನ ಸಾವಿಗೆ ಸಿಗಬೇಕಾದ ನ್ಯಾಯ ಸಿಗುವುದೋ ಇಲ್ಲವೋ ಈ ಎರಡು ಪ್ರಶ್ನೆಗಳಿಗೆ ಉತ್ತರ ಸಿಗದೇ ನಾನು ಸತ್ತರೆ ನನ್ನ ಆತ್ಮಕ್ಕೆ ನೆಮ್ಮದಿ ಇಂದ ಇರಲು ಸಾಧ್ಯವಿಲ್ಲ ಅನ್ನುವ ಭಯ.
ಜೀವನದ ಪ್ರತಿ ಹಂತದಲ್ಲೂ ಹೋರಾಟ ಮಾಡುತ್ತ ಬಂದಿದ್ದ ವಿಭಾ ಸಿಂಗ್ ಗೆ ಈಗ ಜೀವನ್ಮರಣದ ವಿರುದ್ಧ ಹೊರಡುವ ಹೊಸ ಸವಾಲೊಂದು ಸ್ವೀಕರಿಸಬೇಕಿತ್ತು.ಇನ್ನು ಈ ಹೋರಾಟ ನನ್ನಿಂದ ಮುಂದುವರೆಸಲು ಸಾಧ್ಯವಿಲ್ಲಾ ಎಂದು ತಿಳಿದ ವಿಭಾಸಿಂಗ್ ತನ್ನ ಮಕ್ಕಳಿಗೆ ಈ ಹೋರಾಟದ ಮಹತ್ವ ತಿಳಿಸಿ ತಾನು ನೆಮ್ಮದಿಯಿಂದ ಕಣ್ಣು ಮುಚ್ಚಬೇಕು ಎಂದು ನಿರ್ಧರಿಸಿದ್ದರು.
ತನ್ನ ಮಕ್ಕಳು ಅವರ ಅಪ್ಪನಂತೆ ಸಮಾಜದಲ್ಲಿ ಒಂದು ದೊಡ್ಡ ಹುದ್ದೆಯನ್ನು ಅಲಂಕರಿಸಬೇಕು, ಪ್ರಾಮಾಣಿಕರಾಗಿರಬೇಕು.ಅನ್ಯಾಯದ ತುಂಬಿದ ಈ ಸಮಾಜವನ್ನು ಶುಚಿ ಮಾಡಬೇಕು ಅದರ ವಿರುದ್ಧ ಹೋರಾಡಿ ಗೆದ್ದು ಸಮಾಜವನ್ನು ಒಂದು ಸುಸ್ಥಿರ ಸ್ಥಿತಿಗೆ ತರುವ ಪ್ರಯತ್ನ ಮಾಡಬೇಕು.ಇದರ ಜೊತೆಗೆ ಒಂದು ದೊಡ್ಡ ಹುದ್ದೆಯ ಅಲಂಕರಿಸಿದರೆ ಅವರ ತಂದೆಯ ಸಾವಿಗೆ ನ್ಯಾಯ ಸಿಗುವ ದಾರಿ ಸುಗಮವಾಗುತ್ತದೆ ಎಂದು ತನ್ನಿಬ್ಬರು ಮಕ್ಕಳನ್ನು ಐಎಎಸ್ ,ಐಪಿಎಸ್ ಆಗಬೇಕು ಎಂದು ಕನಸು ಕಟ್ಟಿದ್ದಳು.ಈ ಎಲ್ಲ ಕನಸುಗಳು ನನಸಾಗುತ್ತವೆ ಎಂಬ ಆಶಾವಾದದಿಂದ ಕಣ್ಣು ಮುಚ್ಚಿದರು.
ಒಂಟಿ ಬದುಕಿನ ಜಂಟಿ ಹೋರಾಟ:-
ತಂದೆ ತಾಯಿ ಇಲ್ಲದ ಒಂಟಿ ಬದುಕಿಗೆ ಈಗ ಜಂಟಿ ಸಹೋದರಿಯರ ಹೋರಾಟ ಮುಂದುವರೆಯುತ್ತ ಹೋಯ್ತು.ಬುದ್ದಿ ಬರುವ ಮುಂಚೆಯೇ ತಂದೆಯನ್ನು ಕಳೆದುಕೊಂಡಿದ್ದ ಕಿಂಜಲ್ ಗೆ,ತಂದೆಯ ಮುಖದ ಚಹರೆಯ ಗುರುತಿಲ್ಲದ ಪ್ರಾಂಜಲ್ ಗೆ ತನ್ನ ತಾಯಿಯನ್ನು ಕಳೆದುಕೊಳ್ಳುವುದನ್ನು ಊಹಿಸಲು ಸಾದ್ಯವಿರಲಿಲ್ಲ. ಬಾಲ್ಯದಿಂದಲೂ ಏಕಾಂಗಿಯಾಗಿ ಹೋರಾಡುತ್ತ, ಸ್ವತಂತ್ರ ಬದುಕಿನ ಹಂಬಲ ತುಂಬುತ್ತ ದಿಟ್ಟತನ ಹೇಳಿಕೊಡುತ್ತ ಬಂದಿದ್ದ ಅಮ್ಮನಿಲ್ಲದ ಬದುಕನ್ನು ಊಹಿಸಿಕೊಳ್ಳುವುದು ಅವರಿಗೆ ಕಷ್ಟಕರವಾಗಿತ್ತು.
ಅಮ್ಮ ತೀರಿಕೊಂಡ ನಂತರ ಸಂಬಂಧಿಕರೊಬ್ಬರ ಮನೆಯಲ್ಲಿ ಆಶ್ರಯ ಪಡೆಯುತ್ತಾರೆ. ಆಗ ಕೂಡ ಇತರರೆಲ್ಲ ಹುಡುಗಿಯರು, ಸ್ನೇಹಿತರು ಓಡಾಟ ಎಂದು ಕಾಲೇಜು ಜೀವನವನ್ನು ಎಂಜಾಯ್ ಮಾಡುತಿದ್ದರು. ಈ ಸಹೋದರಿಯರು ಮಾತ್ರ ತಮ್ಮ ಓದಿನಲ್ಲೇ ಮಗ್ನರಾಗಿ ತಮ್ಮ ಗುರಿಯ ಕಡೆ ಗಮನ ಹರಿಸಿದ್ದರು . ಒಬ್ಬರಿಗೊಬ್ಬರು ಕಾಳಜಿ ವಹಿಸುತ್ತಾ , ಧೈರ್ಯ ತುಂಬುತ್ತಾ , ಇಬ್ಬರೂ ಗಟ್ಟಿಯಾಗುತ್ತಾ, ಅಮ್ಮ ಅಪ್ಪ ಇಲ್ಲದ ನೋವನ್ನು ತಮ್ಮ ಓದಿನಲ್ಲೇ ಮರೆಯುತ್ತ, ಇಬ್ಬರೂ ಗುರಿಯತ್ತ ಸಾಗಿದರು.
ಓದಿನಲ್ಲಿ ಸದಾ ಮುಂದಿರುತಿದ್ದ ಕಿಂಜಲ್ ಗೆ ವಿಶ್ವವಿದ್ಯಾನಿಲಯದ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿ ಬಂಗಾರ ಪದಕ ಪಡೆದಿದ್ದಳು. ಪದವಿ ಮುಗಿಸಿದ ಈ ಸಹೋದರಿಯರು ದೆಹಲಿಯ ಮುಖರ್ಜಿ ನಗರ್ ನಲ್ಲಿ UPSC ತರಬೇತಿಯನ್ನು ಪಡೆಯುತ್ತಾರೆ.ಹಗಲು ರಾತ್ರಿ ಎನ್ನದೆ ಓದಿನಲ್ಲಿ ಮಗ್ನರಾಗುತ್ತಾರೆ.ಇದರ ಪ್ರತಿಫಲವಾಗಿ,ಅಮ್ಮನ ಕನಸಿನಂತೆ 2007ರಲ್ಲಿ ಅವರ ಇಬ್ಬರೂ ಸಹೋದರಿಯರು ಐಎಎಸ್ ಪಾಸ್ ಮಾಡಿದ್ದರು. ಕಿಂಜಲ್ ದೇಶಕ್ಕೆ 25ನೇ ರ್ಯಾಂಕ್ ಪಡೆದಿದ್ದರೆ ತಂಗಿ ಪ್ರಂಜಲ್ 252ನೇ ರ್ಯಾಂಕ್ ಪಡೆದಿದ್ದಳು.
ದಿಟ್ಟ ಹೋರಾಟಕ್ಕೆ ಸಂದ ಜಯ:-
ಇಷ್ಟು ದಿನ ಹೋರಾಡಿದ ಹೋರಾಟಕ್ಕೂ ಇನ್ನು ಮುಂದೆ ಹೋರಾಡುವ ಹೋರಾಟಕ್ಕೆ ಹೆಚ್ಚಿನ ಮಹತ್ವ ಇರುತ್ತದೆಂದು ಅವರಿಗೆ ಅರಿವಾಗಿತ್ತು .ಈಗ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು .ಹೋರಾಟದ ಪ್ರತಿಫಲವಾಗಿ 2013ರಲ್ಲಿ ಲಖ್ನೋ ಸಿಬಿಐ ವಿಶೇಷ ನ್ಯಾಯಾಲಯ ಡಿಎಸ್ಪಿ ಕೆ.ಪಿ. ಸಿಂಗ್ ರದ್ದು ಸಹಜ ಸಾವಲ್ಲ ಇದು ಕೊಲೆ ಎಂದು ತೀರ್ಪು ಕೊಟ್ಟಿತ್ತು.ಅದರಲ್ಲಿ ಐವರಿಗೆ ಅಂದರೆ ರಾಧೆಶ್ಯಾಮ್,ರಾಮ್ ಸೇವಕ್,ರಾಮ್ ಪಾಲ್ ,ಚಂದ್ರ ಪ್ರಕಾಶ್ ಹಾಗು ಬೈಜ್ನಾಥ್ ರಿಗೆ ಜೀವಾವಧಿ ಶಿಕ್ಷೆ ನೀಡಿತು.ಸುಪ್ರೀಂಕೋರ್ಟ್ ಪ್ರಮುಖ ಆರೋಪಿಗಳಾದ ಸಬ್ ಇನ್ಸ್ ಪೆಕ್ಟರ್ ಸರೋಜ್ ಹಾಗು ಹೆಡ್ ಕಾನ್ ಸ್ಟೇಬಲ್ ರಾಮ್ ನಾಯಕ್ ಪಾಂಡೆ ಮತ್ತು ರಾಮ್ ಕರಣ್ ಸಿಂಗ್ ಸೇರಿದಂತೇ ಮೂವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತು.
n.ಬದುಕಿನ ಪುಸ್ತಕದ ಪ್ರತಿಪುಟವು ದಿಟ್ಟತನದಿಂದ ಕೂಡಿತ್ತು.ಅವರು ನಡೆದು ಬಂದ ದಾರಿಯಂತು ಸುಲಭವಾಗಿರಲಿಲ್ಲ.ಕಡೆಗೆ ಇಬ್ಬರೂ ಜತೆ ಸೇರಿ ಅಪ್ಪನ ಕೊಂದವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾರೆ. ಅದು ನ್ಯಾಯಯುತವಾಗಿಯೇ. ಮಗುವಿದ್ದಾಗಿನಿಂದ ಹಿಡಿದು, ಐಎಎಸ್ ಅಧಿಕಾರಿಯಾಗುವ ವರೆಗೂ ನೋವು ಸಂಕಟಗಳೇ ತುಂಬಿಕೊಂಡಿದ್ದವು.ನ್ಯಾಯಾಲದ ಆದೇಶದ ನಂತರ ಕಿಂಜಲ್ ಬಾಯಿಂದ ಬಂದ ಮಾತು “ಪ್ರಾಮಾಣಿಕ ತಂದೆ ,ಅನ್ಯಾಯವನ್ನು ಯಾವತ್ತೂ ಸಹಿಸಬೇಡಿ ಎಂಬ ಅಮ್ಮನ ಬದುಕೇ ಎಂದು ದಿಟ್ಟ ಹೋರಾಟ ಮಾಡಿದ ತಾಯಿ ಇವರ ವ್ಯಕ್ತಿತ್ವಗಳೇ ನಮಗೆ ಸ್ಫೂರ್ತಿ” ಎಂದು ಬಿಕ್ಕಿ ಬಿಕ್ಕಿ ಅತ್ತರು.
ಪ್ರಾಮಾಣಿಕ ಅಧಿಕಾರಿಯಾಗಿ ಕೊಲೆಗೀಡಾದ ವ್ಯಕ್ತಿ ಒಂದು ಕಡೆಯಾದರೆ ,ತನ್ನ ಗಂಡನ ಸಾವಿಗೆ ನ್ಯಾಯ ದೊರಕಿಸಬೇಕೆಂದು ಹೋರಾಡುವುದರ ಜೊತೆ ತನ್ನೆರಡು ಹೆಣ್ಣು ಮಕ್ಕಳನ್ನು ದೇಶದ ಅತ್ಯುನ್ನತ ಹುದ್ದೆಗಳನ್ನು ಗಳಿಸಲು ಬುನಾದಿ ಹಾಕಿದ ವಿಭಾಸಿಂಗ್ , ಎಂತಹ ಸಂಕಷ್ಟಗಳು ಎದುರಾದರು ಧೃತಿಗೆಡಡೇ ಕಷ್ಟಪಟ್ಟು ಓದಿ IPS ಅಧಿಕಾರಿಯಾಗಿ, ತನ್ನ ತಂಗಿಯನ್ನೂ IRS ಅಧಿಕಾರಿಯಾಗುವಂತೆ ಪ್ರೇರೇಪಿಸಿದ ಕಿಂಜಲ್ ಸಿಂಗ್,ತಂದೆಯನ್ನೂ ಕಾಣದ ಯುವತಿ ತನ್ನ ಅಮ್ಮ,ಅಕ್ಕ ಹಾಕಿಕೊಟ್ಟ ಮಾರ್ಗದಲ್ಲೇ ನಡೆದು IRS ಎಂಬ ಹುದ್ದೆ ಅಲಂಕರಿಸಿದ ಪ್ರಾಂಜಲ್ ಸಿಂಗ್ ಈ ಮೂರು ಹೆಣ್ಣು ಮಕ್ಕಳು ನಮ್ಮ ನಿಮ್ಮೆಲ್ಲರಿಗೆ ಸ್ಫೂರ್ತಿ.
ನೋವುಗಳಿಂದ ಆರಂಭವಾದ ಅವರ ಜೀವನದ ಪಯಣ ಕೊನೆಗೆ ಧೈರ್ಯ, ಪರಿಶ್ರಮ ಮತ್ತು ನ್ಯಾಯದ ಗೆಲುವಿನ ಕಥೆಯಾಗಿ ಉಳಿಯಿತು. ಇದು ಕೇವಲ ಇಬ್ಬರು ಸಹೋದರಿಯರ ಕಥೆಯಲ್ಲ, ಮೂರು ಧೈರ್ಯಶಾಲಿ ಮಹಿಳೆಯರ ಸ್ಫೂರ್ತಿದಾಯಕ ಜೀವನಗಾಥೆ.
ಈ ಕಥೆಯನ್ನು ನೀವು ಇಂಗ್ಲಿಷ್ ಭಾಷೆಯಲ್ಲಿಯೂ ಓದಬಹುದು.
ನಮ್ಮ ವೆಬ್ಸೈಟ್ ನ ಇತರ ಪೋಸ್ಟ್ ಗಳನ್ನು ಇಲ್ಲಿ ಓದಬಹುದು.
