ಮೀರಾ,ಮಾನ್ಯ ಕಾಲೇಜಿಗೆ ಹೋಗುವಷ್ಟರಲ್ಲಿ ಅದಾಗಲೇ ಪ್ರಣವ್, ನಕುಲ್ ಹಾಜರಿದ್ದರು.
“ಎನ್ರೋ ಇಸ್ಟ್ ಬೇಗ ಕಾಲೇಜಿಗೆ ಬಂದ್ಬಿಟ್ಟಿದೀರಾ”ಎಂದು ಮಾನ್ಯ ಕೇಳಿದಳು.
“ಏನೋ, ಮೀರಾ ನಕುಲ್ ಮೇಲೆ ಕೋಪ ಮಾಡ್ಕೊಂಡಿದಾರೆ ಅಂತ ಸುದ್ದಿ ಬಂತು ಅದ್ಕೆ ತಣ್ಣಗೆ ಮಾಡೋಣ ಅಂತ ಬೇಗ ಬಂದ್ವಿ”ಎಂದು ಮೀರಾಳನ್ನು ರೇಗಿಸಿದನು ಪ್ರಣವ್.
“ನಾನೇನ್ ಕೋಪ ಮಾಡ್ಕೊಂಡಿಲ್ವಲ್ಲಾ ಅವ್ನೆ ಇಲ್ದೆ ಇರೋದ್ದನ್ನೆಲ್ಲಾ ಸೇರಿಸಿ ನಿಂಗ್ ಹೇಳ್ತಿರಬೇಕು”ಎಂದು ತನ್ನನ್ನು ತಾನು ಸಮರ್ಥಿಸಿಕೊಂಡಳು ಮೀರಾ.

ಮೀರಾ ಹೇಳಿದ್ದು ನೋಡಿ ಮಾನ್ಯಳಿಗೆ ಆಶ್ಚರ್ಯವಾಗಿ “ಏನು”ಎಂಬಂತೆ ಮೀರಾಳಿಗೆ ಕೇಳಿದಳು. ಮೀರಾ ಸುಮ್ಮನಿರುವಂತೆ ಕಣ್ಸನ್ನೆ ಮಾಡಿದಳು. “ಸರಿ”ಎಂಬಂತೆ ಮಾನ್ಯ ತಲೆಯಾಡಿಸಿದಳು.
“ಏನು ನಿಜ್ವಾಗ್ಲೂ ಕೋಪ ಮಾಡ್ಕೊಂಡಿಲ್ವ ನನ್ಮೇಲೆ. ಸುಮ್ನೆ ಫೀಲ್ ಮಾಡ್ಕೊಂಡೆ ಕಣೆ ನೀನ್ ಬೇಜಾರಾಗಿದೀಯಾ ಅಂತ”
“ಹೌದೌದು ನಮ್ ಹುಡುಗ ಫುಲ್ ಫೀಲ್ ಮಾಡ್ಕೊಂಡಿದ್ದ ಅದ್ಕೆ ಅದೇನ್ ಬೇಗ ಪರಿಹಾರ ಮಾಡ್ಕೊಳ್ಳೋಣ ಅಂತ ಕಾಲೇಜಿಗೆ ಬೇಗ ಬಂದ್ವಿ”ಎಂದ ಪ್ರಣವ್.
“ಅಷ್ಟಕ್ಕೂ ನೀನ್ಮೇಲೆ ನಾನ್ ಯಾಕ್ ಕೋಪ ಮಾಡ್ಕೋಬೇಕು. ನೀನ್ ಅವ್ಳ್ ಜೊತೆ ಮಾತಾಡಿದ್ರೆ ನಂಗೇನು ಬಿಟ್ರೆ ನಂಗೇನು “ಎಂದು ಮತ್ತದೇ ಹುಸಿಮುನಿಸು ತೋರಿದಳು ಮೀರಾ.
ಅಷ್ಟರಲ್ಲಿ ಅಲ್ಲಿಗೆ ಬಂದ ನಿಧಿ “ಹಾಯ್ ಫ್ರೆಂಡ್ಸ್ ನಿಮಗೆಲ್ಲಾ ಒಂದ್ ಗುಡ್ ನ್ಯೂಸ್”ಎಂದಳು.
“ಏನು ಗುಡ್ ನ್ಯೂಸಾ”ಎಂದು ಎಲ್ಲರೂ ಉದ್ಗಾರ ಮಾಡಿದರು.
“ಹೌದು. ಅದ್ನ ನಾಳೆ ನನ್ ಬರ್ತ್ಡೇ ಪಾರ್ಟಿಯಲ್ಲಿ ಸರ್ಪ್ರೈಸ್ ಕೊಡೋಣ ಅನ್ಕೊಂಡೆ ಆದ್ರೆ ನಾನ್ ಸರ್ಪ್ರೈಸ್ ಕೊಟ್ಟಮೇಲೆ ಅದು ಬೇಗ ಆಗ್ಬೇಕು ಅಂದ್ರೆ ಅದ್ಕೆ ಮೊದಲೇ ತಯಾರಿ ಆಗಿರಬೇಕು. ಅದ್ಕೆ ಈಗ್ಲೇ ಹೇಳೋಣ ಅಂತ ತೀರ್ಮಾನ ಮಾಡಿದ್ದೀನಿ”
“ತೊ….!ಅದೆಲ್ಲಾ ಯಾಕೆ ನಮಗೆ. ಮೊದಲು ಆ ಸರ್ಪ್ರೈಸ್ ಏನು ಅಂತ ಹೇಳು ತಡ್ಕೊಳ್ಳೋಕಾಗ್ತಿಲ್ಲ”ಎಂದ ನಕುಲ್.
“ತಾಳ್ಮೆ ತಾಳ್ಮೆ ಹೇಳ್ತಿನಿ. ನಾವೆಲ್ಲ ಸೇರಿ ನನ್ನ ಬರ್ತ್ಡೇ ಆದ್ಮೇಲೆ ಒಂದು ವಾರ ಟ್ರಿಪ್ ಹೋಗೋಕೆ ಅಮ್ಮ ಗ್ರೀನ್ ಸಿಗ್ನಲ್ ಕೊಟ್ರು”

“ವಾವ್…..!!ಸೂಪರ್ ನಿಧಿ ನಾವು ತುಂಬಾ ದಿನದಿಂದ ಅನ್ಕೊಂಡಿದ್ವಿ ಅಲ್ವಾ ಹೋಗ್ಬೇಕು ಅಂತ. ಅದ್ಸರಿ ಎಲ್ಲಿಗೆ ಹೋಗೋದು ಅಂತ ಹೇಳಿಲ್ಲ”ಅಂತ ಕೇಳಿದಳು ಮಾನ್ಯ.
“ಅದೆಲ್ಲಾ ನಂಗೊತ್ತಿಲ್ಲಪ್ಪ. ಟ್ರಿಪ್ಪಿಗೆ ಆಗೋ ಖರ್ಚು, ಅದಕ್ಕೆ ಬೇಕಾದ ಸರಕು ಸಾಮಗ್ರಿಗಳ ಎಲ್ಲಾ ಜವಾಬ್ದಾರಿ ನಂದು.ಎಲ್ಲಿಲ್ಲಿಗೆ ಹೋಗ್ಬೇಕು, ಎಲ್ಲಿ ಉಳಿದುಕೊಳ್ಳಬೇಕು ಅವೆಲ್ಲದರ ಬ್ಲೂಪ್ರಿಂಟ್ ತಯಾರಿಸುವ ಜವಾಬ್ದಾರಿ ನಿಮ್ದು”ಎಂದು ವಿವರಿಸಿದಳು ನಿಧಿ.
ಟ್ರಿಪ್ಪಿಗೆ ಚಿರಂತ್ ಬರಬಹುದೇನೋ ಎಂಬ ಸಂದೇಹ ಬಂದಿತು ಮೀರಾಳಿಗೆ ಆದ್ದರಿಂದ ನಿಧಿಯ ಬಳಿ”ಟ್ರಿಪ್ಪಿಗೆ ಯಾರ್ ಯಾರ್ ಬರುತ್ತಿದ್ದಾರೆ”ಎಂದು ಕೇಳಿದಳು.
“ಇನ್ಯಾರೇ ಬರ್ತಾರೆ ನಾವ್ ಐದು ಜನ ಅಷ್ಟೇ.ಅದ್ಯಾಕೆ ಹೀಗೆ ಕೇಳ್ತಿದೀಯಾ”ಎಂದಳು ನಿಧಿ.
“ಏನು ಇಲ್ಲ ಚಿರಂತ್ ನಿಮ್ ಮನೆಯಲ್ಲೇ ಇದ್ದಾನಲ್ವಾ ಬಂದ್ರು ಬರಬಹುದೇನೋ ಎಂಬ ಸಂದೇಹದಿಂದ ಕೇಳ್ದೆ ಅಷ್ಟೇ”
“ಅವ್ರ್ ಯಾಕೆ ಬರ್ತಾರೆ. ಅವ್ರು ಅಮ್ಮನ ಜೊತೆಯಲ್ಲಿ ಇಲ್ಲೇ ಇರ್ತಾರೆ.ಅವ್ರೇನು ಬರೋದಿಲ್ಲ ಟೆನ್ಷನ್ ತಗೋಬೇಡ. ನೀನ್ ನಿಮ್ ಅಂಕಲ್ಗೆ ಒಂದು ಮಾತು ಕೇಳಿ ರೆಡಿಯಾಗು.ಅವ್ಳ್ ತರಾನೇ ನೀವು ನಿಮ್ ಮನೆಯಲ್ಲಿ ಎಲ್ಲಾ ಇವತ್ತೇ ಕೇಳಿ”ಎಂದಳು ನಿಧಿ.
ಎಲ್ಲರೂ ಸರಿ ಎಂಬಂತೆ ತಲೆಯಾಡಿಸಿದರು. ಅಷ್ಟರಲ್ಲೇ ಕಾಲೇಜ್ ಬೆಲ್ ರಿಂಗಣಿಸಿತು. ಎಲ್ಲರೂ ಜೊತೆಯಾಗಿ ಕ್ಲಾಸ್ಗೆ ಹೋದರು.
ಮರುದಿನ…..
ನಿಧಿಗೆ ಬರ್ತ್ಡೇ ಸಂಭ್ರಮ.ಮಧ್ಯರಾತ್ರಿ ತುಳಸಿಯಿಂದ ಮೊದಲ ಹಾರೈಕೆ ಪಡೆದ ನಂತರ ಚಿರು, ತನ್ನ ಗೆಳೆಯ ಗೆಳತಿಯರ ಹಾರೈಕೆ ಪಡೆದಳು.
ಬೆಳಗ್ಗೆ ಎದ್ದಾಗ ಸಂಜೆಯ ಪಾರ್ಟಿಯ ತಯಾರಿಕೆಯ ಗಡಿಬಿಡಿಯಲ್ಲಿ ಅತ್ತಿಂದ್ದತ್ತ ಓಡಾಡುತ್ತಿದ್ದ ತುಳಸಿಯ ಬಳಿ ಬಂದ ನಿಧಿ”ಅಮ್ಮಾ ಕೆಲಸ ಎಲ್ಲಾ ಆಯ್ತಾ ದೇವಸ್ಥಾನಕ್ಕೆ ಹೋಗೋಕೆ ಲೇಟ್ ಆಗುತ್ತೆ”ಎಂದಳು.
“ಸಾರೀ ಪುಟ್ಟ, ಇನ್ನು ತುಂಬಾ ಕೆಲಸ ಬಾಕಿ ಇದೆ ನಂಗ್ ಬರೋಕೆ ಆಗಲ್ಲ”ಎನ್ನುತ್ತಾ ಗಿಡಕ್ಕೆ ನೀರು ಹಾಯಿಸುತ್ತಿದ್ದ ಚಿರಂತನನ್ನು ಕಂಡ ತುಳಸಿ”ಒಂದ್ ಕೆಲಸ ಮಾಡು ಚಿರು ಜೊತೆ ದೇವಸ್ಥಾನಕ್ಕೆ ಹೋಗಿ ಬಾ”ಎಂದಳು.
ಚಿರು ಜೊತೆ ಹೋಗಿ ಬಾ ಎಂದಾಕ್ಷಣ ನಿಧಿಗೆ ಎಲ್ಲಿಲ್ಲದ ಖುಷಿ.ಚಿರು ಎಂದರೆ ಅವಳಿಗೆ ಅದೇನೋ ತಿಳಿಯದ ಸೆಳೆತ.ಸದಾ ಅವನೊಂದಿಗೆ ಸಮಯ ಕಳೆಯುವ ಬಯಕೆ ಅವಳದ್ದಾಗಿತ್ತು.ಬಂದ ಚಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳುವ ಆಸೆಯಿಂದ ತಾಯಿಗೆ ಸಮ್ಮತಿ ಸೂಚಿಸಿದಳು.
ಚಿರು ಬಳಿ ಬಂದ ನಿಧಿ”ಹಲೋ ಮಿಸ್ಟರ್ ಚಿರಂತ್ ಅವ್ರೆ. ಅಮ್ಮ ಹೇಳಿದ್ರು ನನ್ನ ದೇವಸ್ಥಾನಕ್ಕೆ ಕರೆದುಕೊಂಡು ಹೋಗಬೇಕಂತೆ”ಎಂದಳು ತುಟಿಯಂಚಿನಲ್ಲಿ ನಗೆ ಬೀರುತ್ತಾ.
“ನಾನಾ”ಎಂದು ಚಿರಂತ್ ಆಶ್ಚರ್ಯದಿಂದ ಕೇಳಿದ.
“ಹ್ಮ್ ಸರ್ ನೀವೇ”ಎಂದಳು.
“ಅದು ನಾನ್ ಗಿಡಕ್ಕೆ ನೀರು ಹಾಯಿಸುತಿದ್ದೆ…ss”ಎಂದು ರಾಗ ಎಳೆದ.
“ಲೋ ಕೋತಿ,ನೀರು ಹಾಯಿಸೋಕೆ ತುಂಬಾ ಜನ ಇದಾರೆ ನಮ್ ಮನೇಲಿ.ನೀನ್ ನನ್ ಜೊತೆ ಬಾ”ಎಂದು ಕೈ ಹಿಡಿದೇ ಕರೆದುಕೊಂಡು ಹೋದಳು.
ದೇವಸ್ಥಾನದಲ್ಲಿ ಕೈ ಮುಗಿದ ನಿಧಿ”ದೇವ್ರೇ…!ಎರಡು ದಿನದ ಹಿಂದೆ ಈ ಚಿರಂತ್ ಯಾರು ಅನ್ನೋದೇ ಗೊತ್ತಿರಲಿಲ್ಲ,ನಮ್ ಅಮ್ಮನ ಪ್ರಾಣ ಉಳಿಸಿ ಇವತ್ತು ತುಂಬಾ ಹತ್ತಿರ ಆಗಿದ್ದಾನೆ.ನಾನು ಮತ್ತೆ ಅಮ್ಮನ ಪ್ರೀತಿಯನ್ನು ಕಾಣುತ್ತಿದ್ದೇನೆ ಅಂದರೆ ಅದಕ್ಕೆ ಅವನೇ ಕಾರಣ.ಅವ್ನ್ ಎಸ್ಟ್ ದಿನ ಬದುಕುತ್ತಾನೋ ಅಂತ ನಿನ್ಗೆ ಚೆನ್ನಾಗಿ ಗೊತ್ತು ಅವ್ನ್ ಬದುಕಿರೋವರೆಗೂ ಯಾವುದೇ ನೋವುಗಳು ಅವನ ಹತ್ತಿರ ಸುಳಿಯದಂತೆ ನೋಡಿಕೋ”ಎಂದು ದೇವರ ಬಳಿ ಬೇಡಿಕೆ ಇಟ್ಟಳು.

ದೇವಸ್ಥಾನದ ಹೊರಗಡೆ ಒಬ್ಬನೇ ಕೂತಿದ್ದ ಚಿರಂತನ ಬಳಿ ಬಂದ ನಿಧಿ”ಚಿರು, ಇವತ್ತು ನನ್ ಬರ್ತ್ಡೇ ಅಲ್ವಾ. ನೀನೇನು ಗಿಫ್ಟ್ ಕೊಡ್ಲೆ ಇಲ್ಲ ವಿಶ್ ಮಾಡಿ ಸುಮ್ನಾದೆ”ಎಂದಳು ನಿಧಿ ದೇವರ ಪ್ರಸಾದ ಕೊಡುತ್ತಾ.
“ಇನ್ನು ಸಂಜೆವರೆಗೂ ಟೈಂ ಇದೆ ಅಲ್ವಾ. ಸಂಜೆ ಪಾರ್ಟಿಯಲ್ಲಿ ಕೊಡ್ತೀನಿ”ಎಂದ.
“ನೀನಾಗಲೇ ನನ್ಗೆ ಮರೆಯೋಕಾಗದೆ ಇರುವಂತ ಗಿಫ್ಟ್ ಕೊಟ್ಟಿದ್ದೀಯಾ ಚಿರು ಅಷ್ಟ್ ಸಾಕು.ಇನ್ಯಾವ ಗಿಫ್ಟ್ ನಂಗ್ ಬೇಡ”ಎಂದಳು ಅವನ ಮುಖವನ್ನೇ ದಿಟ್ಟಿಸಿ ನೋಡುತ್ತಾ.
ಇದರಿಂದ ಸ್ವಲ್ಪ ಮುಜುಗರಗೊಂಡ ಚಿರು”ನಿಧಿ ದೇವರ ಹತ್ರ ಏನ್ ಬೇಡ್ಕೊಂಡೇ”ಎಂದು ಮಾತು ಮರೆಸಲು ಪ್ರಯತ್ನಿಸಿದ.
“ನನ್ ಈ ಖುಷಿಗೆ ಕಾರಣವಾದ ಚಿರಂತ್ಗೆ ಯಾವುದೇ ನೋವು ಕೊಡ್ಬೇಡ ಅಂತ ಬೇಡ್ಕೊಂಡೇ”ಎಂದಳು ಅವನ ಕಣ್ಣಲ್ಲೇ ನೋಡುತ್ತಾ.
ಇದರಿಂದ ಮತ್ತೂ ಮುಜುಗರಗೊಂಡ ಚಿರಂತ್”ಸರಿ ಸರಿ ಮನೆಗೆ ಹೋಗೋಣ್ವಾ”ಎಂದ.
“ಹ್ಮ್ ಹೋಗೋಣ”ಎಂಬ ಮಾತು ಅವಳಿಗೆ ಅರಿವಿಲ್ಲದೆ ಅವಳ ಬಾಯಿಂದ ಹೊರಹೊಮ್ಮಿತ್ತು.
ಸಂಜೆಯಾಯ್ತು, ತುಳಸಿ ಮನೆಗೆ ಪಾರ್ಟಿಗೆ ಬಂದವರನ್ನೆಲ್ಲಾ ಸ್ವಾಗತಿಸುತ್ತಿದ್ದಳು.ಅವರಿಗೆ ಪ್ರಣವ್ ಮತ್ತು ನಕುಲ್ ಸಾಥ್ ಕೊಡುತಿದ್ದರು. ಚಿರಂತ್ ಬಂದ ಅತಿಥಿಗಳಿಗೆ ಏನೇನು ಬೇಕೆಂದು ವಿಚಾರಿಸುತ್ತಿದ್ದನು.
ಪ್ರಣವ್ ಬಳಿ ಬಂದ ನಿಧಿ “ಪ್ರಣವ್, ಆ ಮೀರಾ, ಮಾನ್ಯ ಇನ್ನು ಬಂದಿಲ್ವೇನೋ “ಎಂದು ಕೇಳಿದಳು.
“ಇನ್ನು ಇಲ್ಲ ನಿಧಿ. ಒಂದ್ ನಿಮಿಷ ಮಾನ್ಯಳಿಗೆ ಫೋನ್ ಮಾಡ್ತೀನಿ”ಎಂದು ಮೊಬೈಲ್ ಕೈಗೆತ್ತಿಕೊಂಡ ಪ್ರಣವ್.
ನಕುಲ್ಗೆ ಮಾನ್ಯ ಯಾವಾಗ ಬರ್ತಾಳೋ ಯಾವಾಗ ಅವಳ ಹತ್ತಿರ ಮಾತಾಡ್ತಿನೋ ಎಂಬ ಆತುರ ಸ್ವಲ್ಪ ಜಾಸ್ತಿನೇ ಇತ್ತು.ಆದ್ದರಿಂದ ಪ್ರಣವ್ ಕೈಯಿಂದ ಫೋನ್ ಕಸಿದುಕೊಂಡ ನಕುಲ್”ಎಲ್ಲಿದಿಯಾ ಮಾನ್ಯ, ಇಲ್ಲಿ ನಿನಗೋಸ್ಕರ ಬರ್ತ್ಡೇ ಗರ್ಲ್ ವೇಟ್ ಮಾಡ್ತಿದಾರೆ ಬೇಗ ಬನ್ನಿ”ಎಂದು ಕಾಲ್ ಕಟ್ ಮಾಡಿದನು.
“ಅವ್ರ್ ಬಂದ್ರೆ ಕಳಿಸ್ತೀವಿ.ನೀನ್ ಹೋಗಿ ರೆಡಿಯಾಗು”ಎಂದ ಪ್ರಣವ್.
“ಲೋ ಮೆಂಟಲ್, ನಾನ್ ರೆಡಿಯಾಗ್ಬೇಕು ಅಂತಾನೆ ಮಾನ್ಯ, ಮೀರಾ ಬಂದಿದಾರ ಅಂತ ಕೇಳೋಕ್ ಬಂದಿದ್ದು.ಅವ್ರ್ ನೋಡಿದ್ರೆ ಹೇಳಿದ್ ಟೈಂಗೆ ಬರೋದಿಲ್ಲಾ ಅಂತಾರೆ”ಎಂದು ಗೊಣಗುತ್ತಾ ಮನೆಯೊಳಗೇ ಹೋದಳು.
ಸ್ವಲ್ಪ ಸಮಯದ ಬಳಿಕ ಬಂದ ಮಾನ್ಯ, ಮೀರಾಳನ್ನು ಕಂಡ ಪ್ರಣವ್”ಬನ್ನಿ ಬನ್ನಿ ಸುಸ್ವಾಗತ ನಿಮಗೆ. ನಿಮಗಾಗಿ ಬರ್ತ್ಡೇ ಗರ್ಲ್ ಕಾಯ್ತಾ ಇದಾರೆ.ಈಗ ಬೇಗ ಹೋಗ್ಲಿಲ್ಲ ಅಂದ್ರೆ ನಿಮ್ಮಿಬ್ಬರನ್ನ ಕೊಲೆ ಮಾಡಿಬಿಡ್ತಾಳೆ”ಎಂದು ಪರಿಹಾಸ್ಯದ ನಗೆ ನಕ್ಕನು.
“ಸರಿ ಸರಿ”ಎನ್ನುತ್ತಾ ಹೋಗುತ್ತಿದ್ದ ಮೀರಾ ಮಾನ್ಯಳನ್ನು ತಡೆದ ನಕುಲ್”ಮೀರಾ ನೀನ್ ನಿಧಿ ಹತ್ತಿರ ಹೋಗು.ನನ್ಗೆ ಮಾನ್ಯಳ ಬಳಿ ಸ್ವಲ್ಪ ಕೆಲಸ ಇದೆ”ಎಂದ.
ನಕುಲನ ಮಾತುಗಳಿಂದ ಕೆಂಡಾಮಂಡಲವಾದ ಮೀರಾ”ಕರ್ಕೊಂಡು ಹೊಗೋಲೋ….ssನಂಗ್ ಏನುಕ್ ಹೇಳ್ತಿದೀಯಾ. ನೀನುಂಟು ಅವ್ಳ್ ಉಂಟು.ಕರ್ಕೊಂಡೋಗಿ ಅದೇನಾದ್ರು ಮಾತಾಡ್ಕೊ ನಂಗ್ ಹೇಳ್ಬೇಡ”ಎಂದು ನೆಲಕ್ಕೆ ಕಾಲುಗಳನ್ನು ಕುಟ್ಟುತ್ತಾ ಒಳ ಹೋದಳು.

ಮೀರಾಳನ್ನು ನಂತರ ಸಮಾಧಾನ ಮಾಡಿದರಾಯಿತು ಎಂದು ಮಾನ್ಯಳನ್ನು ಯಾರು ಇಲ್ಲದ ಕಡೆ ಕರೆದುಕೊಂಡು ಹೋಗಿ”ಈಗ ಹೇಳು ಮಾನ್ಯ.ಮೀರಾ ಚಿರಂತ್ ಏಕೆ ಜಗಳವಾಡಿದ್ದಾರೇ ಅಂತ”ಎಂದು ಕೇಳತೊಡಗಿದನು.
“ಅವರಿಬ್ಬರೇನು ಜಗಳ ಆಡಿಲ್ಲ.ಮೀರಾನೇ ಅವನನ್ನು ಮಾತನಾಡಿಸುವುದಿಲ್ಲ ಅಷ್ಟೇ”
“ಹೌದಾ…!ಏಕೆ”
“ಚಿರಂತ್ ಓದಿನಲ್ಲಿ ಯಾಕೋ ಪದೇ ಪದೇ ಹಿಂಜರಿಯುತ್ತಿದ್ದನಂತೆ ಅದಕ್ಕೆ ಅವರಪ್ಪ ಓದಿಸೋದು ನಿಲ್ಲಿಸಬೇಕೆಂದುಕೊಂಡ ಪ್ರತಿಬಾರಿಯೂ ಮೀರಾ ಅವರ ಅಂಕಲ್ಗೆ ಏನನ್ನಾದರೂ ಒಂದು ಕಾರಣ ಕೊಟ್ಟು ಅವನನ್ನು ಮತ್ತೆ ಓದಲು ಕಳಿಸಿ ಎಂದು ಹೇಳುತ್ತಿದ್ದಳು.ಅವಳ ಮೇಲೆ ನಂಬಿಕೆ ಇಟ್ಟು ಚಿರಂತನನ್ನು ಮತ್ತೆ ಓದಲು ಕಳಿಸುತ್ತಿದ್ದರು.ಇದು ಮತ್ತೆ ಮತ್ತೆ ಪುನರಾವರ್ತನೆಯಾದಾಗ ಚಿರುಗೆ ಇನ್ನೊಂದ್ ಸರಿ ಹೀಗಾದ್ರೆ ನಾನ್ ನಿನ್ನ ಮತ್ತೆ ಮಾತಾಡಿಸಲ್ಲ ಎಂದು ಷರತ್ತು ಹಾಕಿದ್ದಳು. ಆಗಲೂ ಅವನು ಫೇಲ್ ಆದಾಗ ಅವನನ್ನು ಮಾತನಾಡಿಸುವುದು ಬಿಟ್ಟಳಂತೆ.ಆದರೆ ಅವನು ಮಾತನಾಡಿಸೋಕೆ ತುಂಬಾ ಟ್ರೈ ಮಾಡ್ತಿದಾನೆ”ಎಂದಳು.
“ಇಷ್ಟೇನಾ…. ನಾನ್ ಏನೇನೋ ಅನ್ಕೊಂಡೆ”
“ನಿಂಗ್ ಇಷ್ಟೇ ಆಗಿರ್ಬೋದು ನಕುಲ್ ಅವ್ರಿಗೆ ತುಂಬಾ ದೊಡ್ಡದು.ಚಿಕ್ಕಂದಿನಲ್ಲಿ ಅವ್ರು ಎಷ್ಟು ಚೆನ್ನಾಗಿದ್ರು ಗೊತ್ತಾ”
“ಸರಿ ಅದ್ನ ಬಿಡು ಮಾನ್ಯ. ಅವರಿಬ್ಬರು ಮತ್ತೆ ಒಂದಾಗುತ್ತಾರೆ ಎಂಬ ಭರವಸೆ ನಂಗಿದೆ”ಎಂದ.
“ಹ್ಮ್..ಅದ್ಸರಿ ನೀನೇನೋ ಹೇಳ್ಬೇಕು ಅಂತ ಹೇಳಿದ್ದೆ”
“ಈಗ ಅದ್ನೇ ಹೇಳೋಣ ಅನ್ಕೋತಿದೀನಿ. ಅಷ್ಟ್ರಲ್ಲಿ ನೀನೇ ಕೇಳ್ದೆ”
“ಹ್ಮ್ ಸರಿ ಹೇಳು ಈಗ”
“ನಾನ್ ಹೇಳಿದ್ದನ್ನ ಕೇಳಿ ಕೋಪಮಾಡಿಕೊಳ್ಳಬಾರದು, ಬೇಜಾರಾಗಬಾರದು. ಈ ವಿಷಯದಲ್ಲಿ ನನ್ಗೆ ಫುಲ್ ಸಪೋರ್ಟ್ ಆಗಿರಬೇಕು”ಎಂದ.
“ಹ್ಮ್ ಸಪೋರ್ಟ್ ಮಾಡ್ತೀನಿ.ಈ ಕಥೆಪುರಾಣ ಎಲ್ಲಾ ಬಿಟ್ಟು ನೇರವಾಗಿ ವಿಷಯಕ್ಕೆ ಬಾ”
“ಮತ್ತೆ…ss ಅದು…ss ನಾನು…ss”
“ಲೋ ಏನೋ ಅದು ಮತ್ತೆ ಅದು ನಾನು ನೀನು ಅಂತ ರಾಗ ಏಳಿತಿದಿಯಲ್ಲೋ.ಅದೇನು ಅಂತ ಬೇಗ ಹೇಳು”
“ಮತ್ತೆ…ss ನಾನು…ss ಮೀರಾಳನ್ನು ಲವ್ ಮಾಡ್ತಿದೀನಿ”ಎಂದ ಭಯದಿಂದ.
ಇದನ್ನು ಕೇಳಿದ ಮಾನ್ಯಳಿಗೆ ಎಲ್ಲಿಲ್ಲದ ಸಂಭ್ರಮ.ಮೀರಾ ಅಷ್ಟೇ ನಕುಲನನ್ನು ಲವ್ ಮಾಡುತ್ತಿರುವ ವಿಷಯ ಅರಿತಿದ್ದ ಅವಳಿಗೆ ಈಗ ನಕುಲನು ಸಹ ಮೀರಾಳನ್ನು ಲವ್ ಮಾಡ್ತಿದ್ದಾನೆ ಎಂದು ತಿಳಿದು ಹರ್ಷಿತಳಾದಳು.ಮೀರಾನು ನಿನ್ನ ಲವ್ ಮಾಡ್ತಿದ್ದಾಳೆ ಅಂತ ನಕುಲನಿಗೆ ಹೇಳುವ ಮನಸ್ಸಾಯಿತು. ಆದರೆ, ಮೀರಾ ಯಾರಿಗೂ ಹೇಳಬಾರದೆಂದು ಮಾತು ತೆಗೆದುಕೊಂಡಿದ್ದಳು ಆದ್ದರಿಂದ ಹೇಳದೆ ಸುಮ್ಮನಾದಳು.ಅವನೇ ಹೇಳಲಿ ಎಂದು ಮನದಲ್ಲಿ ಅಂದುಕೊಂಡ ಮಾನ್ಯ”ಲೋ ಕೋತಿ ಇದ್ನ ನಂಗ್ ಹೇಳಿದ್ರೆ ಏನು ಪ್ರಯೋಜನ ಹೋಗಿ ಅವಳ ಹತ್ತಿರ ಹೇಳು”ಎಂದು ನಗುತ್ತಾ ಸಲಹೆ ಕೊಟ್ಟಳು.
“ಅವ್ಳ್ ಹತ್ತಿರ ಹೇಳೋಕೆ ಭಯ ಅದ್ಕೆ ನೀನ್ಹತ್ರ ಹೇಳ್ತಿದೀನಿ”
“ನಿನಜ್ಜಿ…..ಮೊದ್ಲು ಧೈರ್ಯಮಾಡಿ ಈಗ್ಲೇ ಅವ್ಳ್ ಹತ್ತಿರ ಹೋಗಿ ಹೇಳು “ಎಂದಳು ಗಡಿಬಿಡಿಯಿಂದ.
“ಏನು ಈಗ್ಲಾ”ಎಂದ ಆಶ್ಚರ್ಯದಿಂದ.
“ಹ್ಮ್ ಈಗ್ಲೇ.ನೀನ್ ಪ್ರಪೋಸ್ ಮಾಡೋಕೆ ರೆಡಿಯಾಗು. ಇದಕ್ಕಿಂತ ಒಳ್ಳೆ ಟೈಂ ಮತ್ತೆ ಸಿಗಲ್ಲ.ಇನ್ನೇನು ಯೋಚನೆ ಮಾಡಬೇಡ ಇಲ್ಲೇ ಇರು ನಾನ್ ಹೋಗಿ ಮೀರಾಳನ್ನು ಕರ್ಕೊಂಡು ಬರ್ತೀನಿ”ಎಂದು ಅವನ ಉತ್ತರಕ್ಕೂ ಕಾಯದೆ ಓಡಿದಳು.
ಮುಂದುವರೆಯುವುದು…….
ಈ ಸ್ನೇಹ ಚಿರಾಯು-9 ನೀವು ಇಂಗ್ಲಿಷ್ ಭಾಷೆಯಲ್ಲಿಯೂ ಓದಬಹುದು.
ನಮ್ಮ ವೆಬ್ಬೆಟ್ ನ ಇತರ ಪೋಸ್ಟ್ ಗಳನ್ನು ಇಲ್ಲಿ ಓದಬಹುದು.
ಸ್ನೇಹ ಚಿರಾಯು-9

