ಸ್ನೇಹ ಚಿರಾಯು -20

ಸ್ನೇಹ ಚಿರಾಯು -20

⚡​​ಸಿಡಿಲಿನಂತಹ ಸತ್ಯ

“ಇಷ್ಟಕ್ಕೆ ಹೀಗೆ ಪಶ್ಚಾತಾಪ ಪಟ್ಟರೆ ಹೇಗೆ ಮೀರಾ  ನಿಂಗ್ ಗೊತ್ತಿಲ್ದೆ ಇರೋ ಇನ್ನೊಂದು ದೊಡ್ಡ ಸತ್ಯ ಇದೆ. ಆ ಸತ್ಯ ನಿನ್ಗೆ ಹೇಳ್ಬಾರ್ದು ಅಂತ ಅವ್ನ್ ಮೇಲೆ ಆಣೆ ಮಾಡ್ಕೊಂಡಿದ್ದ.ಆ ವಿಷ್ಯ  ಈಗ್ಲೂ ನಿಂಗ್ ಗೊತ್ತಾಗ್ಲಿಲ್ಲ ಅಂದ್ರೆ ಅವ್ನ್ ಮೇಲೆ ಮಾಡ್ಕೊಂಡಿರೋ ಆಣೆಗೆ ಬೆಲೆ ಇರಲ್ಲ ಅನ್ನೋ ಕಾರಣಕ್ಕೆ ಹೇಳ್ತಿನಿ ಕೇಳು.ಚಿರು ಇನ್ನೊಂದ್ ಸ್ವಲ್ಪ ದಿನ ಅಷ್ಟೇ ಬದ್ಕೋದು”

ನಿಧಿಯ ಮಾತಿನಿಂದ ಬೆಚ್ಚಿಬಿದ್ದ ಮೀರಾ”ನಿಧಿ ಏನ್ ಮಾತಾಡ್ತಿದೀಯಾ ಅವ್ನ್ ಯಾಕ್ ಸಾಯ್ತಾನೆ”ಎಂದು ಕೇಳಿದಳು ಭಯದಿಂದ.

“ನಾನ್ ಹೇಳ್ತಿರೋದು ನಿಜ ಮೀರಾ ಚಿರಂತ್ ಸಾವು ತುಂಬಾ ದೂರ ಏನ್ ಇಲ್ಲಾ. ಯಾಕಂದ್ರೆ ಅವನಿಗೆ ಚೈಲ್ಡ್ವುಡ್ ಅಲ್ಜೈಮರ್(childhood alzheimer)ಅನ್ನೋ ರೋಗ ಇದೆ. ಅದು ಮೆದುಳಿಗೆ ಸಂಬಂಧಿಸಿದ ರೋಗ.ಆ ರೋಗ  ಚಿಕ್ಕಂದಿನಿಂದಲೂ ಇದೆ ಅದ್ಕೆ ಅವನು ಓದಿದ್ದು ಏನು ನೆನಪಾಗದೆ ವಿದ್ಯಾಭ್ಯಾಸದಲ್ಲಿ ಹಿಂದೆ ಉಳಿದಿದ್ದು.ಅವತ್ತು ಅಮ್ಮನನ್ನು ಕಾಪಾಡಬೇಕಾದ್ರೆ ತಲೆಗೆ ಏಟು ಬಿದ್ದಿದ್ದರಿಂದ ಅವನಿಗಿರುವ ಕಾಯಿಲೆ ಬಗ್ಗೆ ಗೊತ್ತಾಯ್ತು.ಇದನ್ನು ಯಾರಿಗೂ ಹೇಳಬೇಡಿ ಎಂದು ಮಾತು ತೆಗೆದುಕೊಂಡಿದ್ದ.ಈಗಾಗ್ಲೇ ಅವನು ಬದುಕಿನ ಕೊನೆ ದಿನಗಳನ್ನು ಏಣಿಸ್ತಿದ್ದಾನೆ.ಜೀವನದ ಉದ್ದಕ್ಕೂ ಅವ್ನ್ ನೋವು ಅನುಭವಿಸಿರೋದು ಸಾಕು ಮೀರಾ ಸಾಯೋ ಟೈಂಮಲ್ಲಾದ್ರು ನೀನ್ ಜೊತೆಗಿದಿಯಾ ಅನ್ನೋ ಖುಷಿಯಿಂದ ಸಾಯ್ಲಿ”

ನಿಧಿ ಹೇಳಿದ ಸತ್ಯದಿಂದ ಅಕ್ಷರಶಃ ಬೆಚ್ಚಿಬಿದ್ದ ಮೀರಾ.ಸತ್ಯ ಎಂಬ ಬಾಣ ಎದೆಗೆ ನಾಟಿದಂತಾಯ್ತು.ಕುಸಿದು ಬಿದ್ದ ಮೀರಾ”ಅಯ್ಯೋ ನಾನೆಂಥ ಪಾಪಿ ಈ ವಿಷ್ಯ ಗೊತ್ತಿಲ್ದೆ ತುಂಬಾ ದೊಡ್ಡ ತಪ್ಪು ಮಾಡ್ದೆ. ಅವನಿಗೆ ತುಂಬಾ ನೋವ್ ಕೊಟ್ಟೆ.ಅಪ್ಪಾ ದೇವ್ರೇ ನನ್ನನ್ಯಾಕೆ ಇಸ್ಟ್ ಕೆಟ್ಟೊಳನ್ನಾಗಿ ಮಾಡ್ಬಿಟ್ಟೆ”ಎಂದು ತಲೆಗೆ ಚಚ್ಚಿಕೊಂಡಳು.

ಸಮಾಧಾನ ಮಾಡಲು ಬಂದ ನಿಧಿಯ ಕೈಹಿಡಿದ ಮೀರಾ”ನಿಧಿ ತುಂಬಾ ದೊಡ್ಡ ತಪ್ಪು ಮಾಡಿದ್ದೀನಿ.ಅವನ ಕಾಲಿಗೆ ಬಿದ್ದು ಕ್ಷಮೆ ಕೇಳ್ಬೇಕು. ಪ್ಲೀಸ್ ನಿಧಿ ನನ್ನ ಅವನತ್ರ ಕರ್ಕೊಂಡೊಗು”ಎಂದು ಕೈ ಮುಗಿದಳು.

“ಮೀರಾ ಮೊದ್ಲು ಮದ್ವೆ ನಡೀಲಿ ಆಮೇಲೆ ನಾನೇ ನಿನ್ನ ಅವನತ್ರ ಕರ್ಕೊಂಡೋಗ್ತಿನಿ”

“ಇಲ್ಲಾ ನಿಧಿ ಈಗ್ಲೇ ತುಂಬಾ ಲೇಟ್ ಆಗಿದೆ. ಇನ್ನೂ ಲೇಟ್ ಮಾಡೋಕ್ ನಂಗಿಷ್ಟ ಇಲ್ಲಾ”ಎಂದು ನಿಧಿಯ ಅನುಮತಿಗೂ ಕಾಯದೆ ರೂಮಿಂದ ಆಚೆ ಬಂದು ಅವನನ್ನು ಹುಡುಕ ತೊಡಗಿದಳು.

ಗಾಬರಿಯಿಂದ ಅತ್ತ ಇತ್ತ ಅಡ್ಡಾಡುತ್ತಿದ್ದ ಮೀರಾಳನ್ನು ಕಂಡ ಪ್ರಕಾಶ್”ಮೀರಾ ಯಾಕ್ ಅಷ್ಟ್ ಟೆನ್ಶನ್ ಆಗಿದ್ದಾಳೆ ಏನಾಯ್ತು ಕೇಳೋಣ” ಎಂದು ಬಳಿ ಬಂದ.

💔ನಿರೀಕ್ಷೆ ಮಾಡದ ತಿರುವು… ದುರಂತದ ಕಡೆ

“ಮರಿ ಏನಾಯ್ತಮ್ಮ ಯಾಕ್ ಇಸ್ಟ್ ಟೆನ್ಶನ್ ಆಗಿದ್ದೀಯಾ.ಯಾರನ್ನ ಹುಡುಕ್ತಿದಿಯಾ”

“ಅಂಕಲ್ ನಾನ್ ಅರ್ಜೆಂಟಾಗಿ ಚಿರುನ ನೋಡ್ಬೇಕು.ಅವನೆಲ್ಲಿದ್ದಾನೆ ಹೇಳಿ ಪ್ಲೀಸ್”ಎಂದು ಕೈ ಹಿಡಿದುಕೊಂಡಳು.

“ಅವನು ಇಲ್ಲಿ ಇಲ್ಲಾ ಪುಟ್ಟ.ಮಡಿಕೇರಿಯಲ್ಲಿ ಆರ್ಡರ್ ಕೊಟ್ಟಿದ್ದ ಮಾಂಗಲ್ಯ ಸರ ತರೋದು ಮರೆತಿದ್ವಿ.ಈಗ ತರೋಕೆ ಹೋಗಿದ್ದಾನೆ ಇನ್ನೇನ್ ಬರ್ತಾನೆ”ಎನ್ನುವಷ್ಟರಲ್ಲಿ ಅಲ್ಲಿಗೆ ಬಂದ ತುಳಸಿ “ಸರ್ ಬೇಗ ಬನ್ನಿ”ಎಂದು ಪ್ರಕಾಶನನ್ನು ಕರೆದಳು.

“ಎಲ್ಲಿಗಮ್ಮ ಈಗ ಇನ್ನೊಂದ್ ಸ್ವಲ್ಪತ್ತಲ್ಲಿ ಮುಹೂರ್ತ ಇದೆ”

“ಸರ್ ನಾವ್ ಬೇಗ ಆಸ್ಪತ್ರೆಗೆ ಹೋಗಬೇಕು ಬೇಗ ಬನ್ನಿ”

“ಏನು ಆಸ್ಪತ್ರೆಗಾ ಯಾಕೆ”ಎಂದ ಗಂಭೀರ ದನಿಯಲ್ಲಿ.

“ಅಯ್ಯೋ ಸರ್ ಈಗೆಲ್ಲಾ ಹೇಳ್ಕೊಂಡು ಕೂರೋಕೆ ಟೈಂ ಇಲ್ಲಾ ಬೇಗ ಬನ್ನಿ ಸರ್”ಎಂದು ಆಸ್ಪತ್ರೆಗೆ ಕರೆದುಕೊಂಡು ಹೋದಳು.ತುಳಸಿಯ ಮುಖದಲ್ಲಿ ಭಯ ಕಂಡ ಎಲ್ಲರೂ ಮದುವೆ ನಿಲ್ಲಿಸಿ ತುಳಸಿಯನ್ನು ಹಿಂಬಾಲಿಸಿ ಆಸ್ಪತ್ರೆಗೆ ಹೋದರು…

ಎಲ್ಲರೂ ಆಸ್ಪತ್ರೆಗೆ ಬಂದಾಗಲೇ ತಿಳಿದಿದ್ದು ಚಿರುಗೆ ಆಕ್ಸಿಡೆಂಟ್ ಆಗಿದೆ ಎಂದು.ಎಲ್ಲರೂ ಆತಂಕಗೊಂಡರು.ಮೀರಳಿಗಂತೂ ಗಾಯದ ಮೇಲೆ ಬರೆ ಎಳೆದಂತಾಗಿ ದೇವರ ಮುಂದೆ ಕೂತುಬಿಟ್ಟಿದ್ದಳು.ಆಪರೇಷನ್ ಕೋಣೆಯಿಂದ ಹೊರ ಬಂದಳು ತುಳಸಿ.ಉಳಿದ ಡಾಕ್ಟರ್ಸ್ ಚಿರಂತನಿಗೆ ಟ್ರೀಟ್ಮೆಂಟ್ ಕೊಡುತ್ತಿದ್ದರು.

ಚಿರಂತನಿಗೆ ಆಕ್ಸಿಡೆಂಟ್ ಆಗಿದೆ ಎಂದು ಶಾಕಿಗೆ ಗುರಿಯಾಗಿ ಲೋಕದ ಪರಿವೇ ಇಲ್ಲದೆ ಗೋಡೆಗೆ ಒರಗಿ ಕೂತಿದ್ದ ಸತ್ಯಪ್ರಕಾಶ್ ಬಳಿ ಬಂದ ತುಳಸಿ “ಸರ್ ನಿಮ್ ಹತ್ರ ಸ್ವಲ್ಪ ಮಾತಾಡ್ಬೇಕು ಸ್ವಲ್ಪ ಆ ಕಡೆ ಬರ್ತೀರಾ”ಎಂದು ಕರೆದುಕೊಂಡು ಹೋದಳು..

ಅಲ್ಲೇ ದೇವರ ಮುಂದೆ ಕೂತು ಅಳುತಿದ್ದ ಮೀರಾಳನ್ನು ತುಳಸಿ ಗಮನಿಸಲೇ ಇಲ್ಲಾ.ಅವರ ಸಂಭಾಷಣೆಯನ್ನು ಆಲಿಸುತ್ತಾ ಕೂತಳು.

“ಸರ್ ಹಿಂದೆ ನಿಮ್ಮ ವಂಶದಲ್ಲಿ ಯಾರಿಗಾದರೂ ಅಲ್ಜೈಮರ್ ಕಾಯಿಲೆ ಅಂದ್ರೆ ಮರೆವಿನ ಕಾಯಿಲೆ ಇತ್ತಾ”ಎಂದು ಕೇಳಿದಳು.

“ಇಲ್ಲಮ್ಮ ಯಾಕೆ”

​​🥹​​ಸತ್ಯಪ್ರಕಾಶನ ಎದೆಯಾಳದಲ್ಲಿದ್ದ ಸತ್ಯ

“ಸರ್ ನಿಮಗೊಂದು ಸತ್ಯ ಹೇಳ್ಬೇಕು. ಈಗಲೂ ಆ ಸತ್ಯ ಹೇಳಿಲ್ಲ ಅಂದ್ರೆ ತುಂಬಾ ದೊಡ್ಡ ತಪ್ಪಾಗುತ್ತೆ.ಚಿರಂತ್ಗೆ ಚೈಲ್ಡ್ವುಡ್ ಅಲ್ಜೈಮರ್ ಅನ್ನೋ ಕಾಯಿಲೆ ಇದೆ ಸರ್”ಎಂದು ಇಷ್ಟು ದಿನ ಮುಚ್ಚಿಟ್ಟಿದ ಸತ್ಯವನ್ನೇಳಿದಳು”

“ಏನು ಚೈಲ್ಡ್ವುಡ್ ಅಲ್ಜೈಮರ್ರಾ.ಅಯ್ಯೋ ದೇವ್ರೇ ಯಾವಾಗಿಂದ”ಎಂದು ಕೇಳಿದ.

“ಹೌದು ಸರ್. ಇದು ಒಂದು ವಾಸಿಯಾಗ್ದೆ ಇರೋ ಮೆದುಳಿನ ಕಾಯಿಲೆ.ಅವನಿಗೆ ಈ ಕಾಯಿಲೆ ಚಿಕ್ಕ ವಯಸ್ಸಿನಿಂದ ಶುರುವಾಗಿದೆ.ಇದು ವಂಶದ ಅನುವಂಶೀಯತೆಯಿಂದ ಬರುವಂತ ಕಾಯಿಲೆ.ಇದು ನಿಮ್ಮ ವಂಶದಲ್ಲಿ ಯಾರಿಗಾದರೂ ಇದ್ದೆ ಇರುತ್ತೆ ಅದ್ಕೆ ಕೇಳ್ದೆ”

“ನಿಜ ಹೇಳ್ಬೇಕು ಅಂದ್ರೆ ಚಿರಂತ್ ನನ್ನ ಮಗನೂ ಅಲ್ಲ ನನ್ನ ವಂಶದವನೂ ಅಲ್ಲ”

“ಸರ್ ಏನ್ ಹೇಳ್ತಿದೀರಾ ಚಿರಂತ್ ನಿಮ್ಮ ಮಗನಲ್ವಾ”

“ಇಲ್ಲಮ್ಮ ಅವ್ನ್ ನನ್ ಮಗಾ ಅಲ್ಲ.ಮೀರಾ ಚಿಕ್ಕಂದಿನಲ್ಲಿ ತುಂಬಾ ಅಂದ್ರೆ ತುಂಬಾ ಅಳ್ತಿದ್ಳು ಯಾರೆಷ್ಟು ಮುದ್ದಿಸಿದರು ಅವಳ ಅಳು ನಿಲ್ಲುತ್ತಿರಲಿಲ್ಲ.ವೈದ್ಯರ ಬಳಿ ತೋರಿಸಿದರು ಅವಳು ಅಳೋದು ನಿಲ್ಲಿಸಿರಲಿಲ್ಲ. ಹಗಲು ರಾತ್ರಿ ಎಡೆಬಿಡದೆ ಅಳುತ್ತಿದ್ದಳು. ಒಂದು ದಿನ ಮೀರಾ ಅಳ್ತಿದ್ಳು ಅಂತ ಎಸ್ಟೇಟ್ ಸುತ್ತಿಕೊಂಡು ಬರೋಣ ಅಂತ ಕರ್ಕೊಂಡ್ ಹೋದೆ.ಆ ಸಮಯದಲ್ಲಿ  ನಗುತ್ತಾ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಅಂಬೆಗಾಲಲ್ಲಿ ನಡೆಯುತ್ತಿದ್ದ ಒಂದು ಮಗು ನನ್ನ ಕಣ್ಣಿಗೆ ಬಿತ್ತು.ಆ ಮಗು ಯಾರದೆಂದು ತಿಳಿಯಲಿಲ್ಲ.ಮೋಸ್ಟ್ಲಿ ಅವನಿಗಿರುವ ಕಾಯಿಲೆ ಬಗ್ಗೆ ತಿಳಿದು ಅಲ್ಲಿ ಬಿಟ್ಟೋಗಿರಬೇಕು ಅಂತ ಅನ್ಸುತ್ತೆ.ಅವನ ನಗು ನೋಡಿ ಅಳುತ್ತಿದ್ದ ಮೀರಾ ನಗಲು ಶುರು ಮಾಡಿದಳು.ಆ ನಗು ಮತ್ತೆಂದೂ ನಿಲ್ಲಲಿಲ್ಲ. ಅವಳ ನಗುವಿಗೆ ಕಾರಣನಾದ ಚಿರಂತ್ ಅಂದಿನಿಂದ ಮೀರಾಳ ಜೊತೆಯಲ್ಲೇ ಬೆಳೆದನು.ಮನೆ ತುಂಬೆಲ್ಲಾ ಹರಡಿದ್ದ ಮೀರಾಳ ಅಳುವ ಫೋಟೋಗಳನ್ನೆಲ್ಲಾ ತೆಗೆದು ನಗುವ ಫೋಟೋಗಳನ್ನು ಜೋಡಿಸಿಡಲಾಯಿತು.ಆ ನಗು ಅವಳದ್ದಷ್ಟೇ ಅಲ್ಲ ಅವಳನ್ನು ಇಷ್ಟ ಪಡುತ್ತಿದ್ದ ಪ್ರತಿಯೊಬ್ಬರದ್ದು”

“ಮೀರಾಳಿಗೆ ನಗುವುದನ್ನು ಕಲಿಸಿದ ಚಿರಂತನ ಬದುಕಲ್ಲೇ ನಗುವಿಗೆ ಕೊರತೆ ಆಯ್ತು.ಅಂದು ನನ್ನ ಪ್ರಾಣಾಪಾಯದಿಂದ ಕಾಪಾಡುವಾಗ ತಲೆಗೆ ಪೆಟ್ಟು ಬಿದ್ದಿತ್ತು. ಆದ್ದರಿಂದ ಎಂ.ಆರ್.ಐ ಸ್ಕ್ಯಾನ್ ಮಾಡಲಾಯಿತು. ಆವಾಗ್ಲೇ ಅವನಿಗಿರುವ ಕಾಯಿಲೆ ಬಗ್ಗೆ ನಮಗೆ ತಿಳಿದಿದ್ದು. ಅವನಿಗೆ ಟ್ರೀಟ್ಮೆಂಟ್ ಕೊಡುವ ಸಲುವಾಗಿ ನನ್ನ ಬಳಿ ಇರಿಸಿಕೊಂಡೆ.ಅವತ್ತಿಂದ ಇವತ್ತಿನವರೆಗೂ ಯಾವಾಗ ಸಾಯ್ತಿನೋ ಎಂಬ ಭಯದಲ್ಲೇ ಬದುಕ್ತಿದ್ದ.ಆದ್ರೆ ಇವತ್ತು ಆ ಸಾವು ತುಂಬಾ ಹತ್ರ ಬಂದಿದೆ ಅಂತ ಅನಿಸ್ತಿದೆ”

“ಅಂದ್ರೆ….. ಚಿರಂತ್ ಈಗ ಹೇಗಿದ್ದಾನೆ”ಎಂದು ದುಗುಡದಿಂದಲೇ ಕೇಳಿದರು.

“ಅವನಿಗೆ ಮೊದಲೇ ಅಲ್ಜೈಮರ್ ಇದ್ದ ಕಾರಣ ಬ್ರೈನ್ ಸೆಲ್ಸ್ ಕಡಿಮೆಯಾಗಿದ್ವು.ಈಗ ಬ್ರೈನಲ್ಲಿ  ಬ್ಲಡ್ ಕ್ಲಾಟ್ ಆಗಿರೋದ್ರಿಂದ ಬದುಕೋದು ಕಷ್ಟಾನೇ”

“ಅಯ್ಯೋ ದೇವ್ರೇ ನಿಜ್ವಾಗ್ಲೂ ನೀನ್ ಇಸ್ಟ್ ಕ್ರೂರಿ ಅಂತ ಗೊತ್ತಿರ್ಲಿಲ್ಲ.ಅವನೇನೋ ಮಾಡಿದ್ದ ನಿನ್ಗೆ ಯಾಕಿಂತ ಕಷ್ಟ ಕೊಟ್ಬಿಟ್ಟೆ ಅವನಿಗೆ”ಎಂದು ಬಿಕ್ಕಿ ಬಿಕ್ಕಿ ಅಳತೊಡಗಿದನು.ಸತ್ಯಪ್ರಕಾಶನನ್ನು ಸಮಾಧಾನ ಮಾಡಿ ಎಲ್ಲರ ಹತ್ತಿರ ಕರೆದುಕೊಂಡು ಬಂದಳು ತುಳಸಿ.ಇವರಿಬ್ಬರ ಸಂಭಾಷಣೆ ಕೇಳುತ್ತಿದ್ದ ಮೀರಾ ಸತ್ಯ ತಿಳಿದು ಇನ್ನೂ ದುಃಖಿತಳಾದಳು.

ಆಪರೇಷನ್ ಕೋಣೆಯಿಂದ ಹೊರ ಬಂದ ಡಾಕ್ಟರ್ ಎದುರಿಗಿದ್ದ ನಕುಲನನ್ನು ನೋಡಿ “ತುಂಬಾ ಟ್ರೈ ಮಾಡಿದ್ವಿ.ಬಟ್ ಬ್ರೈನಲ್ಲಿ ಬ್ಲಡ್ ತುಂಬಾ ಕ್ಲಾಟ್ ಆಗಿದ್ದರಿಂದ ಬ್ರೈನ್ಗೆ ಬ್ಲಡ್ ಸರ್ಕುಲೇಶನ್ ಆಗಿಲ್ಲ.ಮ್ಯಾಕ್ಸಿಮಮ್ ಅಂದ್ರೆ ಇನ್ನೊಂದ್ ಅರ್ಧ ಗಂಟೆ ಬದುಕ್ಬೋದು.ಐ ಆಮ್ ಸಾರಿ. ಟೇಕ್ ಕೇರ್”ಎಂದು ಹೇಳಿ ನಕುಲನ ಬೆನ್ನು ತಟ್ಟಿ ಮುಂದೆ ಸಾಗಿದರು.

😭​ಮೀರಾಳ ಹೃದಯವಿದ್ರಾವಕ ಪಶ್ಚಾತಾಪ

ಚಿರಂತನ ಸಾಯುವ ಸುದ್ದಿ ಕೇಳಿದ ಎಲ್ಲರೂ ಒಂದೇ ಸಮನೆ ಅಳಲು ಶುರು ಮಾಡಿದರು.ಅಲ್ಲಿ ಮಡುಗಟ್ಟಿದ್ದ ವಾತಾವರಣ ಸೃಷ್ಟಿಯಾಗಿತ್ತು.ಎಲ್ಲರೂ ಅಳುತ್ತಾ ನಿಧಾನವಾಗಿ ಕೋಣೆಯನ್ನು ಪ್ರವೇಶಿಸಿದರು.ಮೀರಾ ಹೋದವಳೇ ಚಿರಂತ್ ಕಾಲಿಗೆರಗಿದಳು.

“ನನ್ನ ಕ್ಷಮಿಸು ಅಂತ ಕೇಳೋ ಅರ್ಹತೆನೂ ನಾನ್ ಕಳ್ಕೊಂಡಿದೀನಿ.ನಾನ್ ನಿನ್ಗೆ ತುಂಬಾ ಅಂದ್ರೆ ತುಂಬಾ ಕಷ್ಟ,ನೋವು ಕೊಟ್ಟಿದೀನಿ. ನಂಗ್ ನಗು ಕಳಿಸಿದ ನಿನ್ಗೆನೇ ಜೀವನದಲ್ಲಿ ನಗು ಇಲ್ಲದ ಹಾಗೇ ಮಾಡಿದ ಪಾಪಿ ನಾನು.ನನ್ನಂಥ  ಫ್ರೆಂಡ್ ಯಾರಿಗೂ ಸಿಗ್ಬಾರ್ದು”ಎಂದು ತಲೆ ಚಚ್ಚಿಕೊಂಡಳು.

ಅರೆಕಣ್ಣಿಂದ ನೋಡುತ್ತಾ ಅವಳ ಮಾತುಗಳನ್ನು ಕೇಳುತ್ತಿದ್ದ ಚಿರು ನಿಧಾನವಾಗಿ ಅವಳ ಕೈ ಹಿಡಿದು”ಹೇಗೆಲ್ಲಾ ಮಾತಾಡ್ಬೇಡ ನೀನ್ ಯಾವಾಗ್ಲೂ ನಗ್ತಿರ್ಬೇಕು”ಎಂದು ಕೈ ಸನ್ನೆ ಮಾಡುತ್ತಾ ಹೇಳಿದ.”ನಿ..ನಿ..ನಿನ್ನ ನಕು…ನಕುಲ್ ಮ…ಮದ್ವೆ ನೋಡ್…ಬೇ..ಬೇಕ…ಕನಿಸ್ತಿದೆ.ಇದು ನ…ನನ್ ಕೊ…ಕೊನೆ ಆಸೆ”ಎಂದು ತೊದಲುತ್ತಾ ನಿಧಾನ ದನಿಯಲ್ಲಿ ಉಸುರಿದ.

ಚಿರಂತನ ಆಸೆಯಂತೆ ನಕುಲ್ ಅಲ್ಲೇ ಮೀರಾಳಿಗೆ ತಾಳಿ ಕಟ್ಟಿದ್ದ.ಚಿರಂತನ ಮೊಗದಲ್ಲಿ ಸಂತೃಪ್ತಿಯ ಭಾವ ಆವರಿಸಿತ್ತು.ಮತ್ತೆ ಮಂಡಿಯೂರಿದ ಮೀರಾ ಅವನ ಕೈ ಹಿಡಿದು”ಚಿರು ಪ್ಲೀಸ್ ಕಣೋ ನನ್ನ ಬಿಟ್ಟೋಗ್ಬೇಡ.ನಿನ್ ಜೊತೆ ಟೈಂ ಸ್ಪೆಂಡ್ ಮಾಡ್ಬೇಕು,ಆ ಸ್ಪೆಂಡ್ ಮಾಡಿದ ಟೈಂ ಜೀವನಪೂರ್ತಿ ಅದೊಂದು ಸುಂದರ ನೆನಪಾಗಿ ಉಳಿಬೇಕು ಅಂತೆಲ್ಲಾ ಆಸೆ ಇದೆ.ಪ್ಲೀಸ್ ಕಣೋ ನನ್ನ ಬಿಟ್ಟೋಗ್ಬೇಡ”ಎಂದು ಹಿಡಿದ ಕೈಯನ್ನು ಇನ್ನಷ್ಟು ಬಿಗಿಯಾಗಿ ಹಿಡಿದಳು.

​​🥺​ತ್ಯಾಗದಲ್ಲಿ ಮೌನವಾದ ಜೀವ

“ಆ..ಆ ಅದ್..ಅದೃಷ್ಟ ನಂ..ನಂಗ್ ಇಲ್ಲಾ ಮೀ……”ಎಂದು ಹೇಳಲಷ್ಟೇ ಶಕ್ತನಾಗಿ ಏರಿಳಿತವಾಗುತಿದ್ದ ಉಸಿರು ಒಮ್ಮೆಲೇ ನಿಂತುಬಿಟ್ಟಿತು.ಕಣ್ಣು ಹಾಗೇ ತೆರೆದಿತ್ತು ಆದರೆ ಅದರಲ್ಲಿನ ದೃಷ್ಟಿ ಮಾಯವಾಗಿತ್ತು.ಮೀರಾ ಹಿಡಿದಿದ್ದ ಕೈ ಸತ್ವ ಕಳೆದುಕೊಂಡಿತ್ತು.ಕಣ್ಣಿಂದ ಕೊನೆಯದಾಗಿ ಹನಿಯೊಂದು ಜಾರಿತ್ತು.

“ಚಿರು”ಎಂದು ಮೀರಾ ಕೆನ್ನೆ ತಟ್ಟಿದಳು.ಚಿರಂತನಿಂತ ಯಾವುದೇ ಪ್ರತ್ಯುತ್ತರವಿಲ್ಲ. ಮತ್ತೊಮ್ಮೆ ಕೆನ್ನೆ ತಟ್ಟಿ”ಚಿರು ಮಾತಾಡು”ಎಂದಳು.ಚಿರಂತನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

ಎಲ್ಲರ ಆಕ್ರಂದನ ಮುಗಿಲು ಮುಟ್ಟಿತ್ತು.ಆದರೆ ಮೀರಾ ಅಳಲಿಲ್ಲ ಬದಲಾಗಿ ಎಲ್ಲರಿಗೂ ಹೇಳಿದಳು”ಯಾರು ಅಳ್ಬೇಡಿ ಅವ್ನ್ ಸತ್ತಿಲ್ಲ”ಎಂದು.

ಮೀರಾ ಎದ್ದು ತುಳಸಿಯ ಬಳಿ ಬಂದು”ಆಂಟಿ ಆಂಟಿ ಚಿರು ಯಾಕೆ ಮಾತಾಡ್ತಿಲ್ಲ ಹೇಳಿ ಆಂಟಿ ಪ್ಲೀಸ್”

“ನೀನ್ ಮಾತಾಡೋದು ಅವ್ನಿಗೆ ಕೇಳ್ತಿಲ್ಲ ಮೀರಾ ಅದ್ಕೆ ಮಾತಾಡ್ತಿಲ್ಲ”ಎಂದಳು ಅಳುತ್ತಾ.

“ಓಹೋ ಹೌದಾ ಈಗ ನಾನ್ ಜೋರಾಗಿ ಮಾತಾಡ್ತೀನಿ ಕೇಳುತ್ತಲ್ವಾ ಆಂಟಿ”

“ಕೇಳಲ್ಲ ಮೀರಾ.ನೀನೆಷ್ಟು ಕೂಗಿದ್ರು ಅವನಿಗೆ ಕೇಳಲ್ಲ ಯಾಕಂದ್ರೆ ಅವ್ನ್ ನಮ್ಮನ್ನೆಲ್ಲಾ ಬಿಟ್ಟು ತುಂಬಾ ದೂರ ಹೋಗಿದ್ದಾನೆ”

“ಇಲ್ಲಾ ಆಂಟಿ ಅವ್ನ್ ನನ್ನ ಅಷ್ಟ್ ಸುಲಭವಾಗಿ ಬಿಟ್ಟೋಗಲ್ಲ.ನಂಗ್ ನಿನ್ ಮುಖ ತೋರಿಸ್ಬೇಡ, ಮಾತಾಡ್ಬೇಡ ಅಂದಾಗ್ಲೇ ಅವ್ನ್ ನನ್ನ ಮಾತಾಡ್ಸೋದು, ನೋಡೋದು ಬಿಟ್ಟಿಲ್ಲ. ಇನ್ನೂ ಈಗ ನಿನ್ ಜೊತೆ ಖುಷಿಯಾಗಿ ಟೈಂ ಸ್ಪೆಂಡ್ ಮಾಡ್ಬೇಕು ಅಂತ ಹೇಳಿದ್ಮೇಲೂ ನನ್ನ ಬಿಟ್ಟೋಗ್ತಾನಾ ನೀವೇ ಹೇಳಿ”ಎಂದಳು ಹುಚ್ಚಿಯಂತೆ ನಗುತ್ತಾ.

ಹತ್ತಿರ ಬಂದ ನಕುಲ್ ಮೀರಾಳನ್ನು ಗಟ್ಟಿಯಾಗಿ ತಬ್ಬಿಕೊಂಡು”ಚಿರಂತ್ ಎಲ್ಲರನ್ನೂ ಬಿಟ್ಟೋದ ಮೀರಾ.ಇನ್ನೂ ಅವ್ನ್ ನೆನಪು ಮಾತ್ರ”ಎಂದು ಬಿಕ್ಕುತ್ತಾ.

ನಕುಲನ ಅಪ್ಪುಗೆಯಿಂದ ಬಿಡಿಸಿಕೊಂಡ ಮೀರಾ ಒಂದೊಂದೇ ಹೆಜ್ಜೆ ಹಾಕುತ್ತಾ ಚಿರಂತನ ಬಳಿ ಬಂದು ಮಂಡಿಯೂರಿ “ಚಿರು”ಎಂದು ಮುಗಿಲು ಮುಟ್ಟುವಂತೆ ಚೀರಿದಳು.ಅವಳ ಕೂಗಾಟವನ್ನು ಕೇಳಲು ಚಿರಂತ್ ಜೀವಂತವಾಗಿರಲಿಲ್ಲ.

ಮೊದಲ ಬಾರಿ ನಕುಲನ ಜೊತೆಗೆ ಮನೆಗೆ ಬಂದಾಗ ನಕುಲನಿಗೆ ಹೇಳಿದ್ದ ಮಾತು”ನನ್ಗೆ ಸತ್ಮೇಲೂ ಇಲ್ಲೇ ಇರಬೇಕು ಅಂತ  ಅನಿಸ್ತಿದೆ” ನೆನಪು ಬಂತು.ಅವನ ಆಸೆಯಂತೆ ಆ ಶ್ವೇತವರ್ಣದ ಮನೆಯ ಬಳಿ ಅವನನ್ನು ಸಮಾಧಿ ಮಾಡಲಾಯಿತು.

*****************************

🌸 ನಿಜವಾದ ಸ್ನೇಹದ ಮಹತ್ವ

ಚಿರಂತನಂತ ವ್ಯಕ್ತಿತ್ವ ಉಳ್ಳವರು ಪ್ರತಿಯೊಬ್ಬರ ಜೀವನದಲ್ಲೂ ಇರುತ್ತಾರೆ.ನಾವು ಎಷ್ಟೇ ನೋವು ಕೊಟ್ಟರು ಪದೇ ಪದೇ ನಮ್ಮನ್ನೇ ಅವಲಂಬಿಸಿರುತ್ತಾರೆ ಕಾರಣ ಇಷ್ಟೇ ಅದು ನಮ್ಮ ಮೇಲಿಟ್ಟ ನಂಬಿಕೆ.ಅವರು ನಮ್ಮ ಜೊತೆ ಇದ್ದಾಗ ತೋರಿಸೋ ಪ್ರೀತಿ,ಮಮತೆ ಕಾಳಜಿಗೆ ಬೆಲೆ ಕೊಡುವುದಿಲ್ಲ. ನಮ್ಮಿಂದ ದೂರಾದ ಮೇಲೆ ಅವರಿಗಾಗಿ ಅಂಬಲಿಸುತ್ತೇವೆ.ನಮ್ಮನ್ನು ಇಷ್ಟಪಡುವ ವ್ಯಕ್ತಿಗಳು ನಮಗಾಗಿ ತೋರಿಸಿದ ಪ್ರೀತಿ, ಕಾಳಜಿಯನ್ನು ಗುರುತಿಸಿ ನಮ್ಮ ಪ್ರಪಂಚಕ್ಕೆ ಅಹ್ವಾನ ನೀಡಿದಾಗ ಮಾತ್ರ ಬದುಕು ಬಣ್ಣವಾಗುತ್ತದೆ.

ಗೆಳೆತನವೇ ಜೀವನ ಎಂದು ಬದುಕಿದಾಗ ಮಾತ್ರ ಸ್ನೇಹವು ಶಾಶ್ವತವಾಗುತ್ತದೆ.ಗೆಳೆತನವನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಇಷ್ಟಪಡುವ ನಿಜವಾದ ಸ್ನೇಹಿತರಿಗೆ”ಸ್ನೇಹ ಚಿರಾಯು“ಎಂಬ ನನ್ನ ಮೊದಲ ಕಥೆಯನ್ನು ಸಮರ್ಪಿಸುತ್ತಿದ್ದೇನೆ..

    ********ಮುಕ್ತಾಯ*******

ಈ ಸ್ನೇಹ ಚಿರಾಯು-20 ನೀವು ಇಂಗ್ಲಿಷ್ ಭಾಷೆಯಲ್ಲಿಯೂ ಓದಬಹುದು.

ನಮ್ಮ ವೆಬ್ಬೆಟ್ ನ ಇತರ ಪೋಸ್ಟ್ ಗಳನ್ನು ಇಲ್ಲಿ ಓದಬಹುದು.

ಸ್ನೇಹ ಚಿರಾಯು-20

ಸ್ನೇಹ ಚಿರಾಯು-20

Comments

No comments yet. Why don’t you start the discussion?

Leave a Reply

Your email address will not be published. Required fields are marked *