🌿ಮೂಲಗಳೆಡೆಗೆ ಮರಳಿದ ಕ್ಷಣ
ಮಡಿಕೇರಿಯ ತಂಪುಗಾಳಿ ಸತ್ಯಪ್ರಕಾಶನಿಗೆ ಸ್ವಾಗತ ಕೋರುತಿತ್ತು. ಮಡಿಕೇರಿಯಿಂದ ಹದಿನೈದು ನಿಮಿಷದ ಪ್ರಯಾಣದ ನಂತರ ಸಂಪಿಗೆಕಟ್ಟೆ ಎಂದು ಕಾಣುವ ನಾಮಫಲಕ ಕಂಡು ಮನಸೂರೆಕೊಂಡಿತು.ಹಾಗೇ ಎರಡು ನಿಮಿಷ “ಬರಿ ಎಸ್ಟೇಟ್ ಅಲ್ಲ ಸತ್ಯ. ಸಿದ್ದಾರ್ಥ್ ಬಿಟ್ಟು ಹೋದ ಆಸೆ ಆಕಾಂಕ್ಷೆಗಳೆಲ್ಲವೂ ಇಂದಿಗೂ ಆಚರಣೆಯಲ್ಲಿವೆ”
“ಹೌದಾ…..ಅದನ್ನು ಕೇಳೋಕೆ ಎಷ್ಟು ಸಂತೋಷವಾಗುತ್ತೆ”
“ಹೌದು ಸತ್ಯ.ಅವನ ಆಸೆಗಳೆಲ್ಲ ಈಗ್ಲೂ ಆಚರಣೆ ಮಾಡ್ತೀವಿ.ಅಲ್ಲಿ ಕೆಲಸ ಮಾಡುತ್ತಿರುವವರೆಲ್ಲರೂ ಅಂದು ಮನೆಯಿಲ್ಲದೆ ನಿರಾಶ್ರಿತರಾದವರೇ.ಅವರೇ ಇಂದಿಗೂ ಇಲ್ಲಿ ಕೆಲಸ ಮಾಡ್ತಿದ್ದಾರೆ.ಅದರ ಜೊತೆಗೆ ಸಿದ್ದಾರ್ಥ್ ಮನೆಯ ಮೂರು ಭಾಗಗಳನ್ನು ವೃದ್ದಾಶ್ರಮ, ಅನಾಥಾಶ್ರಮ ಕೊಟ್ಟಿದ್ದೇನೆ. ಅಲ್ಲಿ ನೂರಾರು ಜನ ಆಶ್ರಯ ಪಡೆದಿದ್ದಾರೆ”
ಅಷ್ಟರಲ್ಲಿ ಕಾರು ಮನೆಯ ಮುಂದೆ ಬಂದು ನಿಂತಿತ್ತು. ಪ್ರಕಾಶನಿಗೆ ಮನೆ ನೋಡಿದ ತಕ್ಷಣ ಕಣ್ತುಂಬಿ ಬಂತು.ಮನೆ ಕಟ್ಟಲು ಹಾಕಿದ ಪರಿಶ್ರಮ ಎಲ್ಲವೂ ನೆನಪಿಗೆ ಬಂದವು.
ಕಾರು ಇಳಿದ ಮೀರಾ ಕಣ್ಣ ಮುಂದಿದ್ದ ಶ್ವೇತ ವರ್ಣದ ಮನೆಯನ್ನು ಹಾಗೇ ದಿಟ್ಟಿಸಿ ನೋಡುತ್ತಾ ನಿಂತಳು.ಚಿಕ್ಕಂದಿನಲ್ಲಿ ಅಂಬೆಗಾಲಿನಿಂದ ಓಡಾಡಿದ್ದ ನೆನಪು.ಚಂದ್ರನನ್ನು ತೋರಿಸಿ ತುತ್ತಿಟ್ಟ ಅಮ್ಮನ ನೆನೆಪು.ಹೆಗಲ ಮೇಲೆ ಹೊತ್ತುಕೊಂಡು ಜಗತ್ತು ತೋರಿಸಿದ ಅಪ್ಪನ ನೆನೆಪು.ತಂದೆ ತಾಯಿಯ ಮುಖ ಚಹರೆ ನೆನಪಿಲ್ಲದಿದ್ದರೂ ಅವರು ಕೊಟ್ಟ ಪ್ರೀತಿ ಮಮತೆ ನೆನಪಲ್ಲೇ ಇತ್ತು.

ಇನ್ನೂ ನಾನ್ಯಾರು ಎಂಬ ತಿಳುವಳಿಕೆಯೂ ಇಲ್ಲದ ಸಮಯದಲ್ಲಿ ಬಿಟ್ಟುಹೋದ ಈ ಪ್ರಪಂಚವನ್ನು ತಿಳುವಳಿಕೆಗೂ ಮೀರಿ ನೆನಪಿಸಿತ್ತು ಇದು ನಿನ್ನ ಪ್ರಪಂಚವೇ ಒಳಗೆ ಬಾ ಎಂದು.
“ಬಾ ಮೀರಾ ಯಾಕ್ ಹಾಗೇ ನಿಂತ್ಬಿಟ್ಟೆ.ಇದು ನೀನ್ ಆಡಿ ಬೆಳೆದ ಮನೆ. ಅಂದು ಹೇಗಿತ್ತೋ ಈಗಲೂ ಹಾಗೇ ಇದೆ.ಹೋಗು ಒಳಗೆ ನೋಡು”ಎಂದು ಕಳುಹಿಸಿಕೊಟ್ಟಳು ಕುಸುಮ.
🏡ನೆನಪುಗಳ ಬುತ್ತಿಯ ಹೊತ್ತಿದ್ದ ಮನೆ
ಮೀರಾ ಇಡುತಿದ್ದ ಪ್ರತಿಯೊಂದು ಹೆಜ್ಜೆಗೆ ಭೂಮಿ ತನ್ನ ಮೈಮೇಲಿದ್ದ ಧೂಳು ಸರಿಸಿ ಸ್ವಚ್ಛ ಮಾಡುತಿತ್ತು.ತೀಡಿ ಬರುತಿದ್ದ ತಂಗಾಳಿ ಅವಳ ಕೇಶರಾಶಿಯನ್ನು ಸಮುದ್ರದ ಅಲೆಗಳಂತೆ ಹಾರಿಸುತ್ತಿತ್ತು.
ಮುಕ್ಕೋಟಿ ದೇವರೆಲ್ಲಾ ಸಮಾಗಮವಾಗುವಂತೆ ಕೆತ್ತಿದ್ದ ಬೃಹದಾಕಾರದ ಬಾಗಿಲನ್ನು ತಳ್ಳಿದಾಗ “ಕಿರ್..ssss”ಎಂದು ಶಬ್ದ ಮಾಡುತ್ತಾ ಒಳಗೆ ಹೋಗಲು ದಾರಿ ತೋರಿಸಿತು. ಮೊಳಕಾಲೆತ್ತರ ಇದ್ದ ಹೊಸಲನ್ನು ದಾಟಿ ಒಳಗೆ ಹೋದಳು.
ಅಬ್ಬಾ…!!ಮನೆಯ ತುಂಬೆಲ್ಲಾ ಅವಳ ನಗುವಿನ ಫೋಟೋಗಳದ್ದೇ ಚಿತ್ತಾರ.ಆ ನಗುವಿಗೆ ಎಂತಹ ನೋವನ್ನಾದರೂ ಕೊಲ್ಲುವ ಶಕ್ತಿ ಇತ್ತು. ಆ ನಿಷ್ಕಲ್ಮಶ ನಗು ಗೋಡೆಗಳಿಗೆ ಇನ್ನಷ್ಟು ಮೆರಗು ತಂದುಕೊಟ್ಟಿತ್ತು.ಅಲ್ಲಲ್ಲಿ ಚಿರು ಜೊತೆ ಆಟ ಆಡಿ ನಲಿಯುತ್ತಿದ್ದಾಗ ತೆಗೆದ ಫೋಟೋ, ಜಗಳ ಆಡಿದಾಗ ಮುನಿಸಿನಲ್ಲಿದ್ದಾಗ ತೆಗೆದ ಫೋಟೋ,ಎಲ್ಲರೂ ಜೊತೆಯಾಗಿ ತೆಗೆಸಿಕೊಂಡಿದ್ದ ಫೋಟೋಗಳನ್ನು ನೋಡಿ ಮೀರಾಳ ಕಣ್ಣು ತೇವವಾದವು.
ಹಾಗೇ ಮೆಟ್ಟಿಲೇರಿ ಹೋದಂತೆ ಮುಂದೆ ಹೋದಾಗ ಸಿದ್ದಾರ್ಥ್,ಸುಮತಿ ಮೀರಾಳನ್ನು ಎತ್ತಿ ಮುದ್ದಾಡುವಾಗ ತೆಗೆದಿದ್ದ ಬೃಹದಾಕಾರದ ಫೋಟೋ ಕಣ್ಣಿಗೆ ಬಿತ್ತು.ಫೋಟೋದಲ್ಲಿದ್ದ ತನ್ನ ಅಪ್ಪ ಅಮ್ಮನ ಮೇಲೆಲ್ಲಾ ಕೈಯ್ಯಾಡಿಸಿದಳು. ಕಣ್ಣೀರು ಧಾರಾಕಾರವಾಗಿ ಬರಲಾರಂಭಿಸಿತು.
ಕೊನೆಗೆ ಅಲ್ಲೇ ಪಕ್ಕದಲ್ಲಿದ್ದ ಕೊಣೆಯ ಬಾಗಿಲು ತೆಗೆದು ಒಳಗೆ ಹೋದಳು.ಅಡಿಗಡಿಗೆ ಕಾಲಿಗೆ ಸೋಕುತಿದ್ದ ಬಣ್ಣ ಬಣ್ಣದ ಬೊಂಬೆಗಳನ್ನು ಎತ್ತಿ ತಬ್ಬಿಕೊಂಡು ಮುತ್ತಿಟ್ಟಳು.ಹಾಗೇ ಮೂಲೆಯಲ್ಲಿ ಬೊಂಬೆಗಳ ನಡುವೆ ಕಾಣುತಿದ್ದ ತೊಟ್ಟಿಲು ನೋಡಿದ ಮೀರಾ ಅದನ್ನೆಲ್ಲಾ ಸವರಿದಳು. ನೆನಪಿನ ಬುತ್ತಿಯನ್ನೇ ಉಣಬಡಿಸಿದ ಆ ಮನೆ ನಿಜಕ್ಕೂ ಅವಳನ್ನು ಮೂಕವಿಸ್ಮಿತೆಯಾಗಿಸಿತು.
📸 ಬಾಲ್ಯದ ಪ್ರತಿಧ್ವನಿಗಳು

ನಿಧಿಯಿಂದ ಸತ್ಯಾಂಶ ತಿಳಿದ ನಕುಲ್ ಮೌನ ಮುರಿದು ಸಂಭ್ರಮಿಸಿದನು.ಮೀರಾಳನ್ನು ನೋಡಲು ಅವಸರದಿಂದ ಮನೆಯಿಂದ ಆಚೆ ಬಂದ ಸತ್ಯಪ್ರಕಾಶ್, ಮೋಹನ್, ಕುಸುಮ ಅಲ್ಲೇ ನಿಂತು ಮಾತನಾಡುತಿದ್ದರು.
ಮೌನಿಯಾಗಿದ್ದ ನಕುಲ್ ಒಂದೇಸಲ ಖುಷಿಯಿಂದ ಹಾರುತ್ತಿದ್ದದ್ದನ್ನು ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು.ಜೊತೆಯಲ್ಲೇ ನಿಧಿ ಇರುವುದನ್ನು ಕಂಡು ಸತ್ಯ ಏನೆಂಬುದನ್ನು ಹೇಳಿರಬೇಕು ಎಂದು ತಮ್ಮತಮ್ಮಲ್ಲೇ ಅಂದುಕೊಂಡರು.
“ಏನಪ್ಪಾ…!ಮಗನೆ. ಒಂದು ವಾರದಿಂದ ಎಸ್ಟ್ ಮಾತಾಡಿಸಿದ್ರು ಮಾತಾಡೋಕೆ ಬರೋದೇ ಇಲ್ಲಾ ಅನ್ನೋತರ ಇದ್ದೆ. ಈಗೇನು ಮಾತಾಡೋದ್ ಬಿಟ್ರೆ ಏನು ಗೊತ್ತಿಲ್ಲ ಅನ್ನೋತರ ಮಾತಾಡ್ತಿದೀಯಾ.ಏನ್ ಸಮಾಚಾರ”
ನಕುಲ್ ನಾಚಿಕೊಂಡವನಂತೆ”ಅಮ್ಮಾ…ss ಎಂತ ಇಲ್ಲ. ಮೀರಾ ಎಲ್ಲಿ ಹೋದ್ಲು ಹೇಳು”
“ಗೊತ್ತಾಯ್ತು ಗೊತ್ತಾಯ್ತು ಸಾಹೇಬ್ರು ಯಾಕಿಷ್ಟು ಎಗರಾಡ್ತಿದ್ದಾರೆ ಅಂತ.ಒಳಗಿದಾಳೆ ಹೋಗು ಹೋಗು”ಎಂದ ಮೋಹನ್ ಮಗನನ್ನು ಛೇಡಿಸುತ್ತಾ.
ಒಳಗೆ ಹೋದ ನಕುಲ್ ಮೀರಾಳಿಗಾಗಿ ಹುಡುಕಿದ.ಬಾಲ್ಯದ ನೆನಪುಗಳನ್ನು ನೆನೆದು ಭಾವುಕಳಾಗಿ ಕಿಟಕಿಯ ಕಡೆ ನೋಡುತ್ತಾ ನಿಂತಿದ್ದ ಮೀರಾಳನ್ನು ಹಿಂಬದಿಯಿಂದ ತಬ್ಬಿಡಿದು ಅವಳ ಭುಜದ ಮೇಲೆ ತನ್ನ ಗಲ್ಲವಿರಿ ಸಿದ.ಮೀರಾಳಿಗೆ ಖಾತ್ರಿಯಾಗಿ ಗೊತ್ತಿತ್ತು ಅದು ನಕುಲನೇ ಎಂದು.ನಕುಲನ ಹಿಡಿತದಿಂದ ಕೋಪಗೊಂಡ ಮೀರಾ ಅವನ ಕಡೆ ತಿರುಗಿ ಅವನನ್ನು ದೂರ ತಳ್ಳಿ “ಯಾರ್ ಸರ್ ನೀವು. ಹೇಳ್ದೆ ಕೇಳ್ದೆ ನನ್ನ ತಬ್ಕೊತಿದಿರಾ”ಎಂದಳು. ಅವಳ ಕಣ್ಣು ಕೋಪದಿಂದ ಕೆಂಪೇರಿದ್ದವು.
ಆಶ್ಚರ್ಯಗೊಂಡ ನಕುಲ್”ನಾನ್ ಯಾರು ಅಂತ ನಿಜ್ವಾಗ್ಲೂ ಗೊತ್ತಿಲ್ವೇನೇ ಕೋತಿ”ಎಂದು ತಲೆಗೊಂದು ಮೊಟಕಿದನು.
ಅವನ ಚೇಷ್ಟೆಯಿಂದ ಮತ್ತೂ ಕೋಪಗೊಂಡ ಮೀರಾ”ರೀ ಯಾರ್ರೀ ನೀವು.ಸುಮ್ ಸುಮ್ನೆ ತಲೆಗೆ ಯಾಕ್ ಹೊಡಿತಿದಿರಾ.ಹೇಳಿದ್ನಲ್ವಾ ನೀವ್ ಯಾರು ಅಂತ ನಂಗ್ ಗೊತ್ತಿಲ್ಲ”ಎಂದು ಹಿಂದೆ ತಿರುಗಿ ಕೈಕಟ್ಟಿ ನಿಂತಳು.
“ಮೀರಾ ಅದ್ ಹಾಗಲ್ಲ ಕಣೆ.ನಾನ್ ಹೇಳೋದ್ ಸ್ವಲ್ಪ ಕೇಳ್ತಿಯಾ”ಎಂದ ವಿನಯತೆಯಿಂದ.
ಮೀರಾಳಿಂದ ಯಾವುದೇ ಉತ್ತರ ಬರಲಿಲ್ಲ.ಒಂದೆರಡು ನಿಮಿಷ ನಕುಲ್ ಏನು ಕೇಳಿದರು ಉತ್ತರಿಸದೆ ಮೌನಿಯಾಗಿ ನಿಂತುಬಿಟ್ಟಿದ್ದಳು.
“ಈಗ್ ಮಾತಾಡ್ತೀಯಾ ಇಲ್ವಾ ಮೀರಾ”
“ಇಲ್ಲಾ.. ನೀವ್ ಯಾರು ಅಂತ ನಿಮ್ ಜೊತೆ ಮಾತಾಡ್ಲಿ ನಾನ್ ಮಾತಾಡಲ್ಲ”ಮುಖಕ್ಕೊಡೆದವಳಂತೆ ಹೇಳಿದಳು.
“ನೀನ್ ಜೊತೆ ಮಾತಾಡ್ದೆ ನಂಗ್ ಇರೋಕಾಗಲ್ಲ ಮೀರಾ”
“ಓಹೋ ಹಾಗ ಸರ್. ಮತ್ತೆ ಒಂದು ವಾರ ಹೇಗಿದ್ರಿ ಸರ್ ಮಾತಾಡದೆ”
💞 ಮೌನವನ್ನು ಮುರಿದ ಪ್ರೀತಿ

“ಅದ್ ಹಾಗಲ್ಲ ಮೀರಾ. ನಂಗ್ ಅದರ ಬಗ್ಗೆ ಯಾರ್ ಹತ್ರಾನೂ ಹೇಳ್ಕೋಳ್ಳೋಕಾಗ್ಲಿಲ್ಲ.ನೀನೆಲ್ಲಿ ನಂಗ್ ದೂರ ಆಗ್ತಿಯೋ ಅಂತ ಭಯದಿಂದ ಆ ತರ ಸೈಲೆಂಟ್ ಆಗ್ಬಿಟ್ಟೆ ಅಷ್ಟೇ”
“ಲೋ ಬೇರೆ ಯಾರಾದ್ರೂ ಓಕೆ. ನನ್ ಹತ್ರ ಹೇಳ್ಕೊಳ್ಳೋಕೆನಾಗಿತ್ತು.ಒಂದು ವಾರ ನರಕ ಅನುಭವಿಸಿದಿನಿ.ಇವತ್ತು ನಿಧಿ ಏನಾದ್ರು ಬರಲಿಲ್ಲ ಅಂದಿದ್ರೆ. ನಾನ್ ಸತ್ತೋಗ್ತಿದ್ದೆ ಅಷ್ಟೇ”
“ಪ್ಲೀಸ್ ಮೀರಾ ಹಾಗೆಲ್ಲ ಮಾತಾಡ್ಬೇಡ. ನಂಗ್ ನಿಜ್ವಾಗ್ಲೂ ತಡ್ಕೊಳ್ಳೋಕಾಗಲ್ಲ”
“ನಂಗೂ ಆಗಲ್ಲ ಕಣೋ ನಿನ್ನ ಬಿಟ್ಟಿರೋಕೆ”ಎಂದು ಜೋರಾಗಿ ಬಂದು ತಬ್ಬಿಕೊಂಡಳು.”ನಂಗೊತ್ತಿಲ್ಲ ನೀನ್ಯಾವಾಗ್ಲೂ ಹೀಗೆ ಜೊತೆಯಾಗಿರ್ಬೇಕು ಸರಿನಾ”
“ಏನು ಯಾವಾಗ್ಲೂನಾ ನಂಗ್ ಆಗಲ್ಲಪ್ಪ. ಏನೋ ಸ್ವಲ್ಪ ಜಾಸ್ತಿ ಲವ್ ಮಾಡ್ತಿಯಾ ಅನ್ನೋ ಕಾರಣಕ್ಕೆ ಒಂದು ಹತ್ತು ವರ್ಷ ಜೊತೆಗಿರ್ಬೋದು ಅಷ್ಟೇ ಜೀವನ ಪೂರ್ತಿ ನಿನ್ನ ಸಹಿಸ್ಕೊಳ್ಳೋಕೆ ನಂಗ್ ಆಗಲ್ಲ ಕಣಮ್ಮ”ಎಂದ ನಗುತ್ತಾ.
“ನಿಮ್ಮಜ್ಜಿ ನಿನ್ನೆಲ್ಲಾದ್ರೂ ಬಿಟ್ಟೋಗು ಆಗ ಇದೆ ನಿನ್ಗೆ.ಸತ್ಮೇಲೆ ದೆವ್ವ ಆಗಿ ನಿನ್ಗೆ ಕಾಟ ಕೊಡ್ತೀನಿ”
“ಈಗೇನ್ ನೀನ್ ಮನುಷ್ಯಳಾ ಈಗ್ಲೂ ನೀನ್ ದೆವ್ವಾನೆ”ಎಂದ ಹಲ್ಲುಗಿಂಜುತ್ತಾ.
“ಡಬ್ಬಾ ನನ್ಮಗನೇ ನನ್ನೇ ದೆವ್ವ ಅಂತೀಯಾ”ಎಂದು ಓಡುತಿದ್ದ ನಕುಲನನ್ನು ಹಿಡಿಯಲು ಪ್ರಯತ್ನಿಸಿದಳು.ಓಡುತ್ತಿದ್ದ ನಕುಲ್ ನಿಂತು ಮೀರಾ ಕಡೆ ತಿರುಗಿ ಅವಳನ್ನು ಎತ್ತಿ ತಿರುಗಿಸಿದ ಇಬ್ಬರ ಮುಖದಲ್ಲಿ ನಗು ಅರಳಿತ್ತು.
ಮೋಹನ್ ನಿಧಿಯನ್ನು ಕರೆದು”ನಿಧಿ ಹೋಗಮ್ಮ ಅವರಿಬ್ಬರನ್ನು ಕರ್ಕೊಂಡ್ ಬಾ. ಮೀರಾ ಅವರ ಅಪ್ಪ ಅಮ್ಮನ ಸಮಾಧಿಗೆ ಪೂಜೆ ಮಾಡಬೇಕು”ಎಂದರು.
“ಹ್ಮ್ ಸರಿ ಅಂಕಲ್”ಎಂದು ಮನೆಯೊಳಗೇ ಪ್ರವೇಶ ಮಾಡಿದಳು.ಮನೆಯೊಳಗೇ ಹೋಗುತ್ತಿದ್ದಂತೆ ಮೀರಾ, ಚಿರು ನಗುತ್ತಿದ್ದ ಫೋಟೋಗಳು ಕಣ್ಣಿಗೆ ಬಿದ್ದವು.ಚಿರು ನಗುತ್ತಿರುವುದನ್ನು ನೋಡಿದ್ದು ಅದೇ ಮೊದಲು. “ಅಬ್ಬಾ ಎಸ್ಟ್ ಚೆನ್ನಾಗಿದೆ ಅವ್ನ್ ನಗು. ಅವ್ನ್ ಯಾವಾಗ ಮೊದಲಿನ ತರ ನಗ್ತಾನೋ ಏನೋ”ಎಂದು ಮನದಲ್ಲೇ ಅಂದುಕೊಂಡು ಮುಂದೆ ಸಾಗಿದಳು.
ಮೀರಾಳನ್ನು ಎತ್ತಿ ತಿರುಗಿಸುತ್ತಾ ನಕುಲನನ್ನು ನೋಡಿ ಗಂಟಲು ಸರಿಮಾಡಿಕೊಂಡವಳಂತೆ ನಟಿಸಿ”ನಕುಲ್ ಇಳ್ಸೊ ಸಾಕು ಪಾಪ ನಮ್ ಮೀರಾಗೆ ಕಣ್ಣು ಸುತ್ತುತ್ತವೆ”ಎಂದಳು ವ್ಯಂಗ್ಯವಾಗಿ.
ಮೀರಾಳನ್ನು ಕೆಳಗಿಳಿಸಿದ ನಕುಲ್ “ನೀನ್ ಯಾವಾಗ್ಲೇ ಬಂದೆ ಇಲ್ಲಿಗೆ”ಎಂದ.
“ಈಗ್ಲೇ”ಎಂದುತ್ತರಿಸಿ ಹಾಗೇ ಮಾತು ಮುಂದುವರಿಸಿದ ನಿಧಿ “ಅಂಕಲ್ ಕರೀತಿತಾರೆ ಬರ್ಬೇಕಂತೆ “ಎಂದು ಕರೆದಳು.
“ಹ್ಮ್ ಸರಿ”ಎನ್ನುತ್ತಾ ಇಬ್ಬರನ್ನು ಕರೆದುಕೊಂಡು ಹೋದಳು.
“ಬಾ ಮರಿ ನಿಮ್ಮ ಅಪ್ಪ ಅಮ್ಮನ ಸಮಾಧಿಗೆ ಪೂಜೆ ಮಾಡುವಿಯಂತೆ”ಎಂದ ಕುಸುಮ ಮೀರಾಳನ್ನು ಸಮಾಧಿಯ ಬಳಿ ಕರೆತಂದಳು.
ಅಪ್ಪ ಅಮ್ಮನ ಸಮಾಧಿ ನೋಡಿ ಭಾವುಕಳಾದ ಮೀರಾಳನ್ನು ಪ್ರಕಾಶ್ ಸಂತೈಸಿದನು.ಸಮಾಧಿಗೆ ಹೂಮಾಲೆ ಹಾಕಿ ವಂದಿಸಿದಳು.ನಂತರ ಎಲ್ಲರೂ ಜೊತೆಯಾಗಿ ಎಸ್ಟೇಟ್ ಸುತ್ತಲೂ ಹೋದರು.ಸಂಜೆ ಸಮಯವಾದ್ದರಿಂದ ಎಸ್ಟೇಟ್ ನೋಡಲು ಇನ್ನೂ ಚೆನ್ನಾಗಿದೆ ಕಾಣುತ್ತಿತ್ತು.
💔ಅಪ್ಪ ಅಮ್ಮನ ಕಂಡು ಕಣ್ಣೀರಾದ ಮೀರಾ

ಹಾಗೇ ಸುತ್ತುತ್ತಾ ವೀರಾಂಜನೇಯ ದೇವಸ್ಥಾನ ಬಂದಾಗ ಮೀರಾಳಿಗೆ ಏನೇನೋ ವಿಚಿತ್ರ ನೆನಪುಗಳು ಕಾಡಲು ಶುರುಮಾಡಿದವು.ಸಿದ್ದಾರ್ಥ್, ಸುಮತಿಯ ಅಪಘಾತದ ದೃಶ್ಯಗಳು ಕಣ್ಣ ಮುಂದೆಯೇ ನಡೆದಂತೆ ಭಾಸವಾಯಿತು.
ಹೆದರಿದ ಮೀರಾ ಸತ್ಯಪ್ರಕಾಶನನ್ನು ತಬ್ಬಿಡಿದು”ಅಂಕಲ್ ನನ್ಗೆ ಅಪ್ಪ ಅಮ್ಮ ತುಂಬಾ ನೆನಪಾಗ್ತಿದಾರೆ.ಪ್ಲೀಸ್ ಅಂಕಲ್ ನನ್ನ ಇಲ್ಲಿಂದ ಕರ್ಕೊಂಡೋಗಿ”ಎಂದು ಪೀಡಿಸಿದಳು.
“ಮೀರಾ ನಿನ್ನ ಈ ಮನೆಗೆ ಸೇರಿಸಬೇಕು ಅಂತ ನಿಮ್ ಅತ್ತೆ ಮಾಮ ಎಸ್ಟ್ ಕಷ್ಟ ಪಟ್ಟಿದ್ದಾರೆ ಅಂತ ಗೊತ್ತಲ್ವಾ.ನಿಮ್ ಅಪ್ಪ ಅಮ್ಮನಿಗೂ ನೀನ್ ಇಲ್ಲಿರೋದೆ ಇಷ್ಟ.ನೀನ್ ಸೇರಬೇಕಾಗಿರೋ ಜಾಗ, ಇರ್ಬೇಕಾಗಿರೋ ಮನೆ,ಎಲ್ಲಾ ಇದೆ ಕಣಮ್ಮ. ಮತ್ತೆ ನೀನ್ ದಾಂಡೇಲಿಗೆ ಬರ್ತೀನಿ ಅಂತ ಹಠ ಮಾಡಬಾರ್ದು.ಇಲ್ಲೇ ಖುಷಿಯಿಂದ ಇರಬೇಕು”ಎಂದ ತಲೆ ನೇವರಿಸುತ್ತಾ.
“ಹ್ಮ್ ಸರಿ ಅಂಕಲ್ ನಿಮ್ ಮಾತಿಗೆ ಬೆಲೆಕೊಟ್ಟು ಇಲ್ಲೇ ಇರ್ತೀನಿ. ಆದ್ರೆ ನೀವ್ ಮಾತ್ರ ಯಾವಾಗ್ಲೂ ನನ್ ಜೊತೆಯಲ್ಲೆ ಇರಬೇಕು”
“ಇಲ್ಲ ಮರಿ ನಾನ್ ದಾಂಡೇಲಿಗೆ ಹೋಗ್ಬೇಕು. ಅಲ್ಲಿ ನಮ್ ನಂಜಪ್ಪ ತಾತ ನಮಗೋಸ್ಕರ ಕೊಟ್ಟ ತೋಟ ಯಾರ್ ನೋಡ್ಕೋತಾರೆ.ಈಗ ಮನೆ, ಜಾಗ ಸಿಕ್ತು ಅಂತ ಅದ್ನ ಬಿಟ್ಟು ಬರೋಕಾಗುತ್ತಾ ನೀನೇ ಹೇಳು”
“ಸರಿ ಅಂಕಲ್ ಹಾಗಿದ್ರೆ ನಾನು ಅಲ್ಲಿಗೆ ಬರ್ತೀನಿ. ನಂಗ್ ಬುದ್ದಿ ಬಂದಾಗಿನಿಂದಲೂ ನನ್ಗೆ ಅಪ್ಪ ಅಮ್ಮ ಎಲ್ಲಾ ನೀವೇ. ನೀವ್ ಎಲ್ಲಿರ್ತಿರೋ ನಾನು ಅಲ್ಲೇ ಇರ್ತೀನಿ ನಿಮ್ಮನ್ನು ಬಿಟ್ಟು ನಾನ್ ನಿಜ್ವಾಗ್ಲೂ ಖುಷಿಯಾಗಿರಲ್ಲ.ಇರೋದಾದ್ರೆ ನೀವು ಇಲ್ಲೇ ಇರಿ ಇಲ್ಲಾಂದ್ರೆ ನನ್ನು ಕರ್ಕೊಂಡ್ ಹೋಗಿ ಅಷ್ಟೇ”ಎಂದಳು ನಿರ್ಧಾರದ ದನಿಯಲ್ಲಿ.
“ಹಠ ಮಾಡಬಾರ್ದು ಮೀರಾ ನಾನ್ ಹೇಳೋದ್ ಕೇಳು.ಸರಿ ಮೀರಾ ಒಂದು ಕೆಲಸ ಮಾಡೋಣ. ನೀನ್ ಮದ್ವೆ ಆಗೋವರೆಗೂ ನಾನ್ ಅಲ್ಲೇ ಇರ್ತೀನಿ.ನಿಂಗ್ ಈ ಜಾಗ ಎಲ್ಲಾ ಅಡ್ಜೆಸ್ಟ್ ಆದ್ಮೇಲೆ ಮದ್ವೆ ಮಾಡಿ ನಾನ್ ದಾಂಡೇಲಿಗೆ ಹೋಗ್ತೀನಿ ಸರಿ ನಾ”
ಮೀರಾಳಿಗೆ ಸತ್ಯಪ್ರಕಾಶ್ ಒಪ್ಪಂದ ಇಷ್ಟವಿಲ್ಲದಿದ್ದರೂ ವಿಧಿಯಿಲ್ಲದೇ “ಹ್ಮ್ ಸರಿ ಅಂಕಲ್”ಎಂದು ಒಪ್ಪಿದಳು.
ಎಸ್ಟೇಟ್ ಸುತ್ತಿದ ನಂತರ ವೃದ್ಧಾಶ್ರಮ, ಅನಾಥಾಶ್ರಮಕ್ಕೆ ಭೇಟಿಕೊಟ್ಟ ಮೀರಾ ಹಿರಿಯರ ಆಶೀರ್ವಾದ ಪಡೆದು ಮಕ್ಕಳ ಜೊತೆ ಆಡುತ್ತ ಮಗುವಾಗಿಬಿಟ್ಟಳು.
ಸ್ನೇಹ ಚಿರಾಯು-16 ಮುಂದುವರೆಯುವುದು…..
ಈ ಸ್ನೇಹ ಚಿರಾಯು-16 ನೀವು ಇಂಗ್ಲಿಷ್ ಭಾಷೆಯಲ್ಲಿಯೂ ಓದಬಹುದು.
ನಮ್ಮ ವೆಬ್ಬೆಟ್ ನ ಇತರ ಪೋಸ್ಟ್ ಗಳನ್ನು ಇಲ್ಲಿ ಓದಬಹುದು.
ಈ ಸ್ನೇಹ ಚಿರಾಯು-16
