ದಿನಗಳು ಕಳೆದಂತೆ ಚಿರಂತನ ಸ್ಥಿತಿ ಹದಗೆಡುತ್ತಾ ಬಂತು. ಒಂಭತ್ತನೇಯ ವಾರ್ಷಿಕ ಪರೀಕ್ಷೆಯಲ್ಲೂ ಸಹ ಕಡಿಮೆ ಅಂಕಗಳನ್ನು ತೆಗೆದುಕೊಂಡು ಉತ್ತೀರ್ಣನಾಗಿದ್ದರೆ,ಈ ಕಡೆ ಮೀರಾ ಉತ್ತಮ ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದಳು.

ಚಿರಂತನ ಈ ಸ್ಥಿತಿ ಕಂಡು ಮೀರಾ ಮತ್ತು ಸತ್ಯಪ್ರಕಾಶ್ಗೆ ದಿಗಿಲಾಯಿತು.ಮುಂದೆ ಹೀಗೆ ಓದಿದರೆ ಇವನ ಭವಿಷ್ಯ ಏನಾಗುವುದೋ ಎಂಬ ಚಿಂತೆ ಕಾಡಲು ಶುರುವಾಯಿತು.ಇವನನ್ನು ಬೇರೆಡೆ ಗಮನ ಹರಿಸದಂತೆ ಓದಿಕೊಳ್ಳುವ ಹಾಗೇ ಮಾಡಬೇಕೆನ್ನುವ ನೆಪದಲ್ಲಿ ಆ ಗೀತಾಳ ನೆನಪಿಂದ ಅವನನ್ನು ಹೊರತರಲು ತೀರ್ಮಾನಿಸಿದರು.ಆದರೆ ಚಿರಂತ್ ಮಾತ್ರ ಓದುವಾಗ ಗೀತಾಳನ್ನು ಒಮ್ಮೆಯೂ ನೆನೆದಿರಲೇ ಇಲ್ಲ ಬದಲಾಗಿ ಕಷ್ಟಪಟ್ಟು ಓದುತ್ತಿದ್ದ ಆದರೂ ಅವನಿಗೆ ಅದು ನೆನಪಿನಲ್ಲಿರುತ್ತಿರಲೇ ಇಲ್ಲ..ತನ್ನಿಂದ ಮೀರಾ,ಅಪ್ಪ ಅನುಭವಿಸುತ್ತಿರುವುದರ ಮುಂದೆ ಗೀತಾಳನ್ನು ಪ್ರೀತಿಸುತ್ತಿರುವುದನ್ನೇ ಮರೆತು ಬಿಟ್ಟಿದ್ದ ಚಿರಂತ್.
ತನಗಾಗುತ್ತಿರುವ ನಿಜತೊಂದರೆಯನ್ನು ಹೇಳುತ್ತಿದ್ದರೂ ತಪ್ಪಿಸಿಕೊಳ್ಳಲು ಅದೊಂದು ಕಾರಣವಷ್ಟೇ ಎಂದು ತಿಳಿದು ಸುಮ್ಮನಾಗುತ್ತಿದ್ದರು ಮೀರಾ ಮತ್ತು ಪ್ರಕಾಶ್.
ಆದರೆ ಅವನಿಗಾಗುತ್ತಿರುವ ನಿಜ ತೊಂದರೆ ಏನೆಂಬುದನ್ನು ತಿಳಿದುಕೊಳ್ಳಲು ಸಣ್ಣ ಪ್ರಯತ್ನವೂ ಸಹ ಮಾಡಲಿಲ್ಲ.ನನ್ನನ್ನು ಯಾರು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ನೋವು ಹಗಲು ರಾತ್ರಿ ಕಾಡುತ್ತಿತ್ತು. ಆದರೂ ಯಾರಿಗೂ ಹೇಳದೆ, ಹೇಳಿಕೊಳ್ಳಲಾಗದೆ ಒಬ್ಬನೇ ಅನುಭವಿಸುತಿದ್ದನು..

ಹತ್ತನೇ ತರಗತಿಯ ಮೊದಲ ದಿನದಿಂದಲೇ ಚಿರಂತನನ್ನು ಓದಿಸಬೇಕು ಎಂದು ತೀರ್ಮಾನಿಸಿದಳು. ಮೊದಲ ದಿನ ಶಾಲೆ ಮುಗಿಸಿಕೊಂಡು ಬಂದ ಮೇಲೆ ಚಿರಂತ್ ಒಬ್ಬನೇ ಕಾಡು ಸುತ್ತಲೂ ಹೋಗಿ ಬಂದಮೇಲೆ ಮೀರಾ ವಿಚಾರಿಸಿದಳು.”ಎಲ್ಲೋ ಹೋಗಿದ್ದೆ ಒಬ್ಬನೇ” ಎಂದು ಕೇಳಿದಳು.”ಹಾಗೇ ಸುಮ್ನೆ ಕಾಡು ಸುತ್ತೋಕೆ ಹೋಗಿದ್ದೆ” ಎಂದ ಚಿರಂತ್.
“ಇನ್ನು ನಿಂಗೆ ಬೇಜವಾಬ್ದಾರಿತನ ಹೋಗಿಲ್ವಾ, ಈ ವರ್ಷ ಕಾಡು ಗೀಡು ಸುತ್ತೋದು ಬಿಟ್ಟು ಓದಿನ ಕಡೆ ಗಮನಕೊಡು. ನೋಡಿದ್ಯಲ್ವಾ ಅಂಕಲ್ ನಿನ್ನಿಂದ ಎಸ್ಟ್ ಬೇಜಾರಾಗಿದ್ದಾರೆ ಅಂತ ಈಗ್ಲಾದ್ರೂ ಅರ್ಥ ಮಾಡ್ಕೊಂಡ್ ಓದೋದು ಕಲಿ”ಎಂದು ಗದರಿದಳು ಮೀರಾ.
ಮೀರಾ ಮಾತಿಗೆ ಉತ್ತರಿಸದೆ ತಲೆ ತಗ್ಗಿಸಿಕೊಂಡು ಒಳ ಸೇರಿದನು.ಅವನೊಂದಿಗೆ ಕಾಡು ಸುತ್ತೋದು ಅವಳಿಗೂ ತುಂಬಾ ಇಷ್ಟ ಆದರೆ ಅವನ ಜೀವನ ಎಲ್ಲೋ ದಾರಿ ತಪ್ಪುತ್ತಿದೆ ಎಂದು ಡಿಸ್ಟರ್ಬ್ ಆಗಿದ್ದಳು.
ಹತ್ತನೇ ತರಗತಿಯಲ್ಲೂ ಮೀರಾ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಳು.ಚಿರಂತನು ಸಹ ಉತ್ತೀರ್ಣನಾಗಿದ್ದ ಆದರೆ ಕೇವಲ ಉತ್ತೀರ್ಣ ಅಂಕಗಳನ್ನು ತೆಗೆದುಕೊಂಡು.ಇದರಿಂದ ಮನೆಯಲ್ಲಿ ಅವನಿಗೆ ಕೊಡುತ್ತಿರುವ ಮರ್ಯಾದೆಯೇ ಬದಲಾಗಿ ಹೋಗಿತ್ತು. ಆದರೂ ಒಬ್ಬನೇ ನೊಂದಿಕೊಂಡು ಸುಮ್ಮನಿರುತ್ತಿದ್ದ…
ಮೀರಾಳಿಗೆ ಪಿಯುಸಿ ವ್ಯಾಸಂಗಕ್ಕೆ ದಾಂಡೇಲಿ ಪ್ರಸಿದ್ಧ ಕಾಲೇಜ್ ಒಂದರಲ್ಲಿ ಉಚಿತ ಸೀಟು ಸಿಕ್ಕಿತ್ತು. ಒಂದೆಡೆ ಮೀರಾಳಿಗೆ ಉಚಿತ ಸೀಟು ಸಿಕ್ಕಿದೆ ಎಂದು ಮೀರಾ ಮತ್ತು ಪ್ರಕಾಶ್ಗೆ ಖುಷಿಯಾದರೆ ಮತ್ತೊಂದೆಡೆ ಚಿರಂತನಿಗೆ ಆ ಕಾಲೇಜಿನಲ್ಲಿ ಉಚಿತ ಸೀಟು ಸಿಗಲಿಲ್ಲವೆಂದು ಬೇಜಾರಾದರು.ಬದಲಿಗೆ ಲಕ್ಷ ಲಕ್ಷ ಹಣ ಸುರಿದರೆ ಮಾತ್ರ ಆ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಅವಕಾಶವಿತ್ತು.
ಚಿಕ್ಕಂದಿನಿಂದಲೂ ಇಬ್ಬರು ಒಬ್ಬರಾಗಿ ಒಂದೇ ಶಾಲೆಯಲ್ಲಿ ಓದುತ್ತಿದ್ದ ಮೀರಾಳಿಗೆ ಒಬ್ಬಳೇ ಅಷ್ಟು ದೊಡ್ಡ ಕಾಲೇಜಿನಲ್ಲಿ ಓದಲು ಸಾದ್ಯವಿರಲಿಲ್ಲ.ಚಿರಂತ್ ಎಷ್ಟೇ ಹಿಂದುಳಿದಿದ್ದರು ಅವನ ಮೇಲೆ ಇದ್ದ ನಂಬಿಕೆ ಒಂಚೂರು ಕಡಿಮೆಯಾಗಿರಲಿಲ್ಲ.ಈಗಲೂ ಸಹ ಅವನು ಮುಂದೆ ಚೆನ್ನಾಗೆ ಓದುತ್ತಾನೆ ಎಂಬ ಭರವಸೆಯಲ್ಲಿದ್ದಳು.
ಆದ್ದರಿಂದ ಅಂಕಲ್ ನನ್ನು ಹೇಗಾದರೂ ಒಪ್ಪಿಸಿ ಹಣ ಕಟ್ಟಿ ಅದೇ ಕಾಲೇಜಿಗೆ ಸೇರಿಸೆಂದು ಹೇಳಲು ತೀರ್ಮಾನಿಸಿ ಪ್ರಕಾಶ್ ಬಳಿಬಂದು “ಅಂಕಲ್ ನಾನ್ ನಿಮ್ಮತ್ರ ಸ್ವಲ್ಪ ಮಾತಾಡಬೇಕಿತ್ತು”ಎಂದು ಅನುಮತಿ ಕೇಳಿದಳು.”ಅಯ್ಯೋ ಹೇಳು ಮರಿ, ಅದ್ಕೆ ನಿಂಗೆ ಪರ್ಮಿಷನ್ ಬೇಕಾ”ಎಂದ ಪ್ರಕಾಶ್.

“ಅದೇ ಅಂಕಲ್ ಚಿರಂತ್ನ ನಂಗ್ ಸೀಟು ಸಿಕ್ಕಿರೋ ಕಾಲೇಜಿನಲ್ಲೇ ಸೇರಿಸಿ ಅಂತ ಹೇಳೋಕ್ ಬಂದೆ”ಎಂದು ಹೇಳಿದಳು ಮೀರಾ ವಿನಂತಿಯ ದನಿಯಲ್ಲಿ.
“ಅವನಿಗೆಲ್ಲಾ ಯಾಕಮ್ಮ ಅಷ್ಟ್ ದೊಡ್ಡ ಕಾಲೇಜ್,ಅಲ್ಲೇ ಇರೋ ಗವರ್ನಮೆಂಟ್ ಕಾಲೇಜಿಗೆ ಸೇರಿಸುತ್ತೀನಿ ಬಿಡು”ಎಂದನು ಪ್ರಕಾಶ್.
“ಅದು ಹಾಗಲ್ಲ ಅಂಕಲ್ ಅವ್ನು ನಿಜ್ವಾಗ್ಲೂ ಚೆನ್ನಾಗೆ ಓದ್ತಾನೆ, ಆದ್ರೆ ಏನೋ ಆಗಿದೆ ಅಷ್ಟೇ ಇನ್ನು ಮುಂದೆ ಅವ್ನ್ ಚೆನ್ನಾಗಿ ಓದೋ ತರ ನಾನ್ ಮಾಡ್ತೀನಿ ನನ್ನ ನಂಬಿ”ಎಂದಳು ಮೀರಾ ಕಳಕಳಿಯಿಂದ.
“ಈಗ ಅಂತ ದೊಡ್ಡ ಕಾಲೇಜಿನಲ್ಲಿ ಅವನನ್ನು ಸೇರಿಸಬೇಕೆಂದರೆ ಲಕ್ಷ ಲಕ್ಷ ಹಣ ಕೇಳ್ತಾರೆ ಮೀರಾ. ಅಷ್ಟೊಂದು ಹಣ ನಾನೆಲ್ಲಿಂದ ತರಲಿ. ಒಂದುವೇಳೆ ತರುತ್ತೇನೆ ಅಂತ ಇಟ್ಕೋ ಅವಾಗ್ಲು ಇವನು ಚೆನ್ನಾಗಿ ಓದಲಿಲ್ಲ ಅಂದ್ರೆ ಏನ್ ಮಾಡೋದು”ಎಂದನು ಪ್ರಕಾಶ್.
“ಇಲ್ಲ ಅಂಕಲ್ ಅವ್ನ್ ಮೊದಲಿನ ತರ ಓದೋ ಹಾಗೇ ನಾನ್ ಮಾಡ್ತೀನಿ ನನ್ನ ನಂಬಿ. ಇದೊಂದ್ ಸಲ ನನ್ನ ಮಾತು ಕೇಳಿ ಅವನನ್ನು ಸಹ ಅದೇ ಕಾಲೇಜಿಗೆ ಸೇರಿಸಿ,ಚೆನ್ನಾಗಿ ಓದ್ತಾನೆ ಅಕಸ್ಮಾತ್ ಅದೇನಾದ್ರು ಸುಳ್ಳಾದ್ರೆ ಖಂಡಿತ ನಿಮ್ಮನ್ನು ಮತ್ತೆ ಏನು ಕೇಳಲ್ಲ”ಎಂದು ಬೇಡಿಕೊಂಡಳು ಮೀರಾ..
“ಸರಿ ಮೀರಾ ನಿನ್ನ ಮೇಲೆ ಭಾರ ಬಿಟ್ಟು ಅವನನ್ನು ಅದೇ ಕಾಲೇಜಿಗೆ ಸೇರಿಸುತ್ತೀನಿ.ಅದಕ್ಕೆ ಹಣ ಜೋಡಿಸುವುದು ನನ್ನ ಜವಾಬ್ದಾರಿ, ಅವನನ್ನು ಚೆನ್ನಾಗಿ ಓದಿಸುವುದು ನಿನ್ನ ಜವಾಬ್ದಾರಿ”ಎಂದು ಹೊರ ನಡೆದನು.
“ಸರಿ ಅಂಕಲ್”ಎಂದು ಸಂತೋಷದಿಂದ ಹಿಗ್ಗಿದಳು ಮೀರಾ.
ಇವರಿಬ್ಬರ ಸಂಭಾಷಣೆಯನ್ನು ಮರೆಯಲ್ಲಿ ನಿಂತು ಆಲಿಸುತಿದ್ದ ಚಿರಂತ್. ಪ್ರಕಾಶ್ ಹೊರ ಹೋದ ನಂತರ ಜೋರಾಗಿ ಬಂದು ಮೀರಾಳನ್ನು ತಬ್ಬಿಡಿದು”ಥ್ಯಾಂಕ್ಸ್ ಮೀರಾ. ನಾನ್ ಇಸ್ಟ್ ಮಾಡಿದ್ರು ನನ್ ಮೇಲಿದ್ದ ನಂಬಿಕೆ ಒಂಚೂರು ಕಡಿಮೆಯಾಗಿಲ್ಲ.ಏನ್ ಕೊಟ್ಟು ನಿನ್ ಋಣ ತೀರಿಸಬೇಕೋ ಗೊತ್ತಾಗ್ತಿಲ್ಲ”ಎಂದು ಗಳಗಳನೇ ಅಳಲು ಶುರುಮಾಡಿದ.
“ಚಿರು ಮೊದ್ಲು ನಿನ್ ಅಳೋದು ನಿಲ್ಸು”ಎಂದಳು. ಹಾಗೇ ಮಾತು ಮುಂದುವರೆಸಿ “ಚಿರು ನಂಗ್ ಒಂದ್ ಮಾತು ನಡೆಸಿಕೊಡ್ತಿಯಾ” ಎಂದು ಕೇಳಿದಳು ಮೀರಾ ಧನ್ಯತೆಯಿಂದ.
“ಏನ್ ಕೇಳು ಮೀರಾ” ಎಂದ.
“ನೋಡು ನನ್ನಿಂದ ಇನ್ನೊಬ್ರು ಬೇಜಾರಾಗೋದು ನಂಗಿಷ್ಟ ಇಲ್ಲ ಅಂತ ನಿಂಗು ಗೊತ್ತು. ನಿನ್ನ ಮೇಲೆ ನಂಗ್ ನಂಬಿಕೆ ಇರೋದ್ರಿಂದ ಅಂಕಲ್ನ ಅದೇ ಕಾಲೇಜಿಗೆ ಸೇರಿಸಲು ಹೇಳಿ ಒಪ್ಸಿದಿನಿ.ಅವ್ರು ಒಪ್ಪಿಕೊಂಡ್ರು ನನ್ನ ಮೇಲೆ ನಂಬಿಕೆ ಇಟ್ಟು.ಅಂಕಲ್ ಹತ್ರ ಆ ನಂಬಿಕೆ ನಾನ್ ಕಳ್ಕೊಂಡು ಅವ್ರು ಬೇಜಾರ್ ಆಗ್ಬಾರ್ದು ಅಂದ್ರೆ ನಾನ್ ನಿನ್ ಮೇಲಿಟ್ಟಿರೋ ನಂಬಿಕೆ ನೀನು ಕಳ್ಕೊಬಾರ್ದು.. ಅದ್ಕೆ ಚೆನ್ನಾಗಿ ಓದಬೇಕು. ನಿಂಗೆ ಎಲ್ಲಾ ತರಹದ ಸಹಾಯ ನಾನ್ ಮಾಡ್ತೀನಿ”ಎಂದಳು ಮೀರಾ.

“ಸರಿ ಮೀರಾ”ಎಂದ ಕಣ್ಣೊರಿಸಿಕೊಳ್ಳುತ್ತಾ.
“ಹಾ….ಹಾಗೇ ಇನ್ನೊಂದು ನೀನೇನಾದ್ರು ಚೆನ್ನಾಗಿ ಓದದೇ ನಾನ್ ನಿನ್ ಮೇಲೆ ಇಟ್ಟಿರೋ ನಂಬಿಕೆ ಏನಾದ್ರು ಕಳ್ಕೊಂಡ್ರೆ ಜೀವನ ಪೂರ್ತಿ ನಿನ್ ಜೊತೆ ನಾನ್ ಮಾತಾಡಲ್ಲ”ಎಂದಳು ಮೀರಾ ನಿರ್ಧಾರದ ದನಿಯಲ್ಲಿ.
ಇದನ್ನು ಒಪ್ಪಿಕೊಳ್ಳಲು ಚಿರಂತನಿಗೆ ಕಷ್ಟವಾದರೂ ಒಪ್ಪಿಕೊಳ್ಳದೆ ಬೇರೆ ದಾರಿ ಇರಲಿಲ್ಲ….
ಮೀರಾಳ ಮೇಲೆ ನಂಬಿಕೆ ಇಟ್ಟು ಸಾಲ ಮಾಡಿ ಮಗನನ್ನು ಅದೇ ಕಾಲೇಜಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದ ಪ್ರಕಾಶ್.ಮುಂದೆ ಮಗನ ಯಶಸ್ಸಿನ ಕನಸು ಕಾಣತೊಡಗಿದ್ದ.
ಪಿಯುಸಿ ವ್ಯಾಸಂಗ ಶುರುವಾದ ದಿನದಿಂದಲೂ ಓದಿನಲ್ಲಿ ಶ್ರದ್ದೆ ಇಟ್ಟು ಓದತೊಡಗಿದ ಚಿರಂತ್.ಅವನಿಗೆ ಬೇಕಾದ ಸಹಾಯವನ್ನು ಮಾಡುತ್ತ ತಾನು ಚೆನ್ನಾಗೆ ಓದುತ್ತಿದ್ದಳು ಮೀರಾ.
ದ್ವಿತೀಯ ಪಿಯುಸಿಗೆ ಬಂದಾಗಲಂತೋ ಹಗಲು ರಾತ್ರಿ ಎನ್ನದೆ ಓದುತ್ತಿದ್ದ ಚಿರಂತನಿಗೆ ಹೊಸದೊಂದು ತೊಂದರೆ ಕಾಡತೊಡಗಿತ್ತು. ಹೆಚ್ಚೆಚ್ಚು ಓದುತ್ತಿದ್ದಂತೆ ತಲೆನೋವು ಬರುತ್ತಿತ್ತು.ಆದರೂ ಅದನ್ನೆಲ್ಲ ತಡೆದು ಓದಿನ ಕಡೆ ಗಮನ ಕೊಡುತ್ತಿದ್ದ. ಹೀಗೆ ಓದುತಿದ್ದ ಚಿರಂತನನ್ನು ಕಂಡು ಮೀರಾ ಹರ್ಷಿತಳಾಗಿದ್ದಳು.
ಆದರೆ ಆ ಸಂತೋಷ ಇದ್ದಿದ್ದು ದ್ವಿತೀಯ ಪಿಯುಸಿಯ ಫಲಿತಾಂಶ ಬರುವವರೆಗೂ ಮಾತ್ರ.ಯಾವಾಗಲು ಕಡಿಮೆ ಅಂಕಗಳೊಂದಿಗೆ ಉತ್ತೀರ್ಣನಾಗುತಿದ್ದ ಚಿರಂತ್ ಈ ಸರಿ ಮಾತ್ರ ಏಕಾಏಕಿ ಎರಡು ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದ.
ಆದರೆ ಮೀರಾ ಮಾತ್ರ ಡಿಸ್ಟಿಂಕ್ಷನಲ್ಲಿ ಪಾಸಾಗಿದ್ದಳು. ಅದರ ಖುಷಿಯನ್ನು ಆಚರಿಸಲು ಸಾಧ್ಯವಾಗಲೇ ಇಲ್ಲ ಅವಳಿಗೆ.ಚಿರಂತನ ಫಲಿತಾಂಶವನ್ನು ಕಂಡು ಮೀರಾಳಿಗೆ ಆಕಾಶವೇ ಅವಳ ತಲೆಮೇಲೆ ಬಿದ್ದಂತ ಅನುಭವವಾಯಿತು.
ಫಲಿತಾಂಶದಿಂದ ಬೆಂದು ಹೋಗಿದ್ದ ಮೀರಾ ಒಬ್ಬಳೇ ಕತ್ತಲೆಕೋಣೆಯಲ್ಲಿ ಅಳುತ್ತಾ ಕೂತಿದ್ದಳು. ಆದರೆ ಚಿರಂತ್ ಮಾತ್ರ ಇದೆಲ್ಲವನ್ನು ಮರೆಯಲು ಕಾಡು ಸುತ್ತಲು ಹೋಗಿದ್ದ.ಈ ಕಾಡಿನ ಹಸಿರಿಂದಲೇ ಸ್ವಲ್ಪ ಸಮಾಧಾನವಾಗುತಿತ್ತು ಅವನಿಗೆ..
ಸಂಜೆ ಪ್ರಕಾಶ್ ಮನೆಗೆ ಬಂದಾಗ ಯಾವಾಗಲು ಪೂಜೆ ಮಾಡಿದ ಬೆಳಕು ಮನೆಯೆಲ್ಲಾ ಬೆಳಗುತಿತ್ತು. ಆದರೆ ಇವತ್ತು ಯಾಕೆ ಹೀಗೆ ಕತ್ತಲು ಕವಿದಿದೆ ಎಂಬ ಸಂದೇಹದಿಂದ ಮನೆ ಒಳಗೆ ಪ್ರವೇಶ ಮಾಡಿದ.
ಕತ್ತಲೆ ಕೋಣೆಯಲ್ಲಿ ಅಳುತ್ತ ಕೂತಿದ್ದ ಮೀರಾಳನ್ನು ಕಂಡ ಒಮ್ಮೆಲೇ ಗಾಬರಿಯಿಂದ “ಏನಾಯ್ತು ಪುಟ್ಟ ಯಾಕ್ ಹೀಗೆ ಅಳ್ತಾ ಕೂತಿದಿಯಾ” ಎಂದು ಕೇಳಿದ. ಮೀರಾ ಪ್ರಕಾಶನ ಎದೆಗೊರಗಿದಳು.ಆದರೆ ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ.ಒಂದೇ ಸಮ ಅಳುತ್ತಲೇ ಇದ್ದಳು.
ಇದರಿಂದ ಮತ್ತಷ್ಟು ಗಾಬರಿಯಾದ ಪ್ರಕಾಶ್ “ಚಿರಂತ್ ಏನಾದ್ರು ಬೈದ್ನಾ”ಎಂದು ಕೇಳಿದ.ಆಗ ಅಳುತ್ತಲೇ “ಇಲ್ಲ,ಅಂಕಲ್” ಎಂಬ ಉತ್ತರ ನೀಡಿದಳು.”ಮತ್ತಿನ್ನೇನಾಯ್ತು ಯಾಕ್ ಹೀಗ್ ಅಳ್ತಾ ಕೂತಿದಿಯಾ”ಎಂದು ಕೇಳಿದ ತಲೆ ನೇವರಿಸಿ.
“ರಿಸಲ್ಟ್ ಬಂತು ಅಂಕಲ್, ಚಿರಂತ್ ಎರಡು ಸಬ್ಜೆಕ್ಟ್ ನಲ್ಲಿ ಫೇಲ್ ಆಗಿದಾನೆ”ಎಂದು ಇನ್ನು ಜೋರಾಗಿ ಅಳಲು ಶುರುಮಾಡಿದಳು.ಮಗ ಅನುತ್ತೀರ್ಣನಾದ ಎಂಬ ಕೊರಗು ಕಾಡಿದರು ಅದೆಲ್ಲವನ್ನು ಮರೆತು “ಅವನದು ಬಿಡು, ನಿಂದೇನಾಯ್ತು ಹೇಳು ಮರಿ”ಎಂದು ಕೇಳಿದನು. “ನಾನು ಡಿಸ್ಟಿಂಕ್ಷನಲ್ಲಿ ಪಾಸಾಗಿದಿನಿ, ಆದರೆ ಚಿರಂತ್ ಫೇಲ್ ಆದ”ಎಂದು ಅಳುತ್ತಲೇ ಹೇಳಿದಳು..
“ಅಯ್ಯೋ ಕೋತಿ, ಅವನು ಫೇಲ್ ಆಗಿದ್ರೆ ಏನಂತೆ ನಿನ್ ಪಾಸಾಗಿದೀಯಾ ಅಷ್ಟ್ ಖುಷಿಪಡು ಸಾಕು. ಅವನದು ಯಾವಾಗ್ಲೂ ಇದ್ದಿದ್ದೇ”ಎಂದು ಹೇಳಿ ಸಮಾಧಾನ ಮಾಡಲು ಪ್ರಯತ್ನಿಸಿದ.
“ಇಲ್ಲ ಅಂಕಲ್ ನಾನಿನ್ನು ಅಷ್ಟ್ ಸ್ವಾರ್ಥಿ ಆಗಿಲ್ಲ.ಸ್ವಾರಿ ಅಂಕಲ್ ನನ್ನ ಕ್ಷಮಿಸಿ.ನಿಮ್ಮ ಮಾತನ್ನು ಕೊನೆಗೂ ನಾನು ಉಳಿಸಿಕೊಳ್ಳೋಕಾಗ್ಲಿಲ್ಲ”ಎಂದಳು ಮೀರಾ ದುಃಖದಿಂದ.
“ನಿನ್ ಯಾಕಮ್ಮ ಸ್ವಾರಿ ಕೇಳ್ತಿಯಾ ಅವ್ನ್ ಮಾಡಿರೋ ತಪ್ಪಿಗೆ.ಹೋಗ್ಲಿ ಬಿಡು ಅವನ ಹಣೆಬರಹದಲ್ಲಿ ಹೇಗಿರುತ್ತೋ ಹಾಗಾಗ್ಲಿ ನೀನು ಚಿಂತಿಸಬೇಡ”ಎಂದು ಸಮಾಧಾನ ಮಾಡಿದ.
“ಇಲ್ಲ ಅಂಕಲ್ ನನ್ನಿಂದ ತಪ್ಪಾಗಿದೆ, ನೀವ್ ಎಸ್ಟ್ ಬೇಡ ಅಂದ್ರು ಅಷ್ಟೊಂದ್ ದುಡ್ಡು ಕಟ್ಟಿ ಅದೇ ಕಾಲೇಜಿನಲ್ಲಿ ಸೇರಿಸಿ ಅಂತ ಹೇಳಿದ್ದು ನಾನು”ಎಂದಳು ಮೀರಾ.
“ಹಾಗೆಲ್ಲ ಏನು ಇಲ್ಲ ಮರಿ, ಅವನು ಓದಲಿಲ್ಲ ಅನ್ನೋ ಮಾತ್ರಕ್ಕೆ ತಂದೆಯಾದವನು ಅವನನ್ನು ಕಡೆಗಣಿಸಲು ಸಾಧ್ಯವಿಲ್ಲ. ನೀನು ಹೇಳಿಲ್ಲ ಅಂದ್ರು ನಾನು ಅದೇ ಕಾಲೇಜಿಗೆ ಸೇರಿಸುತಿದ್ದೆ.ನೀನು ಹೇಳಿದ ಮಾತ್ರಕ್ಕೆ ಅಲ್ಲ”ಎಂದ ಪ್ರಕಾಶ್.ಹಾಗೇ ಮಾತು ಮುಂದುವರಿಸಿ”ಎಲ್ಲಿ ಸಾಹೇಬ್ರು ಕಾಣ್ತಿಲ್ಲ”ಎಂಬ ಪ್ರಶ್ನೆಗೆ ಮೀರಾ”ನನ್ಗೆ ಗೊತ್ತಿಲ್ಲ”ಎಂಬ ಉತ್ತರ ಕೊಟ್ಟಳು.”ಸರಿ ಸರಿ ಅವನು ಬರಲಿ ವಿಚಾರಿಸೋಣ,ನೀನು ದೇವರ ಪೂಜೆ ಮಾಡು ಮರಿ “ಎಂದು ಹೇಳಿದ ಮೀರಾಳಿಗೆ….
ಮುಂದುವರೆಯುವುದು…..
ಈ ಸ್ನೇಹ ಚಿರಾಯು ನೀವು ಇಂಗ್ಲಿಷ್ ಭಾಷೆಯಲ್ಲಿಯೂ ಓದಬಹುದು.
ನಮ್ಮ ವೆಬ್ಬೆಟ್ ನ ಇತರ ಪೋಸ್ಟ್ ಗಳನ್ನು ಇಲ್ಲಿ ಓದಬಹುದು.

