ಸ್ನೇಹ ಚಿರಾಯು-2

ಸ್ನೇಹ ಚಿರಾಯು-2

ಬೆಳಗ್ಗೆ ಪ್ರಕಾಶ್ ಎದ್ದಾಗ ಸೂರ್ಯ ನನ್ನ ದಿನಗೆಲಸವನ್ನು ಆರಂಭಿಸಿದ್ದ.ಮೀರಾ,ಚಿರಂತ್ ಇನ್ನು ನಿದ್ದೆಯ ಮಂಪರಿನಲ್ಲಿಯೇ ಇದ್ದರು.ಸುತ್ತಲೂ ಕಣ್ಣಾಡಿಸಿದ ನಂಜಪ್ಪ ಎಲ್ಲೂ ಕಾಣಲಿಲ್ಲ ಹಾಗೆ ಹುಡುಕುತ್ತ ಹೊರ ಬಂದ.

ಅಬ್ಬಾ…!ಅದೆಂತಹ ಪ್ರಕೃತಿಯ ಸೊಬಗು ಸೂರ್ಯ ಎಷ್ಟೇ ಪ್ರಕಾಶಿಸಿದರು ಅವನ ಕಿರಣಗಳು ಮಂಜಿನ ಪ್ರಭಾವಕ್ಕೆ ಸಿಲುಕಿ ನೋಡುಗರಿಗೆ ವಾತಾವರಣ  ಕತ್ತಲಾದಂತಹ ಅನುಭವ ಅಂತಹ ದಟ್ಟ ಮಂಜು ಆವರಿಸಿತ್ತು.ದೂರದಲ್ಲಿ ಯಾರೋ ಬತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿರುವುದು ಕಣ್ಣಿಗೆ ಬಿತ್ತು.ಸರಿಯಾಗಿ ನೋಡಿದಾಗ ತಿಳಿಯಿತು ಅದು ನಂಜಪ್ಪನೆಂದು.”ನಂಜಪ್ಪ”ಎಂದು ಕೂಗಿದ ಪ್ರಕಾಶ್.ದೂರದಿಂದ ನಂಜಪ್ಪ ಕೈ ಸನ್ನೆ ಮಾಡಿ ಬರಲು ಹೇಳಿದ.ನಂಜಪ್ಪನ ಮಾರ್ಗದರ್ಶನದಂತೆ ಅವನೆಡೆಗೆ ಹೆಜ್ಜೆ ಹಾಕಿದ ಪ್ರಕಾಶ್.

ಹತ್ತಿರ ಬಂದ ಪ್ರಕಾಶ್ “ಏನ್ ಮಾಡ್ತಿದೀರಾ ನಂಜಪ್ಪಅವ್ರೆ”ಎಂದು ಕೇಳಿದ ಪ್ರಶ್ನೆಗೆ “ರಾತ್ರಿ ನೀರು ಕಡಿಮೆಯಾಗಿ “ನೀರಂಡೆ”ನಿಂತು ಹೋಗಿತ್ತು ಅದನ್ನ ಸರಿ ಮಾಡ್ತಿದೀನಿ” ಎಂದು ಮರುತ್ತರಿಸಿದ ನಂಜಪ್ಪ.

ನೀರಂಡೆ ನಾ ಹಂಗಂದ್ರೆ ಏನು ಎಂದು ಪ್ರಕಾಶ್ ಕುತೂಹಲದಿಂದ ಕೇಳಿದ.

ನೀರಂಡೆ ಅಂದ್ರೆ ಈ ಮಲೆನಾಡಿನ ಬತ್ತದ ಗದ್ದೆಗಳಲ್ಲಿ ಪ್ರಾಣಿ, ಪಕ್ಷಿಗಳನ್ನು ಶಬ್ದ ಮಾಡಿ ಓಡಿಸುವ ಸಲುವಾಗಿ ಉಪಯೋಗಿಸುವ ಒಂದು ಸಾಧನ.ಇದಕ್ಕೆ ಯಾವುದೇ ಖರ್ಚು ಇಲ್ಲ ಎಂದ ನಂಜಪ್ಪ.

ಓಹೋ…! ಹೌದಾ ಎಂದು ನೀರಂಡೆ ಅದ್ಹೇಗೆ ಕೆಲಸ ಮಾಡುತ್ತೆ ಎಂದು ವೀಕ್ಷಿಸತೊಡಗಿದ.ಹಾಗೇ ಮುಂದುವರಿದು ಈ ಗದ್ದೆ ಎಲ್ಲಾ ನಿಮ್ದೇನಾ ಎಂದು ಪ್ರಕಾಶ್ ಕೇಳಿದ.

ಮೊದಲು ನನ್ನದಲ್ಲ ಈಗ ನನ್ನದು ಎಂದು ಹೇಳಿದ ನಂಜಪ್ಪ ಮಾತು ಏಕೋ ವಿಚಿತ್ರವೆನಿಸಿತು.ಹಾಗೇ ಮುಂದುವರಿದು ಕೇಳಿದ”ಮೊದ್ಲು ಯಾರದು”ಎಂದು ಕುತೂಹಲದಿಂದ ಕೇಳಿದ.

ಮೊದ್ಲು ನಮ್ ಧಣಿಯವರದ್ದು ಈಗ ನಂದು ಎಂದು  ಹೇಳಿದ ನಂಜಪ್ಪನಿಗೆ “ಸ್ವಲ್ಪ ಬಿಡಿಸಿ ಹೇಳ್ತೀರಾ ನಿಮ್ಮ ಜೀವನದ ಬಗ್ಗೆ,  ನಂಗೆ ತಲೆಬುಡ ಗೊತ್ತಾಗ್ತಿಲ್ಲ”ಎಂದು ಮತ್ತೆ ಪ್ರಶ್ನೆಯ ಸುರಿಮಳೆಗೈದ ಪ್ರಕಾಶ್.

ನಾನು ನನ್ನ ಹೆಂಡ್ತಿ ನಂಜಿ ಪ್ರೀತಿಸಿ ಮನೆಯವರನ್ನು ಕಡೆಗಣಿಸಿ ಮದುವೆಯಾದವರು ಎಂದು ಮಾತು ಮುಂದುವರಿಸುತಿದ್ದ ನಂಜಪ್ಪನನ್ನು ತಡೆದು”ಏನು ನಿಮ್ದು ಲವ್ ಮ್ಯಾರೇಜಾ, ಅದು ಆ ಕಾಲದಲ್ಲಿ”ಎಂದು ಪ್ರಕಾಶ್ ಆಶ್ಚರ್ಯ ಚಕಿತನಾಗಿ ನಗುತ್ತಾ ಕೇಳಿದ.

ಹೌದು..,ಎಂದು ನಂಜಪ್ಪನು ಸಹ ನಗುತ್ತಾ ಮಾತು ಮುಂದುವರೆಸಿದನು.ಆ ಸಮಯದಲ್ಲಿ ಒಂದೊತ್ತಿನ ಊಟಕ್ಕೆ ಪರದಾಡುತ್ತಿರುವುದನ್ನು ಕಂಡು ನಮ್ಮ ಧಣಿ  ನಮ್ಗೆ ಈ ಒಂದೂವರೆ ಎಕರೆ ಜಮೀನನ್ನು ನಮಗೆ ಕೊಟ್ಟು”ನಂಗು ವಯಸ್ಸಾಯ್ತು ವ್ಯವಸಾಯ  ಮಾಡಿಕೊಂಡು ಬದುಕೋಕೆ ಆಗಲ್ಲ. ಗಂಡ ಹೆಂಡತಿ ಕೃಷಿ ಮಾಡಿ ನಂಗೊಂದೆರಡು ಹೊತ್ತು ಅನ್ನ ಹಾಕಿ” ಎಂದರು.ಧಣಿಗಳು ತನ್ನ ಮಕ್ಕಳೊಡನೆ ಜಗಳವಾಡಿ ತಮ್ಮ ಒಂಟಿ ಜೀವನವನ್ನು ಈ ಗದ್ದೆಯಲ್ಲೇ ಕಳೆಯುತ್ತಿದ್ದರು.ಹೇಗೋ ಜೀವನ ನಡೆಸಲು ಹಿರಿಯರ ಮಾರ್ಗದರ್ಶನ ಬೇಕೆಂದುಕೊಂಡು ನಾನು ನಂಜಿ ಒಪ್ಪಿಕೊಂಡೆವು.

ಸುಮಾರು ವರ್ಷ ಕಳೆದರೂ ನಮಗೆ ಮಕ್ಕಳಾಗಲಿಲ್ಲ ಅದೇ ಕೊರಗಲ್ಲಿ ಮಕ್ಕಳಿಗೋಸ್ಕರ ನನಗೆ ಗೊತ್ತಿಲ್ಲದೇ  ಬಗೆ ಬಗೆಯ ಔಷಧಿ ತೆಗೆದುಕೊಂಡು ಸುಮಾರು 35 ವರ್ಷಗಳ ಹಿಂದೆಯೇ ನಂಜಿ ಪ್ರಾಣಬಿಟ್ಟಳು ಎಂದು ತನ್ನ ವೃತ್ತಾಂತ ಹೇಳಿದನು ದುಃಖದಿಂದ…

ಹಾಗೇ ಮಾತು ಮುಂದುವರಿಸಿದ ನಂಜಪ್ಪ”ನಮ್ಮ ಧಣಿಯವರು ನನ್ಗೆ  ಹೇಳಿದ ಮಾತನ್ನೇ ನಿಂಗು ಹೇಳ್ತಿದೀನಿ,ನಂಗು ವಯಸ್ಸಾಯ್ತು ವ್ಯವಸಾಯ  ಮಾಡಿಕೊಂಡು ಬದುಕೋಕೆ ಆಗಲ್ಲ.ನೀನು ಕೃಷಿ ಮಾಡಿ ನಂಗೊಂದೆರಡು ಹೊತ್ತು ಅನ್ನ ಹಾಕು”ಎಂದು ಕೇಳಿದ ಬೇಡಿಕೆಯ ದನಿಯಲ್ಲಿ…

ಇದನ್ನು ಕೇಳಿ ಸಂತಸಗೊಂಡ ಪ್ರಕಾಶ್ “ಮರುಭೂಮಿಯಲ್ಲಿರೋ ನಮಗೆ ನೀರು ಸಿಗುವುದೇ ಕಷ್ಟ, ಅಂತಹ ಸಮಯದಲ್ಲಿ ನಮಗೆ ನೀರಿನ ಜೊತೆಗೆ ಆಶ್ರಯವನ್ನು ಕೊಡುವ ನಿಮ್ಮ ಋಣವನ್ನು ನಾನು ಹೇಗೆ ತೀರಿಸಲಿ”ಎಂದು ನಂಜಪ್ಪ ಕೈಗಳನ್ನು ಕಣ್ಣಿಗೊತ್ತಿಕೊಂಡನು..

ಹೀಗೆ ಆಸರೆಯಾದ ನಂಜಪ್ಪನನ್ನು ಪ್ರಕಾಶ್ ತುಂಬಾ ಚೆನ್ನಾಗಿ ನೋಡಿಕೊಂಡನು.ಮಕ್ಕಳು ಸಹ ನಂಜಪ್ಪನಿಗೆ ಬಹುಬೇಗ ಹತ್ತಿರವಾದರು.ಸುಮಾರು 35 ವರ್ಷಗಳಿಂದ ಕತ್ತಲೆಯ ಒಂಟಿ ಜೀವನ ನಡೆಸುತ್ತಿದ್ದ ನಂಜಪ್ಪನ ಬದುಕಲ್ಲಿ ಬೆಳಕು ಮೂಡಿತು.ಹಾಗೆ ಕತ್ತಲೆ ಕವಿಯಲು ಸಿದ್ದವಾಗಿದ್ದ ಸತ್ಯಪ್ರಕಾಶ್ ಮತ್ತು ಮಕ್ಕಳ ಬಾಳಿಗೆ ನಂಜಪ್ಪ ಬೆಳಕಾದ.

  **********************

12  ವರ್ಷಗಳ ನಂತರ 

ಸತ್ಯಪ್ರಕಾಶ್ ಮತ್ತು ಮಕ್ಕಳು ನಂಜಪ್ಪನ ಜೊತೆ ಸೇರಿ 5 ವರ್ಷಗಳು ಕಳೆದ ನಂತರ ನಂಜಪ್ಪ ತೀರಿಕೊಂಡ.ಪ್ರಕಾಶ್ ನಂಜಪ್ಪನ ಗದ್ದೆಯಲ್ಲಿ ಕೃಷಿಮಾಡಿ ಮಕ್ಕಳೊಡನೆ ಸಂತೋಷದಿಂದ ಜೀವನ ನಡೆಸುತ್ತಿದ್ದ.ಚಿರಂತ್,ಮೀರಾ ದಾಂಡೇಲಿಯ ಹೈಸ್ಕೂಲ್ ಒಂದರಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದರು.ಇವರಿಬ್ಬರದ್ದು ಅದೆಷ್ಟು ಅನೋನ್ಯ ಸ್ನೇಹ ಎಂದರೆ ಇವರ ಸ್ನೇಹಲೋಕದಲ್ಲಿ ಮತ್ತೊಬ್ಬರಿಗೆ ಬರಲು ಅವಕಾಶವೇ ಇರಲಿಲ್ಲ.ತಾವಾಯ್ತು ತಮ್ಮ ಓದಾಯ್ತು ಎಂದು ಒಬ್ಬರಿಗೊಬ್ಬರು ಪ್ರೀತಿ ಹಂಚುತ್ತಾ ಕಾಲ ಕಳೆಯುತ್ತಿದ್ದರು. ಪ್ರೀತಿಯೆಂಬ ವ್ಯಾಮೋಹದ ಗಾಳಿ ತನ್ನ ಬಲೆಗೆ ಸಿಲುಕಿಸಿಕೊಳ್ಳಲಾಗದೆ ಸೋತು ಸುಮ್ಮನಾಗಿತ್ತು.ಬದಲಾಗಿ ಚಿರಂತ್ಗೆ ಆ ಪ್ರೀತಿಯ ವ್ಯಾಮೋಹ ಗೀತಾ ಎನ್ನುವ ಹುಡುಗಿಯ ಕಡೆ ಬೀಸಿತ್ತು.ಆದರೆ ಇವರು ಮಾತ್ರ ಸ್ನೇಹಿತರಾಗೇ ಜೀವಿಸುತ್ತಿದ್ದರು.ಇದೆಲ್ಲದರ ಶ್ರೇಯಸ್ಸು ಸತ್ಯಪ್ರಕಾಶನಿಗೆ ಸೇರಬೇಕು. 

ಇಬ್ಬರು ಓದಿನಲ್ಲಿ ಸದಾ ಮುಂದು,ಯಾರೊಬ್ಬರೂ ಕಡಿಮೆ ಇಲ್ಲವೆಂಬಂತೆ ಅಂಕಗಳು ಸಹ ಒಂದೇ ರೀತಿಯಲ್ಲಿ ಬರುತ್ತಿದ್ದವು.

ಇಬ್ಬರಿಗೂ ಈ ಪರಿಸರ,ಗುಡ್ಡ,ಕಾಡುಗಳಲ್ಲಿ ಸುತ್ತುವರಿಯುವುದು ಎಂದರೆ ಎಲ್ಲಿಲ್ಲದ ಸಂತೋಷ.ಹಾಗಾಗಿ ವಾರಕ್ಕೆ ಒಮ್ಮೆಯಾದರೂ ಕಾಡಿನೊಳಗೆ ವಿಹರಿಸಿ ಬರುತಿದ್ದರು.ಇಷ್ಟು ಚೆನ್ನಾಗಿ ಇದ್ದವರ ಬಾಳಿಗೆ ವಿಧಿ ಎಂಬ ಶನಿ ಪ್ರವೇಶ ಮಾಡಿಯೇ ಬಿಟ್ಟಿತ್ತು.ದಿನಗಳು ಕಳೆದಂತೆ ಚಿರಂತ್ ಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಯ್ತು.ಕಾರಣ ಮೊದಲಿಗೆ ಇದ್ದ ನೆನಪಿನ ಶಕ್ತಿ ಕಡಿಮೆಯಾಗುತ್ತ ಹೋಗುತಿತ್ತು.

ಎಂಟನೆಯ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ತನಗಿಂತ ಅಂಕಗಳಲ್ಲಿ ತುಂಬಾ ವ್ಯತ್ಯಾಸವಿರುವುದನ್ನು ಕಂಡು ಮೀರಾ ಚಿರಂತನನ್ನು ಪ್ರಶ್ನಿಸಿದಳು.”ಲೋ  ಚಿರು ಏನೋ ನಿನ್ ಮಾರ್ಕ್ಸ್ ನಂಗಿಂತ ಎಷ್ಟು ಕಮ್ಮಿ ಬಂದಿದವೇ ನೋಡು” ಎಂದಳು.

“ಅದೇನೋ ಕಣೆ,ಇತ್ತೀಚಿಗೆ ನೆನಪಿನ ಶಕ್ತಿ ಕಡಿಮೆ ಆಗ್ತಾ ಇದೆ ಅದ್ಕೆ ಓದೋಕಾಗ್ತಿಲ್ಲ”ಎಂದು ಚಿರಂತ್ ಹೇಳಿದ.”ಅದೆಲ್ಲ ಏನು ಇಲ್ಲ ಸ್ವಲ್ಪ ಓದೋದು ಕಡಿಮೆ ಮಾಡಿದೀಯಾ,ಬದಲಿಗೆ ಆ ಗೀತಾ ಬಗ್ಗೆ ಯೋಚ್ನೆ ಮಾಡೋದು ಸ್ವಲ್ಪ ಜಾಸ್ತಿ ಮಾಡಿದೀಯ ಅಷ್ಟೇ ಅದೆಲ್ಲವನ್ನು ಕಡಿಮೆ ಮಾಡ್ಕೋ ಎಲ್ಲ ಸರಿಹೋಗುತ್ತೆ”ಎಂದಳು ಸ್ವಲ್ಪ ಸಿಟ್ಟಿನಿಂದ.

 ಚಿರಂತ್”ಹಾಗೆಲ್ಲ ಏನು ಇಲ್ಲ ಮೀರಾ.ನಾನು ಓದೋ ಟೈಮಲ್ಲಿ ಓದುತ್ತೀನಿ ಅವಳ ಬಗ್ಗೆಯೆಲ್ಲಾ ಯೋಚ್ನೆ ಮಾಡ್ತಾ ಕೂರಲ್ಲ”ಎಂದನು.

“ಒಹೋ…ಹೌದಾ ಸರ್,ಈಗ ಅಂಕಲ್ ಹತ್ತಿರ ಮಾರ್ಕ್ಸ್ ಕಾರ್ಡ್ಗೆ ಸೈನ್ ಮಾಡಿಸ್ಬೇಕು ನೆನೆಪಿದ್ಯಾ.ನಿನ್ ಆಟ ಏನಿದ್ರೂ ನನ್ ಹತ್ರ ಅಷ್ಟೇ ಅಂಕಲ್ ಹತ್ರ ನಡೆಯೋಲ್ಲ”ಎಂದು ಎಚ್ಚರಿಸಿದಳು ಮೀರಾ.

“ಅಯ್ಯೋ,ನೀನ್ ಇರೋದ್ ಯಾಕೆ ಅಪ್ಪನಿಗೆ ಏನೋ ಒಂದ್ ಸುಳ್ಳು ಹೇಳಿ ನನ್ನ ಪಾರು ಮಾಡುತ್ತೀಯಾ.ಯಾಕಂದ್ರೆ ನಾನ್ ಬೈಸ್ಕೊಳ್ಳೋದು ನಿಂಗ್ ಇಷ್ಟ ಆಗಲ್ವಲಾ”ಎಂದು ವ್ಯಂಗ್ಯವಾಗಿ ನಕ್ಕನು ಚಿರಂತ್.

“ಹೋಗೋ ನಿನ್ ಅಜ್ಜಿ,ಮಾಡಿರೋ ತಪ್ಪಿಗೆಲ್ಲಾ ನಿನ್ನ ವಹಿಸಿಕೊಂಡರೆ ಮುಂದೆ ಮತ್ತೆ ಮತ್ತೆ ಆ ತಪ್ಪು ಮಾಡ್ತಾನೆ ಇರ್ತೀಯಾ.ಮಾಡಿದ ತಪ್ಪಿಗೆ ಶಿಕ್ಷೆಯಾದರೆ ಮತ್ತೆ ಆ ತಪ್ಪು ಮಾಡೋದಿಲ್ಲ.ಅದ್ಕೆ ನಾನ್ ಅಂಕಲ್ ಹತ್ರ ಹೇಳೇ ಹೇಳ್ತಿನಿ” ಎಂದಳು ಮೀರಾ.

“ಪ್ಲೀಸ್ ಮೀರಾ,ನನ್ಗೆ ನೀನು ಸಪೋರ್ಟ್ ಮಾಡಿಲ್ಲ ಅಂದ್ರೆ ಇನ್ಯಾರ್ ಮಾಡ್ತಾರೆ ಹೇಳು,ಪ್ಲೀಸ್ ನನ್ನ ನೀನೆ ಕಾಪಾಡ್ಬೇಕು”ಎಂದು ಕೇಳಿಕೊಂಡನು ಚಿರಂತ್.

“ಆಗಲ್ವೋ ನಾನ್ ಹೇಳೇ ಹೇಳ್ತಿನಿ”ಎಂದಳು ಮೀರಾ ನಿರ್ಧಾರದ ದನಿಯಲ್ಲಿ.

ಇವರ ಸಂಭಾಷಣೆ ಮುಗಿಯುವಷ್ಟರಲ್ಲಿ ಅಲ್ಲಿಗೆ ಪ್ರಕಾಶ್ ನ ಆಗಮನವಾಯಿತು.”ಎನ್ರೋ ಅದು ತುಂಬಾ ಆಳವಾಗಿ ಯಾವುದೋ ವಿಷಯದ ಬಗ್ಗೆ ಮಾತಾಡ್ತಾ ಇರೋ ಹಾಗ್ ಕಾಣ್ತಿದೆ”ಎಂದನು ಪ್ರಕಾಶ್.

“ಹೌದು ಅಂಕಲ್.ಇವತ್ತು ನಮ್ಮ 8 ನೇ ತರಗತಿಯ ರಿಸಲ್ಟ್ ಬಂತು.ಮಾರ್ಕ್ಸ್ ಕಾರ್ಡ್ಗೆ ಸೈನ್ ಹಾಕಿಸಬೇಕಿತ್ತು .ಅದರ ಬಗ್ಗೆನೇ ಮಾತನಾಡುತ್ತಿದ್ದೆವು”ಎಂದಳು ಮೀರಾ ತಗ್ಗಿದ ದನಿಯಲ್ಲಿ.”ಅದರಲ್ಲಿ ಮಾತಾಡೊಕೊಳ್ಳುವಂತದ್ದು ಏನಿದೆ.ನೀವಿಬ್ರು ಚೆನ್ನಾಗೆ ಓದುತ್ತೀರಾ ಅಲ್ವಾ.ಯಾಕೆ ಭಯ ಬಂದು ಸೈನ್ ಹಾಕಿಸಿಕೊಳ್ಳಿ”ಎಂದನು ಪ್ರಕಾಶ್.

“ಹಾ ಅಂಕಲ್ ಪ್ರತಿಸಲ ಮಾರ್ಕ್ಸ್ ಇಬ್ರುದು ಒಂದೇ ತರ ಬರ್ತಿದ್ವು ತೊಂದರೆ ಇರ್ಲಿಲ್ಲ,ಆದ್ರೆ ಈ ವರ್ಷ ಸಾಹೇಬ್ರು ನಂಗಿಂತ ತುಂಬಾ ಕಡಿಮೆ ತೆಗ್ದಿದಾರೆ ಸ್ವಲ್ಪ ವಿಚಾರಿಸಿ”ಎಂದು ಇರುವ ವಿಚಾರವನ್ನು ಮುಚ್ಚು ಮರೆಯಿಲ್ಲದೆ ಹೇಳಿಯೇ ಬಿಟ್ಟಳು.

“ಹೌದೇನೋ,ಮೀರಾ ಹೇಳ್ತಿರೋದು ನಿಜಾನಾ.ಯಾಕೆ  ಏನಾದ್ರು ಕಾರಣ ಇರ್ಬೇಕಲ್ವಾ”ಎಂದು ಸ್ವಲ್ಪ ಗದರಿದರು ಪ್ರಕಾಶ್.

“ಯಾಕೋ ಅಪ್ಪ ಇತ್ತೀಚಿಗೆ ಓದಿದ್ದೆಲ್ಲಾ ನೆನಪಿಗೆ ಬರ್ತಿಲ್ಲ, ನಾನೇನ್ ಮಾಡ್ಲಿ ಎಂದು ಸ್ವಲ್ಪ ಭಯದಿಂದಲೇ ಉತ್ತರಿಸಿದ ಚಿರಂತ್.”ಅದೆಲ್ಲಾ ಏನು ಇಲ್ಲ ಅಂಕಲ್,ಸ್ವಲ್ಪ ಗಮನ ಬೇರೆ ಕಡೆ ಹೋಗ್ತಾ ಇದೆ ಅದ್ಕೆ ಓದೋಕಾಗ್ತಿಲ್ಲ ಅಷ್ಟೇ”ಎಂದಳು ಮೀರಾ ನಸುನಗುತ್ತಾ.

“ಇಲ್ಲ ಅಪ್ಪ ನಾನ್ ಬೇರೆ ಯಾವ್ ಕಡೆನೂ ಗಮನ ಹರಿಸುತ್ತಿಲ್ಲ.ನಿಜ್ವಾಗ್ಲೂ ನಂಗೆ ನೆನಪಿನ ಶಕ್ತಿ ಕಡಿಮೆ ಆಗ್ತಾ ಇದೆ ಅಷ್ಟೇ”ಎಂದು ನಿಸ್ಸಂದೇಹವಾಗಿ ಹೇಳಿದ ಚಿರಂತ್.”ಮೊದ್ಲು ಈ ಕಾರಣ ಕೊಡೋದ್ ಕಡಿಮೆ ಮಾಡಿ ಚೆನ್ನಾಗಿ ಓದಿ ಮುಂದಿನ ಸಲ ಚೆನ್ನಾಗಿ ಮಾರ್ಕ್ಸ್ ತೆಗೆದುಕೋ”ಎಂದು ಗದರಿದರು ಪ್ರಕಾಶ್.

“ನಿಜ ಹೇಳಿದ್ರೆ ಯಾರು ನಂಬಲ್ಲ ,ನಿಜವಾಗ್ಲೂ ನಿಜಕ್ಕೆ ಬೆಲೆನೇ ಇಲ್ಲ”ಎಂದು ಮುನಿಸಿಕೊಂಡು ಹೊರನಡೆದನು.

ಸಂಜೆಯಾದರೂ ಚಿರಂತನ ಮುನಿಸು ಇನ್ನು ಕಡಿಮೆಯಾಗಿರಲಿಲ್ಲ.ಊಟ  ಮಾಡುತ್ತಿದ್ದ ಪ್ರಕಾಶ್ “ಪುಟ್ಟ ,ಚಿರು ಊಟ ಮಾಡಿದ್ಯಾ”ಎಂದು ಪ್ರಶ್ನಿಸಿದರು.”ಇಲ್ಲ ಅಂಕಲ್ ಇನ್ನು ಮುನಿಸು ಕಡಿಮೆಯಾಗಿಲ್ಲ ಅಂತ ಕಾಣ್ಸುತ್ತೆ ,ನಾನ್ ಕರೀತೀನಿ ನೀವ್ ಊಟ ಮಾಡಿ”ಎಂದಳು ಮೀರಾ ಪ್ರಕಾಶನಿಗೆ ಬಡಿಸುತ್ತಾ.

ಹೊರ ಬಂದ ಮೀರಾ ಚಿರಂತನನ್ನು ಕುರಿತು “ಲೋ…ಚಿರು ಬಾರೋ ಊಟ ಮಾಡು, ಟೈಮಾಯ್ತು”ಎಂದು ಕರೆದಳು.ಚಿರಂತನಿಂದ ಯಾವುದೇ ಉತ್ತರ ಬರಲಿಲ್ಲ.ಬದಲಾಗಿ ಅವನ ಮೌನವೇ ಉತ್ತರವಾಗಿತ್ತು.

ಎರಡು,ಮೂರು ಬಾರಿ ಕರೆದರೂ ಆ ಕಡೆಯಿಂದ ಏನು ಉತ್ತರ ಬಾರದ ಕಾರಣ ಹತ್ತಿರ ಹೋದ ಮೀರಾ”ಏನೋ ಇನ್ನು ಕೋಪ ಹೋಗಿಲ್ವಾ ನನ್ ಮೇಲೆ”ಎಂದು ಕೈ ಹಿಡಿದು ಕೇಳಿದಳು ಕಾಳಜಿಯಿಂದ.

“ಕೋಪ ಏನು ಇಲ್ಲ ಆದ್ರೆ ಯಾಕೋ ನನ್ ಮೇಲೆನೇ ನಂಗೆ ಬೇಜಾರಾಗ್ತಿದೆ”ಎಂದನು ಚಿರಂತ್.”ನೋಡ್ ಚಿರು ಅಂಕಲ್ ಬೈದಿದ್ದು ನಿನ್ ಒಳ್ಳೇದಕ್ಕೆ ತಾನೇ.ಅದನ್ನು ಅರ್ಥ ಮಾಡಿಕೊಂಡು ಮುಂದೆ ಚೆನ್ನಾಗಿ ಓದೋದ್ ಬಿಟ್ಟು ಹೀಗೆ ಬೇಜಾರಾದ್ರೆ ಏನ್ ಬರುತ್ತೆ ಹೇಳು”ಎಂದು ಪ್ರಶ್ನಿಸಿದಳು ಮೀರಾ.

“ನಿಜ್ವಾಗ್ಲೂ ಮೀರಾ ಅಪ್ಪ ಬೈದ್ರು ಅಂತ ಬೇಜಾರಿಲ್ಲ ನಂಗೆ,ನನ್ ಕಷ್ಟ ಏನು ಅಂತ ಅರ್ಥ ಮಾಡ್ಕೊಳ್ಳದೇ ಬೈದ್ರು,ಜೊತೆಗೆ ನೀನು ನನ್ನ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಅಂತ ಬೇಜಾರಾಯ್ತು ಅಷ್ಟೇ”ಎಂದನು ಚಿರಂತ್ ಸ್ವಲ್ಪ ಬೇಜಾರಿಂದಲೇ.

“ಓಕೆ ಓಕೆ ಸಾರೀ ಆಯ್ತಾ,ಈಗ ನಡಿ ಊಟ ಮಾಡುವಂತೆ”ಎಂದು ಊಟ ಮಾಡಲು ಕರೆದಳು ಮೀರಾ.”ನಂಗ್ ಹೊಟ್ಟೆ ಹಸಿವಿಲ್ಲ ನೀವ್ ತಿನ್ನಿ” ಎಂದನು ಚಿರಂತ್.”ಅದೆಲ್ಲ ನಡಿಯೋಲ್ಲ ನಿನ್ ಊಟ ಮಾಡಿಲ್ಲ ಅಂದ್ರೆ ನಾನು ಮಾಡಲ್ಲ”ಎಂದು ಎಚ್ಚರಿಸಿದಳು ಮೀರಾ.

ಇವಳು ನಾನು ಊಟ ಮಾಡದಿದ್ದರೆ ಈಗ ನನ್ನ ಬಿಡುವುದಿಲ್ಲವೆಂದು ತಿಳಿದ ಚಿರಂತ್.ಊಟ ಮಾಡಲು ಒಳಗೆ ಹೋದನು.

ಮುಂದುವರಿಯುವುದು…………..

ಈ ಸ್ನೇಹ ಚಿರಾಯು ನೀವು ಇಂಗ್ಲಿಷ್ ಭಾಷೆಯಲ್ಲಿಯೂ ಓದಬಹುದು.

ನಮ್ಮ ವೆಬ್ಬೆಟ್ ನ ಇತರ ಪೋಸ್ಟ್ ಗಳನ್ನು ಇಲ್ಲಿ ಓದಬಹುದು.

Comments

No comments yet. Why don’t you start the discussion?

Leave a Reply

Your email address will not be published. Required fields are marked *