ಸ್ನೇಹ ಚಿರಾಯು-19

ಸ್ನೇಹ ಚಿರಾಯು-19

⚔️ ಸತ್ಯ ಮತ್ತು ಶಕ್ತಿಯ ಮುಖಾಮುಖಿ

ಸ್ನೇಹ ಚಿರಾಯು-19-ಕಾರವಾರದಲ್ಲಿರುವ ಶಿವರಾಮ್ ಮನೆಗೆ ಮೀರಾಳನ್ನು ಕರೆದುಕೊಂಡು ಬಂದ ಚಿರು. ಯಾರ ಅಪ್ಪಣೆಯಿಲ್ಲದೆ ಒಳಗೆ ನುಗ್ಗಿದ. ಮೀರಾಳಿಗೆ ಕೂರಲು ಹೇಳಿದ ಚಿರು.

ಮೀರಾ ಸತ್ತಿದ್ದಾಳೆ ಎಂಬ ಖುಷಿಯಲ್ಲಿದ್ದ ಶಿವರಾಮ್ಗೆ ಅವಳನ್ನು ನೋಡಿ ಸಿಡಿಲೆರಗಿದಂಗಾಯ್ತು.ಅವಳನ್ನು ಕರ್ಕೊಂಡು ಬಂದಿದ್ದ ಚಿರಂತನನ್ನು ನೋಡಿ ಕೆಂಡಾಮಂಡಲವಾದ ಶಿವರಾಮ್”ನಿನಾ….ss ಇಲ್ಲಿಗ್ಯಾಕೆ ಬಂದೆ”ಕೇಳಿದ.

“ಏನು ಗೊತ್ತಿಲ್ದೆ ಇರೋರ್ ತರ ನಾಟಕ ಮಾಡ್ಬೇಡಿ ಶಿವರಾಮ್ ಅವ್ರೆ.ನಕುಲ್ ನಿಮ್ ಹತ್ರ ಇದ್ದಾನೆ ಅಂತ ಚೆನ್ನಾಗಿ ಗೊತ್ತು.ಅವನನ್ನು ನೀವಾಗೇ ಕಳುಹಿಸಿಕೊಟ್ಟರೆ ತುಂಬಾ ಒಳ್ಳೇದು. ಇಲ್ಲಾಂದ್ರೆ…..”

“ಕಳ್ಸ್ಕೊಡ್ಲಿಲ್ಲಾ ಅಂದ್ರೆ ಏನೋ ಮಾಡ್ತಿಯಾ”

“ಇನ್ನೇನ್ ಮಾಡ್ಲಿ ನಾನೇ ಒಳಗೋಗಿ ಕರ್ಕೊಂಡ್ ಬರ್ತೀನಿ.ಆದ್ರೆ ಅದರ ಪರಿಣಾಮ ತುಂಬಾ ಕೆಟ್ಟದಾಗಿರುತ್ತೆ. ಸುಮ್ನೆ ನೀವಾಗಿ ನೀವೇ ಅವನನ್ನು ಕಳ್ಸ್ ಕೊಟ್ರೆ ನಿಮ್ಗೆ ಒಳ್ಳೇದು”

“ನೋಡ್ ಹುಡ್ಗ ಅವನನ್ನು ನನ್ ಮಗಳು ತುಂಬಾ ಇಷ್ಟ ಪಡ್ತಿದಾಳೆ.ಅದ್ಕೆ ನಮ್ ಮಗಳಿಗೆ ಕೊಟ್ಟು ಮದ್ವೆ ಮಾಡ್ಬೇಕು ಅಂತ ಅನ್ಕೊಂಡಿದೀವಿ”

“ಸರ್ ಇದು ಗೊಂಬೆಗಳ ಮದ್ವೆ ಅಲ್ಲ ಸರ್ ಇಷ್ಟ ಇಲ್ಲದಿದ್ರೂ ಮಾಡೋಕೆ ಇದು ಎರಡು ಜೀವ ಇರೋ ಮನುಷ್ಯರ ಮದ್ವೆ ಸರ್ ಇಬ್ಬರಿಗೂ ಇಷ್ಟ ಇದ್ರೇನೆ ಕೊನೆವರೆಗೂ ಚೆನ್ನಾಗಿರ್ತಾರೆ.ಅಷ್ಟಕ್ಕೂ ನಿಮ್ ಹತ್ರ ಮಾತಾಡಿ ಪ್ರಯೋಜನ ಇಲ್ಲಾ”ಎಂದು ತನು ಕೈಹಿಡಿದು ಒಂದು ರೂಮಿಗೆ ಎಳೆದುಕೊಂಡು ಹೋಗಿ”ಸರ್ ನಿಮ್ ಮಗಳನ್ನು ನಾನೇನು ಮಾಡಲ್ಲ ಒಂದೆರಡು ನಿಮಿಷ ಮಾತಾಡ್ಸಿ ಕಳಿಸ್ತೀನಿ”ಎಂದು ಬಾಗಿಲು ಹಾಕಿದ.

🥀ಪ್ರೀತಿಗಿಂತ ದೊಡ್ಡ ತ್ಯಾಗದ ಆಯ್ಕೆ

“ತನು ಅವ್ರೆ ನಿಮ್ಗೆ ಗೊತ್ತಿರುತ್ತೆ ಪ್ರೀತ್ಸಿದೋರು ದೂರ ಆಗ್ತಿದ್ರೆ ಎಸ್ಟ್ ನೋವಾಗುತ್ತೆ ಅಂತ.ನೀನ್ ದೂರ ಆಗಿ ಆ ನೋವು ನೀನೊಬ್ಬಳೇ ಅನುಭವಿಸ್ತಿಯೋ ಅಥವಾ ನೀನ್ ಅವನಿಗೆ ಹತ್ರ ಆಗಿ ಅವರಿಬ್ಬರಿಗೆ ನೋವ್ ಕೊಡ್ತಿಯೋ ನೀನೇ ಯೋಚ್ನೆ ಮಾಡು”

“ಅವನನ್ನು ಮರೆತು ಬದ್ಕೋಕೊಕೆ ನನ್ನಿಂದ ಆಗಲ್ಲ. ಆ ಶಕ್ತಿ ನಂಗಿಲ್ಲ”ಎಂದಳು ಅಳುತ್ತಾ.

“ಮನಸ್ಸು ಮಾಡಿದ್ರೆ ಎಲ್ಲಾ ಆಗುತ್ತೆ.ನೀವ್ ಮನಸ್ಸು ಮಾಡಿದ್ರೆ ಆಗಲ್ಲ ಅನ್ನೋದು ಏನು ಇಲ್ಲ”

“ಅವನು ನನ್ನ ಲೈಫ್ ಅಲ್ಲಿ ಇಲ್ಲಾ ಅಂತ ಯೋಚ್ನೆ ಮಾಡೋಕು ಆಗಲ್ಲ ಅಂತದ್ರಲ್ಲಿ ಅವನನ್ನು ಮರೆಯೋ ಮನಸ್ಸು ಹೇಗ್ ಮಾಡ್ಲಿ”

“ನೋಡಿ ತನು ಅವ್ರೆ. ನಾವ್ ಇಷ್ಟಪಡೋರು ನಾವ್ ಇಲ್ದೆ ಚೆನ್ನಾಗಿರ್ತಾರೆ ಅನ್ನೋದಾದ್ರೆ ಅವರಿಗೋಸ್ಕರ ನಾವ್ ಏನಾದ್ರೂ ಮಾಡೋಕ್ ರೆಡಿ ಇರಬೇಕು.ಆಗ್ಲೇ ನೀವ್ ಪ್ರೀತ್ಸಿದಕ್ಕೂ ಬೆಲೆ. ನೀವ್ ಇಷ್ಟ ಪಟ್ಟವರ ಜೊತೆ ಇರುವುದಕ್ಕಿಂತ ನಿಮ್ಮನ್ನು ಇಷ್ಟ ಪಡುವವರ ಜೊತೆ ಇದ್ರೆ ನಿಮ್ಮ ಜೀವನ ಚೆನ್ನಾಗಿರುತ್ತೆ. ನಿಮ್ಮನ್ನು ಇಷ್ಟಪಡುವವರು ನಿಮ್ಮ ಜೇವನದಲ್ಲಿ ಬರ್ತಾರೆ ಅಲ್ಲಿವರೆಗೂ ತಾಳ್ಮೆಯಿಂದ ಕಾಯಿರಿ”

ತನು ಏನು ಮಾತಾಡದೆ ಸುಮ್ಮನಾದಳು.ಚಿರು ಮಾತಿಗೆ ಬದಲು ನೀಡಲಿಲ್ಲ.ಮಾತು ಮುಂದುವರಿಸಿದ “ನಿಮ್ ಅಪ್ಪನಿಗೆ ಈಗ ಯಾರ್ ಏನ್ ಹೇಳಿದ್ರು ಕೇಳಲ್ಲ. ಈಗ ನಿಮ್ಮ ಮೇಲೆ ಅವರಿಬ್ಬರ ಜೀವನ ಅವಲಂಬಿತವಾಗಿದೆ.ನಕುಲ್ ನ ಮದ್ವೆ ಆಗಿ ನೀವೊಬ್ಬರೇ  ಖುಷಿಯಾಗಿರ್ತೀರೋ ಇಲ್ಲಾ ಅವರನ್ನು ತ್ಯಾಗ ಮಾಡಿ ಅವರಿಬ್ಬರನ್ನು ಖುಷಿಯಾಗಿರೋಕೆ ಬಿಡ್ತಿರೋ ನೋಡಿ.

ಪ್ರೀತಿಗಿಂತ ತ್ಯಾಗ ದೊಡ್ಡದು ಯೋಚ್ನೆ ಮಾಡಿ.ನಿಮ್ಮ ನಿರ್ಧಾರಕ್ಕೆ ಹೊರಗೆ ಕಾಯ್ತಾ ಇರ್ತೀನಿ”ಎಂದು ಕೋಣೆಯಿಂದ ಆಚೆ ಬಂದ.

ಎರಡು ನಿಮಿಷ ಬಿಟ್ಟು ರೂಮಿನಿಂದ ಆಚೆ ಬಂದ ತನು ಓಡಿ ಬಂದು ಶಿವರಾಮ್ ಅವರನ್ನು ತಬ್ಬಿಕೊಂಡು”ನಕುಲ್ನ ಕಳ್ಸ್ಬಿಡಿ ಪಪ್ಪಾ ಅವ್ನ್ ನಂಗ್ ಬೇಡ.ಜೀವನಪೂರ್ತಿ ಅವನಿಗೆ ನೋವ್ ಕೊಡೋಕ್ ನಂಗ್ ಇಷ್ಟ ಇಲ್ಲಾ.ಅವ್ನ್ ನನ್ ಜೊತೆ ಇಲ್ಲಾ ಅನ್ನೋ ನೋವನ್ನು ಬೇಕಾದ್ರೆ ಸಹಿಸ್ಕೊತಿನಿ ಆದ್ರೆ ನನ್ನಿಂದ ಜೀವನ ಪೂರ್ತಿ ನೋವ್ ಅನುಭವಿಸ್ತಾನೆ ಅನ್ನೋದನ್ನ ಸಹಿಸ್ಕೊಳ್ಳೋಕಾಗಲ್ಲ ಕಳ್ಸ್ಬಿಡಿ ಪಪ್ಪಾ ಅವ್ನ್ ನಂಗ್ ಬೇಡ”ಎಂದು ಬಿಕ್ಕಿ ಬಿಕ್ಕಿ ಅತ್ತಳು.

ತನು ನಿರ್ಧಾರಕ್ಕೆ ಮಣಿದ ಶಿವರಾಮ್ ಭಾರದ ಮನಸ್ಸಿನಿಂದ ನಕುಲನನ್ನು ಕಳುಹಿಸಲು ಒಪ್ಪಿ ಜಯರಾಮನನ್ನು ಕರೆದು”ಜಯರಾಮ ಹೋಗೋ ನಕುಲನನ್ನು ಕರ್ಕೊಂಡ್ ಬಾ”ಎಂದು ಹೇಳಿದ.ಅಣ್ಣನ ಮಾತಿನಂತೆ ನಕುಲನನ್ನು ಕರೆದುಕೊಂಡು ಬಂದ.

💞ಹೃದಯಗಳ ಪುನರ್ಮಿಲನ

ನಕುಲನನ್ನು ನೋಡಿದ ತಕ್ಷಣ ಬಾಡಿದ್ದ ಮೀರಾಳ ಮುಖದಲ್ಲಿ ನಗು ಕಾಣಿಸಿತು.ಓಡಿ ಬಂದು ನಕುಲನನ್ನು ತಬ್ಬಿಕೊಂಡಳು.ಇವರಿಬ್ಬರ ಅನ್ಯೋನ್ಯತೆ ಕಂಡು ಮರುಳಾದರು.

ನಕುಲ್ ಬಳಿ ಬಂದ ತನು”ನನ್ನ ಕ್ಷಮಿಸಿಬಿಡು ನಕುಲ್. ನಿನ್ನ ತುಂಬಾ ಇಷ್ಟ ಪಟ್ಟಿದ್ದರಿಂದ ಇಷ್ಟೆಲ್ಲಾ ಅನಾಹುತ ಆಯ್ತು. ಇದನ್ನೆಲ್ಲಾ ಮರೆತುಬಿಡು.ಇನ್ಮುಂದೆ ನಾವಿಬ್ರು ಫ್ರೆಂಡ್ಸ್ ಆಗಿರೋಣ”ಎಂದು ಕೈ ಕುಲುಕಲು ಅಂಗೈ ಮುಂದೆ ಚಾಚಿದಳು.

“ಥ್ಯಾಂಕ್ಸ್ ತನು ಅರ್ಥ ಮಾಡ್ಕೊಂಡಿದ್ದಕ್ಕೆ”ಎಂದು ಕೈ ಕುಲುಕಿದ.

“ಹೇ…  ಇಟ್ಸ್ ಓಕೆ.ಆಲ್ ದ ಬೆಸ್ಟ್ ಇಬ್ಬರಿಗೂ. ಹ್ಯಾಪಿ ಮ್ಯಾರೀಡ್ ಲೈಫ್”ಎಂದು ಹರಸಿದಳು.

“ಎಲ್ಲಾ ವಿಶ್ ಈಗ್ಲೇ ಹೇಳಿದ್ರೆ ಹೇಗೆ ಎಲ್ಲರೂ ಮದ್ವೆಗೆ ಬನ್ನಿ”ಎಂದ ಚಿರು ನಗುತ್ತಾ.

“ಹೌದು ನಮ್ಮ ಮದ್ವೆಗೆ ಎಲ್ಲರೂ ತಪ್ಪದೆ ಬರಬೇಕು”ಎಂದಳು ಮೀರಾ.

ಎಲ್ಲರಿಗೂ ವಂದಿಸಿದ ಚಿರಂತ್ ಇಬ್ಬರ ಕೈ ಹಿಡಿದು ಕರೆದುಕೊಂಡು ಹೊರ ನಡೆದ.ನಂತರ ಮಡಿಕೇರಿಗೆ ಕರೆದುಕೊಂಡು ಬಂದು ಮೀರಾಳ ಗಾಯ ವಾಸಿಯಾಗುವವರೆಗೂ ಒಂದೆರಡು ದಿನ ನಿಧಿ ಮನೆಯಲ್ಲಿ ವಾಸ್ತವ ಹೂಡಿ ಆನಂತರ ಸಂಪಿಗೆಕಟ್ಟೆಗೆ ಕಳುಹಿಸಿಕೊಟ್ಟನು.

ಮನೆಗೆ ಬಂದ ಮೀರಾ ನಕುಲರನ್ನು ಕಂಡು ಹರ್ಷಿತನಾದ ಸತ್ಯಪ್ರಕಾಶ್ ಚಿರಂತನಿಗೆ ಕಾಲ್ ಮಾಡಿ”ಚಿರು ಮೀರಾ ನಕುಲ್ ಮನೆಗೆ ಬಂದಿದ್ದಾರೆ ನಾಳೆ ಬೆಳಗ್ಗೆ ಪುರೋಹಿತರನ್ನು ಕರೆದುಕೊಂಡು ಬಾ”ಎಂದರು.

“ಹ್ಮ್ ಸರಿ ಅಪ್ಪ”ಎಂದ ನಕುಲ್ ತಂದೆಯ ಆದೇಶದಂತೆ ಮರುದಿನ ಬೆಳಗ್ಗೆ ಪುರೋಹಿತರನ್ನು ಕರೆದುಕೊಂಡು ಮನೆಗೆ ಹೋದನು.

ಇಬ್ಬರ ಜಾತಕಗಳನ್ನು ನೋಡಿದ ಪುರೋಹಿತರು”ಇಬ್ಬರ ಜಾತಕಗಳು ತುಂಬಾ ಚೆನ್ನಾಗಿ ಹೊಂದಾಣಿಕೆಯಾಗುತ್ತಿವೆ.ಇನ್ನೊಂದು ವಾರದಲ್ಲಿ ಮದುವೆಗೆ ಒಳ್ಳೆ ದಿನಾಂಕವಿದೆ ನಿಶ್ಚಯಿಸೋಣವೇ”ಎಂದು ಕೇಳಿದರು.

🎉 ಮದುವೆ ಸಿದ್ಧತೆಗಳು ಮತ್ತು ಮರೆಮಾಚಿದ ನೋವು

ಒಂದು ವಾರದ ನಂತರದ ಮುಹೂರ್ತಕ್ಕೆ ಎಲ್ಲರೂ ಸಮ್ಮತಿ ಸೂಚಿಸಿದರು. ಮೀರಾ ನಕುಲ್ ಇಬ್ಬರ ಸಂಭ್ರಮ ಮುಗಿಲು ಮುಟ್ಟಿತ್ತು.ಚಿರಂತನಿಗೂ ಅಷ್ಟೇ ಸಂತೋಷವಾಗಿತ್ತು ಇಬ್ಬರನ್ನು ಒಂದು ಮಾಡಿದ ಖುಷಿ ಒಂದೆಡೆಯಾದರೆ ಇನ್ನೊಂದು ವಾರದಲ್ಲಿ ಮದುವೆ ಎಂಬ ಖುಷಿ ಮತ್ತೊಂದೆಡೆ.ಸತ್ಯಪ್ರಕಾಶ್ ಮದುವೆಯ ಎಲ್ಲಾ ಜವಾಬ್ದಾರಿಯನ್ನು ಚಿರಂತನಿಗೆ ಒಪ್ಪಿಸಿದರು. ಅದರಂತೆ ಚಿರು ಮದುವೆಯ ಎಲ್ಲಾ ಜವಾಬ್ದಾರಿಯನ್ನು ವಹಿಸಿಕೊಂಡು ಮದುವೆಗೆ ತಯಾರಿ ಮಾಡುತಿದ್ದ.

ಮೀರಾ ತನ್ನ ಗೆಳೆಯರ ಬಳಗಕ್ಕೆಲ್ಲಾ ಫೋನ್ ಮಾಡಿ ಮದುವೆಗೆ ಬರಲು ಹೇಳಿದಳು.ಮೀರಾಳ ಮಾತಿಗೆ ಬೆಲೆಕೊಟ್ಟ ಪ್ರಣವ್, ಮಾನ್ಯ,ನಿಧಿ ಎಲ್ಲರೂ ಅಂದಿನಿಂದಲೇ ಮೀರಾಳ ಮನೆಯಲ್ಲಿ ವಾಸ್ತವ ಹೂಡಿದರು.

ಮದುವೆಯ ಜವಳಿ, ಆಭರಣಗಳ ಜವಾಬ್ದಾರಿಯನ್ನು ವಹಿಸಿಕೊಂಡ ಸತ್ಯಪ್ರಕಾಶ್. ಮೀರಾ,ನಕುಲ್ ಮತ್ತವರ ಸ್ನೇಹಿತರ ಜೊತೆಯಲ್ಲಿ ಮಡಿಕೇರಿಗೆ ಶಾಪಿಂಗಿಗೆ ಕರೆದುಕೊಂಡು ಹೋಗಿದ್ದರು.ಮಾಂಗಲ್ಯ ಸರವನ್ನು ಇನ್ನೊಂದು ಮೂರುದಿನದಲ್ಲಿ ಕೊಡಲು ಹೇಳಿ ಆರ್ಡರ್ ಕೊಟ್ಟು ಬಂದಿದ್ದರು.ಹೀಗೆ ತರಾತುರಿಯಲ್ಲಿ ಮದುವೆಯ ಸಿದ್ದತೆಗಳು ಭರದಿಂದ ಸಾಗಿದ್ದವು.

ಹಗಲು ರಾತ್ರಿ ಎನ್ನದೆ ಕೆಲಸದಲ್ಲಿ ನಿರತನಾಗಿದ್ದ ಚಿರಂತ್ ತನ್ನ ಆರೋಗ್ಯದ ಕಡೆ ಗಮನ ಹರಿಸುವುದನ್ನೇ ಮರೆತುಬಿಟ್ಟಿದ್ದ.ಇದರಿಂದ ಮೆದುಳಿನಲ್ಲಿ ಊತ ಶುರುವಾಗಿತ್ತು. ಇದು ಚಿರಂತನ ಗಮನಕ್ಕೆ ಬರಲೇ ಇಲ್ಲಾ.

ತನ್ನ ಮದುವೆಗೆ ಕಾರಣನಾದ ಚಿರಂತನಿಗೆ ಒಂದು ಧನ್ಯವಾದ ತಿಳಿಸಬೇಕೆಂದುಕೊಂಡಿದ್ದಳು ಮೀರಾ.ಹಗಲು ರಾತ್ರಿ ಎನ್ನದೆ ಮದುವೆಗೆ ತಯಾರಿ ಮಾಡುತಿದ್ದ ಚಿರಂತನನ್ನು ಕಂಡು ಅವನ ಮೇಲಿದ್ದ ಕೋಪ ಕ್ರಮೇಣವಾಗಿ ಕಡಿಮೆಯಾಗತೊಡಗಿತ್ತು.

ಅಂತೂ ಎಲ್ಲರೂ ಕಾದಿದ್ದ ಮದುವೆಯ ದಿನ ಬಂದೆ ಬಿಟ್ಟಿತು.ಚಿರಂತನ ಉಪಸ್ಥಿತಿಯಲ್ಲಿ ಅಲಂಕಾರಗೊಂಡ ಮನೆ ಅರಮನೆಯಂತೆ ಕಂಗೊಳಿಸುತ್ತಿತ್ತು.ಮದುವೆಗೆ ಬಂದವರನ್ನು ಸತ್ಯ ಪ್ರಕಾಶ್, ಮೋಹನ್, ಕುಸುಮ ಸ್ವಾಗತಿಸುತ್ತಿದ್ದರು.

ಮೀರಾಳನ್ನು ತಯಾರು ಮಾಡುವ ಜವಾಬ್ದಾರಿಯನ್ನು ಮಾನ್ಯ,ನಿಧಿ ತೆಗೆದುಕೊಂಡರೆ ನಕುಲನನ್ನು ತಯಾರಿ ಮಾಡುವ ಜವಾಬ್ದಾರಿಯನ್ನು ಪ್ರಣವ್ ತೆಗೆದುಕೊಂಡಿದ್ದ.ಮೀರಾಳನ್ನು ತಯಾರಿ ಮಾಡಿ ಮುಗಿಸಿದ ಮಾನ್ಯ,ನಿಧಿ ಚಿರಂತನ ತಯಾರಿ ನೋಡಲು ಹೋದರು.

ರಾತ್ರಿಯೆಲ್ಲ ಸಿದ್ದತೆಯಲ್ಲಿ ತಲ್ಲೀನನಾಗಿದ್ದರಿಂದ  ಚಿರಂತನಿಗೆ ತಲೆ ನೋವು ಶುರುವಾಗಿತ್ತು.ಮೆದುಳಿನಲ್ಲಿ ಭೀಕರ ನೋವು ಶುರುವಾಯಿತು. ಸ್ವಲ್ಪ ರೆಸ್ಟ್ ತಗೊಳೋಣ ಎಂದು ಅಲ್ಲೇ ಇದ್ದ ಸೋಫಾದಲ್ಲಿ ಮಲಗಿದ.

ತಯಾರಾಗಿದ್ದ ಮೀರಾ ಕಿಟಕಿಯ ಬಳಿ ಬಂದು ಮದುವೆಗೆ ಬಂದವರನ್ನು ನೋಡುತಿದ್ದಳು. ಆಗ ಸೋಫಾಮೇಲೆ ಎಚ್ಚರವಿಲ್ಲದೆ ಮಲಗಿದ್ದ ಚಿರಂತನ ಕಡೆ ದೃಷ್ಟಿ ನೆಟ್ಟಿತು.ಅವನು ಮಾಡಿದ ಸಹಾಯವನ್ನು  ನೆನೆದು ಚಿರಂತನನ್ನು ಮಾತನಾಡಿಸಬೇಕೆಂದುಕೊಂಡಳು.ಅಷ್ಟರಲ್ಲಿ ಅಲ್ಲಿಗೆ ಬಂದ ಸತ್ಯಪ್ರಕಾಶ್ ಅವನನ್ನು ಎಚ್ಚರಿಸಿ  ಅಲ್ಲಿಂದ ಸ್ವಲ್ಪ ಬದಿಗೆ ಕರೆದುಕೊಂಡು ಹೋಗಿ”ಚಿರು ಒಂದು ದೊಡ್ಡ ತಪ್ಪಾಗಿದೆ ಕಣೋ”ಎಂದ.

“ಏನಪ್ಪಾ ಏನ್ ಆಯ್ತು”

“ಅದು ಮಡಿಕೇರಿ ಜ್ಯೂವೆಲರಿ ಶಾಪ್ ಅಲ್ಲಿ ಆರ್ಡರ್ ಕೊಟ್ಟಿದ್ದ ಮಾಂಗಲ್ಯ ಸರ ತರೋದೆ ಮರೆತಿದ್ದೀವಿ ಕಣೋ.ಬೇಗ ಮಡಿಕೇರಿಗೆ ಹೋಗಿ ತಗೊಂಡ್ ಬಾರೋ”

“ಏನಪ್ಪಾ ನೀನು ಇನ್ನೊಂದ್ ಗಂಟೆಯಲ್ಲಿ ಮದ್ವೆ ಇಟ್ಕೊಂಡು ಈಗ್ ಹೇಳ್ತಿದೀಯಾ”

“ಈಗ ತಪ್ಪಾಗಿದೆ.ಈಗ ಅದರ ಬಗ್ಗೆ ಮಾತಾಡೋಕೆ ಟೈಂ ಇಲ್ಲಾ ಬೇಗ ಹೋಗ್ ಬಾ”ಎಂದರು.

“ಹ್ಮ್ ಸರಿ ಅಪ್ಪ”ಎಂದವನೇ ಅವಸರದಲ್ಲಿ ಮಡಿಕೇರಿಗೆ ಹೊರಟ.

😔ಮೀರಾಳ ಪಶ್ಚಾತಾಪ

ಇತ್ತ ಮೀರಾಳಿಗೆ ಚಿರಂತನ ವಿಷಯದಲ್ಲಿ ತಪ್ಪು ಮಾಡಿದ್ದಿನಾ ಅನ್ನೋ ಅನುಮಾನವೂ ಶುರುವಾಯಿತು.ಚಿರಂತನ ಚಿಕ್ಕಂದಿನ ಒಂದು ಫೋಟೋ ಹಿಡಿದು ಅಳಲು ಶುರುಮಾಡಿದಳು. ಅಷ್ಟರಲ್ಲಿ ಅಲ್ಲಿಗೆ ಬಂದ ನಿಧಿ ಮೀರಾ ಅಳುತ್ತಿರುವುದನ್ನು ನೋಡಿ ಗಾಬರಿಯಾದಳು.

“ಮೀರಾ ಏನಾಯ್ತೆ ಯಾಕ್ ಅಳ್ತಿದೀಯಾ”ಎಂದು ಪ್ರಶ್ನಿಸಿದಳು.

“ನಿಧಿ ನಾನ್ ಚಿರಂತ್ ವಿಷಯದಲ್ಲಿ ತಪ್ಪು ಮಾಡಿದ್ದೇನೆ ಅಂತ ಅನಿಸ್ತಿದೆ.ಅವನ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ನಾನ್ ಅವೈಡ್ ಮಾಡಿದ ತಕ್ಷಣ ಅವರು ನನ್ನ ಅವೈಡ್ ಮಾಡಿ ಮರೆತುಬಿಡ್ತಿದ್ರು ಆದ್ರೆ ಚಿರಂತ್ ಹಾಗಲ್ಲ ನಾನ್ ಅವನನ್ನು ಎಸ್ಟ್ ಅವೈಡ್ ಮಾಡಿದ್ರು ಒಂದ್ಸರಿನು ನನ್ನ ಮೇಲೆ ಬೇಜಾರಾಗಿಲ್ಲ, ಕೋಪ ಮಾಡ್ಕೊಂಡಿಲ್ಲ.

ಬದಲಾಗಿ ನನ್ನ ಮದುವೆಗೆ ಇದ್ದ ಬಹುದೊಡ್ಡ ತೊಂದರೆಯನ್ನು ನಿವಾರಿಸಿ ನಂಗ್ ಹೆಲ್ಪ್ ಮಾಡೋದಲ್ಲದೆ ಮದುವೆಯ ತಯಾರಿಯನ್ನು ಸಹ ಹಗಲು ರಾತ್ರಿ ಅಂತ ನೋಡ್ದೆ ಕಷ್ಟಪಡ್ತಿದ್ದಾನೆ”ಎಂದಳು ಕಣ್ಣೀರೊರೆಸಿಕೊಳ್ಳುತ್ತಾ.

“ನಿನ್ಗೆ ಒಂದು ನಿಜ ಹೇಳ್ಳಾ ಅವ್ನು ತನು ಹತ್ರ ಮಾತಾಡಿ ನಿಮ್ಮ ಮದುವೆಯಾಗೋ ಹಾಗೇ ಮಾಡಿದ್ದು ಒಂದೇ ನಿಂಗ್ ಗೊತ್ತಿರೋದು ನಿಂಗ್ ಗೊತ್ತಿಲ್ದೆ ತುಂಬಾ ಹೆಲ್ಪ್ ಮಾಡಿದ್ದಾನೆ.ಅವತ್ತು ನಕುಲ್ ಸೈಲೆಂಟ್ ಆಗಿದ್ದಾಗ ಅವರಪ್ಪ ಅಮ್ಮನ ಜೊತೆ ಮಾತಾಡಿ ನಿಮ್ಮನೆಗೆ ಸತ್ಯಪ್ರಕಾಶ್ ಅಂಕಲ್ ಜೊತೆ ಮಾತಾಡಿ ಅಂತ ಕಳುಹಿಸಿದ್ದು ಅವನೇ.ಮಡಿಕೇರಿಯಲ್ಲಿದ್ದಾಗ ನಿನ್ನ ಯಾರೋ ಫಾಲೋ ಮಾಡ್ತಿದ್ದಾರೆ ಅಂದಲ್ವಾ. ಅವರಿಂದ ಪ್ರತಿಕ್ಷಣ ನಿನ್ನ ಕಾಪಾಡಿದ್ದು ಅವ್ನೆ, ಅಷ್ಟೇ ಯಾಕೆ ಮೊನ್ನೆ ಅರ್ಧ ರಾತ್ರಿ ಕಾಡಲ್ಲಿ ಒಂಟಿಯಾಗಿ ಬಿದ್ದಿದ್ದ ನಿನ್ನ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಅವ್ನೆ.

ಇಷ್ಟೆಲ್ಲಾ ಅವನು ನಿಂಗ್ ಗೊತ್ತಿಲ್ದೆ ಮಾಡಿರೋದು”ಎಂದು ಮೀರಾಳಿಗೆ ಚಿರಂತ್ ಮಾಡಿದ್ದ ಸಹಾಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಳು.

“ಹೌದು ನಿಧಿ ನಿಜ್ವಾಗ್ಲೂ ಜೀವನದಲ್ಲಿ ಸರಿಯಾಗದೆ ಇರುವಂತ ದೊಡ್ಡ ತಪ್ಪು ಮಾಡಿದ್ದೀನಿ.ಅವನತ್ರ ಹೋಗಿ ಕ್ಷಮೆ ಕೇಳಿ ಮಾತಾಡ್ಸ್ತಿನಿ”

“ಇಷ್ಟಕ್ಕೆ ಹೀಗೆ ಪಶ್ಚಾತಾಪ ಪಟ್ಟರೆ ಹೇಗೆ ಮೀರಾ  ನಿಂಗ್ ಗೊತ್ತಿಲ್ದೆ ಇರೋ ಇನ್ನೊಂದು ದೊಡ್ಡ ಸತ್ಯ ಇದೆ.

ಸ್ನೇಹ ಚಿರಾಯು-19 ಮುಂದುವರೆಯುವುದು……

ಈ ಸ್ನೇಹ ಚಿರಾಯು-19 ನೀವು ಇಂಗ್ಲಿಷ್ ಭಾಷೆಯಲ್ಲಿಯೂ ಓದಬಹುದು.

ನಮ್ಮ ವೆಬ್ಬೆಟ್ ನ ಇತರ ಪೋಸ್ಟ್ ಗಳನ್ನು ಇಲ್ಲಿ ಓದಬಹುದು.

ಸ್ನೇಹ ಚಿರಾಯು-19

Comments

No comments yet. Why don’t you start the discussion?

Leave a Reply

Your email address will not be published. Required fields are marked *