ಸ್ನೇಹ ಚಿರಾಯು-18

ಸ್ನೇಹ ಚಿರಾಯು-18

🎭 ಅಜ್ಞಾತ ನೆರಳಿನ ಹಿಂಬಾಲಿಕೆ

ಸ್ನೇಹ ಚಿರಾಯು-18-ಅಂದು ಸಂಜೆ ಕೆಲಸದಿಂದ ಬಂದು ಊಟ ಮಾಡಿ  ರೆಡಿಯಾಗಿ  ಸರಿಯಾಗಿ ಹತ್ತು ಗಂಟೆಗೆ ಕಾರಿನಲ್ಲಿ ಮಡಿಕೇರಿಯ ಕಡೆ ಹೊರಟರು.ಕಾರು ಚಲಾಯಿಸುತ್ತಿದ್ದ ನಕುಲ್ ಗೆ ಮಾತಾಡಿ ಸಾಥ್ ಕೊಡುತ್ತಿದ್ದಳು ಮೀರಾ.ಇಬ್ಬರೂ ಮಾತನಾಡುತ್ತ ಮುಂದೆ ಸಾಗಿದರು 2 ಗಂಟೆಗೆ ಸರಿಯಾಗಿ ಕಾರು ಪಿರಿಯಾಪಟ್ಟಣ ತಲುಪಿತ್ತು.

ನಕುಲನಿಗೆ ನಿದ್ದೆಯ ಮಬ್ಬು ಹತ್ತುತ್ತಿದ್ದರಿಂದ ಇಳಿದು ಟೀ ಕುಡಿಯಬೇಕೆಂದು ನಿರ್ಧರಿಸಿ ಅಲ್ಲೇ ಹೆದ್ದಾರಿಯಲ್ಲಿದ್ದ ಟೀ ಜಂಕ್ಷನ್ಗೆ ಮೀರಾಳನ್ನು ಕರೆದುಕೊಂಡು ಹೋದ.

ಪ್ರಕಾಶ್ “ಎಲ್ಲಿ ಬರುತ್ತಿದ್ದಾರೆ ತಿಳಿದುಕೊಳ್ಳೋಣ”ಎಂದು ಮೀರಾಳಿಗೆ ಕಾಲ್ ಮಾಡಿದ ಮೀರಾ ಕಾಲ್ ಪಿಕ್ ಮಾಡಲಿಲ್ಲ. ಆದ್ದರಿಂದ ನಕುಲ್ ಗೆ ಕಾಲ್ ಮಾಡಿದ ಅವನೂ ಸಹ ಪಿಕ್ ಮಾಡಲಿಲ್ಲ. ಇಬ್ಬರ ಫೋನ್ ಕಾರಿನಲ್ಲೇ ಇದ್ದರಿಂದ ಯಾರೊಬ್ಬರೂ ಕಾಲ್ ಪಿಕ್ ಮಾಡಲಿಲ್ಲ.

“ನಾನ್ ಫೋನ್ ಮಾಡಿರೋದು ನೋಡಿದ್ರೆ ಅವರೇ ಮಾಡುತ್ತಾರೆ ಬಿಡು”ಎಂದು ಪ್ರಕಾಶ್ ಸುಮ್ಮನಾದ. ಮತ್ತೆ ಕಾರು ಹತ್ತಿದಾಗಲೂ ಯಾರೊಬ್ಬರೂ ಮೊಬೈಲ್ ಕಡೆ ನೋಡಲಿಲ್ಲ.

ಪಿರಿಯಾಪಟ್ಟಣ ಸಿಟಿಯಿಂದ ಹೊರ ಬಂದಮೇಲೆ ಮೀರಾಳಿಗೆ ಯಾರೋ ನಮ್ಮನ್ನು ಹಿಂಬಾಲಿಸಿದಂತೆ ಅನಿಸಿ”ನಕುಲ್ ನಮ್ಮನ್ನು ಯಾರೋ ಫಾಲೋ ಮಾಡ್ತಿದ್ದಾರೆ ಅನಿಸ್ತಿದೆ”ಎಂದಳು ಭಯದಿಂದ.

“ಅಯ್ಯೋ ಹುಚ್ಚಿ ನಮ್ಮನ್ಯಾರೆ ಫಾಲೋ ಮಾಡ್ತಾರೆ.ಎಲ್ಲಾ ನಿನ್ ಭ್ರಮೆ.ನೈಟ್ ನಲ್ಲಿ ಜರ್ನಿ ಮಾಡಿದ್ರೆ ಹಾಗೇ ಅನ್ಸೋದು”ಎಂದ ನಿರ್ಲಕ್ಷ್ಯದಿಂದ.

“ಇಲ್ಲಾ ನಕುಲ್. ಹಿಂದೆ ನೋಡು ಆ ಕಾರಿನಲ್ಲಿ ಬರುವವರು ಆಗಿನಿಂದಲೂ ನಮ್ಮನ್ನು ಫಾಲೋ ಮಾಡ್ತಿದಾರೆ”ಎಂದಳು ಹಿಂದೆ ಬರುತ್ತಿದ್ದ ಕಾರಿನೆಡೆಗೆ ಬೆರಳು ಮಾಡಿ ತೋರಿಸಿದಳು ತಲೆಯಂಚಿನಲ್ಲಿ ತೊಟ್ಟಿಕ್ಕುತ್ತಿದ್ದ ಬೆವರಿನ ಹನಿಯನ್ನು ಒರೆಸಿಕೊಳ್ಳುತ್ತಾ.

“ಮೀರಾ ಇದ್ಯಾಕೆ ಇಷ್ಟೊಂದ್ ಭಯ ಪಡ್ತಿದೀಯಾ. ಅವ್ರು ನಮ್ ಹಾಗೆ ಎಲ್ಲಿಗೋ ಹೋಗ್ತಿರ್ಬೇಕು ಬಿಡು. ನಿಂಗ್ ಅಷ್ಟ್ ಭಯ ಆದ್ರೆ ಆರಾಮಾಗಿ ಮಲ್ಕೋ. ನಾನ್ ಗಾಡಿ ಹೊಡಿಸ್ತಿನಿ”ಎಂದ ಅವಳನ್ನು ಸಮಾಧಾನ ಮಾಡುತ್ತಾ.

“ಅಯ್ಯೋ ನಕುಲ್ ನಿಂಗ್ ಅರ್ಥ ಆಗ್ತಿಲ್ವ ಅವ್ರು ಫಾಲೋ ಮಾಡ್ತಿರೋದು ನಮ್ಮನ್ನೇ. ನಾವು ಮಡಿಕೇರಿಯಲ್ಲಿ ಇದ್ದಾಗಲೂ ಮಾಡ್ತಿದ್ರು. ಬೆಂಗಳೂರಿಗೆ ಬಂದ್ಮೇಲೂ ಮಾಡಿದ್ರು.ಈಗ ಇಲ್ಲೂ ಮಾಡ್ತಿದಾರೆ”

“ನಿನ್ ಜೊತೆ ಯಾವಾಗ್ಲೂ ನಾನು ಇರ್ತಿದ್ನಲ್ಲೇ. ನಂಗ್ ಯಾವತ್ತೂ ಹಾಗೆ ಅನಿಸಲಿಲ್ಲ”

“ನಕುಲ್ ಈಗ ಮಾತಾಡೋ ಟೈಂ ಅಲ್ಲ ಪ್ಲೀಸ್ ಕಾರ್ ಸ್ಪೀಡ್ ಜಾಸ್ತಿ ಮಾಡು”ಎಂದು ಗೋಗರೆದಳು.

ಅವಳ ಮಾತಿನಂತೆ ಕಾರು ಜೋರಾಗಿ ಚಲಾಯಿಸಿದ.ನಕುಲ್ ಕಾರು ಜೋರಾಗಿ ಚಲಾಯಿಸಿದಂತೆ ಹಿಂದೆ ಬರುತ್ತಿದ್ದ ಕಾರಿನ ವೇಗವು ಅಷ್ಟೇ ಜೋರಾಗುತ್ತಿತ್ತು. ಇದರಿಂದ ನಕುಲನಿಗೂ ಸಹ ಖಾತ್ರಿಯಾಯಿತು ಅವರು ನಮ್ಮನ್ನೇ ಫಾಲೋ ಮಾಡುತ್ತಿರುವುದು ಎಂದು.

ಕಾರು ಕುಶಾಲನಗರಕ್ಕೆ ಬಂದರು ಅವರು ಹಿಂಬಾಲಿಸುತ್ತಲೇ ಇದ್ದರು.ಕುಶಾಲನಗರ ಸಿಟಿಯಿಂದ ಕಾರು ಆಚೆ ಬರುತ್ತಿದ್ದಂತೆ ಹಿಂದೆ ಬರುತ್ತಿದ್ದ ಕಾರಿನ ವೇಗ ಜಾಸ್ತಿ ಆಗಿ ಮುಂದೆ ಹೊರಟು ಹೋಯಿತು.

ಇದರಿಂದ ನಿಟ್ಟುಸಿರು ಬಿಟ್ಟ ನಕುಲ್”ನೀನು ನಿನ್ ಭಯ ನೋಡು ಕಾರು ಮುಂದೆ ಹೋಗಿಯೇ ಬಿಡ್ತು ಸುಮ್ನೆ ನೀನು ಹೆದರಿ ನಂಗೂ ಹೆದರಿಕೆ ಆಗೋ ತರ ಮಾಡ್ದೆ”ಎಂದ ಅವಳೆಡೆಗೆ ತಿರುಗಿ.

ಮುಂದೆ ನೋಡುತಿದ್ದ ಮೀರಾ”ನಕುಲ್…sssss”ಎಂದು ಚೀರಿದಳು.

🚨 ಅಂಧಕಾರದ ಉರುಳು

ಮೀರಾ ಚೀರಿದ ಶಬ್ದಕ್ಕೆ ನಕುಲ್ ಹೆದರಿ ಒಮ್ಮೆಲೇ ಕಾರ್ ಬ್ರೇಕ್ ಹಾಕಿ ಮುಂದೆ ನೋಡಿದ. ಮುಂದೆ ಗುಂಡಾಗಳು ಕಾರು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಅದರ ಮುಂದೆ ದೊಡ್ಡ ದೊಡ್ಡ ಕಲ್ಲು ಬಂಡೆಗಳು ಅಡ್ಡ ಹಾಕಿ ಅವರಿಗಾಗಿ ಕಾದು ನಿಂತಿದ್ದರು.

ಸುತ್ತ ದಟ್ಟ ಕಾಡು ಮಧ್ಯದಲ್ಲಿ ರಸ್ತೆ.ಅಲ್ಲಿ ಜನರ ಸುಳಿವೇ ಇರಲಿಲ್ಲ.ನಕುಲನಿಗೆ ಏನು ಮಾಡಬೇಕೆಂದು ತಿಳಿಯದೆ ಅಲ್ಲೇ ಪಕ್ಕದಲ್ಲಿ ಕಾಡಿನ ಒಳಗೆ ಹೋಗಲು ಇದ್ದ ಕಾಡುದಾರಿಗೆ ಕಾರು ಚಲಾಯಿಸಿದ.

ರೌಡಿಗಳು ಕಾರಿನಲ್ಲಿ ಅವರನ್ನು ಹಿಂಬಾಲಿಸಿದರು.ಕಗ್ಗತ್ತಲಿನ ಕಾಡಿನಲ್ಲಿ  ನಕುಲ್ ಎಲ್ಲಿ ಹೋಗುತ್ತಿದ್ದೇನೆ ಎಂಬ ಪರಿವೇ ಇಲ್ಲದೆ ಕಾರು ಚಲಾಯಿಸುತಿದ್ದ.

ಕಾರು ಒಂದು ಮರಕ್ಕೆ ಡಿಕ್ಕಿ ಹೊಡೆದು ನಿಂತಿತ್ತು.ಕಾರಿಂದಿಳಿದ ಮೀರಾ ನಕುಲ್ ಭಯದಿಂದ  ಓಡತೊಡಗಿದರು.ಒಂದು ಮರದ ದಿಮ್ಮಿಗೆ ಎಡವಿ ಬಿದ್ದಳು ಮೀರಾ.ನಕುಲ್ ಕೈ ಹಿಡಿತದಿಂದ ಜಾರಿದ ಮೀರಾ”ನಕುಲ್…ss,ನಕುಲ್…ss ಎಂದು ಚೀರುತ್ತಾ ಕಡಿದಾದ ಪ್ರಪಾತಕ್ಕೆ ಜಾರಿ ಬಿದ್ದಳು.

ಬೀಳುವಾಗ ಕೈಗೆ ಸಿಕ್ಕ ಮರದ ಬಳ್ಳಿ ಹಿಡಿದು ತೂಗಾಡಿದಳು.ಕೈಮೇಲೆ ಹಾವೊಂದು ಹಾದುಹೋಗುತ್ತಿದ್ದರಿಂದ ಮೀರಾ ಮಾತಾಡದೆ ಮೌನಿಯಾಗಿದ್ದಳು.ಮೀರಾಳಿಗಾಗಿ ಕೂಗುತ್ತಾ ಹುಡುಕುತಿದ್ದ ನಕುಲನನ್ನು ಹಿಂಬಾಲಿಸಿ ಬರುತಿದ್ದ ರೌಡಿಗಳು ಹಿಡಿದುಕೊಂಡರು.

“ಯಾರ್ರೋ ನೀವು, ನನ್ನನ್ಯಾಕೆ ಹಿಡ್ಕೊಂಡಿದೀರಾ ಬಿಡಿ”ಎಂದು ನಕುಲ್ ಕೂಗಿಕೊಂಡ.

ಅದರಲ್ಲೊಬ್ಬ”ಯಾಕ್ ಹಿಡ್ಕೊಂಡಿದೀವಿ ಅಂತ ನಿನ್ಗೆ ಗೊತ್ತಾಗುತ್ತೆ ಬಾ”ಎಂದು ನಕುಲನ ಬಾಯಿ ಮುಚ್ಚಿ”ಲೋ ಇವನನ್ನು ಕರ್ಕೊಂಡ್ ಹೋಗ್ರೋ. ನಾನವಳನ್ನು ಕೊಂದು ಬರ್ತೀನಿ”ಎಂದ.

“ಮಗ ಈ ಪ್ರಪಾತಕ್ಕೆ ಬಿದ್ರೆ ಬದುಕೋ ಚಾನ್ಸೆ ಇಲ್ಲಾ ಕಣೋ.ಅವಳಿನ್ನೆಲ್ಲಿ ಬದುಕಿರ್ತಾಳೆ ಸತ್ತೋಗಿರುತ್ತಾಳೆ ನಡಿ ಹೋಗೋಣ”ಎಂದ ಇನ್ನೊಬ್ಬ.

“ಹಾಗಂತಿಯಾ.ಅವ್ಳ್ ಸಾಯೋದೆ ಅಲ್ವಾ ನಮಗೂ ಬೇಕಾಗಿರೋದು. ನಡಿ ಹೋಗೋಣ”ಎಂದು ಬಲವಂತದಿಂದ ನಕುಲನನ್ನು ಎಳೆದುಕೊಂಡು ಹೋದರು.

ಹಾವು ಕೈ ಮೇಲಿಂದ ಹಾದು ಹೋದಮೇಲೆ ಬಳ್ಳಿಯ ಸಹಾಯದಿಂದ ಮೇಲೇರಿದ ಮೀರಾ ನಕುಲನಿಗಾಗಿ ಕೂಗಾಡಿದಳು.

“ನಕುಲ್…..ssss ಎಲ್ಲಿದ್ದೀಯಾ ಮಾತಾಡು ನಂಗ್ ಭಯ ಆಗ್ತಿದೆ ಬೇಗ ಬಾ”ಎಂದು ಕಿರುಚಿದಳು.ಎಷ್ಟೇ ಕಿರುಚಿದರು ಅಲ್ಲಿ ಸ್ಪಂದಿಸಲು ಯಾರು ಇರಲಿಲ್ಲ.ಬಳ್ಳಿಯ ಹಿಡಿತದಿಂದ ಜರ್ಜರಿವಾದ ಅಂಗೈಯಿಂದ ರಕ್ತ ಸುರಿಯಲಾರಂಭಿಸಿದಳು.

ಭಯದಿಂದ ಅಳುತ್ತಾ ಕತ್ತಲಲ್ಲಿ ಹೆಜ್ಜೆ ಹಾಕುತ್ತಾ ಮುಂದೆ ಸಾಗಿದಳು.ಅವಳ ಅದೃಷ್ಟವೆಂಬಂತೆ ಕಾಡಿನ ಒಳಗೆ ಬಂದ ದಾರಿಯನ್ನೇ ಹಿಡಿದು ಮುಂದೆ ಸಾಗಿದಳು.ಹೆದ್ದಾರಿಗೆ ಬರುವಷ್ಟರಲ್ಲಿ ರಕ್ತ ಸೋರುವಿಕೆಯಿಂದ ನಿಶ್ಯಕ್ತಿ ಉಂಟಾಗಿ ಅಲ್ಲೇ ಮೂರ್ಛೆ ಬಿದ್ದಳು.

🛡️ ಚಿರಂತ್ ಜೀವ ರಕ್ಷಕ

ನಕುಲ್ ಮೀರಾಳಿಗಾಗಿ ಹುಡುಕುತ್ತಾ ಬಂದ ಚಿರು ರಸ್ತೆಗೆ ಅಡ್ಡಲಾಗಿ ಹಾಕಿದ್ದ ಕಲ್ಲುಗಳನ್ನು ಕಂಡು ಕಾರು ನಿಲ್ಲಿಸಿದ.ಅಲ್ಲೇ ಕಾಡುದಾರಿ ಹಿಡಿದು ಮುಂದೆ ಸಾಗಿದ ಮೂರ್ಛೆ ಬಿದ್ದಿದ್ದ ಮೀರಾಳನ್ನು ಕಂಡು ಸ್ತಬ್ದನಾದ.

“ಮೀರಾ…ss ಮೀರಾ…ss”ಎಂದು ಕೆನ್ನೆ ತಟ್ಟಿ ಮಾತಾಡಿಸಿದ.ಅವಳಿಗೆ ಎಚ್ಚರವಾಗಲಿಲ್ಲ.ಅವಳನ್ನು ಅಲ್ಲೇ ಮಲಗಿಸಿ ಸುತ್ತಾ ಮುತ್ತಾ ನಕುಲನಿಗಾಗಿ ಹುಡುಕಾಡಿದ. ಅವನ ಸುಳಿವು ಸಿಗಲಿಲ್ಲ.

ಇದು ಪಕ್ಕಾ ಆ ಶಿವರಾಮನ ಕೆಲಸವೆಂದು ತಿಳಿದ ಚಿರಂತ್. ಮೀರಾಳನ್ನು ಎತ್ತಿಕೊಂಡು ಹೋಗಿ ಕಾರಿನಲ್ಲಿ ಕೂರಿಸಿ ಆಸ್ಪತ್ರೆಗೆ ಕರೆದುಕೊಂಡು ಹೋದನು. 

ಮೀರಾಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ಚಿರು ತುಳಸಿಗೆ ಕಾಲ್ ಮಾಡಿ ಬರಲು ಹೇಳಿದ. ತುಳಸಿ ಬಂದು ಮೀರಾಳಿಗೆ ಟ್ರೀಟ್ಮೆಂಟ್ ಶುರು ಮಾಡಿದಳು.ಅಂಗೈಯಿಂದ ರಕ್ತ ತುಂಬಾ ಸೋರಿಕೆಯಾದ್ದರಿಂದ ಮೀರಾ ಮೂರ್ಛೆ ತಪ್ಪಿದ್ದಳು.

ಮೀರಾಳಿಗೆ ಸರಿಯಾದ ಚಿಕಿತ್ಸೆ ನೀಡಿದ ತುಳಸಿ.ಚಿರಂತನನ್ನು ಮೀರಾಳ ಬಳಿ ಕೂರಲು ಹೇಳಿದರು.ಏಳು ಗಂಟೆಯಷ್ಟರಲ್ಲಿ ವಿಷಯ ತಿಳಿದ ನಿಧಿ ಆಸ್ಪತ್ರೆಗೆ ಬಂದಳು.

ಮೀರಾಳನ್ನು ನೋಡಿಕೊಳ್ಳುತ್ತಾ ಚೇರಿನ ಮೇಲೆ ಹಾಗೇ ಕೂತು ನಿದ್ರಿಸುತಿದ್ದ ಚಿರಂತನನ್ನು”ಚಿರು”ಎಂದು ತಲೆ ನೇವರಿಸುತ್ತಾ ಎಚ್ಚರಿಸಿದಳು.

ಎಚ್ಚರಗೊಂಡ ಚಿರು”ನಿನ್ ಯಾವಾಗ ಬಂದೆ ನಿಧಿ”ಎಂದು ಕೇಳಿದ.

“ಈಗ್ ತಾನೇ ಬಂದೆ.ಮೀರಾಳಿಗೆ ಹೇಗಿದೆ ಈಗ.ಅಮ್ಮ ಏನ್ ಹೇಳಿದ್ರು”ಎಂದು ಪ್ರಶ್ನಿಸಿದಳು.

“ಪರವಾಗಿಲ್ಲ ನಿಧಿ ಈಗ ಚೆನ್ನಾಗಿದಾಳೆ. ಇನ್ನೊಂದೆರಡು ಗಂಟೆಯಲ್ಲಿ ಪ್ರಜ್ಞೆ ಬರುತ್ತೆ ಅಂತ ಹೇಳಿದ್ರು”ಎಂದ ಮೀರಾಳನ್ನು ನೋಡುತ್ತಾ.ಕಣ್ಣುಗಳು ತೇವಗೊಂಡವು.

“ಯಾಕೋ ಚಿರು ಅಳ್ತಿದೀಯಾ,ಹುಷಾರಾಗ್ತಾಳೆ ಬಿಡು. ಯೋಚ್ನೆ ಮಾಡ್ಬೇಡ”ಎಂದಳು ಸಂತೈಸುತ್ತಾ.

💔 ಮಾತುಗಳಿಗೆ ಮೀರಿದ ನೋವು

“ಅದಲ್ಲ ನಿಧಿ…ಅವ್ಳ್ ಕಣ್ಣಲ್ಲಿ ಹನಿ ನೀರು ಬಂದ್ರೇನೇ ತಡ್ಕೊಳ್ಳೋಕಾಗ್ತಿರ್ಲಿಲ್ಲ ಅಂತದ್ರಲ್ಲಿ ದಟ್ಟ ಕಾಡಲ್ಲಿ ಅದು ಅರ್ಧರಾತ್ರಿಲಿ ಅಂಗೈಯೆಲ್ಲಾ ಗಾಯ ಮಾಡ್ಕೊಂಡು ರಕ್ತ ಸೋರಿ ಮೂರ್ಛೆ ಬಿದ್ದಿರೋದನ್ನ ನೆನೆಸಿಕೊಂಡ್ರೆ ಈಗಲೂ ನಂಗ್ ಭಯ ಆಗ್ತಿದೆ”ಎಂದ ನೊಂದ ದನಿಯಲ್ಲಿ.

“ಅದ್ಸರಿ ಮೀರಾ ಅಲ್ಲಿದ್ದಾಳೆ ಎಂದು ನಿಂಗ್ ಹೇಗೆ ಗೊತ್ತಾಯ್ತು”

“ಅದಾ… ರಾತ್ರಿ 2:30 ಸುಮಾರಿಗೆ ಅಪ್ಪ ಕಾಲ್ ಮಾಡಿ ಮೀರಾ ನಕುಲ್ ಬರ್ತಾರೆ ಅಂತ ಹೇಳಿದ್ರು.ಎಲ್ಲಿ ಬರ್ತಿದಾರೆ ಕೇಳೋಣಾ ಅಂತಾ ಎಷ್ಟೇ ಫೋನ್ ಮಾಡಿದ್ರು ಇಬ್ರು ರಿಸೀವ್ ಮಾಡ್ತಿಲ್ಲ.

ಅವ್ರು ಬರೋದೇ ಆಗಿದ್ರೆ ಇಸ್ಟೊತ್ತಿಗೆ ಕುಶಾಲನಗರಕ್ಕೆ ಬಂದಿರುತ್ತಾರೆ.ನಂಗ್ಯಾಕೋ ಭಯ ಆಗ್ತಿದೆ ಸ್ವಲ್ಪ ನೋಡ್ಕೊಂಡ್ ಬಾರೋ ಎಂದ್ರು”ನಾನು ಕುಶಾಲನಗರಕ್ಕೆ ಹೋಗೋ ದಾರಿಯಲ್ಲಿ ಯಾರೋ ಕಲ್ಲು ಅಡ್ಡ ಹಾಕಿದ್ದ ಗುರುತಿತ್ತು.

ಅಲ್ಲೇ ಇದ್ದ ಕಾಡುದಾರಿಯಲ್ಲಿ ಒಳಗೆ ಹೋದಾಗ ಮೀರಾ ಅಲ್ಲಿ ಮೂರ್ಛೆ ಬಿದ್ದ ಸ್ಥಿತಿಯಲ್ಲಿ ಬಿದ್ದಿದ್ದಳು.ನಕುಲನನ್ನು ತುಂಬಾ ಹುಡುಕಿದೆ ಅವ್ನ್ ಸಿಗಲಿಲ್ಲ ಅದ್ಕೆ ಮೀರಾಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದೆ”

“ಅಂದ್ರೆ ಈಗ ನಕುಲ್ ಎಲ್ಲಿದ್ದಾನೆ”

“ಇನ್ನೆಲ್ಲಿರ್ತಾನೆ ಆ ಶಿವರಾಮ್ ಕಿಡ್ನಾಪ್ ಮಾಡ್ಸಿ ಮನೆಯಲ್ಲಿಟ್ಟುಕೊಂಡಿರುತ್ತಾನೆ”

“ಅವನ ಪ್ರಾಣಕ್ಕೆ ಏನು ಅಪಾಯ ಇಲ್ವಾ”

“ಅವನ ಮಗಳು ನಕುಲನನ್ನು ಇಷ್ಟ ಪಡ್ತಿರೋದ್ರಿಂದ ನಕುಲ್ ಪ್ರಾಣಕ್ಕೇನುಭಯ ಇಲ್ಲ”

“ಸರಿ ಹಾಗಿದ್ರೆ ಮೀರಾಳಿಗೆ ಪ್ರಜ್ಞೆ ಬರುವಷ್ಟರಲ್ಲಿ ನಕುಲನನ್ನು ಕರೆದುಕೊಂಡು ಬಂದ್ರೆ ಒಳ್ಳೇದು ಅನಿಸ್ತಿದೆ”

“ಈ ಪ್ರಾಬ್ಲಮ್ ಇವತ್ತೇ ಕೊನೆ ಆಗ್ಬೇಕು  ಅಂದ್ರೆ ಜೊತೆಗೆ ಮೀರಾಳನ್ನು ಕರೆದುಕೊಂಡು ಹೋಗಬೇಕು.ಅದ್ಕೆ ಮೀರಾಳಿಗೆ ಪ್ರಜ್ಞೆ ಬರಲಿ ಅಂತ ಕಾಯ್ತಿದಿನಿ”

ಅಷ್ಟರಲ್ಲಿ ಅಲ್ಲಿಗೆ ಬಂದ ತುಳಸಿ ಕೈಯಲ್ಲಿದ್ದ ತಿಂಡಿ ತೆಗೆದು ಚಿರುಗೆ ಕೊಡುತ್ತಾ”ಚಿರು ಮನೆಯಿಂದ ತಿಂಡಿ ತಂದಿದಿನಿ ನೀನ್ ತಿನ್ನು. ಆಮೇಲೆ ಮೀರಾಳಿಗೆ ಪ್ರಜ್ಞೆ ಬಂದಮೇಲೆ ಅವಳಿಗೂ ತಿನ್ನಿಸಿ ಈ ಟ್ಯಾಬ್ಲೆಟ್ ಕೊಡು”ಎಂದೂ ಹೇಳಿದರು.

“ಹ್ಮ್ ಸರಿ ಆಂಟಿ”ಎಂದ.

“ಸರಿ ಚಿರು ನಾನ್ ಬೇರೆ ರೋಗಿಗಳನ್ನು ನೋಡ್ಬೇಕು”ಎಂದು ಹೇಳಿ ಅಲ್ಲಿಂದ ನಿರ್ಗಮಿಸಿದರು.ನಿಧಿ ನಾನು ಇಲ್ಲೇ ಇರ್ತೀನಿ ಎಂದು ಎಷ್ಟು ಹೇಳಿದರು ಒಪ್ಪದ ಚಿರು ನಿಧಿಯನ್ನು ಮನೆಗೆ ಕಳುಹಿಸಿದನು.

“ಸರಿ ಆಂಟಿ”ಎಂದು ತಂದಿದ್ದ ತಿಂಡಿಯನ್ನು ಟೇಬಲ್ ಮೇಲೆ ಇರಿಸುವಾಗ ಅವನ ಫೋನ್ ರಿಂಗಾಯಿತು.ತೆಗೆದು ನೋಡಿದರೆ ಸತ್ಯಪ್ರಕಾಶ್.

ಫೋನ್ ಎತ್ತಿದ್ದ ಚಿರು”ಹಾಯ್ ಅಪ್ಪ ಗುಡ್ ಮಾರ್ನಿಂಗ್”ಎಂದ.

“ಗುಡ್ ಮಾರ್ನಿಂಗ್ ಮನೆ ಹಾಳಾಯ್ತು. ಮೀರಾ ನಕುಲ್ ಎಲ್ಲಿ ಮನೆಗೆ ಬಂದಿಲ್ಲ ಇನ್ನೂ”ಎಂದ ಆತಂಕದಿಂದ.

“ಅಯ್ಯೋ ಅಪ್ಪ ಅವ್ರು ಅಲ್ಲಿಂದ ಹೊರಟಿದ್ರೆ ತಾನೇ ಬರೋದು ಇನ್ನೂ ಎರಡು ದಿನ ಆಫೀಸಲ್ಲಿ ತುಂಬಾ ಕೆಲಸ ಇದೆ ಅಂತೇ ಕೆಲಸ ಮುಗಿಸಿಕೊಂಡು ಆಮೇಲೆ ಬರ್ತಾರಂತೆ. ರಾತ್ರಿ ನೀನ್ ಫೋನ್ ಮಾಡಿದಾಗ ಮಲಗಿದ್ರಂತೆ”ಎಂದು ಸುಳ್ಳು ಹೇಳಿದ.

“ಓಹೋ ಹೌದಾ ಸರಿ ಬಿಡು ಕೆಲಸ ಮುಗಿಸಿಕೊಂಡು ನಿಧಾನವಾಗಿ ಬರಲಿ”ಎಂದೇಳಿ ಕಾಲ್ ಕಟ್ ಮಾಡಿದರು.

😓ನಕುಲನಿಗಾಗಿ ಹಾರಾಟ

ಗಂಟೆ 10 ಆಯ್ತು ಮೀರಾಳಿಗೆ ಪ್ರಜ್ಞೆ ಬಂದು “ನಕುಲ್ ನಕುಲ್”ಎಂದು ಕನವರಿಸತೊಡಗಿದಳು.ರಾತ್ರಿ ನಡೆದ ಘಟನೆ ನೆನಪಿಗೆ ಬಂದು ಗಕ್ಕನೆ ಎದ್ದು ಕುಳಿತಳು.

ಚಿರಂತನನ್ನು ನೋಡಿ ಸಿಟ್ಟಾದ ಮೀರಾ ಅಲ್ಲಿದ್ದ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿದಳು.ಮೀರಾಳನ್ನು ಸಮಾಧಾನ ಮಾಡಲು ಯತ್ನಿಸಿದ ಚಿರು”ಮೀರಾ ನಾನ್  ಹೇಳೋದು ಸ್ವಲ್ಪ ಕೇಳು ಪ್ಲೀಸ್”ಎಂದು ವಿನಂತಿಸಿದ.

“ನೀನ್ ಯಾರು ಅಂತ ನಿನ್ ಮಾತ್ ಕೇಳ್ಬೇಕು. ಮೊದ್ಲು ನಕುಲ್ ಎಲ್ಲಿದ್ದಾನೆ ಹೇಳು. ಅವನಿಗೆ ಏನು ಆಗಿಲ್ಲಾ ತಾನೇ”ಎಂದು ಅಳುತ್ತಾ ಕೂತಳು.

“ಇಲ್ಲಾ ಮೀರಾ ಅವನಿಗೆ ಏನು ಆಗಿಲ್ಲ. ನಕುಲ್ ಎಲ್ಲಿದ್ದಾನೆ ಅಂತ ನಂಗ್  ಗೊತ್ತು.ಅವನತ್ರ ನಿನ್ನ ಕರ್ಕೊಂಡೋಗ್ಬೇಕು ಅಂದ್ರೆ ಮೊದ್ಲು ಈ ತಿಂಡಿ ತಿಂದು ಟ್ಯಾಬ್ಲೆಟ್ ತಗೋಬೇಕು”ಎಂದು ತಿಂಡಿ ಹಿಡಿದು ತಲೆ ನೇವರಿಸಲು ಬಂದ.

“ಮುಟ್ಟಬೇಡ ನನ್ನ.ನಾನ್ ನಕುಲ್ನ  ನೋಡೋವರೆಗೂ ತಿಂಡಿ ಅಲ್ಲ ಒಂದು ಹನಿ ನೀರು ಸಹ ನಾನ್ ಕುಡಿಯಲ್ಲ.

ನಕುಲ್ ಎಲ್ಲಿದ್ದಾನೆ ಅಂತ ನೀನೇನ್ ಹೇಳ್ಬೇಕಾಗಿಲ್ಲ ನಾನೇ ಹುಡುಕ್ತಿನಿ”ಎಂದು ಬೆಡ್ ಮೇಲಿಂದ ಕೆಳಗಿಳಿಯಲು ಪ್ರಯತ್ನಿಸಿದಳು.

“ನೋಡ್ ಮೀರಾ ನಕುಲ್ ಎಲ್ಲಿದ್ದಾನೆ ಅಂತ ನಂಗ್ ಮಾತ್ರ ಗೊತ್ತು. ಹಠ ಮಾಡ್ದೆ ತಿಂಡಿ ತಿಂದು ಟ್ಯಾಬ್ಲೆಟ್ ತಗೊಂಡ್ರೆ ಕರ್ಕೊಂಡ್ ಹೋಗ್ತೀನಿ ಇಲ್ಲಾ ಅಂದ್ರೆ ನಿನ್ ಇಷ್ಟ ಏನಾದ್ರು ಮಾಡ್ಕೋ”ಎಂದು ಹೆದರಿಸಿದ.

ಆಗ ತಿಂಡಿ ತಿನ್ನಲು ಒಪ್ಪಿದ ಮೀರಾ ಅಂಗೈ ಗಾಯ ಆಗಿದ್ದರಿಂದ ಬ್ಯಾಂಡೇಜ್ ಮಾಡಿದ್ದರು. ಅವಳಿಗೆ ತಿಂಡಿ ತಿನ್ನಲಾಗಲಿಲ್ಲ”ನಾನೇ ತಿನ್ನಿಸ್ತೀನಿ “ಎಂದು ಮೀರಾಳ ಕೈಯಲ್ಲಿಂದ ತಟ್ಟೆ ತೆಗೆದುಕೊಂಡನು.

ಮೀರಾ ಚಿರಂತ್ ಕೈತುತ್ತು ತಿನ್ನಲು ನಿರಾಕರಿಸಿದಳು.

“ನೋಡ್ ಮೀರಾ ನಿನ್ಗೆ ಸಿಟ್ಟಿರೋದು ನನ್ಮೇಲೆ ಅದ್ನ ತಿನ್ನೋ ಅನ್ನದ ಮೇಲೆ ತೋರಿಸ್ಬೇಡ”ಎಂದು ಬಲವಂತದಿಂದ ತಿನಿಸಿದ. ತಿಂಡಿ ತಿಂದು ಟ್ಯಾಬ್ಲೆಟ್ ತೆಗೆದುಕೊಂಡ ಮೀರಾ”ಸರಿ ತಿಂಡಿ ತಿಂದೆ ತಾನೇ. ನಡಿ ನನ್ನ ನಕುಲ್ ಹತ್ರ ಕರ್ಕೊಂಡೊಗು”ಎಂದು ಗೋಗರೆದಳು.

“ಸರಿ ಕರ್ಕೊಂಡೋಗ್ತಿನಿ. ಆದ್ರೆ ಒಂದು ಕಂಡೀಷನ್. ಈಗ ಟ್ಯಾಬ್ಲೆಟ್ ತಗೋದಿರೋದ್ರಿಂದ ಕಾರಲ್ಲಿ ರೆಸ್ಟ್ ಮಾಡ್ಬೇಕು”ಎಂದ

“ಹ್ಮ್ ಸರಿ”ಎಂದ ಮೀರಾಳನ್ನು ಕಾರಲ್ಲಿ ಕೂರಿಸಿದನು.ಚಿರಂತ್ ಕಾರು ಕಾರವಾರದ ಕಡೆ  ಚಲಾಯಿಸಿದ.

ಸ್ನೇಹ ಚಿರಾಯು-18 ಮುಂದುವರೆಯುವುದು…….

ಈ ಸ್ನೇಹ ಚಿರಾಯು-18 ನೀವು ಇಂಗ್ಲಿಷ್ ಭಾಷೆಯಲ್ಲಿಯೂ ಓದಬಹುದು.

ನಮ್ಮ ವೆಬ್ಬೆಟ್ ನ ಇತರ ಪೋಸ್ಟ್ ಗಳನ್ನು ಇಲ್ಲಿ ಓದಬಹುದು.

ಸ್ನೇಹ ಚಿರಾಯು-18

Comments

No comments yet. Why don’t you start the discussion?

Leave a Reply

Your email address will not be published. Required fields are marked *