⚡ ಬಯಲಾದ ಬೆಚ್ಚಿಬೀಳಿಸುವ ಸತ್ಯ
ಸ್ನೇಹ ಚಿರಾಯು -14
ಸರಿಯಾಗಿ ಏನಾಗಿದೆ ಎಂದು ತಿಳಿಯದ ನಕುಲ್ “ಅಂಕಲ್ ಮೀರಾ ನನ್ ಸೊಸೇನಾ ನಂಗೇನು ಅರ್ಥವಾಗ್ತಿಲ್ಲ. ಸರಿಯಾಗಿ ಬಿಡಿಸಿ ಹೇಳಿ.ಮೀರಾಳನ್ನು ನಾನೇಕೆ ಮರಿಬೇಕು.ನಿಮ್ಗೆ ಯಾಕೆ ನಮ್ ಅಪ್ಪನ ಮೇಲೆ ಕೋಪ”ಎಂದು ಪ್ರಶ್ನಾರ್ಥಕವಾಗಿ ಕೇಳಿದ.

“ಅದು ಕೋಪ ಅಲ್ಲ ಇಪ್ಪತ್ತು ವರ್ಷದ ದ್ವೇಷ. ಮೀರಾಳನ್ನು ತಂದೆ ತಾಯಿ ಇಲ್ಲದ ತಬ್ಬಲಿ ಮಾಡಿದ ಕೊಲೆಗಡುಕ ನಿಮ್ ಅಪ್ಪ”ಎಂದ ಕೋಪದಿಂದ.
ಪ್ರಕಾಶನ ಮಾತಿನಿಂದ ಸಿಡಿಲೆರಗಿದಂತಾಗಿ “ಏನೂ ನಮ್ ಅಪ್ಪ ಕೊಲೆಗಡುಕ ನಾ.ಅಂಕಲ್ ನೀವೇ ಯೋಚ್ನೆ ಮಾಡಿ ಹೀಗ್ ಮಾತಾಡಿದ್ರೆ ನಂಗ್ ಹೇಗ್ ಅರ್ಥ ಆಗ್ಬೇಕು.ನಮ್ ಅಪ್ಪ ಯಾರನ್ನ ಕೊಲೆ ಮಾಡಿದ್ದಾರೆ.ಅದೇನಾಗಿದೆ ಎಂದು ಸರಿಯಾಗಿ ಹೇಳಿ”ಎಂದು ಗೋಗರೆದ.
“ಹೇಳ್ತಿನಿ ನಕುಲ್”ಎಂದು ಹಿಂದೆ ನಡೆದಿದ್ದ ಒಂದು ದುರ್ಘಟನೆಯನ್ನು ಹೇಳಲು ಆರಂಭಿಸಿದ.
🕰️ಹಿಂದಿನ ದಿನಗಳ ಕಹಿ ನೆನಪುಗಳು
ನಾನು ನಿಮ್ ಮಾವ ಸಿದ್ದಾರ್ಥ್ ಇಬ್ಬರೂ ಚಿಕ್ಕಂದಿನಿಂದಲೂ ಪ್ರಾಣ ಸ್ನೇಹಿತರು.ನಾವಿಬ್ಬರು ತಂದೆ ತಾಯಿ ಇಲ್ಲದ ತಬ್ಬಲಿಗಳಾದ್ದರಿಂದ ಒಬ್ಬರಿಗೊಬ್ಬರು ತಂದೆ ತಾಯಿ ಪ್ರೀತಿಯನ್ನು ಹಂಚಿಕೊಳ್ಳುತ್ತಾ ಜೀವನ ಸಾಗಿಸ್ತಾ ಇದ್ವಿ.
ಸಿದ್ದಾರ್ಥ್ ಅಲ್ಪ ಸಲ್ಪ ಓದಿಕೊಂಡಿದ್ದ.ನನಗೆ ವಿದ್ಯೆ ತಲೆಗೆ ಹತ್ತಲಿಲ್ಲ ಎಂದು ಸುಮ್ಮನಾಗಿದ್ದೆ.
ಸಿದ್ದಾರ್ಥ್ ಕಾಲೇಜಿನಲ್ಲಿ ಓದುತ್ತಿರಬೇಕಾದರೆ ನಿಮ್ ಅತ್ತೆ ಸುಮತಿಯನ್ನು ಇಷ್ಟ ಪಟ್ಟಿದ್ದ.ಅವರ ಅಣ್ಣನ ವಿರೋಧದ ನಡುವೆಯೇ ಮದುವೆ ಮಾಡಿಕೊಂಡರು.
ಅವರ ಮನೆಯಿಂದ ಕೊಲೆ ಬೆದರಿಕೆ ಇದ್ದಿದ್ದರಿಂದ ಆ ಊರು ಬಿಟ್ಟು ಮತ್ತೊಂದೂರಿಗೆ ಬಂದು ಮೂವರು ಬದುಕು ಕಟ್ಟಿಕೊಂಡೆವು.
ಟೀ ಎಸ್ಟೇಟ್ನಲ್ಲಿ ಕೆಲಸ ಮಾಡುತ್ತಿದ್ದ ನಮಗೆ ಕಷ್ಟಪಟ್ಟು ಕೆಲಸ ಮಾಡಿದ್ದಕ್ಕೆ ಆ ಎಸ್ಟೇಟ್ನ ಮಾಲೀಕ ಇಬ್ಬರಿಗೂ 10 ಎಕರೆ ಜಮೀನು ದೇಣಿಗೆಯಾಗಿ ಕೊಟ್ಟರು.
ಅಂದಿನಿಂದ ಆ ಜಮೀನಿನಲ್ಲಿ ಕಷ್ಟಪಟ್ಟು ಕೆಲಸ ಮಾಡಿದ ನಾವು 5 ವರ್ಷ ಕಳೆಯುವಷ್ಟರಲ್ಲಿ ಆ 10 ಎಕರೆ 50 ಎಕರೆ ಟೀ ಎಸ್ಟೇಟ್ ಕೊಂಡುಕೊಳ್ಳವಷ್ಟು ವಿಸ್ತಾರವಾಗಿ ಬೆಳೆಯಿತು.

ನಮ್ಮ ಸಾಧನೆ ಹಳ್ಳಿ ಹಳ್ಳಿಗೂ ಹರಡಿತ್ತು.ಇದರಿಂದ ನಮ್ಮ ಸಾಧನೆ ಅದೆಷ್ಟೋ ರೈತರಿಗೆ ಸ್ಫೂರ್ತಿಯಾಯಿತು.ಸಹಾಯ ಬೇಕು ಅಂತ ಕೇಳಿಕೊಂಡು ಬಂದವರಿಗೆ ಕೆಲಸ ಕೊಟ್ಟು ಊಟ ಹಾಕಿ ಸ್ವಂತ ಕುಟುಂಬದವರಂತೆ ನೋಡಿಕೊಂಡ.
💔 ದುರಾಸೆಯಿಂದ ಕುಸಿದ ಬದುಕುಗಳು
ಹೀಗೆ ಸಂತೋಷದಿಂದ ಬಂದವರಿಗೆ ಸಹಾಯ ಮಾಡುತ್ತಾ ಜೀವನ ಸಾಗಿಸುತ್ತಿದ್ದ ನಮ್ಮ ಪ್ರಪಂಚಕ್ಕೆ ಕೊಲೆ ಬೆದರಿಕೆ ಹಾಕಿದ್ದ ನಿಮ್ ಅಪ್ಪನ ಜೊತೆಗೆ ನಿಮ್ಮ ಅಮ್ಮ ಹಾಗೂ ಅವನ ಸ್ನೇಹಿತ ರಾಜೀವ ನಮ್ಮೆದುರು ಸಹಾಯಕ್ಕಾಗಿ ಅಂಗಲಾಚಿದರು.
ದುಡ್ಡಿನ ಆಸೆಗೆ ಜೂಜಾಡಿ ಇದ್ದ ಆಸ್ತಿಯನ್ನೆಲ್ಲಾ ಕಳೆದುಕೊಂಡಿದ್ದ.ಮೊದಲು ಸಿದ್ದಾರ್ಥ್ ಒಪ್ಪಲಿಲ್ಲ.
ಆದರೆ ಸುಮತಿಗೆ ಅಣ್ಣನ ಮೇಲಿನ ಮಮಕಾರ ಎಲ್ಲಿಗೊಗುತ್ತೆ ಹೇಳು.ಕೊನೆಗೆ ಸುಮತಿ ಮಾತು ಕೇಳಿ ಬದುಕು ಕಟ್ಟಿಕೊಳ್ಳಲು ತಮ್ಮ 10 ಎಕರೆ ಜಾಗ ಲೀಜ್ ಗೆ ಕೊಟ್ಟ.
ಅದರಲ್ಲಿ ಟೀ ಬೆಳೆದ ನಿಮ್ಮ ಅಪ್ಪ ಅವನ ಸ್ನೇಹಿತ ಬೇಗ ಸಾಹುಕಾರನಾಗಬೇಕೆಂಬ ದುರಾಸೆಯಿಂದ ಒಂಬತ್ತು ಹತ್ತು ವರ್ಷಕ್ಕೆ ಕಟಾವು ಮಾಡಬೇಕಿದ್ದ ಎಲೆಯನ್ನು ಮೂರು ವರ್ಷಕ್ಕೆ ಕಟಾವು ಮಾಡಿ ಅದರ ರುಚಿ ಬಣ್ಣಕ್ಕೆ ಅಭಿನ್ ಅನ್ನೋ ಕೆಮಿಕಲ್ ಬಳಸಿ ಮಾರ್ಕೆಟಿಗೆ ಸಾಗಿಸುತ್ತಿದ್ದ.
ಆ ಕೆಮಿಕಲ್ನಿಂದ ಎಷ್ಟೋ ರೋಗಗಳು ಬರ್ತಿದ್ವು.ಫುಡ್ ಸೇಫ್ಟಿ ಡಿಪಾರ್ಟ್ಮೆಂಟ್ನವರು ಸರ್ವೇ ಮಾಡಿದಾಗ ಆ ಟೀ ಸಂಪಿಗೆಕಟ್ಟೆ ರತ್ನಗಿರಿ ಟೀ ಎಸ್ಟೇಟ್ ನಿಂದ ಬರ್ತಿದೆ ಅಂತ ತಿಳ್ಕೊಳ್ಳೋಕೆ ತುಂಬಾ ಟೈಂ ಬೇಕಾಗಲಿಲ್ಲ.
ಪೋಲಿಸಿನವರು ನಿಮ್ ಅಪ್ಪನನ್ನು ಅರೆಸ್ಟ್ ಮಾಡಿದ್ರು. ಭೂಮಿಯೆಲ್ಲಾ ಸಿದ್ದಾರ್ಥ್ ಹೆಸರಿಗೆ ಇದ್ದ ಕಾರಣ ಅವನನ್ನು ಸಹ ಅರೆಸ್ಟ್ ಮಾಡಿದ್ರು.ಸಿದ್ದಾರ್ಥ್ಗೆ ನಾನ್ ಬೇಲ್ ಕೊಟ್ಟು ಬಿಡಿಸಿದೆ.ಬಾವ ಅನ್ನೋ ಮಮಕಾರದಿಂದ ಅವನಿಗೂ ಬೇಲ್ ಕೊಡ್ಸಿ ಬೈದು ಟೀ ಎಸ್ಟೇಟ್ನಿಂದ ಹೊರಗೆ ಹಾಕಿದ.ಇದರಿಂದ ಸುಮತಿಗೂ ಸಿದ್ದಾರ್ಥ್ ಗೆ ಸಣ್ಣ ಜಗಳವಾಯ್ತು.
ಎಸ್ಟೇಟ್ನಿಂದ ಹೊರಗೆ ಹಾಕಿದ ಎಂದು ದ್ವೇಷ ಸಾಧಿಸುತ್ತಿದ್ದ ನಿಮಪ್ಪ ಕೊನೆಗೆ ನನ್ನ ಕಣ್ಣೆದುರಲ್ಲೇ ಆಕ್ಸಿಡೆಂಟ್ ಮಾಡಿಸಿ ಕೊಂದು ಬಿಟ್ಟ.ಮೀರಾಳನ್ನು ನಾನು ಎತ್ತಿಕೊಂಡು ಹೋಗಿದ್ದರಿಂದ ಅವಳು ಜೀವಂತವಾಗಿ ಉಳಿದಳು.
😶ಸತ್ಯ ತಿಳಿದು ಮೌನಿಯಾದ ನಕುಲ್
ಈಗ ಹೇಳು ಇಂಥ ಅನ್ಯಾಯಮಾಡಿದವನ ಮನೆಗೆ ಅವಳನ್ನು ಸೊಸೆಯಾಗಿ ಕಳುಹಿಸಬೇಕಾ. ಸಾಧ್ಯಯಿಲ್ಲ ನಾನ್ ಕಲ್ಸಲ್ಲ.ತನ್ನ ತಂದೆ ತಾಯಿಯನ್ನು ನಿಮ್ ಅಪ್ಪನೇ ಕೊಲೆ ಮಾಡ್ಸಿದ್ದಾನೆ ಅಂತ ಗೊತ್ತಾದ್ರೆ ನಿನ್ನ ಪ್ರೀತ್ಸೋದು ಇರಲಿ ಜೀವನಪೂರ್ತಿ ನಿನ್ಗೆ ಮುಖನೂ ತೋರಿಸಲ್ಲ. ಅದ್ಕೆ ಅವಳನ್ನು ಮರೆತರೆ ನಿನ್ಗೆ ಒಳ್ಳೇದು”ಎಂದು ನಕುಲನ ಉತ್ತರಕ್ಕೂ ಕಾಯದೆ ಹೊರಟುಹೋದ.
ಪ್ರಕಾಶನ ಮಾತುಗಳು ಕೇಳಿ ಒಂದೇ ದೃಷ್ಟಿಕೋನದಿಂದ ಬೇರೆಡೆಗೆ ಸರಿಸದೆ ಏನನ್ನೋ ನೋಡುತ್ತಾ ದಿಗ್ಬ್ರಾಂತನಾಗಿ ಕುಳಿತುಬಿಟ್ಟಿದ್ದ.ಕಣ್ಣೀರು ಧಾರಾಕಾರವಾಗಿ ಹರಿಯುತಿತ್ತು.
ಕಾಡುಸುತ್ತಲೂ ಹೋಗಿ ಬಂದು ಇಷ್ಟೋತ್ತು ಅಲ್ಲೇ ನಿಂತು ಅವರ ಸಂಭಾಷಣೆ ಕೇಳುತ್ತಿದ್ದ ನಿಧಿಗೂ ಅವರ ಮಾತುಗಳು ಕೇಳಿ ಒಮ್ಮೆಲೇ ಆಶ್ಚರ್ಯವಾಯಿತು.ನಕುಲನನ್ನು ಸಮಾಧಾನಿಸಿ ಮನೆಗೆ ಕರೆದುಕೊಂಡು ಬಂದಳು.
ಮೀರಾಳ ಮನೆಯಲ್ಲಿ ಎಲ್ಲರೂ ತಿಂಡಿ ತಿಂದು ತಮ್ಮ ಪ್ರವಾಸವನ್ನು ಮುಂದುವರೆಸಿದರು. ದಾಂಡೇಲಿನಿಂದ ಮಡಿಕೇರಿಗೆ ಹೋಗುವ ದಾರಿಯಲ್ಲಿ ಸಿಗುವ ಶಿರಸಿ,ಸಾಗರ,ತೀರ್ಥಹಳ್ಳಿ,ಆಗುಂಬೆ, ಉಡುಪಿ ಮಾರ್ಗವಾಗಿ ಮಡಿಕೇರಿಗೆ ಸೇರಿಕೊಂಡರು.
ದಾಂಡೇಲಿಯಿಂದ ಪ್ರಯಾಣ ಶುರುವಾದಾಗಿನಿಂದಲೂ ನಕುಲನ ಮೌನ ನಿಧಿಗೆ ಬಿಟ್ಟರೆ ಮತ್ಯಾರಿಗೂ ಗೊತ್ತಾಗದೆ ಹುಚ್ಚುಹಿಡಿದಂತಾಗಿತ್ತು. ಏನೂ ಕೇಳಿದರು ಅವನ ಮೌನವಷ್ಟೇ ಉತ್ತರವಾಗಿತ್ತು.

ಮೀರಾ ಅಂತೂ ನೆನೆ ನೆನೆದು ಅಳುವುದು ಬಿಟ್ಟರೆ ಬೇರೇನೂ ಮಾಡುತ್ತಿರಲಿಲ್ಲ.ಇದರಿಂದ ಎಲ್ಲರಲ್ಲಿ ಮನಸ್ತಾಪ ಉಂಟಾಗಿ ಒಂದು ವಾರದ ಪ್ರವಾಸವನ್ನು 5 ದಿನಕ್ಕೆ ಮೊಟಕುಗೊಳಿಸಲಾಗಿತ್ತು.
💔ಮೌನದ ಹಿಂದೆ ಅಡಗಿರುವ ನೋವು
ಪ್ರವಾಸ ಮುಗಿದ ಮೇಲೆ ಮೊದಲಿನ ಹಾಗೇ ಎಲ್ಲರೂ ಕಾಲೇಜಿಗೆ ಹಾಜರಾಗುತ್ತಿದ್ದರು. ಆದರೆ ನಕುಲ್ ಮಾತ್ರ ಬರುತ್ತಿರಲಿಲ್ಲ.ಏಕೆಂದು ಫೋನ್ ಮಾಡಿದರೆ ಸ್ವಿಚ್ ಆಫ್.ಬರಿ ಮೌನ ಆವರಿಸಿದ್ದ ನಕುಲ್ ಬರಬರುತ್ತಾ ಊಟ ನಿದ್ದೆ ಎಲ್ಲವನ್ನು ಕಡಿಮೆ ಮಾಡತೊಡಗಿದ.
ಇಂದು ನನ್ನ ಪ್ರೀತಿ ಸಾಯಲು ಹಿಂದೆ ನೀವು ಮಾಡಿಸಿದ ಕೊಲೆನೆ ಕಾರಣ ಎಂದು ತಂದೆಯ ಬಳಿ ಹೇಳಲಾಗದೆ ತಂದೆ ತಾಯಿಯ ಬಳಿಯೂ ಮಾತನಾಡುವುದನ್ನೇ ಬಿಟ್ಟಿದ್ದ.
ಇವನ ವರ್ತನೆಯಿಂದ ಮೋಹನ್, ಕುಸುಮ ಇಬ್ಬರೂ ಗಾಬರಿಯಾಗಿ ತಮ್ಮ ಫ್ರೆಂಡ್ಸ್ ಎಲ್ಲರನ್ನೂ ವಿಚಾರಿಸಿದರೂ ಯಾರಿಂದಾನು ಉತ್ತರ ಸಿಗಲಿಲ್ಲ.ಅವನ ಮೌನವನ್ನು ಸಹಿಸದ ಮೀರಾ ದಾಂಡೇಲಿಗೆ ಹೋದಳು.
🥀ಪರಿಹಾರಕ್ಕಾಗಿ ನಿಧಿಯ ಹಾರಾಟ
ಸತ್ಯ ಅರಿತ ನಿಧಿ ಇದಕ್ಕೆ ಪರಿಹಾರ ಹುಡುಕಬೇಕೆಂದು ತೀರ್ಮಾನಿಸಿದಳು.ಆದರೆ ಅದು ಹೇಗೆ ಎಂದು ಯೋಚಿಸಿದಾಗ ಸಿಕ್ಕ ಉತ್ತರವೇ ಚಿರಂತ್.ಹೌದು ಚಿರಂತನಿಂದ ಮಾತ್ರ ಈ ಸಮಸ್ಯೆಯನ್ನು ಬಹೆಹರಿಸಲು ಸಾಧ್ಯ ಎಂದು ತಿಳಿದು ಚಿರಂತನ ಬಳಿ ಹೋದಳು.
ಬೆಡ್ ಮೇಲೆ ಮಲಗಿ ಬುಕ್ಸ್ ಓದುತಿದ್ದ ಚಿರಂತನನ್ನು”ಹಾಯ್ ಚಿರು”ಎಂದು ಉದ್ಗರಿಸಿದಳು.
“ಹಾಯ್ ನಿಧಿ, ಚೆನ್ನಾಗಿದ್ದೀಯಾ”ಎಂದು ಓದುತಿದ್ದ ಬುಕ್ ಮುಚ್ಚಿ ಕುಶಲೋಪರಿ ವಿಚಾರಿಸಿದ.
“ನಾನ್ ಚೆನ್ನಾಗಿದ್ದೀನಿ.ನೀನ್ ಹೇಗಿದ್ದಿಯಾ”
“ನಾನು ಚೆನ್ನಾಗಿದ್ದೀನಿ.ಟ್ರಿಪ್ಪೆಲ್ಲಾ ಚೆನ್ನಾಗಾಯ್ತಾ”ಎಂದು ಕೇಳಿದ ಬುಕ್ ಬದಿಗಿಟ್ಟು.
“ಹಾ ಚಿರು ಚೆನ್ನಗಾಯ್ತು. ನಾನ್ ನಿನ್ ಹತ್ತಿರ ಒಂದು ಸಮಸ್ಯೆಯ ಬಗ್ಗೆ ಮಾತಾಡೋಕೆ ಅಂತ ಬಂದೆ. ಆ ಸಮಸ್ಯೆಗೆ ಪರಿಹಾರ ನಿನ್ನಿಂದಾನೆ ಸಾಧ್ಯ”
“ಹೌದಾ… ಏನದು ಸಮಸ್ಯೆ”ಕುತೂಹಲದಿಂದ ಕೇಳಿದ.
“ಅದು…ss ಮೀರಾ ನಕುಲ್ ಇಬ್ರು ಒಬ್ಬರಿಗೊಬ್ಬರು ತುಂಬಾ ಇಷ್ಟ ಪಡ್ತಿದ್ದಾರೆ”ಎಂದಳು ಭಯದ ದನಿಯಲ್ಲಿ.
“ಗೊತ್ತಿರೋ ವಿಷ್ಯ”ಎಂದ ನಗುತ್ತಾ.
“ಹೌದಾ ನಿಂಗ್ ಹೇಗೆ ಗೊತ್ತಾಯ್ತು”ಎಂದು ಕೇಳಿದಳು ಅವಕ್ಕಾಗಿ.
“ನಾನು ನಿಮ್ಮ ಹಾಗೇ ಕದ್ದು ನೋಡಿದ್ದೇ ಅವರಿಬ್ಬರೂ ಮಾತನಾಡುತಿದ್ದಿದ್ದನ್ನು. ಆ ವಿಷ್ಯ ನಾನು ನಕುಲ್ ಕಾರವಾರಕ್ಕೆ ಹೋಗಬೇಕಾದ್ರೆ ಅವನಿಗೂ ಗೊತ್ತಾಯ್ತು”ಎಂದ.

“ಒಳ್ಳೇದಾಯ್ತು ಬಿಡು. ಈಗ ಸಮಸ್ಯೆ ಏನಂದ್ರೆ ನಾವು ನಿಮ್ಮನೆಗೆ ಹೋಗಿದ್ದಾಗ ಒಂದು ಘಟನೆ ನಡೆಯಿತು”ಎಂದು ನಕುಲ್ ಪ್ರಕಾಶ್ ನಡುವೆ ನಡೆದ ಸಂಭಾಷಣೆಯಿಂದ ಹಿಡಿದು ನಕುಲ್ ಮೌನಿಯಾಗಿ ಎಲ್ಲರಿಗೂ ಸೃಷ್ಟಿಸುತ್ತಿರುವ ಭಯದವರೆಗೂ ಎಲ್ಲವನ್ನು ಸವಿಸ್ತಾರವಾಗಿ ಚಿರಂತನಿಗೆ ಹೇಳಿದಳು..
ಅವಳ ಮಾತುಗಳಿಂದ ಆಶ್ಚರ್ಯಚಕಿತನಾದ ಚಿರಂತ್.ಚಿಕ್ಕಂದಿನಲ್ಲಿ ನಡೆದ ಕೆಲವೊಂದು ಘಟನೆಗಳು ಕಣ್ಮುಂದೆ ಹಾಜರಿ ಹಾಕಿ ಮರೆಯಾದವು.ಆ ಮನೆ ನಾವು ಆಡಿ ಬೆಳೆದ ಮನೆ.ಅದಕ್ಕೆ ಅನಿಸುತ್ತೆ ಆ ದಿನ ಅದು ನನ್ನನ್ನು ತುಂಬಾ ಸೆಳೆಯುತ್ತಿತ್ತು.
ಮೀರಾಳನ್ನು ತಂದೆ ತಾಯಿ ಇಲ್ಲದೆ ಒಂಟಿ ಮಾಡಿದ ಮೋಹನ್ ಮೇಲೆ ಹೇಳಲಾಗದಷ್ಟು ಕೋಪ ಬಂದಿತು.
ಆದರೆ ಅದೇ ದ್ವೇಷ ಪ್ರೀತಿಸುವವರಿಗೆ ಮುಳುವಾಗಬಾರದೆಂದು ಯೋಚಿಸಿ ಅವರಿಬ್ಬರನ್ನು ಹೇಗಾದರೂ ಮಾಡಿ ಒಂದು ಮಾಡಬೇಕೆಂದುಕೊಂಡನು.
ಮೀರಾ ನಕುಲ್ಗೆ ಸ್ವಂತ ಸೊಸೆಯಾಗಬೇಕೆಂಬುವ ಸತ್ಯ ತಿಳಿದು ತುಂಬಾ ಸಂತೋಷಗೊಂಡ.ಅವರಿಗಾದ ಸಮಸ್ಯೆ ಹೇಗೆ ಬಗೆಹರಿಸಬೇಕೆಂದು ಯೋಚಿಸಿದಾಗ ಅವನಿಗೊಂದು ಉಪಾಯ ಹೊಳೆಯಿತು.ನಿಧಿಗೆ ಹೊರಹೋಗಿ ಬರುತ್ತೇನೆ ಎಂದು ಹೇಳಿ ನೇರವಾಗಿ ನಕುಲನ ಮನೆಗೆ ತೆರಳಿದನು.
ಸ್ನೇಹ ಚಿರಾಯು -14-ಮುಂದುವರೆಯುವುದು….
ಈ ಸ್ನೇಹ ಚಿರಾಯು-14 ನೀವು ಇಂಗ್ಲಿಷ್ ಭಾಷೆಯಲ್ಲಿಯೂ ಓದಬಹುದು.
ನಮ್ಮ ವೆಬ್ಬೆಟ್ ನ ಇತರ ಪೋಸ್ಟ್ ಗಳನ್ನು ಇಲ್ಲಿ ಓದಬಹುದು.

